ಬಹುಸಂಖ್ಯಾತ ಕೋಮುವಾದ ದೇಶದ ಆಡಳಿತದಲ್ಲಿ, ಕಾರ್ಯಾಂಗದಲ್ಲಿ, ನ್ಯಾಯಾಂಗದಲ್ಲಿ, ಶಿಕ್ಷಣದಲ್ಲಿ, ಮಾಧ್ಯಮ ಕ್ಷೇತ್ರಗಳಲ್ಲಿ ಭದ್ರವಾಗಿ ನೆಲೆಯೂರಿರುವಾಗ; ಯಾವುದೇ ಅಧಿಕಾರ ಬಲವೂ ಇಲ್ಲದ, ಮಾಧ್ಯಮಗಳೂ ಇಲ್ಲದ ಮುಸ್ಲಿಮರ ಪರ ನಿಲ್ಲಬೇಕಾದವರು ಯಾರು? ಆಳುವ ಸರ್ಕಾರ ಅಮಾನವೀಯಗೊಂಡಷ್ಟು ಮಾನವಂತರು ಮುಸ್ಲಿಮರನ್ನು ಆಪ್ತತೆಯಿಂದ ಅಪ್ಪಿಕೊಳ್ಳಬೇಕಾಗಿದೆ. ಬಹುತ್ವ ಭಾರತವನ್ನು ಮೂಲಭೂತವಾದಿಗಳಿಂದ ಉಳಿಸಿಕೊಳ್ಳಬೇಕಾಗಿದೆ.
ಆಗಸ್ಟ್ 23ರಂದು ಫರೀದಾಬಾದ್ ನಿವಾಸಿ, ರಾತ್ರಿ 19 ವರ್ಷದ ಆರ್ಯನ್ ಮಿಶ್ರಾ ತನ್ನ ಸ್ನೇಹಿತರಾದ ಹರ್ಷಿತ್ ಮತ್ತು ಶಾಂಕಿ ಜೊತೆ ತಿಂಡಿ ತಿನ್ನಲೆಂದು ಕಾರಿನಲ್ಲಿ ಹೋಗಿದ್ದರು. ಈ ವೇಳೆ ಗೋರಕ್ಷಕರೆಂದು ಹೇಳಿಕೊಳ್ಳುವ ದುಷ್ಕರ್ಮಿಗಳ ಗುಂಪೊಂದು ಈ ಹುಡುಗರ ಕಾರನ್ನು 30 ಕಿಲೋಮೀಟರ್‌ಗಳವರೆಗೆ ಬೆನ್ನಟ್ಟಿದೆ. ಬೆನ್ನಟ್ಟಿದ ಭಯಕ್ಕೆ ಹುಡುಗರು ಕಾರಿನ ವೇಗ ಹೆಚ್ಚಿಸಿದ್ದಾರೆ. ಈ ದುಷ್ಕರ್ಮಿಗಳು ಅವರು ಗೋ ಕಳ್ಳ ಸಾಗಣೆದಾರರೆಂದು ಭಾವಿಸಿ ಗುಂಡು ಹಾರಿಸಿದ್ದಾರೆ. ಆರ್ಯನ್‌ಗೆ ಗುಂಡು ತಾಗಿದ ಬಳಿಕ ಹರ್ಷಿತ್ ಕಾರು ನಿಲ್ಲಿಸಿದ್ದು, ದುಷ್ಕರ್ಮಿಗಳು ಕಾರಿನೆಡೆಗೆ ಧಾವಿಸಿ ಆರ್ಯನ್ ಎದೆಗೆ ನೇರವಾಗಿ ಗುಂಡು ಹಾರಿಸಿ ಹತ್ಯೆ ಮಾಡಿದ್ದಾರೆ.
