ಎಂ ಎಂ ಕಲ್ಬುರ್ಗಿರವರು 12ನೇ ಶತಮಾನದ ಬಸವಣ್ಣನವರ ವಚನ ಸಾಹಿತ್ಯವನ್ನು ಹುಡುಕಿ ಸತ್ಯಾಂಶವನ್ನು ಜಗತ್ತಿಗೆ ತಿಳಿಸಿದ್ದಕ್ಕೆ ಇದನ್ನು ಸಹಿಸದ ಮೂಲಭೂತವಾದಿಗಳು ಅವರನ್ನು ಗುಂಡಿಕ್ಕಿ ಕೊಂದಿದ್ದಾರೆ. ಆದರೆ ವ್ಯಕ್ತಿಯನ್ನು ಕೊಂದಿರಬಹುದೇ ಹೊರೆತು ವಿಚಾರಗಳನ್ನಲ್ಲ ಎಂದು ಜಾಗತಿಕ ಲಿಂಗಾಯತ ಮಹಾಸಭಾ ಯುವ ಘಟಕದ ರಾಜ್ಯ ಸಂಚಾಲಕರು ಹಾಗೂ ಭಾರತೀಯ ಶರಣ ಸೇನಾ ತುಮಕೂರು ಘಟಕ ಸಂಚಾಲಕ ರಾಯಸಂದ್ರ ರವಿಕುಮಾರ್ ತಿಳಿಸಿದರು.
ತುಮಕೂರು ನಗರದ ಜಯದೇವ ಸಭಾಂಗಣದಲ್ಲಿ ಜಾಗತಿಕ ಲಿಂಗಾಯತ ಮಹಾಸಭಾ ಹಾಗೂ ಭಾರತೀಯ ಶರಣ ಸೇನೆ ವತಿಯಿಂದ ಡಾ. ಎಂ ಎಂ ಕಲ್ಬುರ್ಗಿ ರವರ 9ನೇ ವರ್ಷದ ಸ್ಮರಣೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಬಸವಣ್ಣನವರ ಹಾಕಿಕೊಟ್ಟ ಹಾದಿಯಲ್ಲಿ ಕಲ್ಬುರ್ಗಿಯವರು ಸಾಗುತ್ತಿದ್ದರು. ಲಿಂಗಾಯತ ಎಂಬುದು ಜಾತಿಯಲ್ಲ ಅದೊಂದು ಧರ್ಮ. ಲಿಂಗಾಯತ ಧರ್ಮ ಸ್ವತಂತ್ರ ಧರ್ಮ, ಸಮಾನತೆಯ ಧರ್ಮ ಎಂದು ಹೇಳಿದರು.
ಶರಣಸೇನಾ ಸಂಚಾಲಕ ಹೆಚ್. ಎಲ್. ಕುಮಾರಸ್ವಾಮಿ ಮಾತನಾಡಿ ಕಲಬುರ್ಗಿ ಅವರು ವಚನಸಾಹಿತ್ಯದ ನೈಜ ಅಂಶಗಳನ್ನು ಜಗತ್ತಿಗೆ ಪರಿಚಯಿಸಿದವರು. ಸಂಶೋಧನೆ ಹಾಗೂ ಐತಿಹಾಸಿಕ ದಾಖಲೆಯ ಸಮೇತ ನೀಡಿದ ವಿಚಾರಧಾರೆಗಳನ್ನು, ಕನ್ನಡ ನೆಲದಲ್ಲಿ ಕಾಯಕ ಜೀವಿಗಳಿಂದ ಹುಟ್ಟಿದ ಏಕೈಕ ಧರ್ಮ ಅದು ಲಿಂಗಾಯತ ಧರ್ಮ ಎಂಬ ವಿಚಾರಗಳನ್ನ ಮುಂದಿನ ಪೀಳಿಗೆಗೆ ತಿಳಿಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿರಬೇಕು ಎಂದರು.
ಕಲಬುರ್ಗಿ ಅವರು ಕನ್ನಡ ಶಾಸನಗಳ ಹಾಗೂ ವಚನ ಸಾಹಿತ್ಯದ ಸಂಶೋಧನೆಗೆ ಶ್ರಮಿಸಿದ ಅಪಾರ ಕೊಡುಗೆಯನ್ನು ವಿವರಿಸಿದರು.
