ಸಿದ್ದರಾಮಯ್ಯ ನೇತೃತ್ವದ ಸರ್ಕಾರವು ಜಿಂದಾಲ್‌ಗೆ ಭೂಮಿ ಕಡಿಮೆ ಬೆಲೆ ಮಾರಾಟಕ್ಕೆ ಮುಂದಾಗಿರುವುದು ರಾಜ್ಯದ್ರೋಹದ ಕೆಲಸವಾಗಿದೆ. ಭೂಮಿಯನ್ನು ಮಾರಾಟ ಮಾಡುವ ಉದ್ದೇಶದ ಹಿಂದೆ ಕಾಂಗ್ರೆಸ್ ಹೈಕಮಾಂಡ್ ಸಹ ಭಾಗಿಯಾಗಿದೆ ಎಂದು ಜನಸಂಗ್ರಾಮ ಪರಿಷತ್ ಸಂಸ್ಥಾಪಕ ಆಧ್ಯಕ್ಷ ರಾಘವೇಂದ್ರ ಕುಷ್ಟಗಿ ಆರೋಪಿಸಿದರು.
ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, “ಭ್ರಷ್ಟಾಚಾರಿ, ಕೋಮುವಾದಿ ಬಿಜೆಪಿಯವರ ನಡೆಯನ್ನು ವಿರೋಧಿಸಿ, ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸೋಲಿಸಿ ಕಾಂಗ್ರೆಸ್ ಬೆಂಬಲಿಸಲಾಗಿತ್ತು. ಕಾಂಗ್ರೆಸ್ ಸರ್ಕಾರವು ಅಧಿಕಾರಕ್ಕೆ ಬಂದ ಬಳಿಕ ಅಕ್ರಮ ಭೂಮಿ ಹಂಚಿಕೆ ಪ್ರಕರಣ, ಭ್ರಷ್ಟಾಚಾರ ಹೆಚ್ಚಾಗಿದೆ. ಸಮಾಜವಾದಿ ಸಿದ್ದಾಂತ ನಂಬಿದ್ದ ಸಿದ್ದರಾಮಯ್ಯ ಬದಲಾಗಿದ್ದಾರೆ ಎಂದು ಬೇಸರವಾಗುತ್ತಿದೆ” ಎಂದು ಹೇಳಿದರು.
ಬಿಜೆಪಿ ಸರ್ಕಾರ ಜಿಂದಾಲ್‌ಗೆ ಭೂಮಿ ನೀಡಲು ಮುಂದಾಗಿದ್ದಾಗ ಪ್ರತಿಪಕ್ಷ ನಾಯಕನಾಗಿ ವಿರೋಧಿಸಿದ್ದ ಸಿದ್ದರಾಮಯ್ಯನವರು ಸಚಿವ ಸಂಪುಟದ ತೀರ್ಮಾನ ಮೂಲಕ ಮಾರಾಟಕ್ಕೆ ಮುಂದಾಗಿರುವುದು ಖಂಡನೀಯ. ಜಿಂದಾಲ್‌ಗೆ ಕಡಿಮೆ ಬೆಲೆಯಲ್ಲಿ ಭೂಮಿ ನೀಡಿರುವುದರ ಹಿಂದೆ ಕಾಂಗ್ರೆಸ್ ನಾಯಕರ ಷಡ್ಯಂತ್ರ ಇರುವ ಸಂಶಯಗಳಿವೆ ಎಂದರು.
ವಿಜಯನಗರ ಉಕ್ಕು ಕಾರ್ಖಾನೆಗೆ ಇಂದಿರಾಗಾಂಧಿ ಅವರು 10 ಸಾವಿರ ಎಕರೆ ಭೂಮಿಯನ್ನು ನೀಡಿದ್ದರು. ಅದು ಜಿಂದಾಲ್‌ಗೆ ನೀಡಲಾಗಿತ್ತು. ಈಗ ಅದೇ ಕಾಂಗ್ರೆಸ್ ಈಗ 3600 ಎಕರೆ ಭೂಮಿ ನೀಡಲು ಮುಂದಾಗಿದೆ. ಗೋಮಾಳ, ಸರ್ಕಾರಿ ಭೂಮಿ ಸೇರಿ ಎಲ್ಲವೂ ಬಾಗಿನ ರೂಪದಲ್ಲಿ ಜಿಂದಾಲ್‌ಗೆ ನೀಡಲು ಸರ್ಕಾರ ಮುಂದಾಗಿದೆ. ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ಸಮರ್ಥಿಸಿಕೊಳ್ಳುತ್ತಿರುವುದು ನಾಚಿಕೆಗೇಡಿನ ಸಂಗತಿಯಾಗಿದೆ ಎಂದರು.
ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳು ಜಿಂದಾಲ್ ಕಂಪನಿ ಬಾಲಬಡಕರಾಗಿರುವದು ಸ್ಪಷ್ಟವಾಗಿದೆ. ಕಡಿಮೆ ಬೆಲೆಯಲ್ಲಿ ಭೂಮಿ ನೀಡಲು ಕಾಂಗ್ರೆಸ್ ಪಕ್ಷದ ಹೈಕಮಾಂಡ್ ದೊಡ್ಡಮಟ್ಟದಲ್ಲಿ ವ್ಯವಹಾರ ಮಾಡಿರುವ ಅನುಮಾನಗಳಿವೆ. ಸರ್ಕಾರದ ಕ್ರಮವನ್ನು ಖಂಡಿಸಿ, ಗಣಿಭಾದಿತರ ಬದುಕು ಮತ್ತು ಪರಿಸರ ಪುನಶ್ಚೇತನ ಸಂಕಲ್ಪ ಸಮಾವೇಶವನ್ನು ಸೆ.4 ರಂದು ಸಂಡೂರಿನ ಆದರ್ಶ ಸಮುದಾಯ ಕೇಂದ್ರದಲ್ಲಿ ಆಯೋಜಿಸಲಾಗಿದೆ ಎಂದರು.
ಇದನ್ನು ಓದಿದ್ದೀರಾ? ಶಿವಮೊಗ್ಗ | ಕೋಟೆಗಂಗೂರು: ಒಂದು ಶಾಲೆ, ಮೂರು ಕಟ್ಟಡ; 2 ಕಿಲೋ ಮೀಟರ್ ಅಂತರ!
ಕಾರ್ಯಕ್ರಮಕ್ಕೆ ಪತ್ರಕರ್ತ ಮತ್ತು ಪರಿಸರ ಹೋರಾಟಗಾರ ನಾಗೇಶ ಹೆಗ್ಡೆ ಚಾಲನೆ ನೀಡಲಿದ್ದಾರೆ. ಸಮಾಜ ಪರಿವರ್ತನಾ ಸಮುದಾಯದ ಅಧ್ಯಕ್ಷ ಎಸ್.ಆರ್.ಹೀರೆಮಠ ಭಾಗವಹಿಸಲಿದ್ದಾರೆ. ಎರಡು ಗೋಷ್ಠಿಗಳು ನಡೆಯಲಿದೆ. ಪತ್ರಕರ್ತ ಅಖಿಲೇಶ ಚಿಪ್ನಿ ಸೇರಿದಂತೆ ವಿವಿಧ ಸಂಘಟನೆಗಳ ಪ್ರಮುಖರು ಭಾಗವಹಿಸಲಿದ್ದಾರೆ. ರಾಯಚೂರು, ಬಳ್ಳಾರಿ ಸೇರಿದಂತೆ ವಿವಿಧ ಜಿಲ್ಲೆಗಳ ಹೋರಾಟಗಾರರು ಭಾಗಿಯಾಗಲಿದ್ದಾರೆ. ಗೋಷ್ಠಿಯ ನಂತರ ಮುಂದಿನ ಹೋರಾಟದ ರೂಪರೇಷ ರೂಪಿಸಲಾಗುವುದು ಎಂದು ಜನಸಂಗ್ರಾಮ ಪರಿಷತ್ ಸಂಸ್ಥಾಪಕ ಆಧ್ಯಕ್ಷ ರಾಘವೇಂದ್ರ ಕುಷ್ಟಗಿ ತಿಳಿಸಿದರು.
ಈ ಸಂದರ್ಭದಲ್ಲಿ ಜನಸಂಗ್ರಾಮ ಪರಿಷತ್ ರಾಜ್ಯಾಧ್ಯಕ್ಷ ಜಾನವೆಸ್ಲಿ ಕಾತರಕಿ, ಖಾಜಾ ಅಸ್ಲಂ ಅಹ್ಮದ್, ಪರಪ್ಪ ನಾಗೋಲಿ ಉಪಸ್ಥಿತರಿದ್ದರು.
