ಮಂಡ್ಯ ಜಿಲ್ಲೆಯಲ್ಲಿ ಸೌಹಾರ್ದತೆಯ ಗೌರಿ ಗಣೇಶ ಹಾಗೂ ಈದ್ ಮಿಲಾದ್ ಹಬ್ಬ ಆಚರಿಸೋಣ ಎಂದು ಜಿಲ್ಲಾಧಿಕಾರಿ ಡಾ ಕುಮಾರ ಅವರು ಕರೆ ನೀಡಿದರು.
ಮಂಡ್ಯ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಸೌಹಾರ್ದತೆ ಸಭೆಯಲ್ಲಿ ಮಾತನಾಡಿ, “ಹಬ್ಬಗಳ ಆಚರಣೆಗೆ ಸರ್ಕಾರದ ನಿಯಮ ಮತ್ತು ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸಬೇಕು” ಎಂದು ಹೇಳಿದರು.
“ಪ್ಲಾಸ್ಟರ್ ಆಫ್ ಪ್ಯಾರಿಸ್ ಹಾಗೂ ಹಾನಿಕಾರಕ ಬಣ್ಣಗಳಿಂದ ಮಾಡಲಾದ ಗಣೇಶ ಮೂರ್ತಿಗಳನ್ನು ನೀರಿನಲ್ಲಿ ವಿಸರ್ಜನೆ ಮಾಡುವುದನ್ನು ತಡೆಯಬೇಕು ಎಂಬ ಉಚ್ಛ ನ್ಯಾಯಾಲಯದ ಆದೇಶವನ್ನು ಪಾಲಿಸಬೇಕು. ಜಿಲ್ಲೆಯ ಜನರು ಜೇಡಿ ಮಣ್ಣಿನಿಂದ ತಯಾರಿಸಿದ ಮೂರ್ತಿಗಳನ್ನು ಪ್ರತಿಷ್ಠಾಪಿಸಿ ಹಬ್ಬವನ್ನು ಆಚರಿಸಬೇಕು” ಎಂದು ತಿಳಿಸಿದರು.
“ಸಾರ್ವಜನಿಕ ಸ್ಥಳಗಳಲ್ಲಿ ಗಣಪತಿ ಪ್ರತಿಷ್ಠಾಪನೆಗೆ ಸಿಂಗಲ್ ವಿಂಡೋ ಸಿಸ್ಟಮ್ ಮೂಲಕ ಅನುಮತಿ ನೀಡಲಾಗುತ್ತಿದ್ದು, ಅರ್ಜಿಯಲ್ಲಿ ವಿಸರ್ಜನೆ ಸ್ಥಳವನ್ನು ಕಡ್ಡಾಯವಾಗಿ ನಮೂದಿಸಬೇಕು. ಮೂರ್ತಿಗಳನ್ನು ಸ್ಥಳೀಯ ಸಂಸ್ಥೆಗಳು ನಿಗದಿಪಡಿಸಿದ ಸ್ಥಳದಲ್ಲಿ ಮಾತ್ರ ವಿಸರ್ಜನೆ ಮಾಡಬೇಕು. ಅಲಂಕಾರಿಕ ವಸ್ತುಗಳನ್ನು ಬೇರ್ಪಡಿಸಿ ಪ್ಲಾಸ್ಟಿಕ್ ಬಳಸದೇ ವಿಸರ್ಜನೆ ಮಾಡಬೇಕು” ಎಂದು ಮನವಿ ಮಾಡಿದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶೇಖ್ ತನ್ವೀರ್ ಆಸೀಫ್ ಮಾತನಾಡಿ, “ಎರಡೂ ಹಬ್ಬಗಳು ಪ್ರಮುಖ ಧಾರ್ಮಿಕ ಹಬ್ಬಗಳಾಗಿರುವುದರಿಂದ ಧಾರ್ಮಿಕ ಭೇದಾಭಾವ ತೊರೆದು ಪರಸ್ಪರ ಸಹಕಾರದಿಂದ ಹಬ್ಬವನ್ನು ಆಚರಿಸಬೇಕು” ಎಂದು ಹೇಳಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ ಮಾತನಾಡಿ, “ಹಬ್ಬಗಳು ಜೊತೆಯಾಗಿ ಬಂದಿರುವುದರಿಂದ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಎಚ್ಚರಿಕೆ ವಹಿಸಬೇಕು. ಮೆರವಣಿಗೆ ಮಾರ್ಗವನ್ನು ಪೊಲೀಸ್ ಇಲಾಖೆಗೆ ಪೂರ್ವಾನುಮೋದನೆಗಾಗಿ ಸಲ್ಲಿಸಬೇಕು. ವಿವಾದಾತ್ಮಕ ಸ್ಥಳಗಳ ಬದಲು ಬೇರೆಯೇ ಸ್ಥಳಗಳನ್ನು ಆಯ್ಕೆ ಮಾಡಬೇಕು” ಎಂದು ಸಲಹೆ ನೀಡಿದರು.
ಈ ಸುದ್ದಿ ಓದಿದ್ದೀರಾ? ಬೆಳಗಾವಿ | ನೈತಿಕತೆಯೇ ಸ್ವಾತಂತ್ರ್ಯ ಘೋಷ ವಾಕ್ಯದಡಿ ಸೆ.1ರಿಂದ 30ರವರೆಗೆ ರಾಷ್ಟ್ರವ್ಯಾಪಿ ಅಭಿಯಾನ
“ಸಾರ್ವಜನಿಕ ಸ್ಥಳಗಳಲ್ಲಿ ಪ್ರತಿಷ್ಠಾಪಿಸುವ ಗಣೇಶ ಮೂರ್ತಿಗಳಿಗೆ ಸ್ಥಳೀಯ ಸಂಸ್ಥೆಗಳು ಮತ್ತು ಪೊಲೀಸ್ ಇಲಾಖೆಯಿಂದ ಅನುಮತಿ ಪಡೆಯುವುದು ಕಡ್ಡಾಯವಾಗಿದೆ. ಅನಾವಶ್ಯಕವಾಗಿ ಧ್ವನಿವರ್ಧಕಗಳನ್ನು ಬಳಸುವುದು ನಿಯಮ ಉಲ್ಲಂಘನೆಗೆ ತಕ್ಕ ಪ್ರಹರವನ್ನು ಆಹ್ವಾನಿಸಬಹುದು” ಎಂದು ಎಚ್ಚರಿಸಿದರು.
ಸಭೆಯಲ್ಲಿ ಅಪರ ಪೊಲೀಸ್ ವರಿಷ್ಠಾಧಿಕಾರಿ ತಿಮ್ಮಯ್ಯ, ಡಿವೈಎಸ್‌ಪಿ ಗಂಗಾಧರ ಸ್ವಾಮಿ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಇದ್ದರು.