ಕುಸುಗಲ್ ಸರ್ಕಾರಿ ಶಾಲೆಯೆಂದರೆ ಅಧಿಕಾರಿಗಳಿಗೆ ತಾತ್ಸಾರ. ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಗೋಡೆಗಳು ಬಿರುಕು ಬಿಟ್ಟಿದ್ದು, ಶಾಲೆಯ ಸುತ್ತಲು ತಡೆಗೋಡೆ ಇಲ್ಲದೆ ಮಕ್ಕಳು ಭಯದ ವಾತಾವರಣದಲ್ಲೇ ಕಲಿಯುವ ವಾತಾವರಣ ಸೃಷ್ಠಿಯಾಗಿದೆ. ಶಾಲೆಯ ಆವರಣದಲ್ಲಿರುವ ಅಂಗನವಾಡಿ ಕೇಂದ್ರದ ಕಟ್ಟಡ ಸಂಪೂರ್ಣ ಶಿಥಿಲಾವಸ್ಥೆಗೆ ತಲುಪಿದ್ದು, ಬೀಳುವ ಹಂತದಲ್ಲಿದೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಸರ್ಕಾರಿ ಶಾಲೆ ಮತ್ತು ಅಂಗನವಾಡಿ ಇರುವುದು ಎಲ್ಲಿ ಗೊತ್ತೆ?
ಧಾರವಾಡ ಜಿಲ್ಲೆಯ ನವಲಗುಂದ ತಾಲೂಕಿನ ಕುಸುಗಲ್ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬರುವ ರೈಲ್ವೆ ನಿಲ್ದಾಣದ ಹತ್ತಿರವಿರುವ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ. ಕುಸುಗಲ್ ಗ್ರಾಮದಿಂದ 3 ಕಿ.ಮೀ ದೂರದಲ್ಲಿರುವ ಈ ಶಾಲೆಯು 1995ರಲ್ಲಿ ಸ್ಥಾಪನೆಯಾಗಿದೆ. ಶಾಲೆ ಕಟ್ಟಲು ಶರಣಪ್ಪ ಗುಡಸಲಮನಿ ಅವರು ಭೂದಾನ ಮಾಡಿದ್ದಾರೆಂದು ತಿಳಿದುಬಂದಿದೆ.

ಶಾಲಾ ಭೂದಾನಿಗಳ ಮೊಮ್ಮಗ ಸದಾನಂದ ಗುಡಸಲಮನಿ ಈ ದಿನ.ಕಾಮ್‌ನೊಂದಿಗೆ ಮಾತನಾಡಿ, “ಶಾಲಾ ಕಟ್ಟಡದ ಗೋಡೆಗಳು ಬಿರುಕು ಬಿಟ್ಟಿದ್ದು, ಮಳೆಗಾಲದಲ್ಲಿ ಸೋರುತ್ತವೆ. ಶಾಲೆ ಸುತ್ತಲೂ ಹಾಕಿಸಿದ್ದ ತಂತಿ ಬೇಲಿಯನ್ನು ದುಷ್ಕರ್ಮಿಗಳು ಕಿತ್ತು ಹೊತ್ತೊಯ್ದಿದ್ದಾರೆ. ಗ್ರಾಮ ಪಂಚಾಯಿತಿ ಅಧ್ಯಕ್ಷರಿಗೆ ಸರ್ಕಾರಿ ಶಾಲೆ ಬಗೆಗೆ ಯಾವುದೇ ಕಾಳಜಿ ಇಲ್ಲ. ಪಂಚಾಯಿತಿಯಿಂದ ಯಾವುದೇ ಸಹಕಾರವೂ ಸಿಕ್ಕಿಲ್ಲ. ಶಾಲೆ ಸುತ್ತಲೂ ತಡೆಗೋಡೆ ಹಾಗೂ ಮಕ್ಕಳು ಶಾಲೆಯವರೆಗೆ ಬರುವುದಕ್ಕೆ ಇರುವ ರಸ್ತೆ ದುರಸ್ತಿ ಮಾಡಿಸಬೇಕು” ಎಂದು ಹೇಳುತ್ತಾರೆ.

ಸಹಾಯಕಿ ಸುಮಿತ್ರಾ ಬೆಂತೂರ್ ಮಾತನಾಡಿ, “ಶಾಲಾ ಆವರಣದಲ್ಲಿರುವ ಅಂಗನವಾಡಿ ಕೇಂದ್ರವು ಬೀಳುವ ಹಂತದಲ್ಲಿದ್ದು ಮಕ್ಕಳನ್ನು ಇಲ್ಲಿ ಕೂಡಿಸಿ ಪಾಠ ಹೇಳಲೂ ಭಯವಾಗುತ್ತಿದೆ. ಅಂಗನವಾಡಿಯಲ್ಲಿ ಹಾವುಗಳ ಭಯ ಹೆಚ್ಚಾಗಿರುವ ಕಾರಣ ಸದ್ಯ ಮಕ್ಕಳನ್ನು ಸರ್ಕಾರಿ ಶಾಲಾ ಕೊಠಡಿಯಲ್ಲಿಯೇ ಕೂರಿಸಲಾಗುತ್ತಿದೆ. ಅಂಗನವಾಡಿ ಕಟ್ಟಡವನ್ನು ನೆಲಸಮಗೊಳಿಸಿ ದುರಸ್ತಿ ಮಾಡಿಸಬೇಕು. ಹೊಸ ಕಟ್ಟಡ ನಿರ್ಮಾಣವಾಗಬೇಕು” ಎಂದು ತಿಳಿಸಿದರು.