ಗುಂಡಿಕ್ಕಿ ಹತ್ಯೆ ಮಾಡಿದ ದುಷ್ಕರ್ಮಿಗಳು- ಅನಿಲ್ ಕೌಶಿಕ್, ವರುಣ್, ಕೃಷ್ಣ, ಆದೇಶ್ ಮತ್ತು ಸೌರವ್- ಗೋ ರಕ್ಷಕರಂತೆ. ಇವರಿಗೆ ಗನ್ ಲೈಸೆನ್ಸ್ ಕೊಟ್ಟವರು ಯಾರು? ಗೋ ರಕ್ಷಕರಾದರೆ ಜೀವ ತೆಗೆಯುವ ಹಕ್ಕಿದೆಯೇ?
ಆ. 28ರಂದು ಜಲಗಾಂವ್ ಜಿಲ್ಲೆಯ ನಿವಾಸಿ, 72 ವರ್ಷದ ವೃದ್ಧ ಹಾಜಿ ಅಶ್ರಫ್ ಮುನ್ಯಾರ್, ತಮ್ಮ ಮಗಳ ಮನೆಗೆ ತೆರಳಲು ಮಹಾರಾಷ್ಟ್ರದ ನಾಸಿಕ್ ಜಿಲ್ಲೆಯ ಇಗತ್‌ಪುರಿ ಬಳಿ ಎಕ್ಸ್‌ಪ್ರೆಸ್ ರೈಲಿನಲ್ಲಿ ಪ್ರಯಾಣಿಸುತ್ತಿದ್ದರು. ಅವರು ತಮ್ಮ ಬ್ಯಾಗ್‌ನಲ್ಲಿ ಮಾಂಸವನ್ನು ತೆಗೆದುಕೊಂಡು ಹೋಗುತ್ತಿದ್ದರು. ಆದರೆ, ಅವರು ಮುಸ್ಲಿಂ ಸಮುದಾಯಕ್ಕೆ ಸೇರಿದವರಾದ್ದರಿಂದ ಅವರು ದನದ ಮಾಂಸ ಸಾಗಿಸುತ್ತಿದ್ದಾರೆ ಎಂದು ಭಾವಿಸಿದ ಸಹ ಪ್ರಯಾಣಿಕರೆಂಬ ದುಷ್ಕರ್ಮಿಗಳು ಚಲಿಸುತ್ತಿದ್ದ ರೈಲಿನಲ್ಲಿ, ಸಾರ್ವಜನಿಕರ ಎದುರೇ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಲ್ಲದೆ ಮನಬಂದಂತೆ ಹಲ್ಲೆ ನಡೆಸಿದ್ದಾರೆ. ಸಂತ್ರಸ್ತ ವೃದ್ಧ, ‘ಇದು ಎಮ್ಮೆ ಮಾಂಸವೇ ಹೊರತು ದನದ ಮಾಂಸವಲ್ಲ’ ಎಂದು ಪರಿಪರಿಯಾಗಿ ಬೇಡಿಕೊಂಡರೂ, ದಾಳಿಕೋರರು ವೃದ್ಧನ ಮಾತನ್ನು ಕೇಳದೆ ಹಲ್ಲೆ ನಡೆಸಿದ್ದಾರೆ. 2015ರಿಂದ ದನದ ಮಾಂಸಕ್ಕೆ ಮಹಾರಾಷ್ಟ್ರದಲ್ಲಿ ನಿಷೇಧವಿದೆ, ಎಮ್ಮೆ ಮಾಂಸಕ್ಕಿಲ್ಲ.
ಮುಸ್ಲಿಂ ವೃದ್ಧರಿಗೆ ಅವಮಾನಿಸಿ ಹಲ್ಲೆ ಮಾಡಿದ ಮೂವರು ಹಿಂದೂ ಯುವಕರಾದ ಆಕಾಶ್ ಅಹ್ವಾದ್, ನಿಲೇಶ್ ಅಹಿರೆ ಮತ್ತು ಜಯೇಶ್ ಮೋಹಿತೆ ಎಂದು ರೈಲ್ವೆ ಪೊಲೀಸರು ಪತ್ತೆ ಹಚ್ಚಿದ್ದಾರೆ. ಆದರೆ ಜಾಮೀನು ಪಡೆಯಬಹುದಾದ ಸೆಕ್ಷನ್‌ಗಳ ಅಡಿಯಲ್ಲಿ ಮೊಕದ್ದಮೆ ದಾಖಲಿಸಿ, ಅಂದೇ ಜಾಮೀನಿನ ಮೇಲೆ ಬಿಡುಗಡೆ ಮಾಡಿದ್ದಾರೆ. ಹಾಗೆಯೇ ವೃದ್ಧ ಮುನ್ಯಾರ್ ಅವರಿಂದ ಖಾಲಿ ಹಾಳೆಗೆ ಸಹಿ ಪಡೆದು, ಹೇಳಿಕೆ ದಾಖಲಿಸಿಕೊಂಡು ಮನೆಗೆ ಕಳುಹಿಸಿದ್ದಾರೆ.
ಹಿಂದೂ ಯುವಕರು ವೃದ್ಧ ಮುಸ್ಲಿಂ ವ್ಯಕ್ತಿಯ ಮೇಲೆ ಮಾಡಿದ ಹಲ್ಲೆಯನ್ನು ಮೊಬೈಲ್ ಫೋನ್‌ನಲ್ಲಿ ರೆಕಾರ್ಡ್ ಮಾಡಿ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದಾರೆ. ಅಷ್ಟೇ ಅಲ್ಲ, ಪೊಲೀಸರಿಗೆ ದೂರು ನೀಡಿದರೆ, ‘ನಿನ್ನನ್ನು ಕೊಲ್ಲುವುದಾಗಿ ಮತ್ತು ನಿನ್ನ ಕುಟುಂಬದ ಮಹಿಳೆಯರ ಮೇಲೆ ಅತ್ಯಾಚಾರ ಮಾಡುವುದಾಗಿ’ ಬೆದರಿಕೆ ಹಾಕಿದ್ದಾರೆ.
ಹಲ್ಲೆಯ ವೀಡಿಯೋಗಳು ಹೊರಬಂದ ನಂತರ, ವೈರಲ್ ಆದ ಬಳಿಕ, ರಾಜಕೀಯ ಮುಖಂಡರು ಕೃತ್ಯವನ್ನು ಖಂಡಿಸಿದ ಮೇಲೆ ರೈಲ್ವೆ ಪೊಲೀಸರು, ಆ ಮೂವರು ದುಷ್ಕರ್ಮಿಗಳ ಮೇಲೆ, ಜಾಮೀನುರಹಿತ ಮೊಕದ್ದಮೆ ದಾಖಲಿಸಿದ್ದಾರೆ.
ಮೇಲಿನ ಎರಡು ಪ್ರಕರಣಗಳು ಒಂದು ವಾರದ ಅಂತರದಲ್ಲಿ ಘಟಿಸಿವೆ. ಎರಡೂ ಪ್ರಕರಣಗಳು ಬಿಜೆಪಿ ಆಡಳಿತವಿರುವ ಹರಿಯಾಣ ಮತ್ತು ಮಹಾರಾಷ್ಟ್ರ ರಾಜ್ಯಗಳಲ್ಲಿ ನಡೆದಿವೆ. ಬಿಜೆಪಿ ನಾಯಕರಿಂದ ಈ ಅನಾಗರಿಕ ವರ್ತನೆ ಕುರಿತು ವಿಷಾದ ವ್ಯಕ್ತಪಡಿಸದಿರುವುದು, ಅವರ ಮುಸ್ಲಿಂ ವಿರೋಧಿ ಮಾನಸಿಕತೆಯನ್ನು ಹೊರಹಾಕುತ್ತಿದೆ. ಆ ದುಷ್ಕರ್ಮಿಗಳಿಗೆ ಕುಮ್ಮಕ್ಕು ಕೊಟ್ಟಂತಾಗಿದೆ. ಅದರಲ್ಲೂ ಮೂರನೇ ಬಾರಿಗೆ ಮೋದಿಯವರು ಪ್ರಧಾನಿಯಾದ ನಂತರ, ಗೋಮಾಂಸದ ನೆಪದಲ್ಲಿ ಮುಸ್ಲಿಮರನ್ನು ಟಾರ್ಗೆಟ್ ಮಾಡುವುದು, ಸಾರ್ವಜನಿಕವಾಗಿ ಬಡಿಯುವುದು, ಗುಂಪು ಹಲ್ಲೆ ಮಾಡುವುದು, ಕೊಂದು ಹಾಕುವುದು, ಬುಲ್ಡೋಜರ್ ಹರಿಸುವುದು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಅಂತಹವರ ವಿರುದ್ಧ ಕ್ರಮ ಕೈಗೊಂಡ ಬಗ್ಗೆ ಸುದ್ದಿಯೇ ಇಲ್ಲ. ಇದು ಅಂತಹ ಕೊಳಕು ಮನಸ್ಥಿತಿಯ ಕೊಲೆಪಾತಕರಿಗೆ ಕುಮ್ಮಕ್ಕು ಕೊಟ್ಟಂತಾಗಿದೆ.
