ನಿವೇಶನ ಖಾತೆಗೆ ಅರ್ಜಿ ಸಲ್ಲಿಸಿ ವರ್ಷವಾದರೂ ಖಾತೆ ಮಾಡಿಕೊಡದ ಗ್ರಾಪಂ ಪಿಡಿಒ ವಿರುದ್ಧ ಲೋಕಾಯುಕ್ತ ಎಸ್ಪಿ ಆಂಟೋನಿ ಜಾನ್ ಗರಂ ಆದರು.
ಚಿಂತಾಮಣಿ ನಗರದ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ಶುಕ್ರವಾರ ಆಯೋಜಿಸಿದ್ದ ಸಾರ್ವಜನಿಕರ ಕುಂದು ಕೊರತೆ ಸಭೆಯಲ್ಲಿ ಕುರುಬೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ಸೀಕಲ್ ಗ್ರಾಮದ ಮುನಿರತ್ನಮ್ಮ ಲೇಟ್ ಮುನಿಯಪ್ಪ ಎಂಬುವರು ನಿವೇಶನದ ಖಾತೆ ಮಾಡಿಕೊಡಲು ಅರ್ಜಿ ಸಲ್ಲಿಸಿ ಒಂದು ವರ್ಷವಾದರೂ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಖಾತೆ ಮಾಡಿಕೊಡಲು ವಿಳಂಬ ಮಾಡಿದ ಕಾರಣ ಮುನಿರತ್ನಮ್ಮ ಎಂಬವರು ಲೋಕಾಯುಕ್ತ ಎಸ್ಪಿಗೆ ಲಿಖಿತ ಮೂಲಕ ದೂರು ಸಲ್ಲಿಸಿದರು.
ಅರ್ಜಿ ಪರಿಶೀಲಿಸಿದ ಲೋಕಾಯುಕ್ತ ಎಸ್ಪಿ ಆಂಟೋನಿ ಜಾನ್ ಗ್ರಾಪಂ ಪಿಡಿಒ ಅವರನ್ನು ಕೂಡಲೇ ಅಮಾನತು ಮಾಡುವಂತೆ ತಾಪಂ ಇಒಗೆ ಸೂಚಿಸಿದರು.
ಸರ್ಕಾರಿ ಅಧಿಕಾರಿ ಅಥವಾ ನೌಕರರಿಂದ ಸಾರ್ವಜನಿಕರಿಗೆ ಕಾನೂನು ರೀತಿಯಲ್ಲಿ ಆಗಬೇಕಾದ ಕೆಲಸಗಳು ವಿಳಂಬವಾಗಿದ್ದರೆ, ಮಾಡಿಕೊಡಲು ಅಧಿಕಾರಿಗಳು ತೊಂದರೆ ನೀಡಿದರೆ ಅಂಥವರು ದೂರು ನೀಡಬಹುದು ಎಂದು ಮಾಹಿತಿ ನೀಡಿದರು.
ಸಭೆಯಲ್ಲಿ ಕಂದಾಯ ಇಲಾಖೆ, ಅಬಕಾರಿ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳ ವಿರುದ್ಧ ಸಾರ್ವಜನಿಕ ದೂರುಗಳು ಸಲ್ಲಿಕೆಯಾದವು.
ಈ ಸುದ್ದಿ ಓದಿದ್ದೀರಾ? ಚಿಕ್ಕಬಳ್ಳಾಪುರ | ಈದಿನ ಸಹಾಯವಾಣಿ ಬಿಡುಗಡೆಗೊಳಿಸಿದ ಸಚಿವ ಎಂ.ಸಿ.ಸುಧಾಕರ್
ಈ ಸಂದರ್ಭದಲ್ಲಿ ಲೋಕಾಯುಕ್ತ ಡಿ ವೈ ಎಸ್ ಪಿ ವೀರೇಂದ್ರ ಕುಮಾರ್, ಇನ್ಸ್ಪೆಕ್ಟರ್ ಮೋಹನ್ ಎನ್ ಹೆಚ್, ಶಿವಪ್ರಸಾದ್, ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಆನಂದ, ಪೌರಾಯುಕ್ತ ಜಿಎನ್ ಚಲಪತಿ, ಉಪತಾಹಸಿಲ್ದಾರ್ ರಾಜೇಂದ್ರ, ರೆವೆನ್ಯೂ ಇನ್ಸ್ಪೆಕ್ಟರ್ ಗೋಕುಲ್, ಸಿಬ್ಬಂದಿಗಳಾದ ಅರುಣ್ ಕುಮಾರ್, ಮಂಜುಳಾ, ರಮೇಶ್, ಗುರುಮೂರ್ತಿ, ದೇವರಾಜ್, ಮೊಳಪ್ಪ ಮೊಗ ಮೊರೆ, ಅಬ್ದುಲ್ ಖಾದರ್, ನರಸಿಂಹ ಮೂರ್ತಿ ಸೇರಿದಂತೆ ತಾಲೂಕು ಮಟ್ಟದ ಅಧಿಕಾರಿಗಳು ಭಾಗವಹಿಸಿದ್ದರು.