ಸೌಜನ್ಯ ಪ್ರಕರಣ | ಸಂತೋಷ್‌ ಪರ ತೀರ್ಪು ಪ್ರಶ್ನಿಸಿದ್ದ ಅರ್ಜಿ ವಜಾ; ʼನ್ಯಾಯ ಮತ್ತೊಮ್ಮೆ ನಮ್ಮ ಕೈ ಹಿಡಿದಿದೆʼ ಎಂದ ಸುಧಾಕರ ರಾವ್‌

Date:

Advertisements

ಧರ್ಮಸ್ಥಳದ ಸೌಜನ್ಯಳ ಅತ್ಯಾಚಾರ ಪ್ರಕರಣದ ಆರೋಪಿ ಸಂತೋಷ್‌ ರಾವ್‌ ವಿರುದ್ಧ ಸುದೀರ್ಘ ಹನ್ನೊಂದು ವರ್ಷಗಳ ಕಾಲ ವಿಚಾರಣೆ ನಡೆಸಿದ ಸಿಬಿಐ ಕೋರ್ಟ್‌ ಕಳೆದ ವರ್ಷ ನಿರ್ದೋಷಿ ಎಂದು ತೀರ್ಪು ನೀಡಿತ್ತು. ಅದನ್ನು ಪ್ರಶ್ನಿಸಿ ಸಿಬಿಐ, ಹೈಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿತ್ತು. ಇಂದು ಅರ್ಜಿ ವಜಾ ಆಗಿದೆ. ಅಮಾಯಕನೊಬ್ಬನನ್ನು ಅಪರಾಧಿ ಎಂದು ಬಿಂಬಿಸಲು ನಡೆಸಿದ ಷಡ್ಯಂತ್ರಕ್ಕೆ ಸೋಲಾಗಿದೆ.

ಹನ್ನೆರಡು ವರ್ಷಗಳ ಹಿಂದೆ ಧರ್ಮಸ್ಥಳದ ಪಾಂಗಳದಲ್ಲಿ ನಡೆದ ಪಿಯು ವಿದ್ಯಾರ್ಥಿನಿ ಸೌಜನ್ಯ ಅತ್ಯಾಚಾರ- ಕೊಲೆ ಪ್ರಕರಣದ ತನಿಖೆ ನಡೆಸಿದ್ದ ಸಿಬಿಐ ಕೋರ್ಟ್‌ 2023 ಜೂನ್‌ನಲ್ಲಿ ಆರೋಪಿ ಸಂತೋಷ್‌ ರಾವ್‌ ನಿರ್ದೋಷಿ ಎಂದು ತೀರ್ಪು ನೀಡಿತ್ತು. ನೈಜ ಅತ್ಯಾಚಾರಿಗಳು ಯಾರು ಎಂಬ ಪ್ರಶ್ನೆ ಹಾಗೇ ಉಳಿದಿತ್ತು. ಆರು ತಿಂಗಳ ಹಿಂದೆ ಸೌಜನ್ಯ ಕುಟುಂಬದವರು ಮರು ತನಿಖೆಗೆ ಒತ್ತಾಯಿಸಿ ಹೈಕೋರ್ಟ್‌ನಲ್ಲಿ ಸಲ್ಲಿಸಿದ ಅರ್ಜಿಯನ್ನು ಹೈಕೋರ್ಟ್‌ ಇಂದು (ಆ.30) ವಜಾಗೊಳಿಸಿದೆ. ಇದರ ಜೊತೆಗೆ ಸಂತೋಷ್‌ ರಾವ್‌ ನಿರ್ದೋಷಿ ಎಂಬ ತೀರ್ಪನ್ನು ಮರು ಪರಿಶೀಲನೆ ನಡೆಸಬೇಕು ಎಂದು ಸಿಬಿಐ ಸಲ್ಲಿಸಿದ್ದ ಅರ್ಜಿಯನ್ನೂ ಹೈಕೋರ್ಟ್‌ ವಜಾಗೊಳಿಸಿದೆ. ಈ ಮೂಲಕ ಸಂತೋಷ್‌ ರಾವ್‌ ನನ್ನೇ ಅಪರಾಧಿ ಮಾಡಿ ಜೈಲಿಗಟ್ಟುವ, ಆ ಪ್ರಕರಣಕ್ಕೆ ಶಾಶ್ವತ ಸಮಾಧಿ ಕಟ್ಟುವ ಕೆಲವರ ಹುನ್ನಾರಕ್ಕೆ ಸೋಲಾಗಿದೆ.

ಈ ಬಗ್ಗೆ ಈ ದಿನ.ಕಾಂ ಜೊತೆ ಮಾತನಾಡಿದ ಸಂತೋಷ್‌ ರಾವ್‌ ತಂದೆ ಸುಧಾಕರ ರಾವ್‌, “ನನ್ನ ಮಗ ತಪ್ಪು ಮಾಡಿಲ್ಲ ಎಂಬುದು ನಮಗೆ ಮಾತ್ರವಲ್ಲ, ಇಡೀ ಸಮಾಜಕ್ಕೇ ಗೊತ್ತಿತ್ತು. ಆದರೂ ದೊಡ್ಡ ದೊಡ್ಡವರು ಷಡ್ಯಂತ್ರ ಮಾಡಿದ್ರು. ಆದರೆ ನಾವು ನಂಬಿದ ದೇವರು ನಮ್ಮ ಕೈ ಬಿಟ್ಟಿಲ್ಲ. ಸತ್ಯ ಮತ್ತು ನ್ಯಾಯಕ್ಕೆ ಜಯವಾಗಿದೆ” ಎಂದು ಹೇಳುವಾಗ ಅಪರಿಮಿತ ಸಂತೋಷದಿಂದ ಅವರ ಹೃದಯ ತುಂಬಿದೆ ಎಂಬುದನ್ನು ಅವರ ಧ್ವನಿಯೇ ಹೇಳುತ್ತಿತ್ತು.

Advertisements

ಕಳೆದ ವರ್ಷ ಜೂನ್‌ 16 ರಂದು ಸಂತೋಷ್‌ ರಾವ್‌ ನಿರ್ದೋಷಿ ಎಂಬ ತೀರ್ಪು ಬಂದ ತಕ್ಷಣ ʼಈ ದಿನ.ಕಾಮ್‌ʼ ಕಾರ್ಕಳದ ಸುಧಾಕರ ರಾವ್‌ ಮನೆಗೆ ಭೇಟಿ ನೀಡಿ ಅವರ ನೋವಿಗೆ ಕಿವಿಯಾಗಿತ್ತು. ಜು.7ರಂದು ಬೈಲೂರಿನ ಅವರ ಮನೆಗೆ ನಮ್ಮ ತಂಡ ಭೇಟಿ ನೀಡಿದಾಗ ಸಂತೋಷ್‌ ಅವರ ತಂದೆ ಸುಧಾಕರ ರಾವ್‌ ಮತ್ತು ಸಹೋದರ ಸಂಜಯ್‌ ರಾವ್‌ ಅವರು ಬಿಚ್ಚಿಟ್ಟ ನೋವುಗಳು ಎಂತಹ ಕಲ್ಲು ಹೃದಯವನ್ನೂ ಕರಗಿಸುವಂತಿತ್ತು.

ಉಮ್ಮಳಿಸಿ ಬರುತ್ತಿದ್ದ ದುಃಖವನ್ನು ತಡೆ ತಡೆದು ಮಾತಾಗಿದ್ದರು ಸುಧಾಕರ ರಾವ್.‌ “ಸಂತೋಷನನ್ನು ಅತ್ಯಾಚಾರದ ಆರೋಪ ಹೊರಿಸಿ ಬಂಧನ ಮಾಡಿದ ದಿನದಿಂದ ಈ ಕ್ಷಣದವರೆಗೂ ನಾವು ಅನುಭವಿಸುತ್ತಿರುವ ನೋವು ಹೊರ ಜಗತ್ತಿನ ಅಂದಾಜಿಗೂ ಸಿಗಲಿಕ್ಕಿಲ್ಲ. ನಮ್ಮ ಇಡೀ ಕುಟುಂಬ ಮಾನಸಿಕವಾಗಿ ಸಾಮಾಜಿಕವಾಗಿ, ಆರ್ಥಿಕವಾಗಿ ಜರ್ಜರಿತಗೊಂಡಿದೆ. ನಮ್ಮನ್ನು ಆ ಕ್ಷಣದಿಂದ ಜನರು ನೋಡುವ ಬಗೆ ಬದಲಾಯಿತು. 38 ವರ್ಷ ಪಾಠ ಮಾಡಿದ ಮೇಷ್ಟ್ರು ನಾನು. ಆ ಘಟನೆ ಅಕ್ಕಪಕ್ಕದ ಜನ ಸಂಶಯದಿಂದ ನೋಡುವಂತೆ ಮಾಡಿತ್ತು. ಪರಿಚಿತರು ನಮ್ಮನ್ನು ಮತನಾಡಿಸದೇ ಇರುವುದು, ನೆಂಟರಿಷ್ಟರೂ ನಮ್ಮ ಮಾತನ್ನು ನಂಬದ ಸ್ಥಿತಿಗೆ ದೂಡಿತ್ತು.

ಸಂತೋಷ ಮೂರನೆಯ ಮಗ. ಮೊದಲ ಮಗನಿಗೆ ಅದಾಗಲೇ ಮದುವೆಯಾಗಿ ಆತ ಬೇರೆ ವಾಸವಿದ್ದ. ಆ ಘಟನೆಯ ನಂತರ ಸಂತೋಷನ ಎರಡನೇ ಅಣ್ಣ ಮತ್ತು ತಮ್ಮನಿಗೆ ಹೆಣ್ಣು ಕೊಡಲು ಯಾರೂ ಮುಂದೆ ಬರುತ್ತಿಲ್ಲ. ಪತ್ನಿ ಶಶಿಕಲಾ ದೇವಿ ಮುದ್ದಿನ ಮಗನ ಬಂಧನದ ನಂತರ ಹಾಸಿಗೆ ಹಿಡಿದಳು. ಒಮ್ಮೆಯಾದರೂ ಮಗನ ಮುಖ ನೋಡಬೇಕು ಎಂದು ಆಕೆ ಜೀವ ಹಿಡಿದಿಟ್ಟು ಕಾದರೂ ಆಕೆಯ ಆಸೆ ಈಡೇರಿಸಲು ಆಗಲಿಲ್ಲ ಎಂಬ ಕೊರಗು ಈಗಲೂ ಚುಚ್ಚುತ್ತಿದೆ. ನಾವೆಷ್ಟೇ ಅರ್ಜಿ ಸಲ್ಲಿಸಿದರೂ ಅಮ್ಮ- ಮಗನ ಭೇಟಿಗೆ ಕೋರ್ಟ್‌ ಅವಕಾಶ ನೀಡಲಿಲ್ಲ. ಅದೇ ಕೊರಗಿನಲ್ಲಿ ಆಕೆ ಕೊನೆಯುಸಿರೆಳೆದಳು. ಕೊನೆಗೆ ಅಂತ್ಯ ಸಂಸ್ಕಾರಕ್ಕಾದರೂ ಮಗನನ್ನು ಕಳಿಸಿಕೊಡಿ ಎಂಬ ಮನವಿಯನ್ನೂ ತಿರಸ್ಕರಿಸಲಾಯಿತು. ಅಷ್ಟು ಕ್ರೂರವಾಗಿ ನಮ್ಮನ್ನು ನಡೆಸಿಕೊಳ್ಳುವ ಹಕೀಕತ್ತು ಏನಿತ್ತೋ ಅವರಿಗೆ ಗೊತ್ತಿಲ್ಲ” ಎಂದು ಒಳಗೇ ಮಡುಗಟ್ಟಿದ ದುಃಖವನ್ನು ಹಂಚಿಕೊಂಡಿದ್ದರು.

ಮಾಡದ ತಪ್ಪಿಗೆ ಅಮಾಯಕ ಮಗ ಜೈಲು ಪಾಲಾದ ನಂತರ ಪತ್ನಿ ಅದೇ ದುಃಖದಲ್ಲಿ ಮೃತಪಟ್ಟಿದ್ದರು. ಸುಧಾಕರ ರಾವ್‌ ಕುಟುಂಬವನ್ನು ಇಡೀ ಊರು ಅಘೋಷಿತ ಬಹಿಷ್ಕಾರ ಹಾಕಿತ್ತು. ಅಕ್ಕಪಕ್ಕದವರು ನೋಡುವ ದೃಷ್ಟಿ ಬದಲಾಗಿತ್ತು. ಸಂಬಂಧಿಕರು ಮನೆಗೆ ಬರುವುದು, ಕಾರ್ಯಕ್ರಮಗಳಿಗೆ ಕರೆಯುವುದನ್ನು ನಿಲ್ಲಿಸಿದ್ದರು. ಯಾರೊಬ್ಬರೂ ಈ ಹಿರಿಜೀವಗಳನ್ನು ಮಾತನಾಡಿಸುತ್ತಿರಲಿಲ್ಲ. ನಾಲ್ವರು ಗಂಡು ಮಕ್ಕಳಲ್ಲಿ ಮೊದಲ ಮಗ ಸಂಜಯ್‌ಗೆ ಮಾತ್ರ ಈ ಸಂಕಷ್ಟ ಎದುರಾಗುವ ಮುನ್ನವೇ ಮದುವೆಯಾಗಿತ್ತು. ಅವರಿಗೆ ಮಗಳಿದ್ದಾಳೆ. ಈ ಅವಮಾನದಿಂದ ಮಗಳ ಭವಿಷ್ಯಕ್ಕೆ ತೊಂದರೆಯಾದೀತು ಎಂದು ಪತ್ನಿ ಮಗಳಿಗಾಗಿ ಪ್ರತ್ಯೇಕ ವಾಸ ಮಾಡಲು ಶುರು ಮಾಡಿದ್ರು. ಆದರೂ ಸಂತೋಷ್‌ ಪರವಾಗಿ ಕಾನೂನು ಹೋರಾಟವನ್ನು ಸಂಜಯ್‌ ಮುಂದುವರಿಸಿದ್ದರು.

