ಬೀದರ್‌ | ಬಸವಣ್ಣ, ವಚನಗಳು ಉಳಿದರೆ ಕನ್ನಡ ಉಳಿಯುವುದು : ಕುಂ.ವೀರಭದ್ರಪ್ಪ

Date:

Advertisements

ಬಸವಣ್ಣ ಹಾಗೂ ಅಕ್ಕ ಮಹಾದೇವಿ ಎಂಬ ಎರಡು ನಾಮವಾಚಕ ಕನ್ನಡದ ಬಹುದೊಡ್ಡ ಶಕ್ತಿಕೇಂದ್ರಗಳು. ಬಸವಣ್ಣ ಮತ್ತು ವಚನ ಸಾಹಿತ್ಯ ಎಲ್ಲಿ ಉಳಿಯುತ್ತದೋ ಅಲ್ಲಿ ಕನ್ನಡ ಉಳಿಯುತ್ತದೆ ಎಂದು ಖ್ಯಾತ ಸಾಹಿತಿ ಕುಂ.ವೀರಭದ್ರಪ್ಪ ಅಭಿಪ್ರಾಯಪಟ್ಟರು.

ಬೀದರ್ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ನಗರದ ಡಾ.ಚನ್ನಬಸವ ಪಟ್ಟದ್ದೇವರು ರಂಗಮಂದಿರದಲ್ಲಿ ಶುಕ್ರವಾರ ಆಯೋಜಿಸಿದ್ದ ಜಿಲ್ಲಾ ಪ್ರಥಮ ಶೈಕ್ಷಣಿಕ ಸಾಹಿತ್ಯ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿ, ʼರಾಜ್ಯದಲ್ಲಿ ಇಂಗ್ಲಿಷ್‌ ಎಂಬ ಅಣಬೆ ಹುಟ್ಟಿಕೊಂಡಿದಕ್ಕೆ ಕನ್ನಡ ಭಾಷೆಗೆ ಕುತ್ತು ಬಂದಿದೆ. ಕನ್ನಡ ಶಾಲೆಗಳು ಮುಚ್ಚಿದರೆ ಭುವನೇಶ್ವರಿ ತಾಯಿಯ ಬಾಯಿ ಮುಚ್ಚಿದಂತೆ. ಹೀಗಾಗಿ ಕಡಿಮೆ ಮಕ್ಕಳಿದ್ದರೂ ಯಾವುದೇ ಕನ್ನಡ ಮಾಧ್ಯಮ ಸರ್ಕಾರಿ ಶಾಲೆಗಳನ್ನು ಮುಚ್ಚಬಾರದುʼ ಎಂದು ಆಗ್ರಹಿಸಿದರು.

ʼಕನ್ನಡ ಜಾಗೃತವಾದ ಶರಣರ ನೆಲದಲ್ಲಿ ಬಹುಭಾಷೆ ಮಿಶ್ರಿತ ಕನ್ನಡ ಬಹಳ ಪ್ರಭಾವಶಾಲಿಯಾಗಿದೆ. ಪಾಲಕರು ತಮ್ಮ ವೃದ್ಧಾಪ್ಯದ ದಿನಗಳನ್ನು ಸಂತಸದಿಂದ ಕಳೆಯಬೇಕಾದರೆ ಮಕ್ಕಳನ್ನು ಕನ್ನಡ ಮಾಧ್ಯಮ ಶಾಲೆಗೆ ಕಳುಹಿಸಬೇಕು. ವೃದ್ಧಾಶ್ರಮ ಸೇರಬೇಕಾದರೆ ಆಂಗ್ಲ ಮಾಧ್ಯಮ ಶಾಲೆಗಳಲ್ಲಿ ಓದಿಸಬೇಕು. ಈ ಮೂಲಕ ಕನ್ನಡ ಶಾಲೆ, ಭಾಷೆಯನ್ನು ಉಳಿಸಬೇಕುʼ ಎಂದು ಹೇಳಿದರು.

