ಅತ್ಯಾಚಾರವು ವಿಶ್ವದಾದ್ಯಂತ ಗಂಭೀರ ಸಮಸ್ಯೆಯಾಗಿದೆ. ಭಯ, ಅವಮಾನ, ಅಸಮರ್ಪಕ ಕಾನೂನುಗಳ ಕಾರಣದಿಂದಾಗಿ ಅನೇಕ ಪ್ರಕರಣಗಳು ವರದಿ ಆಗುತ್ತಿಲ್ಲ. ಜಾಗತಿಕವಾಗಿ ನೋಡುವುದಾದರೆ 35% ಮಹಿಳೆಯರು ಲೈಂಗಿಕ ಕಿರುಕುಳವನ್ನು ಅನುಭವಿಸುತ್ತಿದ್ದಾರೆ.
21ನೆಯ ಶತಮಾನದಲ್ಲಿ ಮಹಿಳೆಯರು ಪುರುಷರಿಗೆ ಎಲ್ಲಾ ಕ್ಷೇತ್ರಗಳಲ್ಲಿ ಸರಿಸಮಾನವಾಗಿ ನಿಲ್ಲುತ್ತಿದ್ದಾರೆ. ಪ್ರತಿ ವರ್ಷದ ಪ್ರೌಢ ಹಾಗೂ ಪದವಿ ಪೂರ್ವ ಕಾಲೇಜು ಪರೀಕ್ಷೆಗಳ ಫಲಿತಾಂಶ ನೋಡಿದಾಗ ಬಾಲಕಿಯರೇ ಮೇಲುಗೈ ಸಾಧಿಸುವುದನ್ನು ಕಾಣುತ್ತಿದ್ದೇವೆ. ಉನ್ನತ ಶಿಕ್ಷಣದಲ್ಲಿ ಸಹ ಚಿನ್ನದ ಪದಕಗಳನ್ನು ಮಹಿಳೆಯರೆ ಪಡೆಯುವುದನ್ನು ನೋಡುತ್ತೇವೆ. ರಾಜ್ಯ ಹಾಗೂ ಕೇಂದ್ರ ಸಾರ್ವಜನಿಕ ಆಡಳಿತ ಕ್ಷೇತ್ರದಲ್ಲಿಯೂ ಸಹ ಮಹಿಳೆಯರು ಒಂದೆಜ್ಜೆ ಮುಂದಿದ್ದಾರೆ.
ಪುರುಷನಂತೆ ಮಹಿಳೆಗೂ ವಿದ್ಯಾಭ್ಯಾಸ ಸೇರಿದಂತೆ ಉದ್ಯೋಗ ಕ್ಷೇತ್ರದಲ್ಲಿ ಸಹ 50%ರಷ್ಟು ಮೀಸಲು ನೀಡಲಾಗುತ್ತದೆ. ಅದರ ಸೌಲಭ್ಯಗಳು ಪಡೆಯುತ್ತಿದ್ದಾರೆ. ಇನ್ನು ರಾಜಕೀಯ ಕ್ಷೇತ್ರದಲ್ಲಿ ಸ್ಥಳೀಯ ಸರ್ಕಾರಗಳಲ್ಲಿ ಈಗಾಗಲೇ ಮೀಸಲು ನಿಗದಿಯಾಗಿದೆ. ರಾಜ್ಯ ಮತ್ತು ಕೇಂದ್ರ ಸರ್ಕಾರಗಳಲ್ಲಿ ಮಹಿಳಾ ಮೀಸಲಾತಿ ಶೇಕಡಾ 50 ಕೊಡಬೇಕು ಎಂಬ ಕೂಗು ಕಳೆದ ಸರಿಸುಮಾರು ಮೂವತ್ತು ವರ್ಷಗಳಿಂದ ಎದ್ದಿದೆ. ಮಹಿಳಾ ಮೀಸಲಾತಿ ಮಸೂದೆ ಕೂಡ ಸಿದ್ಧವಾಗಿದೆ. ಜಾರಿಯಾಗಬೇಕು ಅಷ್ಟೇ.
