ಭಾರತದಲ್ಲಿ ಜನರು ಆಹಾರಕ್ಕಾಗಿ ವೆಯಿಸುವ ವೆಚ್ಚದಲ್ಲಿ ಇಳಿಮುಖ ಕಂಡುಬಂದಿದೆ. ಭಾರತೀಯರ ಒಟ್ಟು ಮಾಸಿಕ ವೆಚ್ಚದಲ್ಲಿ ಆಹಾರಕ್ಕಾಗಿ ಖರ್ಚು ಮಾಡುವ ಮೊತ್ತವು 50%ಗಿಂತ ಕಡಿಮೆ ಇದೆ ಎಂದು ನ್ಯಾಷನಲ್ ಸ್ಯಾಂಪಲ್ ಸರ್ವೆ ಸಂಸ್ಥೆ (ಎನ್ಎಸ್ಎಸ್ಒ) ವರದಿ ಮಾಡಿದೆ.
2022-23ರ ಹಣಕಾಸು ವರ್ಷದಲ್ಲಿ ನಡೆಸಿದ ಸಮೀಕ್ಷೆಯ ವರದಿಯನ್ನು ಬಿಡುಗಡೆ ಮಾಡಿರುವ ಎನ್ಎಸ್ಎಸ್ಒ, ಭಾರತದ ಬಹುತೇಕ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಲ್ಲಿ ಜನರ ಆಹಾರಕ್ಕಾಗಿ ವೆಚ್ಚವು ಕಡಿಮೆಯಾಗಿದೆ ಎಂದು ಹೇಳಿದೆ. 2011-12ನೇ ಸಾಲಿನಲ್ಲಿ ಆಹಾರಕ್ಕಾಗಿ ವೆಚ್ಚವು ಸರಾಸರಿ 55.7% ಇತ್ತು. ಈ ವೆಚ್ಚದ ಪ್ರಮಾಣವು 2022-23ರಲ್ಲಿ 48.6%ಗೆ ಇಳಿಕೆಯಾಗಿದೆ ಎಂದು ವರದಿ ತಿಳಿಸಿದೆ.
ಆಹಾರದ ಮೇಲಿನ ವೆಚ್ಚವು ಕಡಿಮೆಯಾಗಿರುವುದು, ಜನರು ಹೆಚ್ಚು ಆದಾಯ ಗಳಿಸುತ್ತಿರುವುದರ ಸಂಕೇತವೆಂದು ಹೇಳಲಾಗುತ್ತಿದ್ದರೂ, ಪೌಷ್ಟಿಕತೆಯ ಅಂಕಿಅಂಶಗಳು ಜನರು ಬೆಲೆಏರಿಕೆ ಮತ್ತು ಇತರ ಮೂಲ ಸೌಕರ್ಯಕ್ಕಾಗಿ ಹೆಚ್ಚು ಖರ್ಚು ಮಾಡುತ್ತಿದ್ದು, ಉತ್ತರ ಆಹಾರ ಖರೀದಿಯನ್ನು ಕಡಿಮೆ ಮಾಡಿದ್ದಾರೆ ಎಂಬುದನ್ನು ಸೂಚಿಸುತ್ತದೆ.
ಎನ್ಎಸ್ಎಸ್ಒ ಸಮೀಕ್ಷೆಯು ಗ್ರಾಮೀಣ ಮತ್ತು ನಗರ ಭಾಗಗಳೆರಡರಲ್ಲೂ ದತ್ತಾಂಶ ಕಲೆಹಾಕಿದೆ. ಎರಡೂ ಪ್ರದೇಶಗಳಲ್ಲಿ ಕಳೆದ 10 ವರ್ಷದಲ್ಲಿ ವೆಚ್ಚದಲ್ಲಿ ಆಹಾರದ ಪಾಲು ಕಡಿಮೆ ಆಗಿರುವುದು ವೇದ್ಯವಾಗಿದೆ. 2022-23ರ ಹಣಕಾಸು ವರ್ಷದ ದತ್ತಾಂಶವನ್ನು ಎನ್ಎಸ್ಎಸ್ಒ ಬಿಡುಗಡೆ ಮಾಡಿದೆ.
ಕರ್ನಾಟಕದಲ್ಲಿ ಆಹಾರಕ್ಕಾಗಿ ವೆಚ್ಚವು 2011ರಲ್ಲಿ54.2% ಇತ್ತು. ಈಗ, 46.5% ಇದೆ. ಅದೇ ರೀತಿ, ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ 41.6% ಇದ್ದರೆ, ಚಂಡೀಗಡ ಮತ್ತು ಕೇರಳದಲ್ಲಿ ಕ್ರಮವಾಗಿ 41.2% ಮತ್ತು 42.5% ಇದೆ. ಆಹಾರಕ್ಕಾಗಿ ಜನರು ಅತೀ ಕಡಿಮೆ ವೆಚ್ಚ ಮಾಡುತ್ತಿರುವ ರಾಜ್ಯ ಚಂಡೀಗಡ ಎಂದು ಗುರುತಿಸಲಾಗಿದೆ.
ಅದಾಗ್ಯೂ, ದೇಶಕ್ಕೆ ಮಾದರಿ (ಗುಜರಾತ್ ಮಾದರಿ) ನೀಡುತ್ತೇವೆಂದು ಪ್ರಧಾನಿ ಮೋದಿ ಅವರು ಘೋಷಿಸುತ್ತಿದ್ದ ಗುಜರಾತ್‌ನಲ್ಲಿ ಜನರು ತಮ್ಮ ಒಟ್ಟು ಖರ್ಚಿನಲ್ಲಿ ಆಹಾರಕ್ಕಾಗಿ ವ್ಯಯಿಸುವ ಮೊತ್ತವು 50%ಕ್ಕಿಂತ ಹೆಚ್ಚಾಗಿದೆ ಎಂದೂ ಸಮೀಕ್ಷೆ ಗಮನ ಸೆಳೆದಿದೆ. ಗುಜರಾತ್ ಮಾತ್ರವಲ್ಲದೆ, ಜಮ್ಮು ಕಾಶ್ಮೀರ, ಬಿಹಾರ, ಪಶ್ಚಿಮ ಬಂಗಾಳ, ಒಡಿಶಾ, ಜಾರ್ಖಂಡ್, ಅಸ್ಸಾಂ, ಅರುಣಾಚಲ ಪ್ರದೇಶ, ಸಿಕ್ಕಿಂ ಹಾಗೂ ತ್ರಿಪುರದಲ್ಲಿಯೂ ಆಹಾರಕ್ಕಾಗಿ ವೆಚ್ಚವು 50%ಕ್ಕಿಂತ ಹೆಚ್ಚಿದೆ. ಗಮನಾರ್ಹವಾಗಿ ಬಿಜೆಪಿಯೇ ಆಡಳಿತದಲ್ಲಿರುವ ಅಸ್ಸಾಂ ಮತ್ತು ಬಿಹಾರದಲ್ಲಿ ಆಹಾರಕ್ಕಾಗಿನ ವೆಚ್ಚ 54%ಕ್ಕಿಂತ ಹೆಚ್ಚಾಗಿದೆ.
ದೇಶದ ನಗರ ಭಾಗಗಳಲ್ಲಿ ಜನರು ಆಹಾರಕ್ಕೆ ವ್ಯಯಿಸುವ ವೆಚ್ಚವು ಗ್ರಾಮೀಣ ಭಾಗಕ್ಕಿಂತ ಕಡಿಮೆ ಇದೆ. ಭಾರತದ ನಗರ ಭಾಗಗಳ ಜನರು ತಮ್ಮ ಒಟ್ಟು ವೆಚ್ಚದಲ್ಲಿ 2011-12ರಲ್ಲಿ ಸರಾಸರಿ 48%ಅನ್ನು ಆಹಾರಕ್ಕಾಗಿ ವೆಚ್ಚ ಮಾಡುತ್ತಿದ್ದರು. ಅದು, ಈಗ 41.9%ಗೆ ಇಳಿಕೆಯಾಗಿದೆ. ಅದರಲ್ಲೂ, ಉತ್ತರಾಖಂಡ, ಚಂಡೀಗಡ, ತಮಿಳುನಾಡು, ಕರ್ನಾಟಕ, ಆಂಧ್ರಪ್ರದೇಶ, ಪುದುಚೇರಿ ಮತ್ತು ಕೇರಳದ ನಗರ ಭಾಗಗಳಲ್ಲಿ ಆಹಾರಕ್ಕಾಗಿ ವೆಚ್ಚವು 40%ಗಿಂತ ಕಡಿಮೆ ಇದೆ. ಅದಾಗ್ಯೂ, ಲಕ್ಷದ್ವೀಪದಲ್ಲಿ ಮಾತ್ರ ನಗರ ಭಾಗದ ಜನರು ಆಹಾರಕ್ಕಾಗಿ ವ್ಯಯಿಸುವ ವೆಚ್ಚವು 50%ಗಿಂತ ಹೆಚ್ಚಿದೆ.