ಇದನ್ನು ಓದಿದ್ದೀರಾ?: ಈ ದಿನ ಸಂಪಾದಕೀಯ | ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಭಾರತದ ಫ್ಲಾಪ್ ಶೋ; ಪರಾಮರ್ಶೆಗೆ ಇದು ಸೂಕ್ತ ಸಮಯ
ಕಳೆದ ವರ್ಷ ಜುಲೈ 31ರಂದು ಜೈಪುರ್-ಮುಂಬೈ ಸೆಂಟ್ರಲ್ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಮುಂಬೈನ ಬೋರಿವಲಿ ಬಳಿ ಆರೋಪಿ ಚೇತನ್ ಸಿಂಗ್ ತನ್ನ ಹಿರಿಯ ಸಹಾಯಕ ಸಬ್ ಇನ್ಸ್‌ಪೆಕ್ಟರ್ ಟಿಕಾರಾಂ ಮೀನಾ ಮತ್ತು ಮೂವರು ಪ್ರಯಾಣಿಕರಾದ ಅಬ್ದುಲ್ ಖಾದರ್ ಮೊಹಮ್ಮದ್ ಹುಸೇನ್ ಭಾನಪುರವಾಲಾ, ಸೈಯದ್ ಸೈಫುದ್ದೀನ್ ಮತ್ತು ಅಸ್ಗರ್ ಅಬ್ಬಾಸ್ ಶೇಖ್ ಅವರನ್ನು ಗುಂಡಿಕ್ಕಿ ಕೊಂದಿದ್ದ.
ಚೇತನ್ ಸಿಂಗ್ ರೈಲಿನಲ್ಲಿ ಬುರ್ಖಾ ಧರಿಸಿದ್ದ ಪ್ರಯಾಣಿಕರಿಗೆ ಬಂದೂಕು ತೋರಿಸಿ ‘ಜೈ ಮಾತಾ ದಿ’ ಎಂದು ಹೇಳುವಂತೆ ಬೆದರಿಕೆ ಹಾಕುತ್ತಿದ್ದ. ಅಲ್ಲದೆ, 2008ರ ಮುಂಬೈನಲ್ಲಿ ನಡೆದಿದ್ದ ದಾಳಿಯನ್ನು ಉಲ್ಲೇಖಿಸಿ, ತಾನು ಆ ಘಟನೆಯ ಸೇಡು ತೀರಿಸಿಕೊಳ್ಳುತ್ತಿದ್ದೇನೆಂದು ಮತ್ತೊಬ್ಬ ಪ್ರಯಾಣಿಕನಿಗೆ ಹೇಳಿದ್ದ. ನಾಲ್ಕು ಜನರನ್ನು ಕೊಂದ ನಂತರ, ಆತ ಸಂತ್ರಸ್ತರೊಬ್ಬರ ಮೃತದೇಹ ಬಳಿ ಹೋಗಿ ದ್ವೇಷ ಭಾಷಣ ಕೂಡ ಮಾಡಿದ್ದ.
ಇದೆಲ್ಲವೂ ವಿಡಿಯೋದಲ್ಲಿ ದಾಖಲಾಗಿದೆ. ಆದರೆ ಕೊಲೆಗಡುಕನಿಗೆ ಇಲ್ಲಿಯವರೆಗೆ ಶಿಕ್ಷೆಯಾಗಲಿಲ್ಲ. ಇಂತಹವರಿಗೆ ಕುಮ್ಮಕ್ಕು ಕೊಡುವಂತೆ ಮೋದಿಯವರೇ ಸಾರ್ವಜನಿಕ ಭಾಷಣವೊಂದರಲ್ಲಿ, ‘ವಿರೋಧ ಪಕ್ಷಗಳ ನಾಯಕರು ಮಾಂಸಾಹಾರ ಖಾದ್ಯ ತಯಾರಿಸುವ ವಿಡಿಯೋ ಪ್ರದರ್ಶಿಸಿ ಮುಸ್ಲಿಮರ ತುಷ್ಟೀಕರಣದಲ್ಲಿ ನಿರತರಾಗಿದ್ದಾರೆ. ತಮ್ಮ ಓಟ್ ಬ್ಯಾಂಕ್ ಖಾತ್ರಿಪಡಿಸಿಕೊಳ್ಳುತ್ತಾರೆ. ಆ ಮೂಲಕ ಹಿಂದೂಗಳ ಭಾವನೆಗೆ ಧಕ್ಕೆ ತರುತ್ತಾರೆ’ ಎಂದು ದೇಶದ ಜನತೆಯಲ್ಲಿ ದ್ವೇಷವನ್ನು ಬಿತ್ತುತ್ತಾರೆ.
ದೇಶವನ್ನಾಳುವ ಪ್ರಧಾನಿಯೇ ಹೀಗೆ ಆಹಾರದ ವಿರುದ್ಧ, ಅಲ್ಪಸಂಖ್ಯಾತರ ವಿರುದ್ಧ ಸಮರ ಸಾರಿದರೆ, ಧರ್ಮದ ಅಮಲೇರಿಸಿಕೊಂಡ, ವಿವೇಚನೆ ಕಳೆದುಕೊಂಡ ಯುವಕರು ಮುಸ್ಲಿಮರನ್ನು ದೇಶದ್ರೋಹಿಗಳಂತೆ ಕಾಣದೆ ಇನ್ನೇನು ಮಾಡುತ್ತಾರೆ? ಜೊತೆಗೆ ಸಾರ್ವಜನಿಕವಾಗಿ ಥಳಿಸಿದರೂ, ಕೊಂದರೂ ಕ್ರಮ ಕೈಗೊಳ್ಳದಿದ್ದರೆ, ಅದನ್ನು ಅವರು ಮುಂದುವರೆಸುತ್ತಾರಲ್ಲವೇ? ಇದನ್ನು ಮೇಲಿನ ಮೂರು ಪ್ರಕರಣಗಳೇ ಸಾರುತ್ತಿಲ್ಲವೇ?
ಸ್ವಾತಂತ್ರ್ಯಾನಂತರ ಪ್ರಜಾಪ್ರಭುತ್ವ ಜಾರಿಗೆ ಬಂದು ಧರ್ಮನಿರಪೇಕ್ಷವಾದ ಸಂವಿಧಾನ ರಚನೆಯಾಗಿ, ಆಹಾರದ ಹಕ್ಕು ಸಂವಿಧಾನದಿಂದ ರಕ್ಷಿಸಲ್ಪಟ್ಟಿದೆ. ಪ್ರತಿಯೊಬ್ಬರ ಆಹಾರದ ಹಕ್ಕನ್ನು ಗೌರವಿಸಲು, ರಕ್ಷಿಸಲು ಮತ್ತು ಪೂರೈಸಲು ಸರ್ಕಾರ ಬದ್ಧವಾಗಿರಬೇಕೆಂದು ಹೇಳಿದೆ. ಆದರೆ, ಆರ್‍ಎಸ್ಎಸ್ ಮತ್ತು ಬಿಜೆಪಿ ಮಾಂಸಾಹಾರವನ್ನು ಅನಧಿಕೃತ ಆಹಾರ ಪದ್ಧತಿ, ಮಾಂಸಾಹಾರ ಸೇವನೆಯೇ ಮಹಾಪಾಪ ಎಂದು ಬಿಂಬಿಸುವ ಪ್ರಯತ್ನದಲ್ಲಿ ನಿರತವಾಗಿದೆ. ಮಾಂಸ ತಿನ್ನುವ ಶೂದ್ರರು ಕೂಡ ನವಬ್ರಾಹ್ಮಣರಾಗುವ ಹಪಾಹಪಿಯಲ್ಲಿದ್ದಾರೆ. ಅದನ್ನು ಹೆಚ್ಚೆಚ್ಚು ಮಾಡಿದಂತೆಲ್ಲ, ಹಿಂದುತ್ವ ಗಟ್ಟಿಗೊಳ್ಳುತ್ತದೆ. ಮುಸ್ಲಿಂ ದ್ವೇಷವನ್ನು ಹೆಚ್ಚೆಚ್ಚು ಮಾಡಿದಂತೆಲ್ಲ ಬಿಜೆಪಿ ಅಧಿಕಾರ ಹಿಡಿಯುವುದು ಸುಲಭವಾಗುತ್ತದೆ.
ಬಹುಸಂಖ್ಯಾತ ಕೋಮುವಾದ ದೇಶದ ಆಡಳಿತದಲ್ಲಿ, ಕಾರ್ಯಾಂಗದಲ್ಲಿ, ನ್ಯಾಯಾಂಗದಲ್ಲಿ, ಶಿಕ್ಷಣದಲ್ಲಿ, ಮಾಧ್ಯಮ ಕ್ಷೇತ್ರಗಳಲ್ಲಿ ಭದ್ರವಾಗಿ ನೆಲೆಯೂರಿರುವಾಗ; ಯಾವುದೇ ಅಧಿಕಾರ ಬಲವೂ ಇಲ್ಲದ, ಮಾಧ್ಯಮಗಳೂ ಇಲ್ಲದ ಮುಸ್ಲಿಮರ ಪರ ನಿಲ್ಲಬೇಕಾದವರು ಯಾರು? ಆಳುವ ಸರ್ಕಾರ ಅಮಾನವೀಯಗೊಂಡಷ್ಟು ಮಾನವಂತರು ಮುಸ್ಲಿಮರನ್ನು ಆಪ್ತತೆಯಿಂದ ಅಪ್ಪಿಕೊಳ್ಳಬೇಕಾಗಿದೆ. ಬಹುತ್ವ ಭಾರತವನ್ನು ಮೂಲಭೂತವಾದಿಗಳಿಂದ ಉಳಿಸಿಕೊಳ್ಳಬೇಕಾಗಿದೆ.

ಕೊನೆಗೂ ಒಬ್ಬ ಅಮಾಯಕ ವಿದ್ಯಾರ್ಥಿಯ ಬರ್ಬರ ಹತ್ಯೆಯಲ್ಲಿ ಗೋರಕ್ಷ/ ಗೋಭಕ್ಷಕ ವಂಶಸ್ಥರು ತಮಗೆ ತಾವೇ ಹೆಮ್ಮೆ ಪಡುವ ವಿಪರ್ಯಾಸ ಉಂಟಾಗಿದೆ.
ಹಿರಿಯರಾದ ದೇವನೂರು ಮಹಾದೇವರವರು ದಲಿತರನ್ನು ಮತ್ತು ಮುಸಲ್ಮಾನರನ್ನು ಕುರಿತು ಅಪಮಾನಿತರು ಹಾಗೂ ಅನುಮಾನಿತರು ಎಂದು ತಮ್ಮ ಎದೆಗೆ ಬಿದ್ದ ಅಕ್ಷರ ಪುಸ್ತಕದಲ್ಲಿ ಬರೆಯುತ್ತಾರೆ. ಈ ಇಬ್ಬರು ದಮನಿತರು ಒಗ್ಗಟ್ಟಾಗಬೇಕಾದ, ಒಟ್ಟಿಗೆ ಹೋರಾಡಬೇಕಾದ ದುರಿತ ಸಂದರ್ಭವಿದು.