Advertisements
WhatsApp Image 2024 09 07 at 10.58.30 AM
ಜಿಲ್ಲಾ ಪ್ರಥಮ ಶೈಕ್ಷಣಿಕ ಸಮ್ಮೇಳನದ ಮೆರವಣಿಗೆಯನ್ನು ಜಿ.ಪಂ.ಸಿಇಒ ಡಾ.ಗಿರೀಶ ಬದೋಲೆ ಉದ್ಘಾಟಿಸಿದರು.

ʼಲಿಂಗಾಯತರು ತಮ್ಮ ಮನೆಗಳನ್ನು ಭಾಂಡೆ ಸಾಮಾನುಗಳ ಅಂಗಡಿ ಮಾಡಿಕೊಂಡಿದ್ದಾರೆ. ಸುಮಾರು 108 ದೇವರುಗಳನ್ನು ಇಟ್ಟುಕೊಂಡು ಪುರೋಹಿತಶಾಹಿ ಎಂಬ ಅಗೋಚರ, ಅಪಾಯಕಾರಿ ಸಂವಿಧಾನಕ್ಕೆ ತಕ್ಕಂತೆ ಅಮಾವಾಸ್ಯೆ, ಹುಣ್ಣಿಮೆ ಎಲ್ಲ ಆಚರಣೆಗಳು ನಡೆಸುತ್ತಾರೆʼ ಎಂದರು.

ʼಹುಟ್ಟಿದ ಮಕ್ಕಳಿಗೆ ಹೆಸರಿಡುವ ಸ್ವಾತಂತ್ರ್ಯ, ಪ್ರೀತಿಸಿ ಮದುವೆಯಾಗುವ ಹಕ್ಕು ಇಲ್ಲದಂತಹ ಕಟ್ಟುಪಾಡು ಬಂಧನದೊಳಗೆ ಸಿಲುಕಿಸಿದ್ದು ಪುರೋಹಿತಶಾಹಿ ಎಂಬ ಮಾನವ ವಿರೋಧಿ ವ್ಯವಸ್ಥೆಯಾಗಿದೆ. ಅಂತಹ ಅಸಮಾನತೆ, ಸಾಮಾಜಿಕ ಅವ್ಯವಸ್ಥೆ ವಿರುದ್ಧ ಹೋರಾಡಿದ ಬಸವಾದಿ ಶರಣರನ್ನು ಪ್ರಪಂಚದಲ್ಲಿ ಎಲ್ಲಿಯೂ ನೋಡಲು ಸಿಗುವುದಿಲ್ಲ. ಸಮಾಜದಲ್ಲಿ ಬೇರೂರಿದ ಅಪಾಯಕಾರಿ ಜಾತಿವ್ಯವಸ್ಥೆ ಹಾಗೂ ಅಸಂಖ್ಯಾತ ದೇವರುಗಳ ನಡುವೆ ವಾಸಿಸುವ ದೇಶದ ಓರ್ವ ಪ್ರಜೆ ಸರ್ವತೋಮುಖ ಅಭಿವೃದ್ಧಿಯಾಗಲು ಸಾಧ್ಯವಿಲ್ಲʼ ಎಂದು ಪ್ರತಿಪಾದಿಸಿದರು.

ʼಕನ್ನಡ ಭವನʼ ಪರಿಷತ್ತಿಗೆ ಒಪ್ಪಿಸಿ :

ಕಸಾಪ ಜಿಲ್ಲಾಧ್ಯಕ್ಷ ಸುರೇಶ ಚನ್ನಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿ, ʼಜಿಲ್ಲಾ ಕನ್ನಡ ಭವನವನ್ನು ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕಕ್ಕೆ ವಹಿಸಬೇಕು. ಕನ್ನಡ ಭವನವನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ವಹಿಸಲು ಇಲಾಖೆಯ ಸಚಿವರು ಜಿಲ್ಲಾಡಳಿತಕ್ಕೆ ಪತ್ರ ಬರೆದಿರುವುದು ಬೇಸರ ತಂದಿದೆʼ ಎಂದರು.

