ಕನ್ನಡ ಸಾರಸ್ವತ ಲೋಕದಲ್ಲಿ ವಚನ ದರ್ಶನ ಪುಸ್ತಕ ಹೊರತರುವ ಮೂಲಕ ಇತಿಹಾಸವನ್ನು ತಿರುಚುವ ಕೆಲಸ ಮಾಡುತ್ತಿದ್ದು, ಬಸವಣ್ಣನ ಆಲೋಚನೆಗಳಿಗೆ ಧಕ್ಕೆ ಉಂಟುಮಾಡುವ ಪ್ರಯತ್ನ ನಡೆಯುತ್ತಿದೆ ಎಂದು ಕರ್ನಾಟಕ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಎಲ್ ಎನ್ ಮುಕುಂದರಾಜ್ ವಾಗ್ದಾಳಿ ನಡೆಸಿದ್ದಾರೆ.
ಮಂಡ್ಯ ನಗರದ ಕರ್ನಾಟಕ ಸಂಘದ ಕೆವಿಎಸ್ ಭವನದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಪತ್ರಕರ್ತ ಗಣಗಂಗೂರು ನಂಜೇಗೌಡರ ‘ರಣಧೀರ ಕಂಠೀರವ’ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದರು.
“ಉರಿಗೌಡ ಮತ್ತು ನಂಜೇಗೌಡ ಎಂಬವರಿಂದ ಟಿಪ್ಪು ಸುಲ್ತಾನ್ ಸಾಯಿಸಲ್ಪಟ್ಟನೆಂಬ ಸುಳ್ಳು ಹೇಳಿಕೆಗಳನ್ನು ಬಳಸಿ ಇತಿಹಾಸ ತಿರುಚಲಾಗುತ್ತಿದೆ” ಎಂದು ಕಿಡಿಕಾರಿದರು.
“ಜಿಲ್ಲೆಯಲ್ಲಿ ಜಾತಿ ಆಧಾರದ ಮೇಲೆ ಅಶಾಂತಿ ಉಂಟುಮಾಡುವ ಹುನ್ನಾರ ನಡೆಸಿದ್ದರು, ಮಂಡ್ಯ ಜನರು ಇಂತಹ ಜಾತಿ ಆಟವನ್ನು ಭೇದಿಸಿ ನಿಲ್ಲಿಸಲಿದ್ದಾರೆ. ಟಿಪ್ಪುವಿಗೆ “ಮೈಸೂರಿನ ಹುಲಿ” ಎಂಬ ಹೆಸರು ಕೊಟ್ಟವರು ಜಾನಪದ ಕವಿಗಳು ಮತ್ತು ಲಾವಣಿ ಜನರು. ಇತಿಹಾಸವನ್ನು ಸರಿಯಾಗಿ ತಿಳಿದುಕೊಳ್ಳಬೇಕು” ಎಂದು ಸಲಹೆ ನೀಡಿದರು.
ಕರ್ನಾಟಕ ಸಂಘದ ಅಧ್ಯಕ್ಷ ಪ್ರೊ ಜಯಪ್ರಕಾಶಗೌಡ ಮಾತನಾಡಿ, “ಟಿಪ್ಪು ಒಂದು ಭೂತ. ಆ ಭೂತವನ್ನು ಇಟ್ಟುಕೊಂಡು ಯಾಕೆ ಒದ್ದಾಡೋಣ. ಅವನು ಮತಾಂಧನೋ ಅಲ್ಲವೋ, ಇಲ್ಲವೇ ಹಿಂದು ಧರ್ಮದ ವಿರೋಧಯಾಗಿದ್ದನೋ ಇಲ್ಲವೋ ಅದು ನಮಗೆ ಬೇಕಾಗಿಲ್ಲ. ಇವತ್ತು ನಮಗೆ ಬೇಕಾಗಿರೋದು ಸೌಹಾರ್ದ. ಅಭಿವೃದ್ಧಿ ಬೇಕು, ಬದುಕಿಗೆ ಬೇಕಾದ ಅನುಕೂಲ ಬೇಕು. ಅದರ ಬಗ್ಗೆ ನಾವು ಯೋಚನೆ ಮಾಡೋಣ” ಎಂದರು.
ಇತಿಹಾಸ ಸಂಶೋಧಕ ತೈಲೂರು ವೆಂಕಟಕೃಷ್ಣ ಮಾತನಾಡಿ, “ಶ್ರೀರಂಗಪಟ್ಟಣದಲ್ಲಿ ಮಲ್ಟಿಸ್ಪೆಷಾಲಿಟಿ ಕಟ್ಟಡಗಳು ಹೆಚ್ಚಾಗುತ್ತಿರುವುದರಿಂದ ಇಲ್ಲಿನ ಗುಡಿ ಗೋಪುರಗಳು, ಕರಿಘಟ್ಟ ಸೇರಿದಂತೆ ಕಾವೇರಿ ನದಿ ಕಾಣಿಸುತ್ತಿಲ್ಲ. ಹೀಗಾಗಿ ನಮ್ಮ ಐತಿಹಾಸಿಕ ಪಟ್ಟಣ ಇದರ ನಡುವೆ ಮರೆಯಾಗುತ್ತಿದೆ” ಎಂದು ಆತಂಕ ವ್ಯಕ್ತಪಡಿಸಿದರು.
ಈ ಸುದ್ದಿ ಓದಿದ್ದೀರಾ? ದಾವಣಗೆರೆ | ಒಳ ಮೀಸಲಾತಿ ಅನುಷ್ಠಾನ ಮಾಡದೆ ಮಾದಿಗ ಸಮುದಾಯಕ್ಕೆ ಕಾಂಗ್ರೆಸ್ ಸರ್ಕಾರದಿಂದ ಅನ್ಯಾಯ : ಮಂಜುನಾಥ್ ಕುಂದುವಾಡ
ಈ ಸಂದರ್ಭದಲ್ಲಿ ಲೇಖಕ ಗಣಂಗೂರು ನಂಜೇಗೌಡರಿಗೆ ಶ್ರೀರಂಗಪಟ್ಟಣದ ಪ್ರಜ್ಞಾವಂತರ ವೇದಿಕೆ ಹಾಗೂ ಮುಸ್ಲಿಂ ಸೌಹಾರ್ದ ವೇದಿಕೆಯವರು ಸನ್ಮಾನಿಸಿದರು. ಶಾಸಕ ಎ ಬಿ ರಮೇಶ್ ಬಂಡಿಸಿದ್ದೇಗೌಡ ಪುಸ್ತಕವನ್ನು ಬಿಡುಗಡೆಗೊಳಿಸಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ವಕೀಲರಾದ ವೆಂಕಟೇಶ್, ಜಯಶಂಕರ್, ತುಕಾರಾಂ, ಅಲಯನ್ಸ್ ಜಿಲ್ಲಾ ರಾಜ್ಯಪಾಲ ಕೆ ಟಿ ಹನುಮಂತು, ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಬಿ ಪಿ ಪ್ರಕಾಶ್ ಇದ್ದರು.