ಮಲೆನಾಡಿನಲ್ಲಿ ಬದುಕು ಕಟ್ಟಿಕೊಂಡು ವಾಸವಾಗಿರುವ ಜನರನ್ನು ಹಾಗೂ ರೈತಾಪಿ ಕುಟುಂಬದವರನ್ನು ಒತ್ತುವರಿ ಆರೋಪಿಸಿ ಒಕ್ಕಲೆಬ್ಬಿಸುವುದು ಖಂಡನೀಯ ಎಂದು ಮಲೆನಾಡು ಕರಾವಳಿ ಒಕ್ಕೂಟ ಹೋರಾಟ ಸಮಿತಿ ಆಕ್ರೋಶ ವ್ಯಕ್ತಪಡಿಸಿದೆ.
ಚಿಕ್ಕಮಗಳೂರು ಜಿಲ್ಲೆಯ ನರಸಿಂಹರಾಜಪುರ ತಾಲೂಕಿನ ಬಾಳೆಹೊನ್ನೂರಿನಲ್ಲಿ ನಡೆದ ಮಲೆನಾಡಿಗರ ಮಹತ್ವದ ಸಭೆಯಲ್ಲಿ ಮಾತನಾಡಿರುವ ಹೋರಾಟಗಾರರು, “ಒತ್ತುವರಿ ತೆರವು ಆದೇಶವನ್ನು ಹಿಂಪಡೆಯಬೇಕು. ಕಸ್ತೂರಿ ರಂಗನ್ ವರದಿ, ಮಾಧವ್ ಗಾಡ್ಗೀಳ್ ವರದಿ ಹಾಗೂ ಹುಲಿ ಸಂರಕ್ಷಣಾ ಯೋಜನೆಯನ್ನು ಜಾರಿ ಮಾಡಿರುವುದು ಕಾಡು ಉಳಿಸುವುದಕ್ಕಲ್ಲ. ಇಲ್ಲಿ ನಾಶ ಪಡಿಸುತ್ತಿರುವವರು ಅರಣ್ಯ ಇಲಾಖೆಯವರೇ ಹೊರತು ಬದುಕು ನಡೆಸುತ್ತಿರುವ ಜನರಲ್ಲ. ಇದರ ವಿರುದ್ಧ ಕಾನೂನು ಹೋರಾಟ ನಡೆಸುತ್ತೇವೆ” ಎಂದು ತಿಳಿಸಿದ್ದಾರೆ.
ಕಾಡಿಗೆ ಬೆಂಕಿ ಬಿದ್ದರೆ ನಂದಿಸುವುದು ಅಲ್ಲಿನ ಜನರೇ ಹೊರತು ಅರಣ್ಯ ಇಲಾಖೆಯವರಲ್ಲ. ದಟ್ಟ ಹಸಿರಿನಿಂದ ಕೂಡಿರುವ ಪ್ರದೇಶವನ್ನ ಸೆಕ್ಷನ್ 4(1) ಎಂದು ಸರ್ಕಾರ ಘೋಷಿಸಿದೆ. ಫಾರಂ ನಂಬರ್ 53, 54, 57, 94(c), 94(cc) ಅರ್ಜಿಗಳು ಸುಮಾರು ಲಕ್ಷದವರೆಗೂ ಬಂದಿದ್ದು, ಈವರೆಗೂ ಹಾಗೇ ಉಳಿದಿವೆ. ಇದನ್ನು ಸರ್ಕಾರ ಗಮನಕ್ಕೆ ತೆಗೆದುಕೊಂಡು ಕಾನೂನು ವ್ಯವಸ್ಥೆ ಹಾಗೂ ಕೇಂದ್ರ ಸರ್ಕಾರದ ಮುಂದೆ ಈ ಸಮಸ್ಯೆಯನ್ನು ತಿಳಿಸಬೇಕು ಎಂದು ಆಗ್ರಹಿಸಿದ್ದಾರೆ.

ಹೋರಾಟ ಒಂದು ಭಾಗ ಆಗಿದೆ. ಇಲ್ಲಿ ಯಾವುದೇ ರಾಜಕೀಯ ಪಕ್ಷವನ್ನ ವ್ಯಕ್ತಿಯನ್ನ ಅಥವಾ ಇಲಾಖೆಯನ್ನ ನಿಂದಿಸುವ ಕೆಲಸ ಆಗದೆ ಕೇವಲ ಸಮಸ್ಯೆಗಳಿಗೆ ಕಾನೂನು ರೂಪದಲ್ಲಿ ಮತ್ತು ಹೋರಾಟದ ರೂಪದಲ್ಲಿ ಜೊತೆಗೆ ಶಾಸಕಾಂಗದ ಜವಾಬ್ದಾರಿಯನ್ನ ತೆಗೆದುಕೊಳ್ಳಬೇಕೆಂದು ಹಾಗೂ ಅರಣ್ಯ ಸಚಿವರು ಇಲ್ಲಿನ ಸಮಸ್ಯೆಗಳನ್ನ ಆಲಿಸಬೇಕೆಂದು ಸಭೆಯಲ್ಲಿ ಭಾಗವಹಿಸಿದ ಅನೇಕರು ಅಭಿಪ್ರಾಯಿಸಿದರು.