Untitled 7
ಸುಧಾಕರ ರಾವ್‌ ಅವರ ಮನೆ

ಮತ್ತಿಬ್ಬರು ಗಂಡು ಮಕ್ಕಳು ದುಡಿಯುತ್ತಿದ್ದಾರೆ. ಆದರೆ ಅವರಿಗೆ ಮದುವೆಯಾಗಲು ಹೆಣ್ಣು ಸಿಗುತ್ತಿಲ್ಲ. ಸಂತೋಷ್‌ ರಾವ್‌ ಬಂಧನವಾಗಿ ಆರು ವರ್ಷಗಳ ನಂತರ ಜಾಮೀನಿನಲ್ಲಿ ಬಿಡುಗಡೆಯಾಗಿ ಬಂದಿದ್ದರೂ ಆ ಕುಟುಂಬವನ್ನು ಇಡೀ ಸಮಾಜ ಅತ್ಯಾಚಾರಿಗಳಂತೆ ನೋಡುವುದನ್ನು ಮುಂದುವರಿಸಿತ್ತು. ಈಗ ಅವರಿಬ್ಬರೂ ಮದುವೆಯ ಆಸೆ ಬಿಟ್ಟಿದ್ದಾರೆ. ಸಂತೋಷ್‌ ರಾವ್‌ ಬಿಡುಗಡೆಯಾದರೂ ಅಮ್ಮನಿಲ್ಲದ ಮನೆಗೆ ಬರಲು ಒಲ್ಲೆ ಎಂದು ದೇವಸ್ಥಾನವೊಂದರಲ್ಲಿ ಸೇವೆ ಮಾಡುತ್ತ ಮನೆಗೆ ಬರುವುದನ್ನೇ ಬಿಟ್ಟಿದ್ದ. ಇಬ್ಬರು ಸೋದರರು ತಂದೆಗೆ ಅಡುಗೆ ಮಾಡಿಟ್ಟು ಮನೆ ಬಿಟ್ಟರೆ ಸಂಜೆ ಆರರ ನಂತರ ಮನೆ ಸೇರುವುದು. ಮನೆಯೊಡತಿ ಸತ್ತ ನಂತರ ಆ ಮನೆಗೆ ಹೆಣ್ಣು ದಿಕ್ಕಿಲ್ಲ. ವಯೋಸಹಜ ಅನಾರೋಗ್ಯ ಸುಧಾಕರ ರಾವ್‌ ಏಕಾಂಗಿಯಾಗಿ ತನ್ನ ಕುಟುಂಬಕ್ಕಾಗ ಅನ್ಯಾಯ, ಅವಮಾನವನ್ನು ನೆನೆಯುತ್ತ ಕಣ್ಣೀರು ಹಾಕುತ್ತಾ ದಿನ ದೂಡುತ್ತಿದ್ದಾರೆ.

ಸಂತೋಷ್‌ ರಾವ್‌ ನಿರ್ದೋಷಿ ಎಂಬ ತೀರ್ಪು ಬಂದು ಮೂರು ತಿಂಗಳವರೆಗೂ ಕೋರ್ಟ್‌ ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸದ ಸಿಬಿಐ ಐದು ತಿಂಗಳ ನಂತರ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿತ್ತು. ಮತ್ತೆ ಕಾನೂನು ಹೋರಾಟ ಶುರುವಾಗಿತ್ತು. ಹೇಗಾದರೂ ಮಾಡಿ ಸಂತೋಷ್‌ ರಾವ್‌ನನ್ನು ಅಪರಾಧಿ ಎಂದು ಮಾಡಿದರೆ ಸೌಜನ್ಯ ಕೇಸ್‌ ಕ್ಲೋಸ್‌ ಆಗುತ್ತದೆ ಎಂಬುದು ಈ ಹೋರಾಟದ ವಿರುದ್ಧ ಇದ್ದ, ಹಾಗೂ ಧರ್ಮಸ್ಥಳದ ಪರ ಇರುವವರ ನಿರೀಕ್ಷೆಯಾಗಿತ್ತು. ಅದೀಗ ಹುಸಿಯಾಗಿದೆ.

