ಲೈಂಗಿಕ ಕಿರುಕುಳ ನೀಡಿದ ಪ್ರಕರಣದಲ್ಲಿ ಆರೋಪಿಯಾಗಿರುವ ಮಲಯಾಳಂ ಚಲನಚಿತ್ರ ನಿರ್ಮಾಪಕ ಮತ್ತು ಕೇರಳ ರಾಜ್ಯ ಚಲನಚಿತ್ರ ಅಕಾಡೆಮಿಯ ಮಾಜಿ ಅಧ್ಯಕ್ಷ ರಂಜಿತ್ ನಿರೀಕ್ಷಣಾ ಜಾಮೀನು ಕೋರಿ ಕೇರಳ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದಾರೆ.
ರಂಜಿತ್ ವಿರುದ್ಧ ಬಂಗಾಳಿ ನಟಿಯೊಬ್ಬರು ಲೈಂಗಿಕ ದೌರ್ಜನ್ಯದ ಆರೋಪ ಮಾಡಿದ್ದಾರೆ. ಪೊಲೀಸರಿಗೆ ದೂರು ನೀಡಿದ್ದಾರೆ. ದೂರು ದಾಖಲಾದ ಬೆನ್ನಲ್ಲೇ ರಂಜಿತ್ ನಿರೀಕ್ಷಣಾ ಜಾಮೀನಿಗಾಗಿ ಹೈಕೋರ್ಟ್ ಮೊರೆಹೋಗಿದ್ದಾರೆ.
ನಟಿ ನೀಡಿರುವ ದೂರಿನ ಆಧಾರದ ಮೇಲೆ ಎರ್ನಾಕುಲಂ ಟೌನ್ ನಾರ್ತ್ ಪೊಲೀಸರು ಐಪಿಸಿಯ ಸೆಕ್ಷನ್ 354 ರ ಅಡಿಯಲ್ಲಿ ರಂಜಿತ್ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ.
ಪ್ರಾಸಿಕ್ಯೂಷನ್ ಪ್ರಕಾರ, ಆರೋಪಿ ರಂಜಿತ್ 2009ರಲ್ಲಿ ಸಿನಿಮಾ ಬಗ್ಗೆ ಚರ್ಚಿಸಲು ನಟಿಯನ್ನು ತನ್ನ ಫ್ಲಾಟ್‌ಗೆ ಕರೆಸಿದ್ದರು. ಈ ವೇಳೆ, ನಟಿಯೊಂದಿಗೆ ರಂಜಿತ್ ಅನುಚಿತವಾಗಿ ವರ್ತಿಸಿದ್ದಾರೆ. ಅಸಭ್ಯವಾಗಿ ಆಕೆಯ ಕೈಯನ್ನು ಹಿಡಿದಿದ್ದರು. ಲೈಂಗಿಕ ಉದ್ದೇಶದಿಂದ ಆಕೆಯ ದೇಹದ ಇತರ ಭಾಗಗಳನ್ನು ಸ್ಪರ್ಶಿಸಲು ಪ್ರಯತ್ನಿಸಿದ್ದರು.
ತಮ್ಮ ವಿರುದ್ಧದ ಆರೋಪವನ್ನು ಅಲ್ಲಗಳೆದಿರುವ ರಂಜಿತ್ ಹೈಕೋರ್ಟ್ ಮೊರೆಹೋಗಿದ್ದಾರೆ. ದೌರ್ಜನ್ಯ ನಡೆದಿದೆ ಎನ್ನಲಾದ 15 ವರ್ಷಗಳ ಬಳಿಕ ನಟಿ ದೂರು ದಾಖಲಿಸಿರುವ ಬಗ್ಗೆ ಅವರು ಪಶ್ನಿಸಿದ್ದಾರೆ.
ಕೇರಳ ರಾಜ್ಯ ಚಲನಚಿತ್ರ ಅಕಾಡೆಮಿಯ ಅಧ್ಯಕ್ಷ ಸ್ಥಾನದಿಂದ ತನ್ನನ್ನು ತೆಗೆದುಹಾಕಬೇಕೆಂದು ಕೆಲವು ಪಟ್ಟಭದ್ರ ಹಿತಾಸಕ್ತಿಗಳು ಬಯಸಿವೆ. ಅಲ್ಲದೆ, ಆ ಚಿತ್ರದಲ್ಲಿ ನಟಿಸಲು ಆಯ್ಕೆಯಾಗದ ನಿರಾಶೆಯಿಂದ ನಟಿ ದೂರು ನೀಡಿದ್ದಾರೆ ಎಂದು ರಂಜಿತ್ ಪ್ರತ್ಯಾರೋಪ ಮಾಡಿದ್ದಾರೆ.