ಜಗತ್ತಿನ ಯಾವುದೇ ಒಂದು ದೇಶ ಅಭಿವೃದ್ಧಿಯಾಗಬೇಕಾದರೆ ಅದಕ್ಕೊಂದು ಪ್ರಮುಖ ಸಾಧನವೆಂದರೆ ಶಿಕ್ಷಣ. ಮತ್ತು ಅದರಲ್ಲೂ ಮಹಿಳೆಯರು ಹೆಚ್ಚೆಚ್ಚು ಶಿಕ್ಷಣವನ್ನು ಪಡೆಯಬೇಕಾಗಿದೆ. ಎಲ್ಲಾ ದೇಶಗಳಲ್ಲಿ ಮಹಿಳೆಯರು ಶಿಕ್ಷಣ ಕ್ಷೇತ್ರದಲ್ಲಿ ಇನ್ನೂ ಪೂರ್ತಿ ಶಿಕ್ಷಣ ಹೊಂದಿಲ್ಲ ಎಂತಲೇ ಹೇಳಬಹುದು. ಇದಕ್ಕೆ ಹಲವಾರು ಕಾರಣಗಳಿರಬಹುದು. ಇದರ ಬಗ್ಗೆ ಜಾಗೃತಿ ಕೊರತೆ ಎಂದರೂ ತಪ್ಪಲ್ಲ. ಅದರ ಅರಿವು ಕಡಿಮೆ ಇದೆಯೆಂದರೂ ತಪ್ಪಲ್ಲ.
ಇನ್ನು ಗ್ರಾಮೀಣ ಭಾಗದಲ್ಲಿ ಈ ಶಿಕ್ಷಣದ ಬಗ್ಗೆ ಇರುವ ಅವರಲ್ಲಿನ ಮೂಢನಂಬಿಕೆಯೂ ಒಂದು ರೀತಿಯಲ್ಲಿ ಕಾರಣವಾಗಿರಬಹುದು. ಬಾಲಕಿಯರನ್ನು ಓದಿಸಬೇಕೆಂದರೆ ಇಂದಿನ ದಿನಗಳಲ್ಲಿ ನಗರ ಪ್ರದೇಶಗಳಲ್ಲಿಯೂ ಸಹ ಮೀನ ಮೇಷ ಎಣಿಸುತ್ತಿದ್ದಾರೆ. ಹಾಗೂ ಅದರ ಬಗ್ಗೆ ಅಸಡ್ಡೆ, ಮನಸಿನಲ್ಲಿ ಮನೆ ಮಾಡಿದ ಗೊಡ್ಡು ಸಂಪ್ರದಾಯಗಳು ಇಂದಿಗೂ ಬಹುತೇಕ ದೇಶಗಳಲ್ಲಿ ಇದೆ ಎಂದರೆ ತಪ್ಪಾಗಲಾರದು.
ಒಂದೊಂದು ಸಲ ನಮ್ಮ ಗ್ರಾಮೀಣ ಭಾಗದ ಕೆಲ ಹಿರಿಯರು ಹೇಳುವ ಮಾತೇನು ಎಂದರೆ, “ಹೇಯ್! ಈ ಹೆಣ್ಮಕ್ಕಳನ್ನು ಓದಿಸಿ ಏನ್ ಮಾಡದ್ ಅದಾ. ಹೊಸಿಲ್ ದಾಟಿ ಏನ್ ಬದೊಡ್ಡ್ ಕೆಲ್ಸ ಮಾಡಂಗ್ ಐದಾಳು ಬಿಡ್ರೀ” ಅನ್ನುವ ಮಾತುಗಳು ಕೇಳುತ್ತಿರುತ್ತೇವೆ. ಇಂತಹ ಮಾತುಗಳನ್ನಾಡುವ ಬಹಳಷ್ಟು ತಂದೆ ತಾಯಿಗಳನ್ನು ಈ ಸಮಾಜದಲ್ಲಿ ಕಾಣಬಹುದು.ಇಂತಹ ಧೋರಣೆಯಿಂದ ಯಾವುದೇ ಒಂದು ದೇಶ ಅಥವಾ ಸಮಾಜ ಅಭಿವೃದ್ಧಿ ಆಗಲಿಕ್ಕೆ ಸಾಧ್ಯವಿಲ್ಲ. ಈ ಸಮಾಜದಲ್ಲಿ ಮಹಿಳೆಯರ ಶಿಕ್ಷಣ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ಹಿಂದಿನಿಂದಲೂ ಆಗಿಲ್ಲ. ಈಗಲೂ ಆಗುತ್ತಿಲ್ಲ. ಇದು ಆತಂಕದ ವಿಷಯವಾಗಿದೆ.
