ಪ್ಯಾರಿಸ್ ಪ್ಯಾರಾಲಿಂಪಿಕ್ಸ್‌ನಲ್ಲಿ ಸೆಪ್ಟೆಂಬರ್ 2ರಂದು ನಡೆದ ಪುರುಷರ ಹೈಜಂಪ್ – T47 ವಿಭಾಗದ ಫೈನಲ್‌ನಲ್ಲಿ ಟೀಮ್ ಇಂಡಿಯಾ ಅಥ್ಲೀಟ್ ನಿಶಾದ್ ಕುಮಾರ್ ಬೆಳ್ಳಿ ಪದಕ ಗೆದಿದ್ದಾರೆ.
ನಿಶಾದ್ ಕುಮಾರ್ 2.04 ಮೀಟರ್ ಜಿಗಿತದೊಂದಿಗೆ ಎರಡನೇ ಸ್ಥಾನ ಪಡೆದಿದ್ದು, ಇದು ಈ ಸೀಸನ್‌ನಲ್ಲೇ ನಿಶಾದ್ ಅವರ ಅತ್ಯುತ್ತಮ ಪ್ರದರ್ಶನವಾಗಿದೆ. ನಿಶಾದ್ 2020ರ ಟೋಕಿಯೊ ಪ್ಯಾರಾಲಿಂಪಿಕ್ಸ್‌ನಲ್ಲಿಯೂ ಬೆಳ್ಳಿ ಪದಕವನ್ನು ತನ್ನದಾಗಿಸಿಕೊಂಡಿದ್ದರು.
ಯುನೈಟೆಡ್ ಸ್ಟೇಟ್ಸ್ ಆಫ್ ಅಮೇರಿಕಾ (ಯುಎಸ್ಎ) ಅಥ್ಲೀಟ್ ರೋಡ್ರಿಕ್ ಟೌನ್ಸೆಂಡ್-ರಾಬರ್ಟ್ಸ್ 2.08 ಮೀ ಜಿಗತದೊಂದಿಗೆ ಪ್ರಥಮ ಸ್ಥಾನವನ್ನು ಪಡೆದು ಚಿನ್ನ ಗೆದ್ದಿದ್ದಾರೆ. ರಷ್ಯಾದ ಜಾರ್ಜಿ ಮಾರ್ಗೀವ್ ಕಂಚಿನ ಪದಕ ಪಡೆದರು.
ಎರಡು ಪದಕ ಗೆದ್ದ ಮೊದಲ ಭಾರತೀಯ ಮಹಿಳಾ ಅಥ್ಲೀಟ್
ಸೆಪ್ಟೆಂಬರ್ 1 ರಂದು (ಭಾನುವಾರ), ಭಾರತದ ಪ್ಯಾರಾಸ್ಪ್ರಿಂಟರ್ ಪ್ರೀತಿ ಪಾಲ್ 200 ಮೀಟರ್ ಟಿ -35 ವಿಭಾಗದಲ್ಲಿ ಕಂಚಿನ ಪದಕವನ್ನು ಗೆದ್ದು ಇತಿಹಾಸ ನಿರ್ಮಿಸಿದರು. 30.01 ಸೆಕೆಂಡ್‌ಗಳಲ್ಲಿ ಗುರಿ ತಲುಪಿ ಮೂರನೇ ಸ್ಥಾನ ಪಡೆದರು. ಈ ಮೂಲಕ ಪ್ಯಾರಾಲಿಂಪಿಕ್ಸ್‌ನಲ್ಲಿ ಎರಡು ಪದಕಗಳನ್ನು ಗೆದ್ದ ಮೊದಲ ಭಾರತೀಯ ಮಹಿಳಾ ಅಥ್ಲೀಟ್ ಎಂಬ ಹೆಗ್ಗಳಿಕೆ ಪಡೆದಿದ್ದಾರೆ.
ಇದನ್ನು ಓದಿದ್ದೀರಾ? ಪ್ಯಾರಾಲಿಂಪಿಕ್ಸ್ | ಭಾರತಕ್ಕೆ ನಾಲ್ಕನೇ ಪದಕ; ಬೆಳ್ಳಿಗೆ ಗುರಿಯಿಟ್ಟ ಶೂಟರ್ ಮನೀಶ್ ನರ್ವಾಲ್
2024ರ ಪ್ಯಾರಿಸ್ ಪ್ಯಾರಾಲಿಂಪಿಕ್ಸ್‌ನಲ್ಲಿ ಭಾರತ ಒಟ್ಟು ಏಳು ಪದಕಗಳನ್ನು ಪಡೆದುಕೊಂಡಿದೆ. ಒಂದು ಚಿನ್ನ, ಎರಡು ಬೆಳ್ಳಿ ಮತ್ತು ಮೂರು ಕಂಚು ಭಾರತದ ಪಾಲಾಗಿದೆ.
ಪ್ರೀತಿ ಪಾಲ್ ಎರಡು ಪದಕಗಳನ್ನು ಗೆದ್ದರೆ, ಆಗಸ್ಟ್ 31ರಂದು, ರುಬಿನಾ ಫ್ರಾನ್ಸಿಸ್ ಪಿ2 ಮಹಿಳೆಯರ 10 ಮೀಟರ್ ಏರ್ ಪಿಸ್ತೂಲ್ ಎಸ್‌ಎಚ್-1 ಫೈನಲ್‌ನಲ್ಲಿ ಕಂಚಿನ ಪದಕವನ್ನು ಗೆದ್ದರು.
ಆಗಸ್ಟ್ 30 ರಂದು (ಶುಕ್ರವಾರ), ಹಾಲಿ ಪ್ಯಾರಾಲಿಂಪಿಕ್ ಚಾಂಪಿಯನ್ ಅವನಿ ಲೆಖರಾ ಮಹಿಳೆಯರ 10 ಮೀಟರ್ ಏರ್ ರೈಫಲ್ ಫೈನಲ್‌ನಲ್ಲಿ ಚಿನ್ನ ಗೆದ್ದರು. ಇದೇ ಸ್ಪರ್ಧೆಯಲ್ಲಿ ಶೂಟರ್ ಮೋನಾ ಅಗರ್ವಾಲ್ ಕಂಚಿನ ಪದಕವನ್ನು ಪಡೆದರು.
ಆಗಸ್ಟ್ 30 ರಂದು ನಡೆದ ಪುರುಷರ ಪಿ1 10 ಮೀ ಏರ್ ಪಿಸ್ತೂಲ್ ಎಸ್‌ಎಚ್ 1 ಸ್ಪರ್ಧೆಯಲ್ಲಿ ಮನೀಷ್ ನರ್ವಾಲ್ ಎರಡನೇ ಸ್ಥಾನ ಪಡೆದು ಭಾರತಕ್ಕೆ ಮೊದಲ ಬೆಳ್ಳಿ ಪದಕ ತಂದುಕೊಟ್ಟರು.
#Paralympics2024: Nishad Kumar clinches Silver medal; secures season best with a leap of 2.04 meters. #Paralympics #Cheer4Bharat @Media_SAI @mansukhmandviya @narendramodi pic.twitter.com/yZHipx7SOC
— SansadTV (@sansad_tv) September 2, 2024