ʼಕನ್ನಡ ಭವನಕ್ಕಾಗಿ ಪರಿಷತ್‌ಗೆ ನಿವೇಶನ ಮಂಜೂರಾಗಿತ್ತು. ಅದೇ ಜಾಗದಲ್ಲಿ ಕನ್ನಡ ಭವನ ನಿರ್ಮಿಸಲಾಗಿದೆ. ಹೀಗಾಗಿ ಭವನವೂ ಜಿಲ್ಲಾ ಕಸಾಪಕ್ಕೆ ಸೇರಿದ್ದಾಗಿದೆ. ಹೀಗಾಗಿ ಅದರ ನಿರ್ವಹಣೆ ಹೊಣೆಯನ್ನು ಕಸಾಪಕ್ಕೆ ವಹಿಸಿ ಸರ್ಕಾರ ಆದೇಶಿಸಬೇಕು. ಜಿಲ್ಲೆಯಲ್ಲಿ ಸರ್ಕಾರದ ವತಿಯಿಂದ ಜಯದೇವಿ ತಾಯಿ ಲಿಗಾಡೆ ಹಾಗೂ ಪ್ರಭುರಾವ ಕಂಬಳಿವಾಲೆ ಹೆಸರಲ್ಲಿ ಪ್ರತಿಷ್ಠಾನ ರಚಿಸಿ ಅನುಷ್ಠಾನಗೊಳಿಸಬೇಕುʼ ಎಂದು ಬೇಡಿಕೆ ಮಂಡಿಸಿದರು.

ಸರ್ಕಾರಿ ಶಾಲೆಗಳ ಅವ್ಯವಸ್ಥೆ ಸರಿಪಡಿಸಿ :

‌ಸಮ್ಮೇಳನ ಸರ್ವಾಧ್ಯಕ್ಷೆ ಡಾ.ಪೂರ್ಣಿಮಾ ಜಾರ್ಜ್ ಮಾತನಾಡಿ, ʼನಮ್ಮ ಭಾಗದ ಸರ್ಕಾರಿ ಶಾಲೆಗಳಲ್ಲಿ ಶಿಕ್ಷಕರ ಕೊರತೆ ನೀಗಿಸಬೇಕು. ಆಡಳಿತಾತ್ಮಕ ಕೆಲಸ ಕಾರ್ಯಗಳಿಗೆ ಶಿಕ್ಷಕರನ್ನು ನೇಮಿಸುವುದು ಕೈಬಿಡಬೇಕು. ಬಹುತೇಕ ಸರ್ಕಾರಿ ಶಾಲೆಗಳಲ್ಲಿ ದೈಹಿಕ ಶಿಕ್ಷಕರ ಕೊರತೆಯಿದೆ. ಜಿಲ್ಲೆಯ 500ಕ್ಕೂ ಅಧಿಕ ಪ್ರಾಥಮಿಕ ಶಾಲೆಗಳಲ್ಲಿ ಮುಖ್ಯಗುರುಗಳಿಲ್ಲದ ಕಾರಣ ಶಾಲಾಡಳಿತ ನಿರ್ವಹಣೆಗೆ ಸಮಸ್ಯೆಯಾಗುತ್ತಿದೆʼ ಎಂದು ಸಮಸ್ಯೆಗಳ ಸರಮಾಲೆ ತೆರೆದಿಟ್ಟರು.

WhatsApp Image 2024 09 07 at 10.58.31 AM
ಸಮ್ಮೇಳನದಲ್ಲಿ ಜಿಲ್ಲೆಯ ಸಾಹಿತ್ಯಾಸಕ್ತರು, ಕನ್ನಡ ಅನುಯಾಯಿಗಳು, ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿಗಳು, ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

