ಗೋ ಕಳ್ಳಸಾಗಣೆದಾರ ಎಂದು ಭಾವಿಸಿ 12ನೇ ತರಗತಿ (ದ್ವಿತೀಯ ಪಿಯುಸಿ) ವಿದ್ಯಾರ್ಥಿಯೊಬ್ಬನನ್ನು ದುಷ್ಕರ್ಮಿಗಳು 30 ಕಿಲೋ ಮೀಟರ್ಗಳವರೆಗೆ ಬೆನ್ನಟ್ಟಿ ಗುಂಡಿಕ್ಕಿ ಹತ್ಯೆ ಮಾಡಿರುವ ಘಟನೆ ಹರಿಯಾಣದ ಫರಿದಾಬಾದ್ನಲ್ಲಿ ನಡೆದಿದೆ.
ಮೃತ ವಿದ್ಯಾರ್ಥಿಯನ್ನು ಆರ್ಯನ್ ಮಿಶ್ರಾ ಎಂದು ಗುರುತಿಸಲಾಗಿದೆ. ಐದು ಜನರ ತಂಡವು ಈ ವಿದ್ಯಾರ್ಥಿಯನ್ನು 30 ಕಿಲೋಮೀಟರ್ಗಳವರೆಗೆ ಬೆನ್ನಟ್ಟಿ ಕೊಂದಿದೆ. ಎಲ್ಲಾ ಆರೋಪಿಗಳನ್ನು ಫರಿದಾಬಾದ್ ಪೊಲೀಸರು ಬಂಧಿಸಿದ್ದಾರೆ.
ಆಗಸ್ಟ್ 23ರಂದು ರಾತ್ರಿ 19 ವರ್ಷದ ಆರ್ಯನ್ ತನ್ನ ಸ್ನೇಹಿತರಾದ ಹರ್ಷಿತ್ ಮತ್ತು ಶಾಂಕಿ ಜೊತೆ ಎಸ್ಯುವಿಯಲ್ಲಿ ಫಾಸ್ಟ್ ಫುಡ್ ತಿನ್ನೆಲೆಂದು ಹೋಗಿದ್ದರು. ಈ ವೇಳೆ ಗೋರಕ್ಷಕರೆಂದು ಹೇಳಿಕೊಳ್ಳುವ ಗುಂಪೊಂದು ಆರ್ಯನ್ ಮತ್ತು ಅವನ ಸ್ನೇಹಿತರು ಗೋ ಕಳ್ಳಸಾಗಣೆದಾರರು ಎಂದು ಭಾವಿಸಿದ್ದಾರೆ.
ಇದನ್ನು ಓದಿದ್ದೀರಾ? ಮಹಾರಾಷ್ಟ್ರ | ಗೋಮಾಂಸ ಕಳ್ಳಸಾಗಣೆ ಆರೋಪ, ಮುಸ್ಲಿಂ ವ್ಯಕ್ತಿ ಹತ್ಯೆ
ಪ್ರತ್ಯೇಕ ವಾಹನದಲ್ಲಿ ತೆರಳುತ್ತಿದ್ದ ಆರೋಪಿಗಳು ಎಸ್ಯುವಿ ನಿಲ್ಲಿಸುವಂತೆ ಹೇಳಿದ್ದರು. ಇಬ್ಬರು ಹೆಣ್ಣು ಮಕ್ಕಳು ಕೂಡಾ ತಮ್ಮ ಜೊತೆ ಎಸ್ಯುವಿಯಲ್ಲಿ ಇದ್ದ ಕಾರಣ ಕಾರು ಚಲಾಯಿಸುತ್ತಿದ್ದ ಹರ್ಷಿತ್ ಗಾಬರಿಗೊಂಡಿದ್ದಾನೆ.