ಸೌಜನ್ಯ ಕುಟುಂಬದ ಪರ ಹೈಕೋರ್ಟ್‌ನಲ್ಲಿ ವಾದ ಮಂಡಿಸಿದ್ದ ನ್ಯಾಯವಾದಿ ಎಂ ಆರ್‌ ಬಾಲಕೃಷ್ಣ ʼಈ ದಿನʼದ ಜೊತೆ ಮಾತನಾಡಿ, “ಮರು ತನಿಖೆಗೆ ಆದೇಶ ನೀಡುವಂತೆ ಕೋರಿದ್ದ ನಮ್ಮ ಅರ್ಜಿಯನ್ನು ಹೈಕೋರ್ಟ್‌ ವಜಾ ಮಾಡಿದೆ. ಆದರೆ, ಅದಕ್ಕೆ ನ್ಯಾಯಾಧೀಶರು ಯಾವ ಕಾರಣ ಕೊಟ್ಟಿದ್ದಾರೆ ಎಂಬುದು ತಿಳಿದಿಲ್ಲ. ಆದೇಶದ ಪ್ರತಿ ಸಿಕ್ಕ ನಂತರ ಪರಾಮರ್ಶೆ ನಡೆಸಬಹುದು. ಆದರೆ, ನಮ್ಮ ವಾದವನ್ನು ಆಲಿಸಿದ್ದ ನ್ಯಾಯಾಧೀಶರು ಒಂದೇ ಒಂದು ಸಾಕ್ಷ್ಯವನ್ನೂ ಪೊಲೀಸರು ಸಂಗ್ರಹಿಸಿಲ್ಲ, ಎಲ್ಲವನ್ನೂ ನಾಶಪಡಿಸಿದ್ದಾರೆ ಎಂದು ಅಂದೇ ಅಸಮಾಧಾನ ಹೊರ ಹಾಕಿದ್ದರು. ನಮ್ಮ ಅರ್ಜಿ ವಜಾ ಆಗಿದೆ, ಆದರೆ ನಾವು ಸುಪ್ರೀಂ ಕೋರ್ಟ್‌ಗೆ ಹೋಗುತ್ತೇವೆ ” ಎಂದು ಹೇಳಿದರು.

ಸಂತೋಷ್‌ ರಾವ್‌ ನಿರ್ದೋಷಿ ಎಂಬ ತೀರ್ಪನ್ನು ಹೈಕೋರ್ಟ್‌ ಎತ್ತಿ ಹಿಡಿದ ಕಾರಣ ಸೌಜನ್ಯಳ ಅತ್ಯಾಚಾರಿಗಳು ಬೇರೆ ಯಾರು ಎಂಬ ಚರ್ಚೆಯನ್ನು ಜೀವಂತವಾಗಿಟ್ಟಿದೆ. ಇದು ನಮ್ಮ ಪೊಲೀಸ್‌, ತನಿಖಾಧಿಕಾರಿಗಳು, ತನಿಖಾ ಸಂಸ್ಥೆಗಳು ಒಟ್ಟಾಗಿ ಮಾಡಿದ ಬಹುದೊಡ್ಡ ಅನ್ಯಾಯ ಎಂಬುದು ಜಾಹೀರಾಗಿದೆ.

ಸೌಜನ್ಯ ಪ್ರಕರಣವೇನು?
ಅಂದು 2012ರ ಅಕ್ಟೋಬರ್ 9, ಸಂಜೆಯ ಸಮಯದಲ್ಲಿ ಹಿಂಗಾರಿನ ಮಳೆ ಅಬ್ಬರಿಸುತ್ತಿತ್ತು. ಮಳೆಯ ನಡುವೆ ಉಜಿರೆಯಲ್ಲಿ ಕಾಲೇಜು ಮುಗಿಸಿ, ಮನೆಗೆ ಹೋಗಲೆಂದು ಧರ್ಮಸ್ಥಳದ ಸ್ನಾನಘಟ್ಟ ಬಸ್‌ ನಿಲ್ಧಾಣದಲ್ಲಿ ಬಂದಿಳಿದ ಸೌಜನ್ಯ, ಮಳೆಗೆ ಕೊಡೆ ಹಿಡಿದು ತನ್ನ ಮನೆಯತ್ತ ನಡೆದು ಹೊರಟ್ಟಿದ್ದರು. ಬಸ್ ಇಳಿದು ಅರ್ಧ ಕಿ.ಮೀ ನಡೆದಿದ್ದಳೇನೋ, ಶಾಂತಿವನದ ಬಳಿ ಆಕೆ ನಡೆದು ಹೋಗುತ್ತಿದ್ದುದನ್ನು ಜೀಪಿನಲ್ಲಿ ಹೋಗುತ್ತಿದ್ದ ಮಾವ ವಿಠಲ ನೋಡಿದ್ದೇ ಕೊನೆ. ನಂತರ ಆಕೆಯನ್ನು ನೋಡಿದವರಿಲ್ಲ.

