ಏಷ್ಯನ್ ನ್ಯೂಸ್ ಇಂಟರ್‌ನ್ಯಾಶನಲ್ (ಎಎನ್‌ಐ) ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿರುವ ದೆಹಲಿ ಹೈಕೋರ್ಟ್, ‘ವಿಕಿಪೀಡಿಯ’ಕ್ಕೆ ನ್ಯಾಯಾಂಗ ನಿಂದನೆಯ ನೋಟಿಸ್ ಜಾರಿ ಮಾಡಿದೆ. ಭಾರತದಲ್ಲಿ ವಿಕಿಪೀಡಿಯದ ವ್ಯವಹಾರವನ್ನು ರದ್ದು ಮಾಡುವುದಾಗಿ ಎಚ್ಚರಿಕೆ ನೀಡಿದೆ.
ವಿಕಿಪೀಡಿಯದಲ್ಲಿ ಎಎನ್‌ಐ ಬಗ್ಗೆ ‘ಮಾನಹಾನಿ’ ಮಾಡುವ ರೀತಿಯಲ್ಲಿ ವಿವರಗಳನ್ನು ಎಡಿಟ್ ಮಾಡಿದ ತನ್ನ ಚಂದಾದಾರರ ಮಾಹಿತಿಯನ್ನು ಬಹಿರಂಗಪಡಿಸುವಂತೆ ಈ ಹಿಂದೆ ದೆಹಲಿ ಹೈಕೋರ್ಟ್ ವಿಕಿಪೀಡಿಯಗೆ ಸೂಚನೆ ನೀಡಿತ್ತು. ಅದಾಗ್ಯೂ, ತನ್ನ ಚಂದಾದಾರರ ಮಾಹಿತಿಯನ್ನು ವಿಡಿಪೀಡಿಯ ಬಹಿರಂಗ ಮಾಡಿಲ್ಲ. ಹೀಗಾಗಿ, ವಿಕಿಪೀಡಿಯದ ನಡೆಯನ್ನು ಪ್ರಶ್ನಿಸಿ ಎಎನ್‌ಐ ಮತ್ತೆ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದೆ.
ಅರ್ಜಿಯ ವಿಚಾರಣೆ ನಡೆಸಿ ನ್ಯಾಯಮೂರ್ತಿ ನಮೀನ್ ಚಾವ್ಲಾ ಅವರಿದ್ದ ಪೀಠವು, “ನಾನು ನ್ಯಾಯಾಂಗ ನಿಂದನೆಯ ನೋಟಿಸ್ ಜಾರಿ ಮಾಡುತ್ತಿದ್ದೇನೆ. ನ್ಯಾಯಾಲಯದ ಆದೇಶಗಳನ್ನು ಪಾಲಿಸದಿದ್ದರೆ ಭಾರತದಲ್ಲಿ ನಿಮ್ಮ (ವಿಕಿಪೀಡಿಯ) ವ್ಯಾಪಾರ ವಹಿವಾಟುಗಳನ್ನು ರದ್ದುಗೊಳಿಸುತ್ತೇವೆ. ಭಾರತದಲ್ಲಿ ವಿಕಿಪೀಡಿಯವನ್ನು ನಿರ್ಬಂಧಿಸುವಂತೆ ನಾವು ಸರ್ಕಾರಕ್ಕೆ ಸೂಚಿಸುತ್ತೇವೆ” ಎಂದು ಹೇಳಿದೆ.
ವಿಕಿಪೀಡಿಯ ಪರವಾಗಿ ವಾದ ಮಂಡಿಸಿ ವಕೀಲ ಟೈನ್ ಅಬ್ರಹಾಂ, “ನ್ಯಾಯಾಲಯದ ಆದೇಶಕ್ಕೆ ಸಂಬಂಧಿಸಿದಂತೆ ವಿಕಿಪೀಡಿಯ ಕೆಲವು ಮಾಹಿತಿಗಳನ್ನು ಸಲ್ಲಿಸಬೇಕಿದೆ. ವಿಕಿಪೀಡಿಯಾ ಭಾರತದಲ್ಲಿ ನೆಲೆಗೊಂಡಿಲ್ಲದ ಕಾರಣ ಅವರು ನ್ಯಾಯಾಲಯಕ್ಕೆ ಸಲ್ಲಿಕೆಗಳನ್ನು ಸಲ್ಲಿಸಲು ಹೆಚ್ಚಿನ ಸಮಯ ತೆಗೆದುಕೊಂಡಿದೆ” ಎಂದು ನ್ಯಾಯಾಲಯಕ್ಕೆ ತಿಳಿಸಿದ್ದಾರೆ.
ಅವರ ವಾದಕ್ಕೆ ಸಿಟ್ಟಾದ ನ್ಯಾಯಮೂರ್ತಿ ಚಾವ್ಲಾ, “ಈ ಹಿಂದೆಯೂ ನೀವು ಈ ವಾದವನ್ನು ಮಂಡಿಸಿದ್ದಿರಿ. ಅವರಿಗೆ (ವಿಕಿಪೀಡಿಯ) ಭಾರತ ಇಷ್ಟವಾಗದಿದ್ದರೆ, ದಯವಿಟ್ಟು ಭಾರತದಲ್ಲಿ ಕೆಲಸ ಮಾಡುವುದನ್ನು ನಿಲ್ಲಿಸಲಿ” ಎಂದು ಹೇಳಿದ್ದಾರೆ.
ವಿಚಾರಣೆಯನ್ನು ಅಕ್ಟೋಬರ್ 25ಕ್ಕೆ ಮುಂದೂಡಲಾಗಿದ್ದು, ಅಂದು ವಿಕಿಪೀಡಿಯದ ಅಧಿಕೃತ ಪ್ರತಿನಿಧಿ ಖುದ್ದಾಗಿ ನ್ಯಾಯಾಲಯಕ್ಕೆ ಹಾಜರಾಗಬೇಕು ಎಂದು ನ್ಯಾಯಾಲಯವು ಆದೇಶಿಸಿದೆ.
ಈ ವರದಿ ಓದಿದ್ದೀರಾ?: ಪಶ್ಚಿಮ ಬಂಗಾಳದಲ್ಲಿ ಅತ್ಯಾಚಾರಿಗಳಿಗೆ ಗಲ್ಲು ಶಿಕ್ಷೆ; ರಾಜ್ಯಪಾಲರು ಅಂಕಿತ ಹಾಕುವರೆ?
ವಿಕಿಪೀಡಿಯದ ಪುಟದಲ್ಲಿ ಎಎನ್‌ಐ ಬಗೆಗಿನ ಮಾಹಿತಿಯನ್ನು ಚಂದಾದಾರರೊಬ್ಬರು ಎಡಿಟ್ ಮಾಡಿದ್ದು, “ಎಎನ್‌ಐ ಕೇಂದ್ರ ಸರ್ಕಾರಕ್ಕೆ ಅಧಿಕೃತ ಪ್ರಚಾರದ ಸಾಧನವಾಗಿ ಕಾರ್ಯನಿರ್ವಹಿಸುತ್ತಿದೆ. ನಕಲಿ ಸುದ್ದಿ ವೆಬ್‌ಸೈಟ್‌ಗಳ ವ್ಯಾಪಕ ನೆಟ್‌ವರ್ಕ್‌ಅನ್ನು ಹೊಂದಿದೆ. ಘಟನೆಗಳನ್ನು ತಪ್ಪಾಗಿ ವರದಿ ಮಾಡುತ್ತದೆ” ಎಂದು ವಿವರಿಸಲಾಗಿತ್ತು.
ಈ ವಿವರಣೆಯು ಸಂಸ್ಥೆಗೆ ಮಾನಹಾನಿ ಮಾಡುತ್ತದೆ ಎಂದು ಎಎನ್‌ಐ ಅರ್ಜಿ ಸಲ್ಲಿಸಿತ್ತು. ಆ ವಿಷಯವನ್ನು ತೆಗೆದು ಹಾಕಬೇಕು ಮತ್ತು ಎಡಿಟ್ ಮಾಡಿದವರ ಮಾಹಿತಿಯನ್ನು ಬಹಿರಂಗಪಡಿಸಬೇಕು ಎಂದು ಎಎನ್‌ಐ ಕೋರಿತ್ತು.