ಮಹಿಳೆಯರು ಓದಲು ಹೋದರೆ ಮನೆಗೆಲಸಗಳನ್ನು ಯಾರು ಮಾಡಬೇಕು!? ಮತ್ತೊಂದು ಮನೆಗೆ ಹೋಗುವ ಹೆಣ್ಮಕ್ಕಳಿಗೆ ಶಿಕ್ಷಣ ಕಲಿಸುವುದರಿಂದ ಲಾಭ ಏನಿದೆ? ಎಂಬೆಲ್ಲಾ ಹತ್ತು ಹಲವು ಪ್ರಶ್ನೆಗಳು ಹುಟ್ಟಿ ಮಹಿಳೆಯರನ್ನು ಶಿಕ್ಷಣದತ್ತ ಹೋಗಲಿಕ್ಕೆ ಬಿಡದೇ ಕಡಿವಾಣ ಹಾಕಿಬಿಟ್ಟಿದ್ದಾರೆ.
ಓದು ಕಲೆತು, ಉದ್ಯೋಗ ಗಿಟ್ಟಿಸಿಕೊಂಡು ದುಡಿಯೋದು ಏನಿದೆ ಅಂತ ಮಾತನಾಡಿಕೊಳ್ಳುವರಿಗೇನು ಕಮ್ಮಿಯಿಲ್ಲ.
ಮೊನ್ನೆ ಪತ್ರಿಕೆಯೊಂದರಲ್ಲಿ ಬಾಲ್ಯವಿವಾಹ ಜರುಗಿದ್ದು ವರದಿ ನೋಡಿದೆ. ಬಾಲ್ಯವಿವಾಹದ ನೆಪದಲ್ಲಿ ಸಣ್ಣ ಸಣ್ಣ ಬಾಲಕಿಯರನ್ನು ಮಾರಾಟ ಮಾಡಿಬಿಡುವುದು. ಇಂತಹ ಸುದ್ದಿ ಸಮಾಚಾರಗಳನ್ನೆಲ್ಲ ನೋಡಿದಾಗ ಮಹಿಳೆಯರಿಗೆ ಇನ್ನೂ ಹೆಚ್ಚಿನ ಶಿಕ್ಷಣ ಮತ್ತು ಜಾಗೃತಿ ಮೂಡಿಸುವ ಕೆಲಸ ಅತ್ಯವಶ್ಯಕ ಇದೆ ಎಂದು ತಿಳಿಯಬೇಕಾಗಿದೆ.
