ಕಾಮುಕ ತಂದೆಯೊಬ್ಬ ತನ್ನ ಮಗಳ ಮೇಲೆ ನಿರಂತರ ಅತ್ಯಾಚಾರ ಎಸಗಿರುವ ಪೈಶಾಚಿಕ ಕೃತ್ಯ ತುಮಕೂರು ಜಿಲ್ಲೆಯಲ್ಲಿ ತಡವಾಗಿ ಬೆಳಕಿಗೆ ಬಂದಿದೆ. ಕಾಮುಕ ತಂದೆಯ ಲೈಂಗಿಕ ದೌರ್ಜನ್ಯದಿಂದಾಗಿ 14 ವರ್ಷದ ಬಾಲಕಿ ಗರ್ಭಿಣಿಯಾಗಿದ್ದಾಳೆ. ಬಾಲಕಿ ಗರ್ಭ ಧರಿಸಿದ್ದರಿಂದಾಗಿ ಕೃತ್ಯ ಬೆಳಕಿಗೆ ಬಂದಿದೆ.
ತುಮಕೂರು ಜಿಲ್ಲೆಯ ತಿಪಟೂರು ತಾಲೂಕಿನ ಹೊನ್ನವಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ದುಷ್ಕೃತ್ಯ ನಡೆದಿದೆ. ಆರೋಪಿ ಕಾಮುಕ ಕುಟುಂಬ ಎಂಟು ತಿಂಗಳ ಹಿಂದೆ ಕೂಲಿ ಕೆಲಸಕ್ಕಾಗಿ ಹೊರ ರಾಜ್ಯದಿಂದ ಹೊನ್ನವಳ್ಳಿಗೆ ಬಂದು ನೆಲೆಸಿತ್ತು. ಇತ್ತೀಚೆಗೆ ಬಾಲಕಿ ಪದೇ-ಪದೇ ಅನಾರೋಗ್ಯಕ್ಕೆ ತುತ್ತಾಗುತ್ತಿದ್ದಳು. ಆಕೆಯನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು, ಪರೀಕ್ಷೆ ವೇಳೆ ಆಕೆ ಗರ್ಭಿಣಿಯಾಗಿರುವುದು ತಿಳಿದುಬಂದಿದೆ.
ತನ್ನ ಮೇಲೆ ತಂದೆಯೇ ಅತ್ಯಾಚಾರ ಎಸಗಿರುವುದಾಗಿ ಬಾಲಕಿ ಹೇಳಿದ್ದಾಳೆ. ಕಾಮುಕ ತಂದೆಯ ವಿರುದ್ಧ ಪೋಕ್ಸೋ ಪ್ರಕರಣ ದಾಖಲಿಸಲಾಗಿದೆ.
ಈ ವರದಿ ಓದಿದ್ದೀರಾ?: ಅತ್ಯಾಚಾರಿ ಸಮಾಜದಲ್ಲಿ ಮಹಿಳೆಯರ ಅಸ್ತಿತ್ವ
ದೇಶಾದ್ಯಂತ ಅತ್ಯಾಚಾರ ಪ್ರಕರಣಗಳು ಹೆಚ್ಚುತ್ತಲೇ ಇವೆ. ಕಾಮುಕ ಅತ್ಯಾಚಾರಿಗಳು ಅತ್ಯಾಚಾರಗೈದು ಸಾಕ್ಷ್ಯ ನಾಶಕ್ಕಾಗಿ ಸಂತ್ರಸ್ತೆಯನ್ನು ಕೊಲ್ಲುವ ಪ್ರೌವೃತ್ತಿ ಇತ್ತೀಚೆಗೆ ಹೆಚ್ಚಾಗುತ್ತಿದೆ. ಕೋಲ್ಕತ್ತಾದಲ್ಲಿ ನಡೆದ ಟ್ರೈನಿ ವೈದ್ಯೆಯ ಅತ್ಯಾಚಾರ-ಕೊಲೆ ಪ್ರಕರಣ ಬೆಳಕಿಗೆ ಬಂದ ಬಳಿಕ ಅತ್ಯಾಚಾರಗಳನ್ನು ತಡೆಯಲು ಕಠಿಣ ಕಾನೂನು ರೂಪಿಸಬೇಕೆಂದು ದೇಶಾದ್ಯಂತ ಪ್ರತಿಭಟನೆಗಳು ನಡೆಯುತ್ತಿವೆ.
ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ (NCRB) ವರದಿಯ ಪ್ರಕಾರ, 2022ರಲ್ಲಿ ಭಾರತದಲ್ಲಿ 31,516 ಅತ್ಯಾಚಾರ ಪ್ರಕರಣಗಳು ಮತ್ತು 4,45,256 ದೌರ್ಜನ್ಯ ಪ್ರಕರಣಗಳು ನಡೆದಿವೆ. ಅಂದರೆ, ದಿನಕ್ಕೆ ಸರಾಸರಿ 86 ಅತ್ಯಾಚಾರ ಮತ್ತು ಪ್ರತಿ ಗಂಟೆಗೆ ಸರಾಸರಿ 49 ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳು ನಡೆದಿವೆ. ಬೆಂಗಳೂರಿನಲ್ಲಿಯೇ ಕಳೆದ ಮೂರು ವರ್ಷಗಳಲ್ಲಿ 444 ಅತ್ಯಾಚಾರ ಮತ್ತು 2,439 ಲೈಂಗಿಕ ಕಿರುಕುಳ ಪ್ರಕರಣಗಳು ದಾಖಲಾಗಿವೆ. ಇವಲ್ಲದೆ, ವರದಕ್ಷಿಣೆ ಕಿರುಕುಳ, ಅಪಹರಣ, ಕಳ್ಳಸಾಗಣೆ, ಕೌಟುಂಬಿಕ ದೌರ್ಜನ್ಯಗಳು ಸೇರಿದಂತೆ ನಾನಾ ರೀತಿಯಲ್ಲಿ ಮಹಿಳೆಯರು ದೌರ್ಜನ್ಯಕ್ಕೆ ಒಳಗಾಗುತ್ತಿದ್ದಾರೆ.