ಎಸ್‌ಡಿಎಂಸಿ ಅಧ್ಯಕ್ಷ ಖಾಜಾಸಾಬ ನದಾಫ್ ಮಾತನಾಡಿ, “ಶಾಲೆಗೆ ಕಾಂಪೌಂಡ್ ವ್ಯವಸ್ಥೆ ಮತ್ತು ಬಿರುಕು ಬಿಟ್ಟಿರುವ ಗೋಡೆಗಳನ್ನು ಸರಿಪಡಿಸಿ ಶಾಶ್ವತ ಪರಿಹಾರ ಸಿಗದೆ ಹೋದರೂ ವರ್ಷಕ್ಕೊಮ್ಮೆ ರಿಪೇರಿ ಮಾಡಿಸುವ ಕಾರ್ಯವಾಗಬೇಕು ಕಾರಣ ಪಕ್ಕದಲ್ಲೇ ರೈಲು ನಿಲ್ದಾಣ ಇರುವ ಪರಿಣಾಮ ರೈಲು ಗಾಡಿಗಳ ರಭಸಕ್ಕೆ ಭೂಮಿ ಅದುರುತ್ತದೆ. ಹೀಗಾಗಿ ಶಾಲಾ ಕಟ್ಟಡ ಹೆಚ್ಚು ಕಾಲ ಬಾಳಿಕೆ ಬರುವುದಿಲ್ಲವಾದ್ದರಿಂದ ಕುಸಿತಗಳು ಉಂಟಾಗುತ್ತವೆ. ಮಳೆಗೆ ದುರಂತವಾಗಿ ಶಾಲಾ ಕಟ್ಟಡ ಕುಸಿದರೆ ಯಾರು ಹೊಣೆ? ಎಂದು ಪ್ರಶ್ನಿಸುತ್ತಾ, 1 ರಿಂದ 5ನೇ ತರಗತಿಯವರೆಗೆ ಇರುವ ಈ ಶಾಲೆಯಲ್ಲಿ ಒಟ್ಟು 22 ವಿದ್ಯಾರ್ಥಿಗಳು ಕಲಿಯುತ್ತಿದ್ದಾರೆ. ಶಾಲೆ ದುರಸ್ತಿ ಹಾಗೂ ಮಳೆ ಕೊಯ್ಲು ಮಾಡಿಸಬೇಕು” ಎಂದು ಒತ್ತಾಯಿಸಿದರು.

“ಶಾಲೆಗೆ ಯಾವುದೇ ರೀತಿಯ ಸಮಸ್ಯೆ ಎದುರಾದರೂ ಸ್ಥಳೀಯರೇ ಖುದ್ದಾಗಿ ನಿಂತು ಪರಿಹಾರ ಕಂಡುಕೊಳ್ಳುವ ಕಾರ್ಯಪ್ರವೃತ್ತರಾಗುತ್ತಾರೆ. ಗ್ರಾಮ ಪಂಚಾಯಿತಿಗೆ ಸರ್ಕಾರಿ ಶಾಲೆ ಎಂದರೆ ಹೆಚ್ಚು ಕಾಳಜಿಯೇ ಇಲ್ಲ. ಸರ್ಕಾರಿ ಶಾಲೆಯೆಂದರೆ, ಇಷ್ಟೊಂದು ತಾತ್ಸಾರವೇ?” ಎಂಬುದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ.
ಶಾಸಕರು ಏನು ಹೇಳುತ್ತಾರೆ?
ಶಾಸಕ ಎನ್ ಎಚ್ ಕೋನರೆಡ್ಡಿ ಈ ದಿನ.ಕಾಮ್ ಜೊತೆಗೆ ಮಾತನಾಡಿ, “ಸರ್ಕಾರಿ ಶಾಲೆ ಮತ್ತು ಅಂಗನವಾಡಿ ಕೇಂದ್ರವನ್ನು ದುರಸ್ತಿ ಮಾಡಿಸುತ್ತೇನೆ” ಎಂದು ತಿಳಿಸಿದರು.