ʼಸರ್ಕಾರಿ ಶಾಲೆಗಳಲ್ಲಿ ವಿದ್ಯಾರ್ಥಿ-ಶಿಕ್ಷಕರಿಗೆ ಪ್ರತ್ಯೇಕ ಶೌಚಾಲಯ ವ್ಯವಸ್ಥೆಯಿಲ್ಲ, ಇದರಿಂದಾಗಿ ಹೆಚ್ಚಿನ ಮಕ್ಕಳು, ಅದರಲ್ಲೂ ವಿದ್ಯಾರ್ಥಿನಿಯರು ಗೈರಾಗಲು ಕಾರಣವಾಗಿದೆ. ಅನ್ಯಭಾಷೆ ಪ್ರಭಾವ ಹೊಂದಿದ ಗಡಿ ಭಾಗದಲ್ಲಿ ಕನ್ನಡಮಯ ವಾತಾವರಣ ನಿರ್ಮಿಸಲು ಯೋಜನೆ ರೂಪಿಸಬೇಕು. ಈ ಹಿಂದೆ ಅನುದಾನ ರಹಿತ ಶಿಕ್ಷಣ ಸಂಸ್ಥೆಗಳಲ್ಲಿ ಜಾರಿಯಲ್ಲಿದ್ದ ಆರ್‌ಟಿಇ ಕಾಯ್ದೆ ಪುನಾರಂಭಕ್ಕೆ ಸರ್ಕಾರ ಕ್ರಮ ಕೈಗೊಳ್ಳಬೇಕು. ಜಿಲ್ಲೆಯ ಸಂಗೀತ, ನಾಟಕ, ಬುಲಾಯಿ, ಮೊಹರಂ ವೈಶಿಷ್ಟತೆ ಸೇರಿದಂತೆ ಜಾನಪದ ಕಲೆ, ಸಾಹಿತ್ಯ ಪರಂಪರೆ ಉಳಿಸಿ ಬೆಳೆಸಬೇಕು. ಜಿಲ್ಲೆಯಲ್ಲಿ ಐಐಟಿ, ಏಮ್ಸ್ ಸ್ಥಾಪನೆಗೆ ರಾಜ್ಯ ಸರ್ಕಾರ ಮುಂದಾಗಬೇಕುʼ ಎಂದು ಒತ್ತಾಯಿಸಿದರು.

ಪ್ರಜ್ಞಾವಂತ ಸಮಾಜ ರೂಪಿಸುವಲ್ಲಿ ಶಿಕ್ಷಕರ ಪಾತ್ರ ಪ್ರಮುಖ:

ಉದ್ಘಾಟನೆ ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಮಾತನಾಡಿ, ʼಭಾಷೆ ಇಲ್ಲದಿದ್ದರೆ ಮನುಷ್ಯ ಮೃಗನಾಗುತ್ತಾನೆ. ಎಲ್ಲದಕ್ಕೂ ಮೂಲಾಗ್ರಹ ಭಾಷೆಯಾಗಿದೆ. ವಚನ ಹಾಗೂ ದಾಸ ಸಾಹಿತ್ಯ ಕನ್ನಡದ ಎರಡು ಕಣ್ಣುಗಳಿದ್ದಂತೆ, ಇಡೀ ಜಗತ್ತಿಗೆ ಪ್ರಜಾಪ್ರಭುತ್ವದ ಪರಿಕಲ್ಪನೆ ಕೊಟ್ಟು ಸಮಾನತೆ, ಸಾಮಾಜಿಕ ನ್ಯಾಯ ಒದಗಿಸಿದ ಬಸವಾದಿ ಶರಣರ ಚಿಂತನೆ ಎಂದೆಂದಿಗೂ ಪ್ರಸ್ತುತವಾಗಿರುತ್ತದೆʼ ಎಂದರು.

ʼಸಾಹಿತ್ಯ ಎಂದರೆ ಮನುಷ್ಯನ ಜೀವನಾನುಭವ ಅಕ್ಷರದಲ್ಲಿ ದಾಖಲಿಸುವುದು, ಸಾಹಿತ್ಯ ಒಬ್ಬರನ್ನೊಬ್ಬರು ತಿಳಿದು ಬದುಕಲು ಕಲಿಸುತ್ತದೆ. ದ್ವೇಷ, ಕ್ರೌರ್ಯ ಕೊಂದು ಎದೆಯಲ್ಲಿ ಪ್ರೀತಿ, ಮಾನವೀಯತೆ ಬೆಳೆಸುವ ಸಾಮರ್ಥ್ಯ ಸಾಹಿತ್ಯಕ್ಕಿದೆ. ಶಿಕ್ಷಣ ಹಾಗೂ ಸಾಹಿತ್ಯ ಒಂದಕ್ಕೊಂದು ಅವಿನಾಭಾವ ಸಂಬಂಧವಿದೆ. ಯುವಕರು ತಪ್ಪು ದಾರಿ ತಪ್ಪದಂತೆ ಅವರಲ್ಲಿ ಸಾಹಿತ್ಯದ ಅಭಿರುಚಿ ಬೆಳೆಸಲು ಶಿಕ್ಷಕರು ಪ್ರಯತ್ನಿಸಬೇಕು. ಪ್ರಜ್ಞಾವಂತ ರೂಪಿಸುವಲ್ಲಿ ಶಿಕ್ಷಕರ ಪಾತ್ರ ಪ್ರಮುಖವಾಗಿದೆʼ ಎಂದು ನುಡಿದರು.

