ಮಲಯಾಳಂ ಚಿತ್ರರಂಗದಲ್ಲಿ ನಟಿಯರ ಮೇಲೆ ನಡೆಯುತ್ತಾ ಬಂದಿರುವ ಲೈಂಗಿಕ ಕಿರುಕುಳದ ಬಗ್ಗೆ ಪ್ರತಿ ದಿನ ದೂರುಗಳು ದಾಖಲಾಗುತ್ತಿರುವ ನಡುವೆ, “ಮಲಯಾಳಂ ಚಿತ್ರಗಳ ಶೂಟಿಂಗ್ ಸೆಟ್‌ಗಳಲ್ಲಿ ನಟಿಯರ ಕ್ಯಾರವಾನ್‌ಗಳಲ್ಲಿ ಹಿಡನ್ ಕ್ಯಾಮೆರಾಗಳಿರುತ್ತಿತ್ತು” ಎಂದು ಹಿರಿಯ ನಟಿ ರಾಧಿಕಾ ಶರತ್ ಕುಮಾರ್ ಗಂಭೀರ ಆರೋಪ ಮಾಡಿದ್ದಾರೆ.
“ನಟಿಯರ ಕ್ಯಾರವಾನ್‌ಗಳಲ್ಲಿ ಹಿಡನ್ ಕ್ಯಾಮೆರಾಗಳನ್ನು ಇರಿಸಿ ರೆಕಾರ್ಡ್ ಮಾಡಲಾಗಿದೆ. ಅದನ್ನು ನಟರುಗಳು ತಮ್ಮ ಮೊಬೈಲ್ ಫೋನ್‌ಗಳಲ್ಲಿ ವೀಕ್ಷಿಸುವುದನ್ನು ನಾನು ಖುದ್ದಾಗಿ ನೋಡಿದ್ದೇನೆ” ಎಂದು ದಕ್ಷಿಣ ಭಾರತದ ನಟಿ ರಾಧಿಕಾ ಶರತ್ ಕುಮಾರ್ ಶನಿವಾರ ಅಚ್ಚರಿಯ ಹೇಳಿಕೆ ನೀಡಿದ್ದಾರೆ.
ನ್ಯಾಯಮೂರ್ತಿ ಕೆ ಹೇಮಾ ಸಮಿತಿಯ ವರದಿ ಬಿಡುಗಡೆಯಾದ ಬೆನ್ನಲ್ಲೇ ಮಲಯಾಳಂ ವಾಹಿನಿಯೊಂದಕ್ಕೆ ಹಿರಿಯ ನಟಿ ಈ ಹೇಳಿಕೆಯನ್ನು ನೀಡಿದ್ದಾರೆ. ಆರ್‌ಎಂಪಿ ನಾಯಕಿ ಹಾಗೂ ಶಾಸಕಿ ಕೆ ಕೆ ರೆಮಾ ಸೇರಿದಂತೆ ಹಲವಾರು ಮಂದಿ ಈ ಆರೋಪಕ್ಕೆ ಪ್ರತಿಕ್ರಿಯಿಸಿದ್ದಾರೆ.
ಇದನ್ನು ಓದಿದ್ದೀರಾ? ಕೇರಳ | ಮಲಯಾಳಂ ನಟ, ಶಾಸಕ ಮುಖೇಶ್ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲು
“ಹೇಮಾ ಸಮಿತಿಯ ವರದಿ ಏಕೆ ವಿಳಂಬವಾಯಿತು” ಎಂದು ಆಶ್ಚರ್ಯ ವ್ಯಕ್ತಪಡಿಸಿರುವ ರಾಧಿಕಾ, “ಮಲಯಾಳಂ ಸಿನಿಮಾ ಉದ್ಯಮ ಮಾತ್ರವಲ್ಲದೆ ಇತರೆ ಸಿನಿಮಾ ಉದ್ಯಮಗಳಲ್ಲಿಯೂ ಮಹಿಳೆಯರ ಮೇಲೆ ಕಿರುಕುಳ ನಡೆಯುತ್ತಿದೆ ಮತ್ತು ಮಹಿಳೆಯರನ್ನು ಕೆಟ್ಟದಾಗಿ ನಡೆಸಿಕೊಳ್ಳುವುದು ಮುಂದುವರಿದಿದೆ” ಎಂದು ಹೇಳಿದರು.
ಈ ಬಗ್ಗೆ ತಮ್ಮ ವೈಯಕ್ತಿಕ ಅನುಭವವನ್ನು ಹಂಚಿಕೊಂಡ ರಾಧಿಕಾ ಶರತ್‌ಕುಮಾರ್, “ನಾನು ಆ ವಿಡಿಯೋಗಳನ್ನು ನೋಡಿದ್ದೇನೆ. ಕ್ಯಾರವಾನ್‌ಗಳಲ್ಲಿ ಮಹಿಳೆಯರು ಬಟ್ಟೆ ಬದಲಾಯಿಸುವ ವಿಡಿಯೋಗಳನ್ನು ನಟರು ತಮ್ಮ ಮೊಬೈಲ್‌ನಲ್ಲೇ ನೋಡುವುದನ್ನು ನಾನು ನೋಡಿದ್ದೇನೆ” ಎಂದು ತಿಳಿಸಿದರು.
“ನನಗೆ ತುಂಬಾ ಕೋಪ ಬಂತು. ನಾನು ಸುರಕ್ಷಿತರಾಗಿರಬೇಕೆಂದು ನಾನು ಭಾವಿಸಿದೆ. ಅದರಿಂದಾಗಿ ನಾನು ಕ್ಯಾರವಾನ್ ಬೇಡವೆಂದು ಹೇಳಿ, ನನ್ನ ಹೊಟೇಲ್ ಕೋಣೆಗೆ ಹಿಂತಿರುಗಿದೆ” ಎಂದು ನಟಿ ಹೇಳಿದ್ದಾರೆ.
