ಅಂತಾರಾಜ್ಯಗಳಲ್ಲಿ ಮನೆಗಳ್ಳತನ ನಡೆಸುತ್ತಿದ್ದ ಆರೋಪದಲ್ಲಿ ಮಹಾರಾಷ್ಟ್ರ ಮೂಲದ ನಾಲ್ವರನ್ನು ವಿಜಯಪುರ ಜಿಲ್ಲೆಯ ಪೊಲೀಸರು ಬಂಧಿಸಿದ್ದಾರೆ. ಕಳ್ಳತನ ಮಾಡಲಾಗಿದ್ದ ಚಿನ್ನಾಭರಣ ವಶಕ್ಕೆ ಪಡೆಯುವಲ್ಲಿಯೂ ಯಶಸ್ವಿಯಾಗಿದ್ದಾರೆ.
ವಿಜಯಪುರ ಗ್ರಾಮೀಣ ಪೋಲಿಸ್ ಠಾಣೆಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ವಿವರಿಸಿದ ಎಸ್‌ಪಿ ಋಷಿಕೇಶ ಭಗವಾನ್ ಸೋನವಾಣೆ, ಮಹಾರಾಷ್ಟ್ರದಿಂದ ವಿಜಯಪುರ ಜಿಲ್ಲೆಗೆ ಬಂದು ಕಳ್ಳತನ ಮಾಡಿದ ಬಳಿಕ ಈ ಗುಂಪು ತವರು ರಾಜ್ಯಕ್ಕೆ ಪರಾರಿಯಾಗುತ್ತಿತ್ತು ಎಂದು ವಿವರಿಸಿದ್ದಾರೆ.
ಜಿಲ್ಲೆಯಲ್ಲಿ ನಡೆಯುತ್ತಿದ್ದ ಕಳ್ಳತನ ಪತ್ತೆಗೆ ವಿಜಯಪುರ ಗ್ರಾಮಾಂತರ ಉಪವಿಭಾಗ ಡಿವೈಎಸ್ಪಿ ಜಿ.ಎಚ್.ತಳಕಟ್ಟಿ, ಇನ್ಸ್‌ಪೆಕ್ಟರ್ ರಾಯಗೊಂಡ ಜಾನಾರ, ಆನಂದರಾವ್, ಪಿಎಸ್‍ಐ ಗಳಾದ ರವಿ ಯಡವಣ್ಣವರ, ಎನ್.ಎ.ಉಪ್ಪಾರ ನೇತೃತ್ವದ ತಂಡ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ. ನಗರದ ಹೊರ ಭಾಗದ ಬರಗಟಗಿ ತಾಂಡಾ ಬಳಿ ಸಂಶಯಾಸ್ಪದ ರೀತಿಯಲ್ಲಿ ಓಡಾಡುತ್ತಿದ್ದ ನಾಲ್ವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಕಳ್ಳರ ಕೈಚಳಕ ಪತ್ತೆಯಾಗಿದೆ ಎಂದಿದ್ದಾರೆ.
ಬಂಧಿತರನ್ನು ಮಹಾರಾಷ್ಟ್ರದ ಸೋಲಾಪುರ ಜಿಲ್ಲೆಯ ರಾಮವಾಡಿ ನಿವಾಸಿ 55 ವರ್ಷದ ನಂದಾ ಉರ್ಫ ನಂದಾಬಾಯಿ ಗಾಯಕಡವಾಡ, ಸೋಲಾಪುರ ಜಿಲ್ಲೆಯ ಅಕ್ಕಲಕೋಟ ತಾಲೂಕಿನ ಬ್ಯಾಗಳ ಮೂಲದ 35 ವರ್ಷದ ಗಣೇಶ ಜಾಧವ, ದಕ್ಷಿಣ ಸೋಲಾಪುರದ ಪಟವರ್ಧನ ಚಾಳ ನಿವಾಸಿ 35 ವರ್ಷದ ಮಹದೇವ ಪಿಂಟು ಗಾಯಕವಾಡ ಹಾಗೂ ಸೋಲಾಪುರದ ರಾಮವಾಡಿ ಮೂಲದ 38 ವರ್ಷದ ಸುಂದರಾಬಾಯಿ ಮಾಣಿಕ ಜಾಧವ ಎಂದು ಗುರುತಿಸಲಾಗಿದೆ.
ಈ ಸುದ್ಧಿ ಓದದ್ದೀರಾ? ಚಿಕ್ಕಮಗಳೂರು | ಗಣೇಶ ಮೂರ್ತಿ ತರಲು ತೆರಳುತ್ತಿದ್ದ ವೇಳೆ ಅಪಘಾತ: ಇಬ್ಬರು ಯುವಕರು ಸ್ಥಳದಲ್ಲೇ ಮೃತ್ಯು
ಜಿಲ್ಲೆಯ ಐದು ಕಡೆಗಳಲ್ಲಿ ಕಳ್ಳತನ ಮಾಡಿರುವುದಾಗಿ ಒಪ್ಪಿಕೊಂಡಿರುವ ಬಂಧಿತರಿಂದ ಪೊಲೀಸರು 208 ಗ್ರಾಂ ಚಿನ್ನಾಭರಣ ವಶಪಡಿಸಿಕೊಂಡಿದ್ದಾರೆ. ಮಹಾರಾಷ್ಟ್ರ ಮೂಲದ ಈ ಕಳ್ಳರ ತಂಡ ಕಳೆದ ಎರಡು ವರ್ಷಗಳಿಂದ ಕರ್ನಾಟಕ ರಾಜ್ಯದ ವಿಜಯಪುರ ನಗರದ ಶಿವಗಿರಿ ಪ್ರದೇಶ, ಡೋಮನಾಳ ಗ್ರಾಮ, ದೇವರಹಿಪ್ಪರಗಿ ಪಟ್ಟಣ, ತಿಕೋಟಾ ಬಸ್ ನಿಲ್ದಾಣಗಳಲ್ಲಿ ನಡೆದ ಕಳ್ಳತನ ಪ್ರಕರಣದಲ್ಲಿ ಭಾಗಿಯಾಗಿದ್ದಾಗಿ ಪೊಲೀಸರ ತನಿಖೆಯಲ್ಲಿ ಬಾಯಿ ಬಿಟ್ಟಿದ್ದಾರೆ ಎಂದು ತಿಳಿದುಬಂದಿದೆ.