ಉಕ್ರೇನ್‌ನಲ್ಲಿ ನಾಗರಿಕರ ಮೇಲೆ ರಷ್ಯಾ ನಡೆಸಿದ ದಾಳಿಯ ಕುರಿತು ತನ್ನ ಪತ್ರಿಕೆಯಲ್ಲಿ ವರದಿ ಮಾಡಿದ ರಷ್ಯಾದ ಪತ್ರಕರ್ತರೊಬ್ಬರನ್ನು ಶುಕ್ರವಾರ ಸೈಬೀರಿಯಾದ ನ್ಯಾಯಾಲಯವು ತಪ್ಪಿತಸ್ಥರೆಂದು ಘೋಷಿಸಿದೆ. ಜೊತೆಗೆ ಎಂಟು ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿದೆ.
ಗೊರ್ನೊ-ಅಲ್ಟೈಸ್ಕ್ ನಗರದ ನ್ಯಾಯಾಲಯವು ಅಲ್ಟಾಯ್‌ನ ಸೈಬೀರಿಯನ್ ಪ್ರದೇಶದ ಪತ್ರಕರ್ತ, ಲೀಫ್ಲೆಟ್ ಪತ್ರಿಕೆ ಪ್ರಕಾಶಕ ಸೆರ್ಗೆಯ್ ಮಿಖೈಲೋವ್ ಅವರನ್ನು ರಷ್ಯಾದ ಸೈನ್ಯದ ಬಗ್ಗೆ ಸುಳ್ಳು ಮಾಹಿತಿಯನ್ನು ಹರಡಿದ ಅಪರಾಧಿ ಎಂದು ತೀರ್ಪು ನೀಡಿದೆ.
ಇದನ್ನು ಓದಿದ್ದೀರಾ? ರಷ್ಯಾ ಉಕ್ರೇನ್ ಯುದ್ಧ: ರಷ್ಯಾ ಸೇನಾ ಶಿಬಿರದಲ್ಲಿದ್ದ ಭಾರತೀಯ ಶೆಲ್ ದಾಳಿಗೆ ಬಲಿ
2022ರ ಫೆಬ್ರವರಿಯಲ್ಲಿ ಮಾಸ್ಕೋ ಉಕ್ರೇನ್ ಅನ್ನು ಆಕ್ರಮಿಸಿದ ದಿನಗಳ ನಂತರ ಅಳವಡಿಸಿಕೊಂಡ ಹೊಸ ಕಾನೂನಿನ ಪ್ರಕಾರ, ರಷ್ಯಾದಲ್ಲಿ ಯುದ್ಧವನ್ನು ಟೀಕಿಸುವುದು ಕ್ರಿಮಿನಲ್ ಅಪರಾಧವಾಗಿದೆ. ಅನೇಕ ಪತ್ರಕರ್ತರು ಸೇರಿದಂತೆ ನೂರಾರು ರಷ್ಯನ್ನರನ್ನು ಈ ಕಾನೂನಿನಡಿಯಲ್ಲಿ ವಿಚಾರಣೆಗೆ ಒಳಪಡಿಸಲಾಗಿದೆ.
2022ರ ಫೆಬ್ರವರಿಯಿಂದ ಈವರೆಗೆ ಯುದ್ಧ-ವಿರೋಧಿ ನಿಲುವಿನ ಮೇಲೆ 1,000ಕ್ಕೂ ಹೆಚ್ಚು ಜನರು ಕ್ರಿಮಿನಲ್ ಪ್ರಕರಣಕ್ಕೆ ಒಳಗಾಗಿದ್ದಾರೆ. ನೆಟ್ ಫ್ರೀಡಮ್ಸ್ ಪ್ರಕಾರ, ಉಕ್ರೇನ್‌ನಲ್ಲಿ ನಾಗರಿಕರ ಮೇಲೆ ರಷ್ಯಾದ ದಾಳಿಯ ಕುರಿತು ವರದಿ ಮಾಡಿದ ಕಾರಣ 2022ರ ಏಪ್ರಿಲ್‌ನಲ್ಲಿ ಮಿಖೈಲೋವ್ ಅವರನ್ನು ಬಂಧಿಸಲಾಗಿದೆ. ಆದರೆ ಮಿಖೈಲೋವ್ ಮಾತ್ರ ಈ ಆರೋಪವನ್ನು ತಿರಸ್ಕರಿಸುತ್ತಾ ಬಂದಿದ್ದಾರೆ.
