ಕಂದಾಯ ಇಲಾಖೆಯಿಂದ ಅನುಷ್ಠಾನಗೊಳಿಸುವ ಬೆಳೆಹಾನಿ, ವಿಪತ್ತು ನಿರ್ವಹಣೆ ಸೇರಿದಂತೆ ಇತರೆ ಯೋಜನೆಗಳ ಸಾಧನೆಯಲ್ಲಿ ರಾಯಚೂರು ಜಿಲ್ಲೆಯ ಹೆಸರನ್ನು ಪ್ರಥಮ ಸ್ಥಾನಕ್ಕೆ ತರಲು ಎಲ್ಲ ಹಂತದ ಅಧಿಕಾರಿಗಳು ಒಗ್ಗೂಡಿ ಕೆಲಸ ನಿರ್ವಹಿಸಬೇಕು ಎಂದು ಅಪರ ಜಿಲ್ಲಾಧಿಕಾರಿ ಶಿವಪ್ಪ ಯಲ್ಲಪ್ಪ ಭಜಂತ್ರಿ ಮನವಿ ಮಾಡಿದರು.
ರಾಯಚೂರು ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
“ಹಿಂದುಳಿದ ಹಣೆಪಟ್ಟಿ ಕಟ್ಟಿಕೊಂಡಿರುವ ಜಿಲ್ಲೆಯನ್ನು ಪ್ರಥಮ ಹಂತಕ್ಕೆ ತರಲು ಎಲ್ಲ ಹಂತದ ಅಧಿಕಾರಿಗಳ ತೊಡಗುಸುವಿಕೆ ಮಹತ್ವದ್ದಾಗಿದೆ” ಎಂದು ಸಲಹೆ ನೀಡಿದರು .
“ಆನ್‌ಲೈನ್ ಮೂಲಕ ಜಾರಿಗೊಳಿಸಬೇಕಾದ ಯೋಜನೆಗಳಲ್ಲಿ ಗ್ರಾಮಲೆಕ್ಕಾಧಿಕಾರಿ, ಗ್ರಾಮಸೇವಕರಿಂದ ಹಿಡಿದು ವಿಭಾಗ ಮಟ್ಟದ ಎಲ್ಲ ಅಧಿಕಾರಿಗಳು ಒಗ್ಗೂಡಿ ಕಾರ್ಯ ನಿರ್ವಹಿಸದಲ್ಲಿ ರಾಜ್ಯದಲ್ಲಿಯೇ ಜಿಲ್ಲೆಯನ್ನು ಪ್ರಥಮ ಸ್ಥಾನಕ್ಕೆ ತರುವುದರಲ್ಲಿ ಸಂಶಯವಿಲ್ಲ. ಆಧಾರ್ ಜೋಡಣೆಯಲ್ಲಿ ಈಗಾಗಲೇ ಪ್ರತಿಶತ 61 ರಷ್ಟು ಸಾಧನೆಯಾಗಿದ್ದು, ಅನೇಕರು ನೂರಕ್ಕೆ ನೂರರಷ್ಟು ಸಾಧನೆ ಸಾಧಿಸಿದ್ದೇವೆ” ಎಂದರು.
“ಬೆಳೆಹಾನಿ, ಪರಿಹಾರ ವಿತರಣೆ, ಕಂದಾಯ ದಾಖಲೆಗಳ ನಿರ್ವಹಣೆ ಒಳಗೊಂಡಂತೆ ಎಲ್ಲವನ್ನೂ ಆನ್‌ಲೈನ್ ಮೂಲಕ ನಿರ್ವಹಿಸುತ್ತಿರುವುದರಿಂದ ಮತ್ತಷ್ಟು ಕ್ರಿಯಾಶೀಲರಾಗಿ ಕಾರ್ಯನಿರ್ವಹಿಸುವ ಅವಶ್ಯಕತೆಯಿದೆ. ಯೋಜನೆಗಳ ಪ್ರಗತಿಯನ್ನು ದಾಖಲಿಸಲು ಏನೇ ಸಂಶಯಗಳಿದ್ದರೂ ಅವುಗಳನ್ನು ನಿವಾರಿಸಿಕೊಂಡು ನಿಗದತ ಗುರಿ ಸಾಧಿಸುವುದಕ್ಕೆ ಶ್ರಮಿಸಬೇಕು” ಎಂದು ಕರೆ ನೀಡಿದರು.
ತಹಶೀಲ್ದಾರ್ ಸುರೇಶ ವರ್ಮಾ ಮಾತನಾಡಿ, “ಕಂದಾಯ ಇಲಾಖೆ ಎಲ್ಲ ಇಲಾಖೆಗಳಿಗೆ ಮಾತೃ ಇಲಾಖೆಯಾಗಿದ್ದು, ಗ್ರಾಮ ಲೆಕ್ಕಿಗರಿಂದ ಹಿಡಿದ ಎಲ್ಲ ಹಂತದ ಅಧಿಕಾರಿಗಳೂ ಕೂಡಾ ಕೆಲಸ ನಿರ್ವಹಿಸುತ್ತಿದ್ದಾರೆ. ಮತ್ತಷ್ಟು ಚುರುಕಾಗಿ ಕಾರ್ಯನಿರ್ವಹಿಸಿದಲ್ಲಿ ಜಿಲ್ಲೆ ರ‍್ಯಾಂಕಿಂಗ್ ಬದಲಾಗಲು ಸಾಧ್ಯವಿದೆ. ಭೂಮಿ ತಂತ್ರಾಂಶ ಸೇರಿದಂತೆ ವಿಪತ್ತು ನಿರ್ವಹಣೆ, ಬೆಳೆ ಪರಿಹಾರ, 1-5 ದಾಖಲೆಗಳ ನಿರ್ವಹಣೆಗೆ ಎಲ್ಲರ ಸಹಕಾರ ಅಗತ್ಯವಾಗಿದೆ” ಎಂದರು.
ಕಾರ್ಯಾಗಾರದ ಮೂಲಕ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬೇಕೆಂದರು ವೇದಿಕೆಯಲ್ಲಿ ಸಹಾಯಕ ಆಯುಕ್ತೆ ಮಹಿಬೂಬಿ, ತಹಸೀಲ್ದಾರರುಗಳಾದ ಚನ್ನಪ್ಪ ಘಂಟಿ ಸೇರಿದಂತೆ ವಿವಿಧ ತಾಲೂಕಿನ ತಹಸೀಲ್ದಾರರು, ಗ್ರಾಮಲೆಕ್ಕಾಧಿಕಾರಿಗಳು, ಶಿರೆಸ್ತೇದಾರರು, ಕಂದಾಯ ನಿರೀಕ್ಷಕರು ಭಾಗಿಯಾದರು.
ವರದಿ : ಹಫೀಜುಲ್ಲ
