ಸತತವಾಗಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಮನೆಯ ಮೇಲೆ ಗುಡ್ಡ ಕುಸಿದಿರುವ ಘಟನೆ ಕಲಬುರಗಿ ಜಿಲ್ಲೆಯ ಚಿತ್ತಾಪುರ ತಾಲೂಕಿನಲ್ಲಿ ನಡೆದಿದ್ದು, ಯಾವುದೇ ಸಾವು-ನೋವು ಸಂಭವಿಸಿಲ್ಲ ಎಂದು ತಿಳಿದುಬಂದಿದೆ.
ಕಲಬುರಗಿ ಜಿಲ್ಲೆಯ ಚಿತ್ತಾಪುರ ತಾಲೂಕಿನ ಅಲ್ಲೂರು ಬಿ ಗ್ರಾಮದಲ್ಲಿನ ಚನ್ನಪ್ಪ ಬೋಳಿ ಅವರಿಗೆ ಸೇರಿದ ಮನೆಯ ಮೇಲೆ ಗುಡ್ಡ ಕುಸಿದ ಪರಿಣಾಮವಾಗಿ ಗುಡ್ಡದ ದೊಡ್ಡ ದೊಡ್ಡ ಗಾತ್ರದ ಕಲ್ಲುಗಳು ಮನೆಯ ಮೇಲೆ ಬಿದ್ದಿದೆ. ಮನೆಯು ಸಂಪೂರ್ಣ ನೆಲಕ್ಕೆ ಉರುಳಿದ್ದು, ಅಲ್ಲದೆ ಮನೆಯಲ್ಲಿದ್ದ ಸಾಮಗ್ರಿಗಳು ಜಖಂಗೊಂಡಿವೆ. ಮನೆಯಲ್ಲಿಂದ ದವಸ-ಧಾನ್ಯಗಳು ಹಾಳಾಗಿದ್ದು, ಸುಮಾರು ಏಳು ಲಕ್ಷ ರೂಪಾಯಿಗಳಷ್ಟು ನಷ್ಟ ಉಂಟಾಗಿದೆ ಎಂದು ತಿಳಿದುಬಂದಿದೆ.
ಗುಡ್ಡ ಕುಸಿತದ ವೇಳೆ ಮನೆಯಲ್ಲಿ ಸಿಲುಕಿದ ಬಾಲಕನಿಗೆ ಚಿಕ್ಕ ಪುಟ್ಟ ಗಾಯಗಳಾಗಿದ್ದು, ಜೀವಾಪಾಯದಿಂದ ಪಾರಾಗಿದ್ದಾನೆ ಎಂದು ಕುಟುಂಬಸ್ಥರು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.
ಈ ಸುದ್ದಿ ಓದಿದ್ದೀರಾ? ಮಹಿಳೆಗೆ ಲೈಂಗಿಕ ದೌರ್ಜನ್ಯ ಆರೋಪ: ಬಿಜೆಪಿ, ಬಲಪಂಥೀಯ ಮುಖಂಡ ಅರುಣ್ ಕುಮಾರ್ ಪುತ್ತಿಲ ವಿರುದ್ಧ ಎಫ್‌ಐಆರ್
ಘಟನಾ ಸ್ಥಳಕ್ಕೆ ಕಂದಾಯ ಇಲಾಖೆಯ ಅಧಿಕಾರಿಗಳು, ಪೊಲೀಸ್ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.
ವರದಿ: ಅನಂತ್ ದೇಶಪಾಂಡೆ, ವಾಲೆಂಟಿಯರ್