ಮಗಳು ಮನೆಗೆ ಬಾರದಿದ್ದನ್ನು ಕಂಡ ಕುಟುಂಬ, ಸಂಜೆ 7 ಗಂಟೆಯ ಸುಮಾರಿಗೆ ಸುಮಾರು 350-400 ಮಂದಿಯೊಂದಿಗೆ ಸೌಜನ್ಯಳಿಗಾಗಿ ಹುಡುಕಾಟ ನಡೆಸಿತ್ತು. ಆಕೆ ಬಸ್ ಇಳಿದ ಸ್ಥಳ, ಆಕೆ ಅಪಹರಣಕ್ಕೊಳಾದ ಸ್ಥಳ, ತಮ್ಮ ಮನೆಯ ದಾರಿಯುದ್ದಕ್ಕೂ ಒಂದಿಂಚೂ ಬಿಡದೆ ಹುಡುಕಾಡಿದ್ದರು. ಆದರೆ, ಸೌಜನ್ಯ ಪತ್ತೆಯಾಗಿರಲಿಲ್ಲ. ಮಗಳ ಸುಳಿವಿಲ್ಲದೆ, ರಾತ್ರಿ ಕಳೆಯಿತು. ಅಕ್ಟೋಬರ್ 10ರಂದು ಬೆಳಗ್ಗೆ ಸುಮಾರು 7.30ರ ಸಮಯದಲ್ಲಿ ಸೌಜನ್ಯಳ ಮೃತದೇಹ ಆಕೆ ಎಲ್ಲಿಂದ ಕಾಣೆಯಾಗಿದ್ದಳೋ, ಅಲ್ಲಿಂದ ಕೇವಲ 20 ಮೀಟರ್ ದೂರದಲ್ಲಿದ್ದ ತೊರೆಯಾಚೆ ಪೊದೆಯಲ್ಲಿ ಪತ್ತೆಯಾಗಿತ್ತು.

sowjanya 2
ಮೃತ ಸೌಜನ್ಯ, ನಿರ್ದೋಷಿ ಸಂತೋಷ್‌ ರಾವ್

ಆಕೆಯ ದೇಹ ಅರೆ ಬೆತ್ತಲೆಯಾಗಿತ್ತು. ಆಕೆಯ ಕೈಗಳನ್ನು ಮರವೊಂದಕ್ಕೆ ಆಕೆಯದ್ದೇ ದುಪ್ಪಟ್ಟದಿಂದ ಸಡಿಲವಾಗಿ ಕಟ್ಟಲಾಗಿತ್ತು. ಆಕೆಯ ಕಾಲಿನಲ್ಲಿ ರಕ್ತ ಸೋರುತ್ತಿತ್ತು. ಆಕೆಯನ್ನು ಅತ್ಯಾಚಾರಗೈದು, ಹತ್ಯೆಗೈಯಲಾಗಿತ್ತು. ಅತ್ಯಾಚಾರವನ್ನು ಮರೆಮಾಡಲು ಅಪರಾಧಿಗಳು ಆಕೆಯ ಮರ್ಮಾಂಗಕ್ಕೆ ಮಣ್ಣು ಹಾಕಿದ್ದರು. ಪೊಲೀಸರು ತರಾತುರಿಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿದ್ದರು. ಅದರ ಅರಿವಿಲ್ಲದ ಕುಟುಂಬ ಸಂಜೆಯ ಹೊತ್ತಲ್ಲಿ ಅಗ್ನಿಸ್ಪರ್ಶದ ಮೂಲಕ ಶವಸಂಸ್ಕಾರ ಮಾಡಿ ಮುಗಿಸಿದ್ದರು.

ಅಕ್ಟೋಬರ್ 11ರಂದು ಅತ್ತ ಬೆಳ್ತಂಗಡಿಯಲ್ಲಿ ಬೃಹತ್‌ ಪ್ರತಿಭಟನೆ ನಡೆಯುತ್ತಿದ್ದಾಗಲೇ, ಇತ್ತ ಧರ್ಮಸ್ಥಳದ ಗೊಮ್ಮಟೇಶ್ವರ ಬೆಟ್ಟದ ಮೆಟ್ಟಿಲುಗಳ ಮೇಲೆ ಕುಳಿತಿದ್ದ ಸಂತೋಷ್ ನನ್ನು ಏಕಾಏಕಿ ಅಲ್ಲಿಗೆ ಬಂದ ಮಲಿಕ್ ಜೈನ್, ರವಿ ಪೂಜಾರಿ ಥಳಿಸಿ ಈತನೇ ಅತ್ಯಾಚಾರಿ ಎಂದು ಹೇಳುತ್ತಾ ಪೊಲೀಸರಿಗೆ ಒಪ್ಪಿಸಿದ್ದರು.

