ರಾಮನಗರ ಜಿಲ್ಲೆಯ ಕನಕಪುರ ಪಟ್ಟಣದಲ್ಲಿ ಹೊಸದಾಗಿ ನಿರ್ಮಿಸಿರುವ ಬೂದಿಕೇರಿ ರಸ್ತೆ ಕಾಮಗಾರಿ ಸಂಪೂರ್ಣ ಕಳಪೆಯಾಗಿದೆ. ಈ ರಸ್ತೆಯ ನೀಲನಕ್ಷೆಯೇ ಅವೈಜ್ಞಾನಿಕವಾಗಿದೆ. ವಾಹನ ಸವಾರರು ಹಾಗೂ ರಸ್ತೆ ಪಕ್ಕದಲ್ಲಿ ವಾಸಿಸುತ್ತಿರುವ ಸಾರ್ವಜನಿಕರು ಪರದಾಡುವ ಸನ್ನಿವೇಶ ಎದುರಾಗಿದೆ ಎಂದು ಜಯಕರ್ನಾಟಕ ಜನಪರ ವೇದಿಕೆಯ ರಾಜ್ಯ ಸಲಹೆಗಾರ ಕುಮಾರಸ್ವಾಮಿ ಆರೋಪಿಸಿದರು.
ರೈತ ಸಂಘಟನೆ ಹಾಗೂ ಕನ್ನಡ ಪರ ಸಂಘಟನೆಗಳೊಡನೆ ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯಪಾಲಕ ಅಭಿಯಂತರರಾದ ಶಿವಲಿಂಗಯ್ಯರಿಗೆ ದೂರು ಸಲ್ಲಿಸಿ ಮಾತನಾಡಿದ ಅವರು, ಬೂದಿಕೇರಿ ರಸ್ತೆ ಸಂಪೂರ್ಣ ವಾಣಿಜ್ಯ ಮಳಿಗೆಗಳಿಂದ ಕೂಡಿದೆ. ರಸ್ತೆ ಕಾಮಗಾರಿ ಅತ್ಯಂತ ನಿಧಾನವಾಗಿ ನಡೆದಿತ್ತು. ಇದರಿಂದಾಗಿ ಸಾರ್ವಜನಿಕರು ದೈನಂದಿನ ಪ್ರಯಾಣದಲ್ಲಿ ತೀವ್ರ ತೊಡಕು ಅನುಭವಿಸಿದ್ದರು” ಎಂದು ತಿಳಿಸಿದರು.

ಕಾಮಗಾರಿ ಮುಗಿದು ರಸ್ತೆ ಸಂಚಾರ ಆರಂಭವಾಯಿತು ಎಂದು ನಿಟ್ಟುಸಿರು ಬಿಡುವಷ್ಟರಲ್ಲಿ ಇನ್ನೊಂದು ತರದ ತೊಡಕು ಆರಂಭ ಆಗಿದೆ. ಕಾಂಕ್ರೀಟಿನಲ್ಲಿ ಸರಿಯಾದ ಪ್ರಮಾಣದ ಸಿಮೆಂಟ್ ಬಳಸಿಲ್ಲ. ಬಳಸಿದ ಡಸ್ಟ್ ಪ್ರಮಾಣ ಹೆಚ್ಚಾದ್ದರಿಂದ ಜಲ್ಲಿ ಕಲ್ಲುಗಳು ಎದ್ದು ಬಂದಿವೆ ಎಂದು ದೂರಿದರು.