ಸಿನಿಮಾ ಬಗ್ಗೆ ಚರ್ಚಿಸುವ ವೇಳೆ ನಟಿಯೊಂದಿಗೆ ಸಹ ನಿರ್ದೇಶಕರಾದ ಶಂಕರ್ ರಾಮಕೃಷ್ಣನ್ ಮತ್ತು ಗಿರೀಶ್ ದಾಮೋದರನ್ ಹಾಗೂ ನಿರ್ಮಾಪಕ ಸುಬೈರ್ ಮತ್ತು ಕಚೇರಿ ಸಹಾಯಕ ಬಿಜು ಸೇರಿದಂತೆ ಇತರರು ಫ್ಲಾಟ್‌ನಲ್ಲಿದ್ದರು. ಸಿನಿಮಾ ಬಗ್ಗೆ ಶಂಕರ್ ರಾಮಕೃಷ್ಣನ್ ಅವರೊಂದಿಗೂ ಚರ್ಚೆ ನಡೆದಿತ್ತು. ಆದರೆ, ದೂರಿನಲ್ಲಿ ಅವರ ಉಪಸ್ಥಿತಿಯನ್ನು ಕೈಬಿಟ್ಟಿರುವುದು ದುರುದ್ದೇಶಪೂರಿತ ಉದ್ದೇಶಗಳನ್ನು ಸೂಚಿಸುತ್ತದೆ ಎಂದು ರಂಜಿತ್ ಆರೋಪಿಸಿದ್ದಾರೆ.
ಈ ವರದಿ ಓದಿದ್ದೀರಾ?: ಮಲಯಾಳಂ ಚಿತ್ರರಂಗದಲ್ಲಿ ಮತ್ತೆ ಸಂಚಲನ; ನಟ ಜಯಸೂರ್ಯ ವಿರುದ್ಧ ನಟಿ ಸೋನಿಯಾ #MeToo ಆರೋಪ
ಸದ್ಯ, ರಂಜಿತ್ ವಿರುದ್ಧ ಐಪಿಸಿ ಸೆಕ್ಷನ್ 354ರ ಅಡಿಯಲ್ಲಿ ಎಫ್‌ಐಆರ್ ದಾಖಲಾಗಿದೆ. 354ನೇ ಸೆಕ್ಷನ್ ಅಡಿಯಲ್ಲಿ ಅಪರಾಧ ಸಾಬೀತಾದರೆ, ಎರಡು ವರ್ಷಗಳವರೆಗೆ ಜೈಲು ಶಿಕ್ಷೆ ಅಥವಾ ದಂಡ ಅಥವಾ ಎರಡನ್ನೂ ವಿಧಿಸಬಹುದು.
ನಿರೀಕ್ಷಣಾ ಜಾಮೀನಿಗಾಗಿ ಅರ್ಜಿ ಸಲ್ಲಿಸಿರುವ ರಂಜಿತ್, ತಮ್ಮ ಆರೋಗ್ಯ ಸಮಸ್ಯೆಗಳ ಬಗ್ಗೆ ಉಲ್ಲೇಖಿಸಿದ್ದಾರೆ. ಅವರು ಹಲವಾರು ಕಾಯಿಲೆಗಳಿಂದ ಬಳಲುತ್ತಿದ್ದು, ಇತ್ತೀಚೆಗೆ ಯಕೃತ್ತಿನ ಕಸಿ ಶಸ್ತ್ರಚಿಕಿತ್ಸೆಗೂ ಒಳಗಾಗಿರುವುದಾಗಿ ಹೇಳಿಕೊಂಡಿದ್ದಾರೆ. ತಮಗೆ ಸರಿಯಾದ ವೈದ್ಯಕೀಯ ಆರೈಕೆಯ ಅಗತ್ಯವಿದ್ದು, ಜಾಮೀನು ನೀಡಬೇಕೆಂದು ಕೋರಿದ್ದಾರೆ. ಆಪಾದಿತ ಘಟನೆಯು 15 ವರ್ಷಗಳ ಹಿಂದೆ ನಡೆದಿದ್ದು, ಕಸ್ಟಡಿ ವಿಚಾರಣೆ ಅನಗತ್ಯವಾಗಿದೆ ಎಂದು ಅರ್ಜಿಯಲ್ಲಿ ವಾದಿಸಿದ್ದಾರೆ.