ಅಕ್ಟೋಬರ್ 13ರಂದು ಸಂತೋಷ್ ತಾನೇ ಕೃತ್ಯ ಎಸಗಿದ್ದಾಗಿ ಒಪ್ಪಿಕೊಂಡಿದ್ದಾನೆ. ಆತ ಸೌಜನ್ಯಳನ್ನು ಮಣ್ಣಸಂಕಕ್ಕೆ ಎಳೆದೊಯ್ದು ಕೃತ್ಯ ಎಸಗಿದ್ದಾಗಿ ತಿಳಿಸಿದ್ದಾನೆ. ಕೃತ್ಯದ ಸ್ಥಳಗಳನ್ನು ತೋರಿಸಿದ್ದಾನೆ. ಸೌಜನ್ಯಳ ಮೃತದೇಹ ಪತ್ತೆಯಾದ 100 ಮೀಟರ್ ದೂರದಲ್ಲಿ ಆಕೆಯ ಬಟ್ಟೆಗಳು ಪತ್ತೆಯಾಗಿವೆ ಎಂದು ಪೊಲೀಸರು ನ್ಯಾಯಾಲಯದಲ್ಲಿ ಹೇಳಿದ್ದರು.

ತಿಮರೋಡಿ
ಸೌಜನ್ಯ ಪ್ರಕರಣ ಮರುತನಿಖೆಗೆ ಒತ್ತಾಯಿಸಿ ನಡೆದ ಹೋರಾಟ

ಹನ್ನೊಂದು ವರ್ಷಗಳ ತನಿಖೆಯ ನಂತರ, ಬೆಳ್ತಂಗಡಿ ಪೊಲೀಸರು, ಸಿಐಡಿ ಮತ್ತು ಅಂತಿಮವಾಗಿ ಸಿಬಿಐ ನಡೆಸಿದ ತನಿಖೆಯಲ್ಲಿ ಸಲ್ಲಿಸಿದ್ದ ಸಾಕ್ಷ್ಯಗಳು ಸಂತೋಷ್ ರಾವ್ ಅವರನ್ನು ಅಪರಾಧಿಯೆಂದು ಸಾಬೀತು ಮಾಡಲು ಸಾಕಾಗುವುದಿಲ್ಲ ಎಂದು ಸಿಬಿಐ ನ್ಯಾಯಾಲಯ ಹೇಳಿತ್ತು. ಈ ತೀರ್ಪು ಬಂದ ನಂತರ ಸೌಜನ್ಯ ಕುಟುಂಬದ ಪರ ಹೋರಾಟ ನಡೆಸುತ್ತ ಬಂದಿದ್ದ ಮಹೇಶ್‌ ಶೆಟ್ಟಿ ತಿಮರೋಡಿ ಅವರ ಮುಂದಾಳತ್ವದಲ್ಲಿ ಸುಮಾರು ಹತ್ತು ತಿಂಗಳ ಕಾಲ ರಾಜ್ಯದಾದ್ಯಂತ ಪ್ರತಿಭಟನೆಗಳು ನಡೆದಿತ್ತು. ಸಿಎಂ ಸಿದ್ದರಾಮಯ್ಯ ಭೇಟಿಯಾಗಿ ಮರು ತನಿಖೆ ನಡೆಸುವಂತೆ ಒತ್ತಾಯಿಸಿದ್ದರು. ಲೋಕಸಭಾ ಚುನಾವಣೆಯಲ್ಲಿ ನೋಟಾ ಅಭಿಯಾನವನ್ನೂ ನಡೆಸಿದ್ದರು.

ಇದೀಗ ಮರುತನಿಖೆಗೆ ಕೋರಿದ್ದ ಅರ್ಜಿಯನ್ನು ಹೈಕೋರ್ಟ್‌ ವಜಾ ಮಾಡಿದ ಕಾರಣ ಸುಪ್ರೀಂ ಕೋರ್ಟ್‌ನಲ್ಲಿ ನ್ಯಾಯಕ್ಕಾಗಿ ಹೋರಾಟ ಮುಂದುವರಿಸಲು ಸೌಜನ್ಯ ಕುಟುಂಬದವರು ನಿರ್ಧರಿಸಿದ್ದಾರೆ ಎಂದು ಸೌಜನ್ಯ ಕುಟುಂಬದ ಪರ ನ್ಯಾಯವಾದಿ ಎಂ ಆರ್‌ ಬಾಲಕೃಷ್ಣ ತಿಳಿಸಿದ್ದಾರೆ.