WhatsApp Image 2024 09 07 at 10.58.31 AM 1
ಬೀದರ್ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಸಮ್ಮೇಳನದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ʼಕನ್ನಡ ಮಾಧ್ಯಮದ ಅನೇಕ ಶಾಲೆಗಳು ನಿವೇಶನ ಕೊರತೆ ಎದುರಿಸುತ್ತಿವೆ. ಹೀಗಾಗಿ ಖಾಸಗಿ ನಿವೇಶನ ಖರೀದಿಸಿ ಕಟ್ಟಡ ನಿರ್ಮಾಣಕ್ಕೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು. ರಾಜ್ಯ ಸರ್ಕಾರ ಪ್ರಸಕ್ತ ವರ್ಷ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಗೆ 5 ಸಾವಿರ ಕೋಟಿ ರೂ. ಅನುದಾನ ಒದಗಿಸಿದೆ. ಈ ಪೈಕಿ ಜಿಲ್ಲೆಗೆ 400 ಕೋಟಿ ರೂ. ದೊರೆತಿದೆ. ಇದರಲ್ಲಿ125 ಕೋಟಿ ರೂ.ಯನ್ನು ಶಿಕ್ಷಣ ಕ್ಷೇತ್ರಕ್ಕೆ ಮೀಸಲಿಡಲಾಗುವುದು. ಶಾಲೆಗಳಿಗೆ ಮೂಲಸೌಕರ್ಯ ಒದಗಿಸಲಾಗುವುದು ಎಂದು ಹೇಳಿದರು. ಜಿಲ್ಲಾ ಕನ್ನಡ ಭವನದ ನಿರ್ವಹಣೆಗೆ ಸಂಬಂಧಿಸಿದ ಸಮಸ್ಯೆಯನ್ನು ಇಲಾಖೆ ಸಚಿವರೊಂದಿಗೆ ಚರ್ಚಿಸಿ ಪರಿಹರಿಸಲಾಗುವುದುʼ ಎಂದು ಭರವಸೆ ನೀಡಿದರು.

ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಸಿನಿಮಾ ನಿರ್ಮಾಣ ಸಂಸ್ಥೆಗಳಲ್ಲೂ ಲೈಂಗಿಕ ದೌರ್ಜನ್ಯ ತಡೆಗೆ ಆಂತರಿಕ ದೂರು ಸಮಿತಿಗಳು ಇರಲಿ

ಸಮ್ಮೇಳನ ಸರ್ವಾಧ್ಯಕ್ಷೆ ಡಾ.ಪೂರ್ಣಿಮಾ ಜಾರ್ಜ್ ಮಾತನಾಡಿದರು. ಶ್ರೀ ಗುರುಬಸವ ಪಟ್ಟದ್ದೇವರು ಸಾನ್ನಿಧ್ಯ ವಹಿಸಿದ್ದರು. ಬಿಡಿಎ ಅಧ್ಯಕ್ಷ ಬಸವರಾಜ ಜಾಬಶೆಟ್ಟಿ, ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ರಾಜೇಂದ್ರಕುಮಾರ ಗಂದಗೆ, ಪ್ರಮುಖರಾದ ಗುರಮ್ಮ ಸಿದ್ದಾರೆಡ್ಡಿ, ಮೌನೇಶ್ವರ ಲಕ್ಕಾ, ಚಂದ್ರಶೇಖರ ಪಾಟೀಲ್, ಬಸವರಾಜ ಬಲ್ಲೂರ, ಓಂಕಾಂತ ಸೂರ್ಯವಂಶಿ, ಸುರೇಶ ಅಕ್ಕಣ್ಣ, ಪ್ರಭು ತೂಗಾಂವೆ, ಪ್ರಶಾಂತ ಮಠಪತಿ, ಎಂ.ಎಸ್. ಮನೋಹರ, ನಾಗಭೂಷಣ ಮಾಮಡಿ, ಡಾ.ಶಾಲಿವಾನ್ ಉದಗಿರೆ, ಸಿದ್ದಲಿಂಗ ಚಿಂಚೋಳಿ, ಶಾಂತಲಿಂಗ ಮಠಪತಿ, ಬಸವರಾಜ ಹಾವಣ್ಣ, ರಮೇಶ ಸಲಗರ, ಹಾವಶೆಟ್ಟಿ ಪಾಟೀಲ್, ಬಾಬುರಾವ ದಾನಿ ಇತರರಿದ್ದರು. ಶಿವಕುಮಾರ ಕಟ್ಟಿ ಸ್ವಾಗತಿಸಿದರು. ಶಿವಶಂಕರ ಟೋಕರೆ ನಿರೂಪಿಸಿದರು. ಟಿ.ಎಂ. ಮಚ್ಚೆ ವಂದಿಸಿದರು.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಮಂಗಳೂರು | ನ್ಯಾಯಬೆಲೆ ಅಂಗಡಿಯಲ್ಲಿ ‘ಗೋಣಿಚೀಲ’ಕ್ಕಾಗಿ ಜಗಳ: ಮಹಿಳೆಯ ವಿಡಿಯೋ ಮಾಡಿ ತೇಜೋವಧೆಗೆ ಯತ್ನ!

ನ್ಯಾಯಬೆಲೆ ಅಂಗಡಿಯಲ್ಲಿ 'ಗೋಣಿಚೀಲ' ನೀಡುವಂತೆ ಪಟ್ಟು ಹಿಡಿದದ್ದಲ್ಲದೇ, ಗ್ರಾಹಕನೋರ್ವ ನ್ಯಾಯಬೆಲೆ ಅಂಗಡಿಯವರ...

ಮೈಸೂರು | ಜಿ ಟಿ ದೇವೇಗೌಡರ ದಲಿತ ವಿರೋಧಿ ಹೇಳಿಕೆ ಖಂಡಿಸಿ ವಿದ್ಯಾರ್ಥಿಗಳಿಂದ ಪ್ರತಿಭಟನೆ

ಮೈಸೂರು ವಿಶ್ವವಿದ್ಯಾನಿಲಯದ ಸಂಶೋಧಕರ ಸಂಘ ಹಾಗೂ ದಲಿತ ವಿದ್ಯಾರ್ಥಿ ಒಕ್ಕೂಟದ ವಿದ್ಯಾರ್ಥಿಗಳು...

ದಾವಣಗೆರೆ | ಶಾಲೆಗೆ ರಸ್ತೆ ಅಭಿವೃದ್ಧಿಪಡಿಸಲು ಆರನೇ ತರಗತಿ ವಿದ್ಯಾರ್ಥಿನಿ ಗ್ರಾ.ಪಂ. ಮುಂದೆ ಧರಣಿ

ಶಾಲೆಗೆ ಹೋಗುವ ರಸ್ತೆ ಸರಿಪಡಿಸಿ ಅಭಿವೃದ್ಧಿಪಡಿಸಲು ಒತ್ತಾಯಿಸಿ ಆರನೇ ತರಗತಿ ವಿದ್ಯಾರ್ಥಿನಿಯೊಬ್ಬಳು...

ಹಾವೇರಿ | ಗಣೇಶ ಚತುರ್ಥಿ ಪ್ರಯುಕ್ತ 265 ಹೆಚ್ಚುವರಿ ಸಾರಿಗೆ ಸೌಲಭ್ಯ

ಚತುರ್ಥಿಯ ಪ್ರಯುಕ್ತ ಸಾರ್ವಜನಿಕರು ತಮ್ಮ ಸ್ವಂತ ಊರುಗಳಿಗೆ ತೆರಳಲು ಅನುಕೂಲವಾಗುವಂತೆ ವಾಯವ್ಯ...

Download Eedina App Android / iOS

X