ಕೆಆರ್ಎಸ್ ಪಕ್ಷದ ಪ್ರಶಾಂತ್ ಹೊಸದುರ್ಗ ಮಾತನಾಡಿ, ಕೆಲವೇ ದಿನಗಳಲ್ಲೇ ರಸ್ತೆಯಲ್ಲಿ ಅಲ್ಲಲ್ಲಿ ಗುಂಡಿ ಉಂಟಾಗಿದ್ದು ವಾಹನ ಸವಾರರು ಓಡಾಡಲು ಅಡಚಣೆ ಆಗಿದೆ. ಅವೈಜ್ಞಾನಿಕವಾಗಿ ರಸ್ತೆ ವಿಭಜಕವನ್ನು ಅಗಲವಾಗಿ ನಿರ್ಮಿಸಿದ ಪರಿಣಾಮ ರಸ್ತೆ ಕಿರಿದಾಗಿದೆ. ಈ ಕಿರಿದಾದ ವಾಣಿಜ್ಯ ರಸ್ತೆಯಲ್ಲಿ ವಾಹನಗಳ ನಿಲುಗಡೆಯಿಂದ ಟ್ರಾಫಿಕ್ ಜಾಮ್ ಉಂಟಾಗುತ್ತಿದೆ. ಪಾದಚಾರಿ ಮಾರ್ಗವನ್ನು ರಸ್ತೆಯಿಂದ ಎತ್ತರವಾಗಿ ಕಟ್ಟಿರುವುದರಿಂದ ಮನೆಯ ಗೇಟ್ ಒಳಗೆ ವಾಹನ ತೆಗೆದುಕೊಂಡು ಹೋಗಲು ಸಾಧ್ಯವಾಗದೆ ರಸ್ತೆಯಲ್ಲೇ ನಿಲ್ಲಿಸುವಂತಾಗಿದೆ ಎಂದು ವಿವರಿಸಿದರು.
ಇಂತಹ ಕಳಪೆಯಾದ ಅವೈಜ್ಞಾನಿಕ ಕಾಮಗಾರಿ ನಿರ್ಮಿಸಿದ ಎಸ್ಸಿಸಿ ಕನ್ಷ್ಟ್ರಕ್ಷನ್ನ ಮಾಲಿಕರು ಹಾಗೂ ಗುತ್ತಿಗೆದಾರರಾದ ದಿನೇಶ್ ಅವರಿಗೆ ಬಿಲ್ ಪಾವತಿಸದೆ ಕಪ್ಪು ಪಟ್ಟಿಗೆ ಸೇರಿಸಿ. ಕಾನೂನು ಕ್ರಮಕೈಗೊಂಡು, ಸಂಪೂರ್ಣವಾಗಿ ಜನೋಪಯೋಗಿ ಆಗುವಂತೆ ರಸ್ತೆಯನ್ನು ಪುನರ್ ನಿರ್ಮಿಸಲು ಆಗ್ರಹಿಸಿದರು.
ಇದನ್ನು ಓದಿದ್ದೀರಾ? ಸೆ. 5 | ಗೌರಿ ಲಂಕೇಶ್ಗೆ 7ನೇ ವರ್ಷದ ನುಡಿನಮನ: ಬೆಂಗಳೂರಿನಲ್ಲಿ ‘ಗೌರಿ ನೆನಪು’ ಕಾರ್ಯಕ್ರಮ
ಈ ಸಭೆಯಲ್ಲಿ ರೈತ ಸಂಘಟನೆಯ ಜಿಲ್ಲಾಧ್ಯಕ್ಷ ಚೀಲೂರು ಮುನಿರಾಜ್, ಕೆಆರ್ಎಸ್ ಪಕ್ಷದ ಪ್ರಶಾಂತ್ ಹೊಸದುರ್ಗ, ಕನ್ನಡ ಭಾಸ್ಕರ್, ಕಹಳೆ ರುದ್ರೇಶ್, ಜಯಕರ್ನಾಟಕ ಜನಪರ ವೇದಿಕೆಯ ಮುಖಂಡರಾದ ಹಾರೋಹಳ್ಳಿ ಗಿರೀಶ್, ಕುಮಾರ್, ಪರಮೇಶ್, ಸಾಗರ್, ಅಂಗಡಿ ರಮೇಶ್, ರೈತಸಂಘದ ಶಿವರಾಮು, ಕೆ ಬಿ ಬಸವರಾಜು, ಮಾದೇಶ, ಇನ್ನೂ ಇತರ ಪದಾಧಿಕಾರಿಗಳು ಹಾಜರಿದ್ದರು.
