ಮಸೀದಿಗಳಿಗೆ ನುಗ್ಗಿ ಮುಸ್ಲಿಮರನ್ನು ಹಡುಕಿ ಕೊಲ್ಲುತ್ತೇವೆಂದು ಮಹಾರಾಷ್ಟ್ರ ಬಿಜೆಪಿ ಶಾಸಕ ನಿತೀಶ್ ರಾಣೆ ಪ್ರಚೋದನಾಕಾರಿ ಹೇಳಿಕೆ ನೀಡಿದ್ದಾರೆ. ಅವರ ಹೇಳಿಕೆ ವಿರುದ್ಧ ಭಾರೀ ಆಕ್ರೋಶ ವ್ಯಕ್ತವಾಗಿದ್ದು, ಅಹಮದ್‌ನಗರ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ.
ನಾಸಿಕ್ ಜಿಲ್ಲೆಯ ಶಾ ಪಾಂಚಲೆ ಗ್ರಾಮದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ರಾಣೆ, “ಮಹಂತ್ ರಾಮಗಿರಿ ಮಹಾರಾಜರ ವಿರುದ್ಧ ಮುಸ್ಲಿಮರು ಪ್ರತಿಭಟನೆ ನಡೆಸಿದರೆ, ಯಾವುದೇ ಹೇಳಿಕೆ ನೀಡಿದರೆ, ಮಸೀದಿಗೆ ನುಗ್ಗಿ ಮುಸ್ಲಿಮರನ್ನು ಕೊಲ್ಲುತ್ತೇವೆ” ಎಂದು ಬೆದರಿಕೆ ಹಾಕಿದ್ದಾರೆ. ರಾಣೆ ಹೇಳಿಕೆಯನ್ನು ಕಾಂಗ್ರೆಸ್, ಆರ್‌ಜೆಡಿ, ಎಐಎಂಐಎಂ ಪಕ್ಷ ಸೇರಿದಂತೆ ಹಲವಾರು ವಿಪಕ್ಷಗಳು ಖಂಡಿಸಿದ್ದು, ಪ್ರಚೋದನಾಕಾರಿ ಹೇಳಿಕೆ ಎಂದು ಆರೋಪಿಸಿವೆ. ಬಿಜೆಪಿ ವಿರುದ್ಧ ಕಿಡಿಕಾರಿವೆ.
ರಾಣೆ ಅವರ ಪ್ರಚೋದನಾಕಾರಿ ಹೇಳಿಕೆಯ ವಿಡಿಯೋವನ್ನು ಹಂಚಿಕೊಂಡಿರುವ ಎಐಎಂಐಎಂ ಪಕ್ಷದ ವಕ್ತಾರ ಪಠಾಣ್, “ಚುನಾವಣೆಗೆ ಮುನ್ನ ಕೋಮುಗಲಭೆ ಸೃಷ್ಟಿಸಲು ಬಿಜೆಪಿ ಬಯಸಿದೆ. ನಿತೀಶ್ ರಾಣೆ ಅವರ ಭಾಷಣ ಉದ್ರೇಕಕಾರಿಯಾಗಿದೆ. ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು” ಎಂದು ಒತ್ತಾಯಿಸಿದ್ದಾರೆ.
ಇತ್ತೀಚೆಗೆ ಧಾರ್ಮಿಕ ಕಾರ್ಯಕ್ರಮವೊಂದರಲ್ಲಿ ಧಾರ್ಮಿಕ ಮುಖಂಡ ರಾಮಗಿರಿ ಮಹಾರಾಜರ ಎಂಬಾತ ಪ್ರವಾದಿ ಮೊಹಮ್ಮದ್ ಬಗ್ಗೆ ಅವಹೇಳನಾಕಾರಿ ಹೇಳಿಕೆ ನೀಡಿದ್ದರು. ಅವರ ಹೇಳಿಕೆ ವಿರುದ್ಧ ಮುಸ್ಲಿಮರು ಪ್ರತಿಭಟನೆ ನಡೆಸಿದ್ದರು. ರಾಮಗಿರಿ ಮಹಾರಾಜರನ್ನು ಬಂಧಿಸುವಂತೆ ಒತ್ತಾಯಿಸಿದ್ದರು.