ಜಿಲ್ಲೆಯ ಎಲ್ಲ ವಿಶೇಷ ಚೇತನರಿಗೆ ನಿವೇಶನ ಮನೆಗಳನ್ನು ನೀಡಬೇಕು ಎಂಬುದು ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಕರ್ನಾಟಕ ರಾಜ್ಯ ಅಂಗವಿಕಲರ ಹಾಗೂ ಪಾಲಕರ ಒಕ್ಕೂಟದಿಂದ ರಾಯಚೂರು ನಗರದಲ್ಲಿ ಬೃಹತ್ ರ್‍ಯಾಲಿ ನಡೆಸಿದರು.
ರ್‍ಯಾಲಿಯು ನಗರದ ಡಾ. ಬಿ. ಆರ್ ಅಂಬೇಡ್ಕರ್ ವೃತ್ತದಿಂದ ಪ್ರಾರಂಭವಾಗಿ ವಿವಿಧ ರಸ್ತೆಗಳ ಮೂಲಕ ಸಾಗಿ ಜಿಲ್ಲಾಧಿಕಾರಿ ಕಚೇರಿಯವರೆಗೆ ತೆರಳಿದರು. ನಂತರ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿ ಒತ್ತಾಯಿಸಿದರು.
ಸರ್ಕಾರದ ಆದೇಶದಂತೆ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಜಿಲ್ಲಾಮಟ್ಟದಲ್ಲಿ ವಿಕಲಚೇತನರ ಕುಂದು-ಕೊರತೆ ಸಭೆಯನ್ನು ಪ್ರತಿ ಮೂರು ತಿಂಗಳಿಗೊಮ್ಮೆ ಕಡ್ಡಾಯವಾಗಿ ಹಮ್ಮಿಕೊಳ್ಳಬೇಕು. ವಿಕಲಚೇತನರ ಮಾಶಾಸನ ಸೇರಿದಂತೆ ಇತರೆ ಸಮಸ್ಯೆಗಳ ಬಗ್ಗೆ ತಹಶೀಲ್ದಾರ್ ನೇತೃತ್ವದಲ್ಲಿ ತಿಂಗಳ ಮೊದಲ ವಾರದಲ್ಲಿ ಅಂಗವಿಕಲರ ಕುಂದುಕೊರತೆ ಸಭೆ ಮಾಡಬೇಕು. ಮಾಸಾಶನವನ್ನು ಕನಿಷ್ಠ 10 ಸಾವಿರಕ್ಕೆ ಹೆಚ್ಚಿಸಬೇಕು. ಇದರಲ್ಲಿ ಕೇಂದ್ರದ ಪಾಲು 5 ಸಾವಿರ ರಾಜ್ಯದ ಪಾಲು 5 ಸಾವಿರ ಕೊಡಬೇಕು ಎಂದು ಆಗ್ರಹಿಸಿದರು.
ಜಿಲ್ಲೆಯ ಎಲ್ಲ ಅಂಗವಿಕಲರಿಗೆ ನಿವೇಶನ ಮನೆಗಳನ್ನು ಕೊಡಬೇಕು. ಪಂಚಾಯತಿಯಲ್ಲಿ ಮೀಸಲಿರುವ ಶೇ 5% ರಷ್ಟು ಅನುದಾನ ಅಂಗವಿಕಲರಿಗಾಗಿ ಖರ್ಚು ಮಾಡಬೇಕು ಹಾಗೂ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಿಗೆ ಜವಾಬ್ದಾರಿಯನ್ನು ವಹಿಸಬೇಕು. ಮಹಾತ್ಮಗಾಂಧಿ ಗ್ರಾಮೀಣ ಉದ್ಯೋಗ ಖಾತ್ರಿ ಚೀಟಿಗಳನ್ನು ಪ್ರತ್ಯೇಕವಾಗಿ ಅಂಗವಿಕಲರಿಗೆ ಕೊಡಬೇಕು ಎಂದು ಆಗ್ರಹಿಸಿದರು.
ವಿಶೇಷ ಚೇತನರ ವಿಶಿಷ್ಟ ಗುರುತಿನ ಚೀಟಿ ಅನರ್ಹ, ನಕಲಿ ಪ್ರಮಾಣ ಪತ್ರ ಪಡೆದಿರುವ ಅಭ್ಯರ್ಥಿಗಳು ಮತ್ತು ವೈದ್ಯರ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕು. ತಾಲೂಕು ಪಂಚಾಯತ ಮಟ್ಟದಲ್ಲಿ ಪ್ರತಿ ಮೂರು ತಿಂಗಳಿಗೊಮ್ಮ ಅನುಷ್ಠಾನ ಸಮಿತಿಯ ಸಭೆಯನ್ನು ಕರೆಯಬೇಕು ಎಂದು ಒತ್ತಾಯಿಸಿದರು.
ಇದನ್ನು ಓದಿದ್ದೀರಾ? ಕಲಬುರಗಿ | ರಾಜ್ಯಪಾಲರ ನಡೆ ಖಂಡಿಸಿ ಬೆಂಗಳೂರಲ್ಲಿ ಸೆ. 3ರಂದು ಪ್ರತಿಭಟನೆ: ದಸಂಸ ಮುಖಂಡ ಮರೆಪ್ಪ ಹಳ್ಳಿ
ಪದವಿ, ಪಿಯುಸಿ, ಹತ್ತನೇ ತರಗತಿ ಪಾಸಾದ ಎಲ್ಲಾ ವಿಶೇಷ ಚೇತನರಿಗೆ ಉದ್ಯೋಗ ಕೊಡಬೇಕು. ಸರ್ಕಾರಿ ನೌಕರರೆಂದು, ಪರಿಗಣಿಸಿ ಎಲ್ಲ ಸೌಕರ್ಯಗಳನ್ನು ಒದಗಿಸಬೇಕು. ಎಲ್ಲಾ ವಿಶೇಷ ಚೇತನ ಕುಟುಂಬಗಳಿಗೆ ಅಂತ್ಯೋದಯ ಕಾರ್ಡನ್ನು ಕಡ್ಡಾಯವಾಗಿ ನೀಡಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ರಾಜ್ಯಾಧ್ಯಕ್ಷ ನಾಗರಾಜ್, ಕರಿಯಪ್ಪ ಅಚ್ಚೋಳ್ಳಿ, ಹೊನ್ನಪ್ಪ ಸೇರಿದಂತೆ ಇತರರು ಉಪಸ್ಥಿತರಿದ್ದರು.
ವರದಿ : ಹಫೀಜುಲ್ಲ