ಇಂದಿನ ದಿನಗಳಲ್ಲಿ ದಿನಬೆಳಗಾದರೆ ಸಾಕು ನಿತ್ಯ ಒಂದಲ್ಲ ಒಂದು ಕಡೆ ಮಹಿಳೆ, ವೃದ್ದೆ, ಬಾಲಕಿ, ಹೆತ್ತ ಮಗಳು, ಹಸುಗೂಸು ಅಕ್ಕ, ಅಮ್ಮ, ತಂಗಿ ಎಂಬ ಬಂಧುತ್ವ ಇದ್ಯಾವುದೂ ಲೆಕ್ಕವಿಲ್ಲದೇ ಅತ್ಯಾಚಾರ, ಮಾನಭಂಗಗಳು, ಪ್ರೀತಿ ಪ್ರೇಮದ ಹೆಸರಲ್ಲಿ ಮಾರ್ಯದಾ ಹತ್ಯೆಗಳು ನಡೆಯುತ್ತಲೇ ಇವೆ. ನಿರ್ಭಯ ಅಂತಹ ಅತ್ಯಾಚಾರ ಪ್ರಕರಣಗಳು ಜರುಗುತ್ತಲೇ ಇವೆ. ಮೊನ್ನೆ ಮೊನ್ನೆ ನಡೆದ ವೈದ್ಯ ವಿದ್ಯಾರ್ಥಿನಿ ಮೇಲೆ ಸಾಮೂಹಿಕ ಅತ್ಯಾಚಾರ. ಇವಕ್ಕೆಲ್ಲ ಕೊನೆಯಿಲ್ಲವೇ ಎಂಬ ಪ್ರಶ್ನೆ ಯಕ್ಷ ಪ್ರಶ್ನೆಯಾಗಿಯೇ ಉಳಿಯುತ್ತಿದೆ. ನಾಗರಿಕ ಸಮಾಜ ತಲೆತಗ್ಗಿಸುವಂತಾಗಿದೆ.
ಅತ್ಯಾಚಾರವು ವಿಶ್ವದಾದ್ಯಂತ ಗಂಭೀರ ಸಮಸ್ಯೆಯಾಗಿದೆ. ಭಯ, ಅವಮಾನ, ಅಸಮರ್ಪಕ ಕಾನೂನುಗಳ ಕಾರಣದಿಂದಾಗಿ ಅನೇಕ ಪ್ರಕರಣಗಳು ಸರಿಯಾದ ಕ್ರಮದಲ್ಲಿ ವರದಿ ಆಗುತ್ತಿಲ್ಲ. ಜಾಗತಿಕವಾಗಿ ನೋಡುವುದಾದರೆ 35% ಮಹಿಳೆಯರು ಲೈಂಗಿಕ ಕಿರುಕುಳವನ್ನು ಅನುಭವಿಸುತ್ತಿದ್ದಾರೆ. ಪ್ರತಿ 100,000 ವ್ಯಕ್ತಿಗಳಿಗೆ 92.93 ಪ್ರಕರಣಗಳು ಪ್ರಪಂಚದಾದ್ಯಂತ ಬಹುತೇಕ ಮೂರು ಮಹಿಳೆಯರಲ್ಲಿ ಒಬ್ಬರು ದೈಹಿಕ ಮತ್ತು ಲೈಂಗಿಕ ಹಿಂಸೆಯನ್ನು ಅನುಭವಿಸುತ್ತಿದ್ದಾರೆ.
ಹಾಗೆಯೇ ಪ್ರತಿ ರಾಜ್ಯಗಳಲ್ಲಿಯೂ ಸಹ ಅಷ್ಟೇ ವೇಗವಾಗಿ ಮಹಿಳೆಯರ ಮೇಲೆ ಅತ್ಯಾಚಾರಗಳು ನಡೆಯುತ್ತಿವೆ. ಕರ್ನಾಟಕ ರಾಜ್ಯ ನೋಡುವುದಾದರೆ 2019ರಲ್ಲಿ 4684 ಅತ್ಯಾಚಾರ ಪ್ರಕರಣಗಳು ವರದಿಯಾಗಿವೆ. 1313 ಪ್ರಕರಣಗಳು ಅಪ್ರಾಪ್ತರನ್ನು ಒಳಗೊಂಡಿವೆ. ರಾಜ್ಯದ ಅತ್ಯಾಚಾರ ಪ್ರಮಾಣವು 10,00,00 ಜನಕ್ಕೆ 15.9ರಷ್ಟು ಇತ್ತು. 2018ರಿಂದ 2019 ಈವರೆಗೆ ಅತ್ಯಾಚಾರ ದರದಲ್ಲಿ 4.2 ವಾರ್ಷಿಕ ಬದಲಾವಣೆಯೊಂದಿಗೆ ಸೇರಿಸಲಾಗಿದೆ.
