ಹುಬ್ಬಳ್ಳಿ ಧಾರವಾಡ ನಗರ ವ್ಯಾಪ್ತಿಯಲ್ಲಿ ಮುಂಬರುವ ಗಣೇಶ ಚತುರ್ಥಿ ಮತ್ತು ಮೀಲಾದುನ್ನಬಿ ಹಬ್ಬದ ಹಿನ್ನೆಲೆಯಲ್ಲಿ ನಗರದಲ್ಲಿ ಸಾರ್ವಜನಿಕರ ಶಾಂತಿ, ಸುರಕ್ಷತೆ ಮತ್ತು ಭದ್ರತೆ ಸೇರಿದಂತೆ ಕಾನೂನು ವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಕಮಿಷನರೇಟ್ ವ್ಯಾಪ್ತಿಯ ಎಲ್ಲ ಪೊಲೀಸ್ ಠಾಣೆಗಳಲ್ಲಿ ರೌಡಿಶೀಟರ್‌ಗಳ ಪರೇಡ್ ನಡೆಯಿತು.
ಪೊಲೀಸ್ ಆಯುಕ್ತ ಎನ್ ಶಶಿಕುಮಾರ್, ಎಲ್ಲ ಪೊಲಿಸ್ ಠಾಣೆಗಳ ರೌಡಿಶೀಟರ್‌ಗಳ ಪರೇಡ್ ನಡೆಸಿ ಮುಂಬರುವ ಗಣೇಶ ಚತುರ್ಥಿ ಹಾಗೂ ಮೀಲಾದುನ್ನಬಿ ಹಬ್ಬದಲ್ಲಿ ಶಾಂತಿ ಸುರಕ್ಷತೆ ಉಂಟು ಮಾಡುವ ಉದ್ದೇಶದಿಂದ ಶಾಂತಿ ಕದಡದಂತೆ ರೌಡಿಶೀಟರ್‌ಗಳಿಗೆ ಖಡಕ್ ಎಚ್ಚರಿಕೆ ನೀಡಿದರು.

ಈ ಪರೇಡ್‌ನಲ್ಲಿ ಎಲ್ಲಾ ಪೊಲೀಸ್ ಠಾಣೆಗಳಲ್ಲಿ ಒಟ್ಟು 862 ಜನ ರೌಡಿಶೀಟರ್ ಹಾಜರಾಗಿದ್ದರು ಮತ್ತು ಒಟ್ಟು 8 ರೌಡಿಶೀಟರ್ ಗಳನ್ನು ಈಗಾಗಲೇ ಗಡಿಪಾರು ಮಾಡಲಾಗಿದೆ. 295 ರೌಡಿಶೀಟರ್‌ಗಳ ವಿರುದ್ಧ ಮುಚ್ಚಳಿಕೆ ಪತ್ರ ಬರೆಸಿಕೊಂಡು ಕಾನೂನು ಕ್ರಮ ಕೈಗೊಳ್ಳಲಾಗಿದೆ.
15 ಜನ ರೌಡಿಶೀಟರ್‌ಗಳ ವಾರೆಂಟ್ ಇರುತ್ತವೆ. ಈಗಾಗಲೇ ಎಲ್ಲ ರೌಡಿಶೀಟರ್‌ಗಳ ಮೇಲೆ ನಿಗಾ ವಹಿಸಿದ್ದು ಸಾರ್ವಜನಿಕರ ಶಾಂತಿ ನೆಮ್ಮದಿ ಮತ್ತು ಕಾನೂನು ಸುವ್ಯವಸ್ಥೆ ಹಾಳು ಮಾಡುವಂತಹ ಯಾವುದೇ ಕಾನೂನುಬಾಹಿರ ಚಟುವಟಿಕೆಗಳಲ್ಲಿ ತೊಡಗದಂತೆ ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದರು.
ಇದನ್ನು ಓದಿದ್ದೀರಾ? ಹಾಸನ | ಲಂಚ ಪಡೆದಿದ್ದ ಅಪರಾಧ ಸಾಬೀತು: ಸರ್ಕಾರಿ ಕೆಲಸದಿಂದ ಉಪ ನೋಂದಣಾಧಿಕಾರಿ ವಜಾ
ಒಂದು ವೇಳೆ ಅಂತಹ ಚಟುವಟಿಕೆಗಳಲ್ಲಿ ತೊಡಗಿದ್ದರ ಬಗ್ಗೆ ಕಂಡುಬಂದಲ್ಲಿ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆ ನೀಡಿದರು. ರೌಡಿಸಂ ಚಟುವಟಿಕೆಗಳನ್ನು ಬಿಟ್ಟು ಮುಖ್ಯವಾಹಿನಿಗೆ ಬಂದು ಸುಧಾರಣೆ ಆಗುತ್ತೇವೆಂದು ಮನವಿ ನೀಡಿದವರ ಬಗ್ಗೆ ಪರಿಶೀಲನೆ ಮಾಡುತ್ತೇವೆ ಎಂದು ಪೊಲೀಸ್ ಕಮಿಷನರ್ ಎನ್ ಶಶಿಕುಮಾರ್ ತಿಳಿಸಿದರು.
