ಮಲಯಾಳಂ ನಟ ಜಯಸೂರ್ಯ ವಿರುದ್ಧ ಲೈಂಗಿಕ ಕಿರುಕುಳ ಪ್ರಕರಣ ದಾಖಲಿಸಿರುವ ನಟಿ ಸೋನಿಯಾ ಮಲ್ಹಾರ್, ‘ನನ್ನ ಹೇಳಿಕೆಗಳು ಸತ್ಯ. ನನಗೆ ಜಯಸೂರ್ಯ ಲೈಂಗಿಕ ಕಿರುಕುಳ ನೀಡಿದ್ದಾರೆ’ ಎಂದು ಆರೋಪಿಸಿದ್ದಾರೆ. ಯಾವುದೇ ಬೆದರಿಕೆ ಹಾಕಿದರೂ ಪ್ರಕರಣದಿಂದ ಹಿಂದೆ ಸರಿಯುವುದಿಲ್ಲ ಎಂದು ಹೇಳಿದ್ದಾರೆ.
“ಜಯಸೂರ್ಯ ಅವರು ಆರೋಪಗಳನ್ನು ಸುಳ್ಳು ಎಂದು ಹೇಳುತ್ತಿದ್ದಾರೆ. ನನ್ನ ಆರೋಪಗಳು-ಹೇಳಿಕೆಗಳು ಸುಳ್ಳಲ್ಲ. ಸತ್ಯ ಮತ್ತು ಸ್ಪಷ್ಟವಾಗಿವೆ. ಇದು ನನ್ನ ಜೀವನದಲ್ಲಿ ನಾನು ದಾಖಲಿಸಿದ 1ನೇ ಎಫ್‌ಐಆರ್” ಎಂದು ಸೋನಿಯಾ ಹೇಳಿದ್ದಾರೆ.
ನ್ಯಾಯಮೂರ್ತಿ ಹೇಮಾ ಸಮಿತಿಯ ವರದಿಯು ಹಲವಾರು ವರ್ಷಗಳಿಂದ ಮಲಯಾಳಂ ಚಿತ್ರರಂಗದಲ್ಲಿ ನಟಿಯರ ಮೇಲೆ ನಡೆಯುತ್ತಿರುವ ಲೈಂಗಿಕ ದೌರ್ಜನ್ಯಗಳ ಬಗ್ಗೆ ವಿವರಿಸಿದೆ. ವರದಿ ಬಹಿರಂಗಗೊಂಡ ಬಳಿಕ, ಹಲವಾರು ನಟಿಯರು ತಮ್ಮ ಮೇಲಾದ ದೌರ್ಜನ್ಯ-ಕಿರುಕುಳಗಳ ಬಗ್ಗೆ ಮಾತನಾಡುತ್ತಿದ್ದಾರೆ. ಅವರಲ್ಲಿ ನಟಿ ಸೋನಿಯಾ ಕೂಡ ಒಬ್ಬರು.
ಈ ಹಿಂದೆ ಬೇರೊಂದು #MeToo ಪ್ರಕರಣದಲ್ಲಿ ಆರೋಪಿಯಾಗಿದ್ದ ಜಯಸೂರ್ಯ, ಇದೀಗ ಮತ್ತೊಂದು ಪ್ರಕರಣದಲ್ಲಿಯೂ ಆರೋಪಿಯಾಗಿದ್ದಾರೆ. ಆದರೆ, ತಮ್ಮ ವಿರುದ್ಧದ ಆರೋಪ ಸುಳ್ಳು. ತನ್ನ ವಿರುದ್ಧ ಆರೋಪ ಮಾಡುತ್ತಿರುವವರ ವಿರುದ್ಧ ಕಾನೂನು ಕ್ರಮ ಜರುಗಿಸುತ್ತೇನೆಂದು ಬೆದರಿಕೆ ಹಾಕಿದ್ದಾರೆ.
“ಸುಳ್ಳು ಯಾವಾಗಲೂ ಸತ್ಯಕ್ಕಿಂತ ವೇಗವಾಗಿ ಹರಡುತ್ತದೆ. ಆದರೆ, ಕಡೆಗೆ ಸತ್ಯ ಮೇಲುಗೈ ಸಾಧಿಸುತ್ತದೆ. ನಾನು ನಿರಪರಾಧಿ ಎಂದು ಸಾಬೀತುಪಡಿಸಲು ಎಲ್ಲ ಕಾನೂನು ಪ್ರಕ್ರಿಯೆಗಳನ್ನು ಮುಂದುವರಿಸುತ್ತೇನೆ” ಎಂದು ಜಯಸೂರ್ಯ ಹೇಳಿದ್ದಾರೆ.
ಹೇಮಾ ಸಮಿತಿ ನೀಡಿದ್ದ 235 ಪುಟಗಳ ಸಮಗ್ರ ವರದಿಯಲ್ಲಿ ಮಲಯಾಳಂ ಚಿತ್ರರಂಗದ ಸುಮಾರು 10-15 ಪ್ರಭಾವಿ ಪುರುಷ ನಿರ್ಮಾಪಕರು, ನಿರ್ದೇಶಕರು ಮತ್ತು ನಟರು ಲೈಂಗಿಕ ದೌರ್ಜನ್ಯ ಎಸಗಿದ್ದಾರೆಂದು ಹೇಳಲಾಗಿತ್ತು. ಇದು, ದೇಶಾದ್ಯಂತ ಮೀಟೂ ಅಭಿಮಾನದ ಜ್ವಾಲೆಯನ್ನು ಎಬ್ಬಿಸಿತ್ತು. ಮಲಯಾಳಂ ಚಿತ್ರರಂಗದಲ್ಲಿ ಸಂಚಲನ ಸೃಷ್ಠಿಯಾಗಿತ್ತು. ಭಾರೀ ಆಕ್ರೋಶ ಭುಗಿಲೆದ್ದಿದ್ದರಿಂದ ಖ್ಯಾತ ನಟ, ಮಲಯಾಳಂ ಚಲನಚಿತ್ರ ಕಲಾವಿದರ ಸಂಘದ ಅಧ್ಯಕ್ಷ ಮೋಹನ್ ಲಾಲ್ ಅವರು ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದರು.