ಗಣೇಶ ಹಬ್ಬ ಹಾಗೂ ಈದ್ ಮಿಲಾದ್ ಹಬ್ಬ ಹಿನ್ನಲೆ ಸರ್ಕಾರದ ಕೆಲ ನಿಯಮಾವಳಿಗಳನ್ನು ಸಾರ್ವಜನಿಕರಿಗೆ ತಿಳಿಸಲು ಪೊಲೀಸ್ ಇಲಾಖೆ ಶಾಂತಿ ಸಭೆಯನ್ನು ತಹಶೀಲ್ದಾರ್ ಬಿ.ಆರತಿ ಅವರ ಅಧ್ಯಕ್ಷತೆಯಲ್ಲಿ ನಡೆಸಲಾಯಿತು.
ಗುಬ್ಬಿ ಪಟ್ಟಣದ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಸಂಜೆ ಆಯೋಜಿಸಿದ್ದ ಶಾಂತಿ ಸಭೆಗೆ ಗಣೇಶ ಪ್ರತಿಷ್ಠಾಪನೆ ಮಾಡುವ ಎಲ್ಲಾ ಸಂಘ ಸಂಸ್ಥೆಗಳು, ಚುನಾಯಿತ ಪ್ರತಿನಿಧಿಗಳು, ಬೆಸ್ಕಾಂ, ಅಗ್ನಿಶಾಮಕ ದಳ ಸಿಬ್ಬಂದಿಗಳು ಹಾಜರಾತಿಯಲ್ಲಿ ಗಣೇಶ ಹಬ್ಬದ ಆಚರಣೆ ಕುರಿತು ಸರ್ಕಾರದ ನಿಬಂಧನೆಗಳನ್ನು ಸಿಪಿಐ ಗೋಪಿನಾಥ್ ವಿವರಿಸಿದರು.
ಸಭೆಯಲ್ಲಿ ಡಿಜೆ ಸೌಂಡ್ಸ್ ಬಳಕೆಗೆ ಅನುಮತಿಗೆ ಒಕ್ಕೊರಲಿನ ಬೇಡಿಕೆ ಇಡಲಾಯಿತು. ಯಾವುದೇ ಕಾರಣಕ್ಕೂ ಡಿಜೆಗೆ ಅನುಮತಿ ನೀಡಲು ಸಾಧ್ಯವಿಲ್ಲ ಎಂಬ ಉತ್ತರಕ್ಕೆ ಹಲವು ನಗರದಲ್ಲಿ ನಡೆಯುವ ಗಣೇಶ ಉತ್ಸವದಲ್ಲಿ ಡಿಜೆ ಬಳಸಿರುವ ಕುರಿತು ಚರ್ಚೆ ಮಾಡಿದರು. ಸರ್ಕಾರದ ನಿಯಮದಂತೆ ಡಿಜೆ ಅನುಮತಿ ಇಲ್ಲ. ಗಣೇಶ ಪ್ರತಿಷ್ಠಾಪನೆ ಮಾಡುವ ಸಂಘ ಸಂಸ್ಥೆಗಳು ಸ್ಥಳೀಯ ಸಂಸ್ಥೆಗಳಾದ ಪಟ್ಟಣ ಪಂಚಾಯಿತಿ ಹಾಗೂ ಗ್ರಾಮ ಪಂಚಾಯಿತಿ ಅನುಮತಿ ಪಡೆಯಬೇಕಿದೆ. ಸಿಂಗಲ್ ವಿಂಡೋ ಅರ್ಜಿ ಸ್ವೀಕಾರಕ್ಕೆ ವ್ಯವಸ್ಥೆ ಮಾಡಲಾಗಿದೆ. ಆಯಾ ಗ್ರಾಮ ಪಂಚಾಯಿತಿಯಲ್ಲಿ ಕೂಡಾ ಅರ್ಜಿ ಸ್ವೀಕರಿಸಿ ಅನುಮತಿ ಕೊಡಲು ವ್ಯವಸ್ಥೆ ಮಾಡಲಾಗುವುದು. ಈ ಜೊತೆಗೆ ಹಸಿರು ಪಟಾಕಿ ಬಳಕೆ, ಆರ್ಕೆಸ್ಟ್ರಾ ಕೂಡಾ ರಾತ್ರಿ 10 ರೊಳಗೆ ಮುಗಿಸಲು ಎಲ್ಲಾ ಆಯೋಜಕರಿಗೂ ಸೂಚಿಸಲಾಗಿದೆ ಎಂದು ತಹಶೀಲ್ದಾರ್ ಬಿ.ಆರತಿ ತಿಳಿಸಿದರು.
ಅಪರಾಧ ಕೃತ್ಯದಲ್ಲಿ ಭಾಗಿಯಾದವರನ್ನು ಸಂಘಗಳಲ್ಲಿ ಸೇರಿಸಿಕೊಳ್ಳದೆ ಜವಾಬ್ದಾರಿ ಹೊತ್ತ ಇಬ್ಬರ ಮುಂದಾಳತ್ವದಲ್ಲಿ ಗಣೇಶ ಹಬ್ಬ ಆಚರಿಸಲು ಸೂಚಿಸಲಾಗಿದೆ. ಧ್ವನಿ ವರ್ಧಕ ಬಳಕೆಗೆ ಅನುಮತಿ ಕಡ್ಡಾಯ ಪಡೆಯಬೇಕು. ಬಹಳ ದಿನಗಳ ಕಾಲ ಗಣೇಶ ಪ್ರತಿಷ್ಠಾಪನೆ ಮಾಡದೆ ಶೀಘ್ರದಲ್ಲಿ ವಿಸರ್ಜನೆ ಮಾಡುವಂತೆ ಮನವಿ ಮಾಡಿ, ಖಾಸಗಿ ಸ್ಥಳದಲ್ಲಿ ಪ್ರತಿಷ್ಠಾಪನೆ ಮಾಡುವ ಮುನ್ನ ಸ್ಥಳದ ಮಾಲೀಕರ ಅನುಮತಿ ಅತ್ಯಗತ್ಯ. ನಿಗದಿತ ಸ್ಥಳದಲ್ಲಿ ವಿಸರ್ಜನಾ ವೇಳೆ ಈಜುಗಾರರ ತಂಡ, ಅಗ್ನಿಶಾಮಕದಳ ಸಿಬ್ಬಂದಿ ಹಾಗೂ ವಿಸರ್ಜನಾ ಮೆರವಣಿಗೆ ಸಮಯದಲ್ಲಿ ವಿದ್ಯುತ್ ಕಂಬ ತಂತಿ ಬಗ್ಗೆ ಮುನ್ನೆಚ್ಚರಿಕೆ ವಹಿಸುವಂತೆ ಸಿಪಿಐ ಗೋಪಿನಾಥ್ ಮನವಿ ಮಾಡಿದರು.
ಗಣೇಶ ಹಬ್ಬದ ಜೊತೆ ಈದ್ ಮಿಲಾದ್ ಹಬ್ಬ ಬರುವ ಕಾರಣ ಯಾವುದೇ ಗಲಭೆಗೆ ಅವಕಾಶ ನೀಡದೆ ಸೌಹಾರ್ದತೆ ಕಾಪಾಡಬೇಕು. ಗಣೇಶಮೂರ್ತಿ ಪ್ರತಿಷ್ಠಾಪನೆ ಮಾಡುವ ಸ್ಥಳದಲ್ಲಿ ವಿದ್ಯುದ್ದೀಪ ಅಲಂಕಾರಕ್ಕೆ ನೇರ ಕಂಬದ ಮೂಲಕ ಕರೆಂಟ್ ಪಡೆದರೆ ಶಿಕ್ಷಾರ್ಹ ಅಪರಾಧವಾಗಿರುತ್ತದೆ. ಈ ಹಿನ್ನಲೆ ಬೆಸ್ಕಾಂ ಅನುಮತಿ ಪಡೆದು ತಾತ್ಕಾಲಿಕ ಕರೆಂಟ್ ಪಡೆದುಕೊಳ್ಳಲು ಸೂಚನೆ ನೀಡಲಾಗಿದೆ. ಅರ್ಜಿ ಸಲ್ಲಿಸದೇ ಗಣೇಶ ಪ್ರತಿಷ್ಠಾಪನೆ ಮಾಡದಂತೆ ಎಚ್ಚರಿಕೆ ವಹಿಸಿ ಹಾಗೆಯೇ ಗಣೇಶ ಪೆಂಡಾಲ್ ಬಳಿ ಅಶ್ಲೀಲ ಹಾಡುಗಳು ಹಾಕುವುದು, ದುಶ್ಚಟಗಳು ನಡೆಸುವುದು, ಗುಂಪುಗಾರಿಕೆ, ಇವೆಲ್ಲವನ್ನೂ ನಿಷೇಧಿಸಿದೆ. ವಿಸರ್ಜನಾ ಮಹೋತ್ಸವ ಕೂಡಾ ಸಂಜೆಯೊಳಗೆ ಮುಗಿಸಲು ಎಲ್ಲಾ ಸಂಘಗಳಿಗೂ ಸೂಚಿಸಲಾಗಿದೆ ಎಂದು ಗುಬ್ಬಿ ಪಿಎಸ್ಸೈ ಸುನೀಲ್ ಕುಮಾರ್ ತಿಳಿಸಿದರು.
ಈ ಸಂದರ್ಭದಲ್ಲಿ ಪಪಂ ಆರೋಗ್ಯ ನಿರೀಕ್ಷಕಿ ವಿದ್ಯಾಶ್ರೀ, ಬೆಸ್ಕಾಂ ವಿಭಾಗಾಧಿಕಾರಿ ಪ್ರಕಾಶ್, ಅಗ್ನಿಶಾಮಕ ದಳ ಹರೀಶ್, ಪಪಂ ಸದಸ್ಯರು, ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಇದ್ದರು.