ಈ ಜಗತ್ತಿನಲ್ಲಿ 2011ರ ಜನಗಣತಿ ಪ್ರಕಾರ ಸಾಕ್ಷರತಾ ಪ್ರಮಾಣ 65.45% ರಷ್ಟು ಇದೆ. 1951ರಲ್ಲಿನ 8.86% ರಿಂದ ಹೆಚ್ಚಾಗಿದೆ. 1-7 ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ ಮಹಿಳೆಯರಿಗೆ ಪರಿಣಾಮಕಾರಿ ಸಾಕ್ಷರತೆ ಪ್ರಮಾಣವು 70.3% ಆಗಿತ್ತು. ಸಾಕ್ಷರತಾ ದರಗಳಲ್ಲಿ ಹೇಳುವುದಾದರೆ ಲಿಂಗ ಅಂತರ 2011ರ ನಡುವೆ ಪುರುಷ ಸಾಕ್ಷರತಾ ದರ ಬೆಳವಣಿಗೆ (11.8%) 2001 ಮತ್ತು 2011 ನಡುವೆ ಪುರುಷ ಸಾಕ್ಷರತಾ ದರಗಳಿಗಿಂತ ( 6.9%) ವೇಗವಾಗಿದೆ. ಕೇರಳ ಮಹಿಳೆಯರಲ್ಲಿ ಅತೀ ಹೆಚ್ಚು ಸಾಕ್ಷರತಾ ಪ್ರಮಾಣವನ್ನು ಸಾಧಿಸಿದೆ (93.1%).
ಕರ್ನಾಟಕ ರಾಜ್ಯದಲ್ಲಿ ನೋಡುವುದಾದರೆ 2011ರ ಮಹಿಳೆಯರ ಸಾಕ್ಷರತಾ ಪ್ರಮಾಣವು 68.08%ಗಿಂತ ಹೆಚ್ಚಾಗಿದೆ. ಪುರುಷ ಮತ್ತು ಮಹಿಳಾ ಸಾಕ್ಷರತಾ ದರಗಳ ನಡುವೆ ಇನ್ನು ಅಂತರವಿದ್ದರೂ ಮಹಿಳೆಯರ ಸಾಕ್ಷರತಾ ದರದಲ್ಲಿ ಬೆಳವಣಿಗೆಯು ಪುರುಷರಿಗಿಂತ ವೇಗವಾಗಿದೆ.
ಮಹಿಳೆಯರು ಸಮಾಜದ ಬೆನ್ನೆಲುಬು. ಅವರಿಗೆ ಶಿಕ್ಷಣ ನೀಡಿ ಮತ್ತು ಇಡೀ ಸಮಾಜವು ವಿದ್ಯಾವಂತರಾಗುತ್ತದೆ. ಒಂದು ವೇಳೆ ಮಹಿಳೆಯರು ಶಿಕ್ಷಣವನ್ನು ಪಡೆಯದಿದ್ದರೆ ಇಡೀ ಸಮಾಜವೇ ಅವಿದ್ಯಾವಂತರಾಗಿ ಉಳಿಯುತ್ತದೆ. ಮಹಿಳೆಯರು ಶಿಕ್ಷಿತರಾದರೆ ಇಡೀ ಸಮಾಜವೇ ಶಿಕ್ಷಿತರಾಗುತ್ತದೆ ಎಂಬ ಡಾ.ಬಿ.ಆರ್ ಅಂಬೇಡ್ಕರ್ ಅವರ ಮಾತುಗಳನ್ನು ಇಲ್ಲಿ ಉಲ್ಲೇಖಿಸಬಹುದು.

It’s really true subject in the society so we must aware the women empowerment and education.
Wonderfull opinion.I am proud of him . he is (tayappa )my classment. I bless him for future
ನಿಜ ಸರ್ ಮಹಿಳಾ ಸಬಲೀಕರಣ ಮತ್ತು ಸಾಕ್ಷರತೆ ಅತೀ ಅವಶ್ಯಕ.
Yes sir it’s true
Adestu shikshitaa radru,anaksharastharanate mahileyara mele athyacharagalu nadeutale ide
Good msg sir