ಅಪ್ರಾಪ್ತ ಬಾಲಕಿಯರ ವಿಡಿಯೋ ಮತ್ತು ಫೋಟೋ ಕ್ಲಿಕ್ಕಿಸಿದ ಆರೋಪದ ಮೇಲೆ ಕೋಲಾರ ಜಿಲ್ಲೆಯ ಸರ್ಕಾರಿ ವಸತಿ ಶಾಲೆಯ ಚಿತ್ರಕಲಾ ಶಿಕ್ಷಕ ಮುನಿಯಪ್ಪ (46) ವಿರುದ್ಧ ಪೋಕ್ಸೋ ಮತ್ತು ಕ್ರಿಮಿನಲ್ ಪ್ರಕರಣ ದಾಖಲಾಗಿದೆ. ಈ ಪ್ರಕರಣವನ್ನು ರದ್ದುಗೊಳಿಸಲು ಕರ್ನಾಟಕ ಹೈಕೋರ್ಟ್ ನಿರಾಕರಿಸಿದ್ದು, ಪ್ರಕರಣವನ್ನು ತನಿಖೆ ನಡೆಸಲು ಪೊಲೀಸರಿಗೆ ಸೂಚಿಸಿದೆ.
ಶಿಕ್ಷಕ ಮುನಿಯಪ್ಪ ವಸತಿ ಶಾಲೆಯಲ್ಲಿ ಅಪ್ರಾಪ್ತ ಬಾಲಕಿಯರು ಬಟ್ಟೆ ಬದಲಿಸುವಾಗ ಅವರ ವಿಡಿಯೋ ಮತ್ತು ಫೋಟೋ ಕ್ಲಿಕ್ಕಿಸಿದ್ದ ಎಂದು ಆರೋಪಿಸಲಾಗಿದೆ. ಆತನ ವಿರುದ್ಧ ಪೋಕ್ಸೋ ಕಾಯ್ದೆಯ ಸೆಕ್ಷನ್ 12 ಮತ್ತು ಐಪಿಸಿ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ತನ್ನ ವಿರುದ್ಧ ದಾಖಲಾಗಿರುವ ಪ್ರಕರಣವನ್ನು ರದ್ದುಗೊಳಿಸಬೇಕೆಂದು ಕೋರಿ ಆರೋಪಿ ಮುನಿಯಪ್ಪ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಆತನ ಅರ್ಜಿಯನ್ನು ನ್ಯಾಯಾಲಯ ವಜಾಗೊಳಿಸಿದೆ.
ಈ ವರದಿ ಓದಿದ್ದೀರಾ?: ಮಹಿಳೆಯರ ಮೇಲಿನ ನಿಲ್ಲದ ಶೋಷಣೆ; ಶಿಕ್ಷಣ ಒಂದೇ ಪರಿಹಾರ
ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರಿದ್ದ ಪೀಠವು, ”ಆಘಾತಕಾರಿ ಸಂಗತಿಯೆಂದರೆ ಆರೋಪಿಯ ಬಳಿ ವಿವಿಧ ಬ್ರಾಂಡ್‌ಗಳ ಐದು ಮೊಬೈಲ್ ಫೋನ್‌ಗಳಿವೆ. ಎಲ್ಲ ಮೊಬೈಲ್‌ಗಳನ್ನು ವಶಪಡಿಸಿಕೊಂಡು ಎಫ್‌ಎಸ್‌ಎಲ್‌ಗೆ ಕಳುಹಿಸಲಾಗಿದೆ. ಪ್ರತಿ ಮೊಬೈಲ್ ಫೋನ್‌ನಲ್ಲಿ ಸುಮಾರು 1,000 ಚಿತ್ರಗಳನ್ನು ಮತ್ತು ನೂರಾರು ವೀಡಿಯೊಗಳಿವೆ. ಶಿಕ್ಷಕನಾಗಿರುವ ಆರೋಪಿಯ ಬಳಿ ಐದು ಮೊಬೈಲ್‌ಗಳು ಏಕೆ ಇವೆ? ಅವುಗಳಲ್ಲಿನ ವಿಡಿಯೋಗಳು ಮತ್ತು ಚಿತ್ರಗಳು ಯಾವುವು ಎಂಬುದು ತನಿಖೆಯ ವಿಷಯವಾಗಿದೆ. ವಿಡಿಯೋ ಮತ್ತು ಚಿತ್ರಗಳ ಮಾಹಿತಿಯು ಸಂಪೂರ್ಣ ತನಿಖೆಯಿಂದ ಮಾತ್ರವೇ ಹೊರಬರಲು ಸಾಧ್ಯ” ಎಂದು ಹೇಳಿದೆ.
“ದೂರು, ತನಿಖೆಯ ವೇಳೆ ದಾಖಲಾದ ಆರೋಪಿಯ ಹೇಳಿಕೆಗಳು ಮತ್ತು ಎಫ್‌ಎಸ್‌ಎಲ್ ವರದಿಗಳನ್ನು ಗಮನಿಸಿದರೆ, ಆತನ ಕೃತ್ಯವು ಭಯಾನಕವಾಗಿದೆ” ಎಂದು ನ್ಯಾಯಾಧೀಶರು ಹೇಳಿದ್ದಾರೆ.