ಹೋರಾಟ ಸಮಿತಿಯ ಜೊತೆಗೆ ಕೈಜೋಡಿಸುವ ಹಾಗೂ ಶಾಸನ ಬದ್ಧವಾಗಿ ಸರ್ಕಾರದ ಮೂಲಕ ಆಗಬೇಕಾದಂತ ಎಲ್ಲಾ ರೀತಿಯ ಕಾನೂನು ಹಾಗೂ ಶಾಸನಗಳ ವಿಚಾರದಲ್ಲಿ ಈ ಬಾಧಿತ ಪ್ರದೇಶಗಳಿಗೆ ಒಳಪಟ್ಟಂತ 36 ಶಾಸಕರನ್ನು ಒಟ್ಟುಗೂಡಿಸಬೇಕು. ಅದರೊಟ್ಟಿಗೆ ಸಮಿತಿಯ ಹೋರಾಟಗಾರರು ಹಾಗೂ ಮಲೆನಾಡಿನ ಬಗ್ಗೆ ಸಂಪೂರ್ಣ ಜ್ಞಾನ ಇರುವ ವ್ಯಕ್ತಿಗಳನ್ನು ಬೆಂಗಳೂರಿನ ವಿಧಾನಸೌಧದಲ್ಲಿ ಸಭೆ ಮಾಡಿ ಅದರೊಟ್ಟಿಗೆ ಕಾನೂನು ಸಲಹೆಗಾರರನ್ನ ಕೂಡ ಸೇರಿಸಿಕೊಂಡು ಶಾಶ್ವತ ಪರಿಹಾರಕ್ಕೆ ಸರ್ವ ರೀತಿಯಲ್ಲಿ ಪ್ರಯತ್ನ ಮಾಡಬೇಕಿದೆ ಎಂದು ಸಭೆಯಲ್ಲಿ ಭಾಗವಹಿಸಿದ್ದ ಚಿಕ್ಕಮಗಳೂರು ಕ್ಷೇತ್ರದ ಶಾಸಕರಾದ ಟಿ.ಡಿ ರಾಜೇಗೌಡ ತಿಳಿಸಿದರು.

ರೈತರಿಗೆ ಪಕ್ಷಾತೀತ, ಜಾತ್ಯತೀತ, ಹೋರಾಟದ ಮೂಲಕ ಮಾನತ್ವ ಉಳಿಯಲಿ, ಈ ಹೋರಾಟಕ್ಕೆ ನನ್ನ ಬೆಂಬಲವಿದೆ ಎಂದು ಬಾಳೆಹೊನ್ನೂರು ರಂಭಾಪುರಿ ಸ್ವಾಮೀಜಿಯವರು ಬೆಂಬಲ ಸೂಚಿಸಿದರು.
ಅರಣ್ಯ ಇಲಾಖೆಯಿಂದ ಉಂಟಾಗಿರುವ ಸಮಸ್ಯೆಗೆ ಸೂಕ್ತ ಪರಿಹಾರ ಹಾಗೂ ಕಾನೂನುನಲ್ಲಿ ಹೋರಾಟದ ಮತ್ತು ಶಾಸನ ರೂಪದಲ್ಲಿ ಆಗಬೇಕಾದ ಕೆಲಸವನ್ನ ಎಲ್ಲರ ಸಲಹೆ ಪಡೆಯಲಾಗಿದೆ ಮಲೆನಾಡು ಕರಾವಳಿ ಸಮಿತಿಯ ಸಂಚಾಲಕರು ಅನಿಲ್ ಹೊಸಕೊಪ್ಪ ತಿಳಿಸಿದ್ದಾರೆ.
ಇದನ್ನು ಓದಿದ್ದೀರಾ? ಮಂಡ್ಯ | ‘ಗಗನಚುಕ್ಕಿ’ ಅಭಿವೃದ್ಧಿಪಡಿಸಿ ಶೀಘ್ರದಲ್ಲಿ ಜಲಪಾತೋತ್ಸವ: ಶಾಸಕ ಪಿ ಎಂ ನರೇಂದ್ರಸ್ವಾಮಿ
ಸಭೆಯಲ್ಲಿ ಸುಧೀರ್ ಕುಮಾರ್ ಮರೊಳ್ಳಿ, ನವೀನ್ ಕುರುವಾನ್, ಸಂತೋಷ್, ರವೀಂದ್ರ ನಾಯಕ್ ಶಿರಸಿ, ಡಾ. ಕಲ್ಕುಳಿ ವಿಠಲ ಹೆಗಡೆ, ರಾಧಾ ಸುಂದರೇಶ್, ಕೆ ಎಲ್ ಅಶೋಕ್, ಕಾನೂನು ತಜ್ಞರು, ಪರಿಸರವಾದಿಗಳು, ಮಲೆನಾಡು ಕರಾವಳಿ ಹೋರಾಟ ಸಮಿತಿಯ ಹೋರಾಟಗಾರರು ಭಾಗವಹಿಸಿದ್ದರು.