ಹರ್ಷಿತ್ ಮತ್ತು ಶಾಂಕಿ ಇತ್ತೀಚೆಗೆ ಜಗಳವಾಡಿದ್ದು, ಶಾಂಕಿಯ ವಿರುದ್ಧ ಕಾನೂನು ಪ್ರಕರಣ ದಾಖಲಾಗಿತ್ತು. ತಮ್ಮ ಹಿಂದಿನ ವಿವಾದಕ್ಕೆ ಸಂಬಂಧಿಸಿದಂತೆ ಈಗ ಇನ್ನೊಂದು ತಂಡ ದಾಳಿ ಮಾಡುತ್ತಿದೆ ಎಂದು ಭಾವಿಸಿ ಈ ವಿದ್ಯಾರ್ಥಿಗಳು ತಪ್ಪಿಸಿಕೊಳ್ಳುವ ಯತ್ನ ಮಾಡಿದ್ದಾರೆ.
ಈ ವೇಳೆ ಅವರೇ ಗೋ ಕಳ್ಳಸಾಗಣೆದಾರರು ಎಂದುಕೊಂಡ ಈ ಗುಂಪು ಸುಮಾರು 30 ಕಿಲೋ ಮೀಟರ್ ಬೆನ್ನಟ್ಟಿ ಈ ವಿದ್ಯಾರ್ಥಿಗಳ ಕಾರಿನ ಮೇಲೆ ಗುಂಡು ಹಾರಿಸಿದ್ದಾರೆ. ಒಂದು ಗುಂಡು ಹಿಂಬದಿಯ ಕಿಟಕಿಗೆ ತಾಗಿ ಮುಂದಿನ ಪ್ರಯಾಣಿಕರ ಸೀಟಿನಲ್ಲಿ ಕುಳಿತಿದ್ದ ಆರ್ಯನ್ಗೆ ತಗುಲಿದೆ.
In Faridabad, Haryana, A Class 12th student Aryan Mishra was chased and killed by Cow Vigilantes in Haryana mistaking him to be a 'Cow transporter'. 5 accused Anil Kaushik, Varun, Krishna, Adesh and Saurabh were later arrested. pic.twitter.com/XnZK3lvDw6
— Mohammed Zubair (@zoo_bear) September 2, 2024
ಆರ್ಯನ್ಗೆ ಗುಂಡು ತಾಗಿದ ಬಳಿಕ ಹರ್ಷಿತ್ ಕಾರು ನಿಲ್ಲಿಸಿದ್ದು, ಈ ದುರುಳರು ಕಾರಿನೆಡೆ ಬಂದು ಆರ್ಯನ್ ಎದೆಗೆ ನೇರವಾಗಿ ಗುಂಡು ಹಾರಿಸಿ ಹತ್ಯೆ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಬಂಧಿತ ಆರೋಪಿಗಳು ಅನಿಲ್ ಕೌಶಿಕ್, ವರುಣ್, ಕೃಷ್ಣ, ಆದೇಶ್ ಮತ್ತು ಸೌರವ್ ಎಂದು ಫರಿದಾಬಾದ್ ಪೊಲೀಸ್ ಅಧಿಕಾರಿ ಖಚಿತಪಡಿಸಿದ್ದಾರೆ.
ಈ ನಡುವೆ ಗೋ ರಕ್ಷಣೆ ಹೆಸರಲ್ಲಿ ಹತ್ಯೆ, ದೌರ್ಜನ್ಯ ನಡೆಸುವುದಕ್ಕೆ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಆರೋಪಿಗಳ ವಿರುದ್ಧ ಕಠಿಣ ಕ್ರಮಕ್ಕೆ ನೆಟ್ಟಿಗರು ಆಗ್ರಹಿಸಿದ್ದಾರೆ. “ನೆಟ್ಟಿಗರೊಬ್ಬರು, ದಯವಿಟ್ಟು ಅವರು ಗೋ ರಕ್ಷಕರೆಂದು ಕರೆಯಬೇಡಿ. ಅವರು ಗೋ ಭಯೋತ್ಪಾದಕರು. ಧರ್ಮದ ಹೆಸರಲ್ಲಿ ಕೊಲೆ ಮಾಡುವುದು ಭಯೋತ್ಪಾದನೆ” ಎಂದು ಹೇಳಿದ್ದಾರೆ.
