ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿನ ಕಪಗಲ್ ಬಳಿ ಗುರುವಾರ ನಡೆದ ರಸ್ತೆ ಅಪಘಾತದಲ್ಲಿ ಸಾವಿಗೀಡಾದ ಸಮರ್ಥ ಮತ್ತು ಶ್ರೀಕಾಂತ ಎಂಬ ವಿದ್ಯಾರ್ಥಿಗಳ ಕುಟುಂಬಗಳಿಗೆ ತಲಾ 5 ಲಕ್ಷ ರೂಪಾಯಿಯ ಪರಿಹಾರದ ಚೆಕ್ ಅನ್ನು ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ವೈದ್ಯಕೀಯ ಶಿಕ್ಷಣ ಸಚಿವ ಶರಣ ಪ್ರಕಾಶ್ ಪಾಟೀಲ್ ವಿತರಿಸಿ, ಸಾಂತ್ವನ ಹೇಳಿದರು.
ಅಪಘಾತದಲ್ಲಿ ಮೃತಪಟ್ಟ ಮಕ್ಕಳ ಕುಟುಂಬಗಳಿಗೆ ಈಗಾಗಲೇ ಕೆಎಸ್‌ಆರ್‌ಟಿಸಿಯಿಂದ ಐದು ಲಕ್ಷ ಹಣವನ್ನು ನೀಡಲಾಗುತ್ತಿದೆ. ರಾಜ್ಯದ ಮುಖ್ಯಮಂತ್ರಿಗಳೊಂದಿಗೆ ಈ ಪ್ರಕರಣದ ಕುರಿತು ಮಾತನಾಡಲಾಗಿದೆ. ಅಪಘಾತಕ್ಕೊಳಗಾದ ಮಕ್ಕಳ ಕುಟುಂಬಗಳ ಜೊತೆಗೆ ನಾವಿದ್ದೇವೆ ಎಂದು ಸಚಿವರು ತಿಳಿಸಿದರು.
ಕಾಂಗ್ರೆಸ್ ರಾಜ್ಯ ಯುವ ಮುಖಂಡರಾದ ರವಿ ಬೋಸರಾಜು ಅವರು ಇದೇ ವೇಳೆ ಮಕ್ಕಳ ಕುಟುಂಬಕ್ಕೆ ಬೋಸರಾಜು ಫೌಂಡೇಶನ್‌ನಿಂದ ತಲಾ 1 ಲಕ್ಷ ರೂಯಂತೆ 2 ಲಕ್ಷ ರೂಗಳನ್ನು ನೀಡಿ, ಸಾಂತ್ವನ ತಿಳಿಸಿದರು.

ಈ ಸಂದರ್ಭದಲ್ಲಿ ಶಾಸಕರುಗಳಾದ ಹಂಪಯ್ಯ ನಾಯಕ, ಹಂಪನಗೌಡ ಬಾದರ್ಲಿ, ಎ.ವಸಂತಕುಮಾರ, ದದ್ದಲ ಬಸನಗೌಡ, ಕಾಂಗ್ರೆಸ್ ಮುಖಂಡ ರವಿ ಬೋಸರಾಜ, ಚಂದ್ರಶೇಖರ ಕುರ್ಡಿ, ಜಿಲ್ಲಾಧಿಕಾರಿ ಕೆ. ನಿತೀಶ್ ಕುಮಾರ್, ಎಸ್‌ಪಿ ಪುಟ್ಟಮಾದಯ್ಯ, ರಾಹುಲ್ ತುಕಾರಾಂ ಪಾಂಡ್ವೆ ಸೇರಿದಂತೆ ಅನೇಕ ಮುಖಂಡರುಗಳು,ಅಧಿಕಾರಿಗಳಿದ್ದರು.
ಆಸ್ಪತ್ರೆಗೂ ಭೇಟಿ ನೀಡಿದ ಸಚಿವರು
ಅಪಘಾತದಲ್ಲಿ ಇಬ್ಬರು ವಿದ್ಯಾರ್ಥಿಗಳು ಸಾವನ್ನಪ್ಪಿದ್ದು, ಉಳಿದ ವಿದ್ಯಾರ್ಥಿಗಳನ್ನು ರಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ವಿದ್ಯಾರ್ಥಿಗಳನ್ನು ಸಚಿವ ಶರಣ ಪ್ರಕಾಶ್ ಪಾಟೀಲ್ ಭೇಟಿ ನೀಡಿ, ಚಿಕಿತ್ಸೆ ಪಡೆಯುತ್ತಿರುವ ಮಕ್ಕಳ ಆರೋಗ್ಯದ ಕಡೆ ತೀವ್ರ ಗಮನ ನೀಡುವಂತೆ ರಿಮ್ಸ್ ಅಧಿಕಾರಿಗಳಿಗೆ ಸೂಚಿಸಿದರು.
ಈ ವೇಳೆ ಶಾಸಕರಾದ ಹಂಪಣಗೌಡ, ಎ.ವಸಂತ ಕುಮಾರ್, ಬಸನಗೌಡ ದದ್ದಲ್, ಜಿಲ್ಲಾಧಿಕಾರಿ ನಿತೀಶ್ ಕೆ., ಜಿಲ್ಲಾ ಪಂಚಾಯತ್ ಕಾರ್ಯನಿರ್ವಹಕ ಅಧಿಕಾರಿಗಳು, ಜಿಲ್ಲಾ ಪೊಲೀಸ ವರಿಷ್ಠಾಧಿಕಾರಿಗಳು, ರಾಯಚೂರು ಸಹಾಯಕ ಆಯುಕ್ತರು, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿಗಳು, ರಿಮ್ಸ್ ನಿರ್ದೇಶಕರು, ಆಡಳಿತಾಧಿಕಾರಿಗಳು ಸೇರದಂತೆ ಇತರೆ ಅಧಿಕಾರಿಗಳು ಇದ್ದರು.