ಮುಖ್ಯ ಶಿಕ್ಷಕಿ ಫರೀದಾ ಬಿಸ್ತಿ ಈ ದಿನ.ಕಾಮ್‌ಗೆ ಮಾತನಾಡಿ, “ಮಕ್ಕಳಿಗಾಗಿ ಶಾಲಾ ಆವರಣದಲ್ಲಿ ʼಶಾಲಾ ಪೌಷ್ಠಿಕ ವನʼವೆಂದು ಎಂದು ಆಚರಿಸಲಾಗುತ್ತಿದೆ. ಮಕ್ಕಳಿಗೆ ವಿವಿಧ ಸಸಿಗಳ ಪರಿಚಯ ವಾಗಬೇಕು ಮತ್ತು ಔಷಧಿಗಳ ಉಪಯೋಗ ತಿಳಿಯಬೇಕೆಂಬ ಉದ್ದೇಶದಿಂದ ವಿವಿಧ ಸಸಿಗಳನ್ನ ತರಿಸಿಕೊಂಡು ನೆಡಿಸುವುದು, ಸಸಿಗಳನ್ನು ಕಾಳಜಿ ಮಾಡುವುದು, ವಿವಿಧ ಸಸಿಗಳ ಪರಿಚಯ ಮತ್ತು ಉಪಯೋಗಗಳ ಬಗ್ಗೆ ತಿಳಿಸಿಕೊಡುವುದು ನಮ್ಮ ಶಾಲೆಯಲ್ಲಿ ನಡೆಯುತ್ತವೆ. ವಿಶೇಷವೇನೆಂದರೆ ಇಂಗ್ಲೀಷ್ ಮಾಧ್ಯಮಕ್ಕೆ ಮಾರುಹೋಗುತ್ತಿರುವ ಇವತ್ತಿನ ದಿನದಲ್ಲಿ ನಮ್ಮ ಸರ್ಕಾರಿ ಶಾಲೆಯನ್ನು ದಾಟಿಕೊಂಡು ಈ ನಗರ ಹಾಗೂ ಪ್ರದೇಶದ ಮಕ್ಕಳು ಎಂದೂ ಹೋಗಿಲ್ಲ. ಮಕ್ಕಳು ಕನ್ನಡ ಮಾಧ್ಯಮದಲ್ಲಿ ಓದುತ್ತಿದ್ದರೂ ಇಂಗ್ಲೀಷ್‌ನಲ್ಲಿಯೂ ಅಷ್ಟೇ ಮುಂಚೂಣಿಯಲ್ಲಿದ್ದಾರೆ” ಎಂದು ಸಂತಸ ವ್ಯಕ್ತಪಡಿಸಿದ್ದರು.
ಸ್ಥಳೀಯ ನಿವಾಸಿಗಳು ಈ ದಿನ.ಕಾಮ್‌ನೊಂದಿಗೆ ಮಾತನಾಡಿ, “ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ ನೇತ್ರಾವತಿ ಸದಾನಂದ ಸುಂಕದ ಇದ್ದರೂ ಸದಾನಂದ ಅವರೇ ಅಧ್ಯಕ್ಷ ಸ್ಥಾನವನ್ನು ತುಂಬುತ್ತಾರೆ. ಸಾರ್ವಜನಿಕರು ಸಮಸ್ಯೆಗಳ ಬಗ್ಗೆ ಹೇಳಿಕೊಂಡಾಗ ನಮಗೆ ಸಮಯವಿಲ್ಲವೆಂದು ಹಾರಿಕೆ ಉತ್ತರ ನೀಡುತ್ತಾರೆ. ಗ್ರಾಮ ಪಂಚಾಯಿತಿ ಪಕ್ಕದಲ್ಲೇ ಕಸದ ರಾಶಿಯನ್ನು ತುಂಬಿಕೊಂಡಿರುವವರು ಊರನ್ನು ಹೇಗೆ ಸ್ವಚ್ಛಗೊಳಿಸುತ್ತಾರೆ? ಹೀಗಾಗಿ ಗ್ರಾಮ ಪಂಚಾಯಿತಿ ಸದಸ್ಯರುಗಳು, ಅಧ್ಯಕ್ಷರು ಸಕ್ರಿಯವಾಗಿಲ್ಲ” ಎಂದು ಆಕ್ರೋಶಕ್ಕೆ ಕಾರಣವಾಗಿದೆ.
ಈ ಸುದ್ದಿ ಓದಿದ್ದೀರಾ? ಶಿವಮೊಗ್ಗ | ಅಂಡರ್‌ಪಾಸ್ ಬಳಕೆ ಸ್ಥಗಿತ; ಮಹಾನಗರ ಪಾಲಿಕೆ ಜಿಲ್ಲಾಡಳಿತದ ನಿರ್ಲಕ್ಷ್ಯ, ಆರೋಪ
“ಕನ್ನಡ ಶಾಲೆಗಳನ್ನು ಉಳಿಸುವ ನಿಟ್ಟಿನಲ್ಲಿ ಸಂಬಂಧಪಟ್ಟವರು ಇನ್ನಾದರೂ ಕಾರ್ಯಪ್ರವೃತ್ತರಾಗಬೇಕು. ಅಳಿಯುವ ಅಂಚಿನಲ್ಲಿರುವ ಕನ್ನಡ ಶಾಲೆಗಳನ್ನು ಕಾಪಾಡಬೇಕು. ಶಾಲೆ ಸಮಸ್ಯೆಗಳನ್ನು ಬಗೆಹರಿಸಬೇಕು” ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
