ಆಡಳಿತ ವ್ಯವಸ್ಥೆಯಲ್ಲಿ ಸುಧಾರಣೆಯೊಂದಿಗೆ ಬದಲಾವಣೆ ತರುವುದು ಅಗತ್ಯವಾಗಿದೆ ಎಂದು ರಾಜ್ಯ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷ ಆರ್ ವಿ ದೇಶಪಾಂಡೆ ಹೇಳಿದರು.
ಧಾರವಾಡ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಆಡಳಿತ ಸುಧಾರಣೆಗೆ ಸಂಬಂಧಿಸಿದಂತೆ ಜಿಲ್ಲಾಡಳಿತ, ಜಿಲ್ಲಾಮಟ್ಟದ ಅಧಿಕಾರಿಗಳ ಮತ್ತು ಜಿಲ್ಲೆಯ ಜನಪ್ರತಿನಿಧಿಗಳ ಅಭಿಪ್ರಾಯ ಮತ್ತು ಸಲಹೆ ಪಡೆಯುವ ಕುರಿತು ಜರುಗಿದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
“ಆಡಳಿತದಲ್ಲಿ ಸರಳತೆ ಮತ್ತು ಜನಸ್ನೇಹಿ ಆಗಿದ್ದಾಗ ಮಾತ್ರ ಸರ್ಕಾರದ ಜನಕಲ್ಯಾಣ ಯೋಜನೆಗಳು, ಅಭಿವೃದ್ಧಿ ಕಾರ್ಯಕ್ರಮಗಳು ಅರ್ಹರಿಗೆ ತಲುಪಲು ಸಾಧ್ಯವಾಗುತ್ತದೆ. ಕಲ್ಯಾಣ ರಾಜ್ಯ ಕಟ್ಟುವುದು ಇಂದಿನ ಸರ್ಕಾರಗಳ ಗುರಿ. ಆಡಳಿತವು ಪಾರದರ್ಶಕವಾಗಿ ಮತ್ತು ಜನಸ್ನೇಹಿಯಾಗಿದ್ದರೆ ಮಾತ್ರ ಇದು ಸಾಧ್ಯವಾಗುತ್ತದೆ. ಆಡಳಿತ ವ್ಯವಸ್ಥೆ ಸರಳವಾಗಿದ್ದರೆ ಜನರಿಗೆ ಸರ್ಕಾರಿ ಯೋಜನೆಗಳ ಲಾಭ ಬೇಗ ತಲುಪುತ್ತದೆ” ಎಂದರು.
“ಇಂದಿನ ಸರ್ಕಾರಗಳು ಅಭಿವೃದ್ಧಿ ಕಾರ್ಯಕ್ರಮಗಳ ಜೊತೆಗೆ ಜನರ ದಿನನಿತ್ಯದ ಜೀವನಮಟ್ಟ ಸುಧಾರಣೆಗೆ ಹೆಚ್ಚು ಒತ್ತು ನೀಡುತ್ತಿವೆ. ಸಕಾಲ ಕಾಯ್ದೆ ಅನುಷ್ಠಾನಕ್ಕೆ ಬಂದಿದ್ದರೂ ಅನೇಕ ಯೋಜನೆಗಳಲ್ಲಿ ಅನಗತ್ಯ ದಾಖಲಾತಿಗಳ ಗೊಂದಲದಿಂದಾಗಿ ವಿಳಂಬವಾಗುತ್ತಿವೆ. ಇದಕ್ಕೆ ಆಡಳಿತದ ವಿವಿಧ ಹಂತಗಳಲ್ಲಿ ಬದಲಾವಣೆ ಅಗತ್ಯವಾಗಿದೆ” ಎಂದು ಹೇಳಿದರು.
ಈ ಸುದ್ದಿ ಓದಿದ್ದೀರಾ? ಧಾರವಾಡ | ಐದು ವರ್ಷ ಮುಖ್ಯಮಂತ್ರಿಯಾಗಿ ಸಿದ್ಧರಾಮಯ್ಯನವರೇ ಮುಂದುವರೆಯುತ್ತಾರೆ: ಆರ್ ವಿ ದೇಶಪಾಂಡೆ
“ಸರ್ಕಾರದ ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ಹುದ್ದೆಗಳು ಮತ್ತು ಕೆಲವು ಇಲಾಖೆಗಳಲ್ಲಿ ಕಾರ್ಯಬಾರ ಕಡಿಮೆ ಇರುವ ಹುದ್ದೆಗಳು ಮುಂದುವರಿದಿರುವುದರಿಂದ ಕೆಲವು ಸಲ ಆಡಳಿತದಲ್ಲಿ ವಿಳಂಬತೆ, ನಿಧಾನಗತಿ ಕಾಣಿಸುತ್ತದೆ. ಹೆಚ್ಚುವರಿ ಹುದ್ದೆಗಳ ಸೃಷ್ಟಿ ಮಾಡುವ ಜತೆಗೆ, ಈಗಾಗಲೇ ಕೆಲವು ಇಲಾಖೆಗಳಲ್ಲಿ ಹೆಚ್ಚುವರಿ ಆಗಿರುವ ಹುದ್ದೆಗಳನ್ನು ರದ್ದುಪಡಿಸುವ ಬಗ್ಗೆಯೂ ಮಾಹಿತಿ ನೀಡಬೇಕು. ಈ ಎಲ್ಲ ಮಾಹಿತಿಯುಳ್ಳ ಅಧಿಕಾರಿಗಳ ಅಭಿಪ್ರಾಯವೂ ಆಡಳಿತ ಸುಧಾರಣೆಯಲ್ಲಿ ಮುಖ್ಯವಾಗಿದೆ” ಎಂದರು.