ಭಾರತೀಯರ ಒಟ್ಟು ಖರ್ಚಿನಲ್ಲಿ ಆಹಾರಕ್ಕಾಗಿ ವೆಚ್ಚವು ಕಡಿಮೆಯಾಗಿರುವುದು ಪ್ರಗತಿಯ ಸಂಕೇತವಾಗಿದೆ. ದೇಶವು ಅಭಿವೃದ್ಧಿಯತ್ತ ಸಾಗುತ್ತಿದೆ. ಜನರ ದುಡಿಮೆ ಮತ್ತು ಉಳಿತಾಯ ಹೆಚ್ಚಾಗುತ್ತಿದೆ ಎಂದು ಹಲವರು ಬಣ್ಣಿಸುತ್ತಿದ್ದಾರೆ. ಅದಾಗ್ಯೂ, ದೇಶದಲ್ಲಿ ಆಹಾರಕ್ಕಾಗಿನ ವೆಚ್ಚವು ಕಡಿಮೆಯಾಗಿದ್ದರೂ, ಅಪೌಷ್ಟಿಕತೆಯ ಪ್ರಮಾಣ ಕಡಿಮೆಯಾಗಿಲ್ಲ. ಇದು, ಜನರು ಉತ್ತಮ ಮತ್ತು ಪೌಷ್ಠಿಕ ಆಹಾರವನ್ನು ಖರೀದಿ ಮಾಡುವ ಪ್ರಮಾಣ ಮಾಡಿಕೆಯಾಗಿದೆ ಎಂಬುದನ್ನು ಸೂಚಿಸುತ್ತದೆ.
ರಕ್ತಹೀನತೆ ಮತ್ತು ಅಪೌಷ್ಟಿಕತೆ ಹಾಗೂ ಹಸಿವಿನ ಸೂಚ್ಯಂಕದಲ್ಲಿ ಭಾರತವು ವಿಶ್ವದ 125 ರಾಷ್ಟ್ರಗಳ ಪೈಕಿ 111ನೇ ಸ್ಥಾನ ಪಡೆದುಕೊಂಡಿದೆ ಎಂದು ಇತ್ತೀಚೆಗೆ ಪ್ರಕಟವಾದ ಜಾಗತಿಕ ಹಸಿವು ಸೂಚ್ಯಂಕದ (ಜಿಎಚ್‌ಐ) ವರದಿ ಹೇಳಿದೆ. ಅಲ್ಲದೆ, ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ (ಎನ್‌ಎಫ್‌ಎಚ್‌ಎಸ್)–5 ವರದಿಯ ಪ್ರಕಾರ, 0-5 ವರ್ಷ ವಯಸ್ಸಿನ ಸುಮಾರು 17% ಮಕ್ಕಳು ಕಡಿಮೆ ತೂಕವನ್ನು ಹೊಂದಿದ್ದಾರೆ. ಅಲ್ಲದೆ, ಅದೇ ವಯಸ್ಸಿನ ಮಕ್ಕಳಲ್ಲಿ 36%ರಷ್ಟು ಮಕ್ಕಳ ಬೆಳವಣಿಗೆಯು ಕುಂಠಿತವಾಗಿದೆ ಎಂದು ಹೇಳಿದೆ. ಜೊತೆಗೆ, 15ರಿಂದ 49 ವರ್ಷದೊಳಗಿನ 62% ಗರ್ಭಿಣಿಯರು ರಕ್ತಹೀನತೆಯಿಂದ ಬಳಲುತ್ತಿದ್ದಾರೆ.ಇದು, ಗರ್ಭಿಣಿಯರು ಮತ್ತು ಮಕ್ಕಳಿಗೆ ಉತ್ತಮ ಪೌಷ್ಟಿಕಾಂಶವುಳ್ಳ ಆಹಾರವನ್ನು ಒದಗಿಸುವಲ್ಲಿ ಕುಟುಂಬಗಳು ವಿಫಲವಾಗುತ್ತಿವೆ ಎಂಬುದನ್ನು ಸೂಚಿಸುತ್ತದೆ.
ಅಂದಮೇಲೆ, ಬೆಲೆ ಏರಿಕೆಯ ಸಂಕಷ್ಟವನ್ನು ಎದುರಿಸುತ್ತಿರುವ ಭಾರತದಲ್ಲಿ ಜನರ ಇತರ ಖರ್ಚುಗಳು ಹೆಚ್ಚುತ್ತಿರುವ ಪರಿಣಾಮ, ಆಹಾರಕ್ಕಾಗಿ ವೆಚ್ಚವು ಕಡಿಮೆಯಾಗಿದೆಯೇ ಹೊರತು, ಜನರಿಗೆ ಉತ್ತಮ ಆಹಾರ ದೊರೆಯುತ್ತಿದೆ ಅಥವಾ ದುಡಿಮೆ ಹೆಚ್ಚುತ್ತಿದೆ ಎಂದರ್ಥವಲ್ಲ ಎಂಬುದು ಖಚಿತ.