‘ಜನರು ಕೆಲವು ವಂಚಕ ಕಂಪನಿಗಳ ಬಗ್ಗೆ ಜಾಗರೂಕರಾಗಿರಬೇಕು. ಕಂಪನಿಗಳ ಸತ್ಯಾಸತ್ಯತೆ ಪರಾಮರ್ಶಿಸಿ ಹಣ ತೊಡಗಿಸಬೇಕು. ಬಡ್ಸ್ ಕಾಯಿದೆ ಜಾರಿಗೆ ಕುರಿತು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ’ ಎಂದು ಸಚಿವ ಎಚ್.ಕೆ. ಪಾಟೀಲ ತಿಳಿಸಿದರು.
ಸಾರ್ವಜನಿಕರಿಗೆ ವಂಚನೆ ಮಾಡಿದ ಕಂಪನಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಹಾಗೂ ಕಂಪನಿಗಳಿಗೆ ಹಣ ಸಂದಾಯ ಮಾಡಿದ ಜನರಿಗೆ ತಕ್ಷಣ ಮರುಪಾವತಿಸಬೇಕೆಂದು ಆಗ್ರಹಿಸಿ ಟಿಪಿಜೆಪಿ (ಠಗಿ ಪೀಡಿತ ಜಮಾಕರ್ತ ಪರಿವಾರ) ಸಂಘಟನೆ ನಡೆಸುತ್ತಿರುವ ಸಂತ್ರಸ್ಥ ಠೇವಣಿದಾರರ ಅನಿರ್ದಿಷ್ಟಾವಧಿ ಧರಣಿ ಸ್ಥಳಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ ಪಾಟೀಲ ಭೇಟಿ ನೀಡಿ ಸಮಸ್ಯೆಗಳನ್ನು ಆಲಿಸಿದರು.
ಜನತೆಗೆ ಹಾಗೂ ಠೇವಣಿದಾರರಿಗೆ ಅನ್ಯಾಯ ಮಾಡಿದ ಪ್ರಕರಣ ಕುರಿತು ಕಂದಾಯ ಸಚಿವ ಕೃಷ್ಣಬೈರೇಗೌಡ ಅವರ ಜತೆಗೆ ಚರ್ಚೆ ಮಾಡುತ್ತೇನೆ. ಅಕ್ರಮ ಸಾಬೀತಾದರೆ ಅವರ ಆಸ್ತಿಯನ್ನು ಮುಟ್ಟುಗೋಲು ಹಾಕಿ ಗ್ರಾಹಕರಿಗೆ ಹಣ ನೀಡುವ ಕುರಿತು ಸಮಗ್ರವಾಗಿ ಪರಿಶೀಲನೆ ನಡೆಸುತ್ತೇವೆ. ಗದಗ ಜಿಲ್ಲೆಯಲ್ಲಿ ಕಂಪನಿಗಳ ಆಸ್ತಿ ಏನಾದರೂ ಇದ್ದರೆ ಮಾಹಿತಿ ನೀಡುವಂತೆ ಸೂಚಿಸಿದರು.
ಸಂಘದ ಜಿಲ್ಲಾಧ್ಯಕ್ಷ ಹೇಮಂತಗೌಡ ಮಾಲಿಪಾಟೀಲ ಮಾತನಾಡಿ, ಕಂಪನಿಗಳಿಂದ ವಂಚಿತರಾದ ಜನರಿಗೆ ನ್ಯಾಯ ಸಿಗುವವರೆಗೂ ಸ್ಥಳ ಬಿಟ್ಟು ಕದಲುವುದಿಲ್ಲ. ನಮ್ಮ ನ್ಯಾಯಯುತ ಬೇಡಿಕೆಗಳಿಗೆ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಸಕಾರಾತ್ಮಕವಾಗಿ ಸ್ಪಂದಿಸಬೇಕು ಎಂದು ಆಗ್ರಹಿಸಿದರು.
ಈ ಸುದ್ಧಿ ಓದಿದ್ದೀರಾ? ಲಕ್ಷ್ಮೇಶ್ವರ | ಸಾರ್ವಜನಿಕ ಮಹಿಳಾ ಶೌಚಾಲಯ ನಿರ್ಮಾಣಕ್ಕೆ ರೈತಪರ ಹೋರಾಟಗಾರರ ಆಗ್ರಹ
ಸಂತ್ರಸ್ತರಾದ ನೀಲಾ ಗದೆಗಲಿ ಹಾಗೂ ಸುಮಂಗಲಾ ರಾಠೋಡ ಮಾತನಾಡಿ, ‘ಬಡ ಜನರು, ಕೂಲಿಕಾರ್ಮಿಕರು ಹಾಗೂ ರೈತರು ಅತಿ ಹೆಚ್ಚಿನ ಸಂಖ್ಯೆಯಲ್ಲಿ ಕಂಪನಿಗಳಲ್ಲಿ ಹಣ ತೊಡಗಿಸಿದ್ದಾರೆ. ಸೆಬಿ, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಕಂಪನಿಗಳ ವಿರುದ್ದ ಮೃದು ಧೋರಣೆ ತಾಳುತ್ತಿವೆ. ಹಲವಾರು ಬಾರಿ ಪ್ರತಿಭಟನೆ ಮಾಡಿದರೂ ಯಾವುದೇ ಪ್ರಯೋಜನ ಆಗಿಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿದರು.