ಸೆಬಿ ಅಧ್ಯಕ್ಷೆ ಮಾಧವಿ ಬುಚ್ ಬಂಡವಾಳಗಳು ಒಂದೊಂದಾಗಿ ಬಯಲಾಗುತ್ತಿವೆ. ಸೆಬಿ ಸಂಸ್ಥೆ ಅಲ್ಲದೆ ಇನ್ನೂ ಎರಡು ಸಂಸ್ಥೆಗಳಿಂದ ಮಾಧವಿ ವೇತನ ಪಡೆಯುತ್ತಿದ್ದಾರೆ. 2017 ರಿಂದ 2024 ರವರೆಗೆ ಐಸಿಐಸಿಐ ಬ್ಯಾಂಕಿನಿಂದ 12 ಕೋಟಿ ರೂ.ಗೂ ಹೆಚ್ಚು ಸಂಬಳ ಪಡೆದಿದ್ದಾರೆ. ಇದಲ್ಲದೆ ಇದೇ ಅವಧಿಯಲ್ಲಿ ಐಸಿಐಸಿಐ ಪ್ರುಡೆನ್ಶಿಯಲ್ ಬ್ಯಾಂಕಿನಿಂದ ಮಾಧವಿ ಪುರಿ ಬುಚ್ 22.41 ಕೋಟಿ ರೂ. ಹಣವನ್ನು ಪಡೆದಿದ್ದಾರೆ. ಇದರ ಜೊತೆ ಐಸಿಐಸಿಐ ಬ್ಯಾಂಕ್‌ನಿಂದ 2 ಕೋಟಿಗೂ ಹೆಚ್ಚು ಮೌಲ್ಯದ ಇಎಸ್‌ಒಪಿ ಹಣವನ್ನು ಪಡೆದಿದ್ದಾರೆ.
ಭಾರತೀಯ ಷೇರುಪೇಟೆ ನಿಯಂತ್ರಣ ಮಂಡಳಿ (ಸೆಬಿ) ಅಧ್ಯಕ್ಷೆ ಮಾಧವಿ ಪುರಿ ಬುಚ್ ಹಾಗೂ ಆಕೆಯ ಪತಿ ಧವಲ್ ಬುಚ್ ಅವರು ಅದಾನಿ ಸಮೂಹ ವಹಿವಾಟು ನಡೆಸುತ್ತಿದ್ದ ಬರ್ಮುಡಾ/ಮಾರಿಷಸ್‌ನ ಶೆಲ್ ಕಂಪನಿಗಳಲ್ಲಿ ಪಾಲುದಾರಿಕೆ ಹೊಂದಿದ್ದಾರೆ ಎಂದು ಹಿಂಡೆನ್‌ಬರ್ಗ್ ಸಂಶೋಧನಾ ವರದಿ ಆರೋಪಿಸಿತ್ತು. ಇದೇ ಕಾರಣಕ್ಕೆ 2023ರ ಜನವರಿಯಲ್ಲಿ ಅದಾನಿ ಸಮೂಹದ ಅಕ್ರಮ ವಹಿವಾಟಿಗೆ ಸಂಬಂಧಿಸಿದಂತೆ ಪ್ರಕಟವಾದ ತನ್ನ ವರದಿಯ ಬಗ್ಗೆ ಸೆಬಿ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಹೇಳಲಾಗಿತ್ತು. ಗೌತಮ್ ಅದಾನಿ ಅವರ ಸಹೋದರ ವಿನೋದ್ ಅದಾನಿ ಅವರು ಬರ್ಮಡಾದ ‘ಗ್ಲೋಬಲ್ ಡೈನಮಿಕ್ ಆಪರ್ಚುನಿಟೀಸ್ ಫಂಡ್’ನಲ್ಲಿ (ಜಿಡಿಒಎಫ್) ಹೂಡಿಕೆ ಮಾಡಿದ್ದು, ಅದು ಮತ್ತೆ ಮಾರಿಷನ್‌ನ ‘ಐಪಿಇ ಪ್ಲಸ್ ಫಂಡ್ ಒನ್’ನಲ್ಲಿ ಹೂಡಿಕೆ ಮಾಡಿದೆ. ಆ ಬರ್ಮುಡಾ ಮತ್ತು ಮಾರಿಷಸ್ ವ್ಯವಹಾರಗಳಲ್ಲಿ ಮಾಧವಿ ಬುಚ್ ಮತ್ತು ಅವರ ಪತಿ ಪಾಲು ಹೊಂದಿದ್ದಾರೆ ಎಂದು ಹಿಂಡೆನ್‌ಬರ್ಗ್ ರಿಸರ್ಚ್ ತನ್ನ ವರದಿಯಲ್ಲಿ ಉಲ್ಲೇಖಿಸಿದೆ.
ಈ ಆರೋಪದ ನಂತರ ಸ್ಪಷ್ಟೀಕರಣ ನೀಡಿದ್ದ ಮಾಧವಿ ಬುಚ್, ತಮ್ಮ ಹಣಕಾಸು ವಿಚಾರಗಳು ತೆರೆದ ಪುಸ್ತಕದಂತಿವೆ. ಈಗಾಗಲೇ ಕಾಲಕಾಲಕ್ಕೆ ಸೆಬಿಗೆ ಅಗತ್ಯವಿರುವ ಎಲ್ಲ ಮಾಹಿತಿಗಳನ್ನೂ ಒದಗಿಸಲಾಗಿದೆ. ಅವುಗಳನ್ನು ಹುಡುಕುವ ಯಾವುದೇ ಮತ್ತು ಪ್ರತಿಯೊಂದು ಪ್ರಾಧಿಕಾರಕ್ಕೂ ನಾವು ಕಟ್ಟುನಿಟ್ಟಾಗಿ ಖಾಸಗಿ ಪ್ರಜೆಗಳಾಗಿದ್ದ ಅವಧಿಗೆ ಸಂಬಂಧಿಸಿದವುಗಳನ್ನು ಒಳಗೊಂಡಂತೆ ಎಲ್ಲ ಹಣಕಾಸಿನ ದಾಖಲೆಗಳನ್ನು ಬಹಿರಂಗಪಡಿಸಲು ಯಾವುದೇ ಹಿಂಜರಿಕೆಯಿಲ್ಲ. ಇದಲ್ಲದೆ, ಸಂಪೂರ್ಣ ಪಾರದರ್ಶಕ ಹಿತದೃಷ್ಟಿಯಿಂದ, ನಾವು ಸರಿಯಾದ ಸಮಯದಲ್ಲಿ ವಿವರವಾದ ಹೇಳಿಕೆಯನ್ನು ನೀಡುತ್ತೇವೆ ಎಂದು ಹೇಳಿ ತಾನು ಸ್ವಚ್ಛ ಎಂದು ನುಣುಚಿಕೊಂಡಿದ್ದರು.
ಈಗ ಸೆಬಿ ಅಧ್ಯಕ್ಷೆ ಮಾಧವಿ ಬುಚ್ ಬಂಡವಾಳಗಳು ಒಂದೊಂದಾಗಿ ಬಯಲಾಗುತ್ತಿವೆ. ಸೆಬಿ ಸಂಸ್ಥೆ ಅಲ್ಲದೆ ಇನ್ನೂ ಎರಡು ಸಂಸ್ಥೆಗಳಿಂದ ಮಾಧವಿ ವೇತನ ಪಡೆಯುತ್ತಿದ್ದಾರೆ. 2017 ರಿಂದ 2024 ರವರೆಗೆ ಐಸಿಐಸಿಐ ಬ್ಯಾಂಕಿನಿಂದ 12 ಕೋಟಿ ರೂ.ಗೂ ಹೆಚ್ಚು ಸಂಬಳ ಪಡೆದಿದ್ದಾರೆ. ಇದಲ್ಲದೆ ಇದೇ ಅವಧಿಯಲ್ಲಿ ಐಸಿಐಸಿಐ ಪ್ರುಡೆನ್ಶಿಯಲ್ ಬ್ಯಾಂಕಿನಿಂದ ಮಾಧವಿ ಪುರಿ ಬುಚ್ 22.41 ಕೋಟಿ ರೂ. ಹಣವನ್ನು ಪಡೆದಿದ್ದಾರೆ. ಇದರ ಜೊತೆ ಐಸಿಐಸಿಐ ಬ್ಯಾಂಕ್‌ನಿಂದ 2 ಕೋಟಿಗೂ ಹೆಚ್ಚು ಮೌಲ್ಯದ ಇಎಸ್‌ಒಪಿ ಹಣವನ್ನು ಪಡೆದಿದ್ದಾರೆ.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಮುಸ್ಲಿಮರು, ಮಾನವೀಯತೆ ಮತ್ತು ಮೋದಿ
ಸಾಮಾನ್ಯರ ಹಣವನ್ನು ಹೂಡಿಕೆ ಮಾಡುವ ಷೇರು ಮಾರುಕಟ್ಟೆಯನ್ನು ನಿಯಂತ್ರಿಸುವುದು ಸೆಬಿಯ ಪಾತ್ರವಾಗಿದೆ. ಇದು ಬಹಳ ಮುಖ್ಯವಾದ ಪಾತ್ರವನ್ನು ವಹಿಸುತ್ತದೆ. ಸೆಬಿಯ ಪೂರ್ಣಾವಧಿ ಅಧ್ಯಕ್ಷರಾದರೂ ಐಸಿಐಸಿಐ ಸಂಸ್ಥೆಗಳಿಂದ ವೇತನ ಪಡೆದುಕೊಂಡು ಸರ್ಕಾರಕ್ಕೆ ಹಾಗೂ ಸಾರ್ವಜನಿಕರಿಗೆ ಮಾಧವಿ ಬುಚ್ ವಿಶ್ವಾಸದ್ರೋಹವೆಸಗಿದ್ದಾರೆ. ಎಲ್ಲವನ್ನು ತಿಳಿದಿರುವ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಯಾವುದೇ ಕ್ರಮ ಕೈಗೊಳ್ಳದೆ ಸುಮ್ಮನಿದೆಯೆ? ಸೆಬಿಯ ಅಧ್ಯಕ್ಷರನ್ನು ನೇಮಿಸುವುದು ಪ್ರಧಾನಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ನೇತೃತ್ವದ ಸಂಪುಟ ನೇಮಕಾತಿ ಸಮಿತಿ. ಇಡೀ ಸರ್ಕಾರಕ್ಕೆ ಮಾಧವಿ ಬುಚ್ ಅವರ ವ್ಯವಹಾರಗಳು ತಿಳಿದಿದ್ದರೂ ಕೈಕಟ್ಟಿ ಕುಳಿತಿರುವುದು ಯಾರಿಗೂ ತಿಳಿಯದ ವಿಷಯವೇನಲ್ಲ. ಬುಚ್ ಐಸಿಐಸಿಐನಿಂದ ಸಂಬಳ ಪಡೆಯುತ್ತಿರುವುದರಿಂದ, ಬ್ಯಾಂಕ್ ಕುರಿತ ಹಲವಾರು ತನಿಖೆಗಳನ್ನು ಮುಚ್ಚಿಹಾಕಲಾಗಿದೆ. ತನ್ನ ಜೀವನ ತೆರೆದ ಪುಸ್ತಕ ಎಂದು ಹೇಳುವ ಮಾಧವಿ ಸೆಬಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿ ತಮ್ಮ ಮೇಲಿನ ಆರೋಪಗಳನ್ನು ದಾಖಲೆಗಳ ಸಮೇತ ಸಾಬೀತುಪಡಿಸಿದರೆ ಸ್ವಚ್ಛ ಮಾತುಗಳಿಗೆ ಒಂದೊಳ್ಳೆ ಅರ್ಥ ಬರುತ್ತದೆ. ಆದರೆ ಇಲ್ಲಿಯವರೆಗೂ ಕೇಂದ್ರದ ಅಗೋಚರ ಶಕ್ತಿಗಳ ಮೂಲಕ ಬ್ಯಾಂಕ್ ಮೂಲಕ ಸ್ಪಷ್ಟೀಕರಣ ಹೇಳಿಕೆಯನ್ನು ಕೊಡಿಸಲಾಗಿದೆಯೆ ವಿನಾ ಬುಚ್ ತಮ್ಮ ಸಾಚಾತನದ ಬಗ್ಗೆ ಬಾಯಿಬಿಟ್ಟಿಲ್ಲ.
ಯಾರು ಮಾಧವಿ ಬುಚ್?
ಮಾಧಬಿ ಪುರಿ ಬುಚ್ ಅವರ ವೃತ್ತಿಜೀವನದ ಬಗ್ಗೆ ಹೇಳುವುದಾದರೆ 1966ರಲ್ಲಿ ಮುಂಬೈನಲ್ಲಿ ಜನಿಸಿದ ಅವರು, ಶಾಲಾ ಶಿಕ್ಷಣವನ್ನು ಮುಂಬೈನ ಫೋರ್ಟ್ ಕಾನ್ವೆಂಟ್ ಶಾಲೆ ಮತ್ತು ನವದೆಹಲಿಯ ಜೀಸಸ್ ಮೇರಿ ಶಾಲೆಯ ಕಾನ್ವೆಂಟ್‌ನಲ್ಲಿ ಪೂರ್ಣಗೊಳಿಸಿದರು. ನಂತರ, ಅವರು ದೆಹಲಿ ವಿಶ್ವವಿದ್ಯಾಲಯದ ಸೇಂಟ್ ಸ್ಟೀಫನ್ಸ್ ಕಾಲೇಜಿನಲ್ಲಿ ಗಣಿತಶಾಸ್ತ್ರದಲ್ಲಿ ಪದವಿ ಪಡೆದರು. ತದನಂತರ ಐಐಎಂ ಅಹಮದಾಬಾದ್‌ನಲ್ಲಿ ಎಂಬಿಎ ಪೂರೈಸಿದರು. 1989ರಲ್ಲಿ ಐಸಿಐಸಿಐ ಬ್ಯಾಂಕ್‌ನೊಂದಿಗೆ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿ ಹೂಡಿಕೆ ಬ್ಯಾಂಕರ್ ಮತ್ತು ಕಾರ್ಯನಿರ್ವಾಹಕ ನಿರ್ದೇಶಕರಂತಹ ಪ್ರಮುಖ ಸ್ಥಾನಗಳನ್ನು ನಿರ್ವಹಿಸಿದರು. ಇದರ ಜೊತೆ 1993 ಮತ್ತು 1995ರ ನಡುವೆ, ಮಾಧವಿ ಪುರಿ ಬುಚ್ ಇಂಗ್ಲೆಂಡ್‌ನ ವೆಸ್ಟ್ ಚೆಸ್ಟರ್ ಕಾಲೇಜಿನಲ್ಲಿ ಉಪನ್ಯಾಸಕರಾಗಿ ಸಹ ಕೆಲಸ ಮಾಡಿದ್ದಾರೆ. 12 ವರ್ಷಗಳ ಕಾಲ, ಅವರು ಅನೇಕ ಕಂಪನಿಗಳ ಮಾರಾಟ, ಮಾರುಕಟ್ಟೆ ಮತ್ತು ಉತ್ಪನ್ನ ಅಭಿವೃದ್ಧಿ ವಿಭಾಗಗಳಲ್ಲಿ ಸೇವೆ ಸಲ್ಲಿಸಿದ್ದಾರೆ. 2006 ರಿಂದ 2011 ರವರೆಗೆ, ಅವರು ಐಸಿಐಸಿಐ ಸೆಕ್ಯುರಿಟೀಸ್‌ನ ವ್ಯವಸ್ಥಾಪಕ ನಿರ್ದೇಶಕಿ ಮತ್ತು ಸಿಇಓ ಆಗಿ ಸೇವೆ ಸಲ್ಲಿಸಿದ್ದರು. ಇದಾದ ನಂತರ, 2011 ರಲ್ಲಿ ಸಿಂಗಾಪುರದ ಗ್ರೇಟರ್ ಪೆಸಿಫಿಕ್ ಕ್ಯಾಪಿಟಲ್ ಎಲ್ಎಲ್‌ಪಿಯಲ್ಲಿ ಹಿರಿಯ ಸ್ಥಾನವನ್ನು ಹೊಂದಿದ್ದರು.

ಐಸಿಐಸಿಐ ತೊರೆದ ಅವರು ಶಾಂಘೈನಲ್ಲಿರುವ ನ್ಯೂ ಡೆವಲಪ್‌ಮೆಂಟ್ ಬ್ಯಾಂಕ್‌ನ ಕನ್ಸಲ್ಟಂಟ್ ಆಗಿ ನೇಮಕಗೊಂಡರು. ಇದಾದ ಬಳಿಕವೇ ಅವರಿಗೆ ಜಾಗತಿಕ ಷೇರು ಮಾರುಕಟ್ಟೆಯಲ್ಲಿ ಸಂಪರ್ಕ ಬೆಳೆಯಿತು ಎಂದು ಹೇಳಲಾಗುತ್ತಿದೆ. ನಂತರ ಭಾರತಕ್ಕೆ ಬಂದ ಅವರು 2022ರಲ್ಲಿ ಸೆಬಿ ಅಧ್ಯಕ್ಷೆಯಾಗಿ ನೇಮಕಗೊಂಡರು. ಆ ಮೂಲಕ ಭಾರತೀಯ ಷೇರುಪೇಟೆ ನಿಯಂತ್ರಣ ಮಂಡಳಿಯ ಮುಖ್ಯಸ್ಥೆಯಾದ ಮೊದಲ ಮಹಿಳೆ ಎನಿಸಿದರು.
ಮಾಧವಿ ಪುರಿ ಬುಚ್ ವಿರುದ್ಧವಿರುವ ಪ್ರಮುಖ ಆರೋಪಗಳು
- ಮಾಧವಿ ಪುರಿ ಬುಚ್ 2017ರ ಮಾರ್ಚ್ 22 ರಂದು ಸೆಬಿ ಸದಸ್ಯರಾಗಿ ನೇಮಕವಾಗುವ ಕೆಲವೇ ವಾರಗಳ ಮೊದಲು, ಅವರ ಪತಿ ಧವಲ್ ಬುಚ್ ಅವರು ಮಾರಿಷಸ್ ಫಂಡ್‌ನ ನಿರ್ವಾಹಕ ಟ್ರೈಡೆಂಟ್ ಟ್ರಸ್ಟ್‌ಗೆ ಪತ್ರ ಬರೆದು, “ಖಾತೆಗಳನ್ನು ನಿರ್ವಹಿಸಲು ಅಧಿಕಾರ ಹೊಂದಿರುವ ಏಕೈಕ ವ್ಯಕ್ತಿಯನ್ನಾಗಿ ಮಾಡುವಂತೆ” ವಿನಂತಿಸಿಕೊಂಡರು. ರಾಜಕೀಯವಾಗಿ ಸೂಕ್ಷ್ಮ ನೇಮಕಾತಿ ಇದಾಗಿದ್ದು, ಇದಕ್ಕೂ ಮುನ್ನ ಗ್ಲೋಬಲ್ ಡೈನಾಮಿಕ್ ಆಪರ್ಚುನಿಟೀಸ್ ಫಂಡ್‌ನಿಂದ ತನ್ನ ಪತ್ನಿ ಹೆಸರು ತೆಗೆದು ಹಾಕುವಂತೆ ವಿನಂತಿಸಿದ್ದರು ಎಂದು ಹಿಂಡೆನ್‌ಬರ್ಗ್ ಆರೋಪಿಸಿದೆ. 2017ರ ಏಪ್ರಿಲ್‌ನಲ್ಲಿ ಮಾಧವಿ ಪುರಿ ಬುಚ್ ಸೆಬಿಗೆ ಶಾಶ್ವತ ಸದಸ್ಯರಾಗಿ ನೇಮಕವಾದರು. 2018ರ ಫೆ.28ರಲ್ಲಿ ಎಲ್ಲ ಯುನಿಟ್‌ಗಳ ರಿಡೆಮ್ಶನ್‌ಗೆ ಅರ್ಜಿ ಸಲ್ಲಿಸಿದ್ದರು ಎಂಬುದನ್ನು ಹಿಂಡೆನ್‌ಬರ್ಗ್ ವರದಿ ಉಲ್ಲೇಖಿಸಿದೆ.
- ಮಾಧವಿ ಪುರಿ ಬುಚ್ ಅವರು ಸೆಬಿಯಲ್ಲಿ ಅಧ್ಯಕ್ಷರಾಗಿದ್ದಾಗ 2017ರ ಏಪ್ರಿಲ್‌ನಿಂದ 2022ರ ಮಾರ್ಚ್ ನಡುವೆ ಅಗೋರಾ ಪಾರ್ಟ್‌ನರ್ಸ್ ಎಂಬ ಕಡಲಾಚೆಯ ಸಿಂಗಾಪುರ ಮೂಲದ ಸಲಹಾ ಸಂಸ್ಥೆಯಲ್ಲಿ ಶೇ 100 ರಷ್ಟು ಪಾಲನ್ನು ಹೊಂದಿದ್ದರು. ಆದರೆ, 2022ರ ಮಾರ್ಚ್ 16 ರಂದು ಸೆಬಿ ಅಧ್ಯಕ್ಷರಾಗಿ ನೇಮಕಗೊಂಡ ಎರಡು ವಾರಗಳ ನಂತರ ಅವರು ಅದರ ಎಲ್ಲ ಷೇರುಗಳನ್ನು ತಮ್ಮ ಪತಿಗೆ ವರ್ಗಾಯಿಸಿದ್ದಾರೆ ಎಂದು ಹಿಂಡೆನ್‌ಬರ್ಗ್ ವರದಿ ತಿಳಿಸಿದೆ. ಹಣಕಾಸು ಹೇಳಿಕೆಗಳನ್ನು ಬಹಿರಂಗಪಡಿಸುವುದರಿಂದ ಸಿಂಗಾಪುರದ ಸಂಸ್ಥೆಗಳು ವಿನಾಯಿತಿ ಪಡೆದಿವೆ. ಆದ್ದರಿಂದ, ಅದು ತನ್ನ ಸಲಹಾ ವ್ಯವಹಾರದಿಂದ ಪಡೆದ ಆದಾಯದ ಮೊತ್ತ ಮತ್ತು ಯಾರಿಂದ ಪಡೆಯುತ್ತದೆ ಎಂಬುದು ಸ್ಪಷ್ಟವಾಗಿಲ್ಲ. ಇದಲ್ಲದೆ, ಅಗೋರಾ ಅಡ್ವಸರಿ ಎಂಬ ಭಾರತದ ಸಲಹಾ ಸಂಸ್ಥೆಯಲ್ಲಿ ಬುಚ್ ಪೂರ್ಣ ಪಾಲು ಹೊಂದಿದ್ದು, ಪತಿ ನಿರ್ದೇಶಕರಾಗಿದ್ದಾರೆ ಎಂದು ಹಿಂಡೆನ್‌ಬರ್ಗ್ ವರದಿಯಲ್ಲಿ ತಿಳಿಸಿದೆ.
- ಮಾಧವಿ ಪುರಿ ಬುಚ್ ಸೆಬಿ ಸದಸ್ಯರಾಗಿದ್ದ ಅವಧಿಯಲ್ಲಿ ಅವರ ಪತಿ ಧವಲ್ ಬುಚ್ ಅವರು 2019ರಲ್ಲಿ ಬ್ಲ್ಯಾಕ್‌ಸ್ಟೋನ್ ಕಂಪನಿಗೆ ಹಿರಿಯ ಸಲಹಾಗಾರರಾಗಿ ನೇಮಕವಾಗಿದ್ದರು. ರಿಯಲ್ ಎಸ್ಟೇಟ್, ಫಂಡ್ ಅಥವಾ ಇನ್ಯಾವುದೇ ಕ್ಯಾಪಿಟಲ್ ಮಾರ್ಕೆಟ್ ಕೆಲಸಗಳಲ್ಲಿ ಯಾವುದೇ ಅನುಭವ ಇಲ್ಲದೇ ಇದ್ದಾಗ ಮಾಡಲಾದ ನೇಮಕಾತಿಯಾಗಿತ್ತು. ಅವರಿಗೆ ಅಂದು ಪ್ರೊಕ್ಯೂರ್‌ಮೆಂಟ್ ಮತ್ತು ಪೂರೈಕೆ ಜಾಲದ ಕೆಲಸಗಳಲ್ಲಿ ಮಾತ್ರ ಅನುಭವವಿತ್ತು. ಅವರು ಬಹುತೇಕ ಯುನಿಲಿವರ್ ಕಂಪನಿಗೆ ಕೆಲಸ ಮಾಡಿದ್ದರು. ಅಲ್ಲಿ ಅವರು ಚೀಫ್ ಪ್ರೊಕ್ಯೂರ್‌ಮೆಂಟ್ ಆಫೀಸರ್ ಆಗಿದ್ದರು ಎಂದು ಹಿಂಡೆನ್‌ಬರ್ಗ್ ವರದಿ ಆರೋಪಿಸಿದೆ.