ತುಮಕೂರು ವಿಶ್ವವಿದ್ಯಾನಿಲಯದ ವಾಣಿಜ್ಯ ವಿಭಾಗದ ಉಪನ್ಯಾಸಕ ಬಸವಲಿಂಗಯ್ಯ ಮಾತನಾಡಿ ಜೀವನದಲ್ಲಿ ಉತ್ತಮ ಮೌಲ್ಯಗಳನ್ನ ಗಳಿಸಬೇಕಾದರೆ ಬಸವಣ್ಣನವರ ವಿಚಾರಧಾರೆಗಳು ಬಹುಮುಖ್ಯ. ಡಾ. ಎಂ ಎಂ ಕಲ್ಬುರ್ಗಿರವರು ವಚನ ಸಾಹಿತ್ಯದಲ್ಲಿರುವ ಸತ್ಯಾಂಶವನ್ನು ಹೊರತೆಗೆದು ಸಮಾಜಕ್ಕೆ ತಿಳಿಸಿದ್ದಾರೆ. ಇತ್ತೀಚಿಗೆ ಕಾಶ್ಮೀರ ಫೈಲ್ ಹೊರಬಂದಿದೆ. ಆದರೆ ಇದಕ್ಕೂ ಮುಖ್ಯವಾಗಿ ಸಮಾಜಕ್ಕೆ ಸತ್ಯ ತಿಳಿಯಬೇಕಾದರೆ ಬಸವಕಲ್ಯಾಣದ ಫೈಲ್ ಬರಬೇಕಿದೆ ಎಂದರು.

ಕೈಗರಿಕೊದ್ಯಮಿ ಡಿ.ಬಿ. ಶಿವಾನಂದ ಮಾತನಾಡಿ ಎಂ ಎಂ ಕಲ್ಬುರ್ಗಿರವರು ತಮ್ಮ ರಕ್ತದ ಕಣ ಕಣದಲ್ಲೂ ಬಸವತತ್ವ ಮೈಗೂಡಿಸಿಕೊಂಡಿದ್ದರು. ಅವರನ್ನು ಕೊಂದಾಗ ಚಿಮ್ಮಿದ್ದು ರಕ್ತವಲ್ಲ ಬಸವಾದಿ ಶರಣರ ವಿಚಾರಧಾರೆಗಳು ಎಂದು ಹೇಳಿದರು.
ಜಾಗತಿಕ ಲಿಂಗಾಯತ ಮಹಾಸಭಾದ ಜಿಲ್ಲಾಧ್ಯಕ್ಷ ನಾಗಭೂಷನ್ ಮಾತನಾಡಿ ನಾನು ಲಿಂಗಾಯತ, ನನ್ನ ಧರ್ಮ ಲಿಂಗಾಯತ ಎಂದು ಎದೆ ತಟ್ಟಿ ಹೇಳಬೇಕು. ವಿಶೇಷವಾಗಿ ಯುವಕರು ಲಿಂಗಾಯತ ಧರ್ಮದ ವಿಚಾರಧಾರೆಗಳನ್ನು ಅಧ್ಯಯನ ಮಾಡಬೇಕು. ಲಿಂಗಾಯತ ಧರ್ಮ ಉಳಿಯಬೇಕೆಂದರೆ ಮುಂದಿನ ದಿನಗಳಲ್ಲಿ ನಡೆಯುವ ಜಾತಿ ಹಾಗೂ ಜನಗಣತಿಯಲ್ಲಿ ಧರ್ಮ ಅಥವಾ ಜಾತಿಯ ಕಲಾಂ ನಲ್ಲಿ ಲಿಂಗಾಯತ ಎಂಬುದಾಗಿ ನಮೂದಿಸಿ ಎಂದು ಹೇಳಿದರು
ಈ ಸಂದರ್ಭದಲ್ಲಿ ರಾಜೇಶ್ವರಿ ಶಿವಾನಂದ, ಸಿದ್ದು ಬಿ.ಎಸ್. ಸೂರನಹಳ್ಳಿ, ಬಸವರಾಜು, ದೇವರಾಜು ಕೆ, ಅಭಿಷೇಕ್ ಹಿರೇಮಠ್, ಗೋಪಾಲಕೃಷ್ಣ, ಮತ್ತಿತರ ಭಾರತೀಯ ಶರಣಸೇನಾ ಸದಸ್ಯರು ಇದ್ದರು