ಹೇಮಾ 2
ಹೇಮಾ ವೆಂಕಟ್
+ posts

ʼಈ ದಿನ.ಕಾಮ್‌ʼನಲ್ಲಿ ಮುಖ್ಯ ವರದಿಗಾರ್ತಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಉದಯವಾಣಿ ಮತ್ತು ಪ್ರಜಾವಾಣಿ ಪತ್ರಿಕೆಯಲ್ಲಿ ಹತ್ತು ವರ್ಷಗಳ ಕಾಲ ಉಪಸಂಪಾದಕಿ/ವರದಿಗಾರ್ತಿಯಾಗಿ ಕಾರ್ಯನಿರ್ವಹಿಸಿದ್ದಾರೆ.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಹೇಮಾ ವೆಂಕಟ್
ಹೇಮಾ ವೆಂಕಟ್
ʼಈ ದಿನ.ಕಾಮ್‌ʼನಲ್ಲಿ ಮುಖ್ಯ ವರದಿಗಾರ್ತಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಉದಯವಾಣಿ ಮತ್ತು ಪ್ರಜಾವಾಣಿ ಪತ್ರಿಕೆಯಲ್ಲಿ ಹತ್ತು ವರ್ಷಗಳ ಕಾಲ ಉಪಸಂಪಾದಕಿ/ವರದಿಗಾರ್ತಿಯಾಗಿ ಕಾರ್ಯನಿರ್ವಹಿಸಿದ್ದಾರೆ.

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಹರೀಶ್‌ ಪೂಂಜಾ ಪ್ರಕರಣ | ಹೈಕೋರ್ಟ್‌ ನೀಡಿದ ತಡೆ ತೆರವಿಗೆ ಪ್ರಯತ್ನಿಸುವುದೇ ಸರ್ಕಾರ?

ಮುಖ್ಯಮಂತ್ರಿ ಸಿದ್ದರಾಮಯ್ಯನವರ ಪ್ರಕಾರ ರಾಜಕೀಯ ಕಾರಣಕ್ಕೆ ಹಾಗೆಲ್ಲ ಮಾತನಾಡಿದ್ರೆ ಸುಮ್ಮನಿದ್ದು ಬಿಡಬೇಕು,...

ಚುನಾವಣಾ ಆಯೋಗದ ವಿರುದ್ಧ ತೊಡೆ ತಟ್ಟಿದ ಇಂಡಿಯಾ ಒಕ್ಕೂಟ: ಕೆಟ್ಟ ವ್ಯವಸ್ಥೆಯ ವಿರುದ್ಧ ಹೋರಾಟ

ಭಾರತದ ಪ್ರಜಾಪ್ರಭುತ್ವದ ಭವಿಷ್ಯಕ್ಕೆ ಒಂದು ನಿರ್ಣಾಯಕ ಘಟ್ಟವಾಗಿದೆ. ಇದು ಕೇವಲ ಒಂದು...

ಸಂಪೂರ್ಣ ನೆಲಕಚ್ಚಿದ ಸೋಯಾಬೀನ್‌ ಬೆಳೆ: ಪರಿಹಾರದ ನಿರೀಕ್ಷೆಯಲ್ಲಿ ರೈತರು

ಬೈಲಹೊಂಗಲ, ಸವದತ್ತಿ, ಕಿತ್ತೂರು ಸೇರಿದಂತೆ ಬೆಳಗಾವಿ ಜಿಲ್ಲೆಯ ಹಲವು ತಾಲೂಕುಗಳಲ್ಲಿ ಅತಿ...

ಧರ್ಮಸ್ಥಳ ಪ್ರಕರಣ | ಬಿಜೆಪಿಯವರು ನ್ಯಾಯಕ್ಕಾಗಿ ಧ್ವನಿ ಎತ್ತಿದ್ದಕ್ಕಿಂತ ವಿತಂಡವಾದದಲ್ಲಿ ಮುಳುಗಿದ್ದೇ ಹೆಚ್ಚು!

ಧರ್ಮಸ್ಥಳದಲ್ಲಿ ಅನ್ಯಾಯವಾಗಿ ಶವವಾಗಿರುವ ಅದೆಷ್ಟೋ ಜನರು ಹಿಂದುಗಳು ಎನ್ನಲಾಗುತ್ತಿದೆ. ಹಿಂದೂ ಧರ್ಮದ...

Download Eedina App Android / iOS

X