ಜಂತರ್ ಮಂತರ್‌ಗೆ ಹೋಗಿ ಪ್ರತಿಭಟನಾ ನಿರತ ಮಹಿಳಾ ಕುಸ್ತಿಪಟುಗಳ ‘ಮನ್ ಕಿ ಬಾತ್’ ಆಲಿಸುವಂತೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ರಾಜ್ಯಸಭಾ ಸಂಸದ ಕಪಿಲ್ ಸಿಬಲ್ ಸೋಮವಾರ ಒತ್ತಾಯಿಸಿದ್ದಾರೆ.
ಪ್ರಧಾನಿ ಮೋದಿ ಅವರು ಭಾನುವಾರ ತಮ್ಮ 100ನೇ ಸಂಚಿಕೆಯ ‘ಮನ್ ಕಿ ಬಾತ್’ ರೇಡಿಯೋ ಕಾರ್ಯಕ್ರಮವನ್ನು ಪ್ರಸಾರ ಮಾಡಿದ್ದಾರೆ. ಅವರ ಕಾರ್ಯಕ್ರಮದ ಬಗ್ಗೆ ಕಪಿಲ್ ಸಿಬಲ್ ಪ್ರತಿಕ್ರಿಯಿಸಿದ್ದು, “ಹೋರಾಟನಿರತ ಮಹಿಳಾ ಕುಸ್ತಿಪಟುಗಳ ‘ಮನ್ ಕಿ ಬಾತ್’ (ಮನದ ಮಾತು)ಅನ್ನು ಪ್ರಧಾನಿ ಕೇಳಬೇಕು. ಹೀಗೆ ಮಾಡುವುದರಿಂದ ಅವರ ನೋವನ್ನು ಅರ್ಥಮಾಡಿಕೊಳ್ಳಲು ಸಾಧ್ಯವಾಗುತ್ತದೆ. ಮೋದಿ ಅವರು ಪ್ರಜೆಗಳ ನೋವನ್ನೂ ಅರಿಯಲು ಸಿದ್ದರಿದ್ದಾರೆ ಎಂಬುದನ್ನು ತೋರಿಸುತ್ತದೆ” ಎಂದು ಹೇಳಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಸಿಬಲ್, “ಮೋದಿಜೀ: ನಿಮ್ಮ 100ನೇ ‘ಮನ್ ಕಿ ಬಾತ್’ ಗೆ ಅಭಿನಂದನೆಗಳು. ಮೋದಿಜೀ ನಿಮಗೆ ಸಮಯವಿದ್ದರೆ ದಯವಿಟ್ಟು ಜಂತರ್ ಮಂತರ್‌ಗೆ ಹೋಗಿ ಮತ್ತು ಪ್ರತಿಭಟನಾ ನಿರತ ಮಹಿಳಾ ಕುಸ್ತಿಪಟುಗಳ ‘ಮನ್ ಕಿ ಬಾತ್’ ಅನ್ನು ಆಲಿಸಿ” ಎಂದಿದ್ದಾರೆ.
“ನಮ್ಮ ಪ್ರಧಾನಿ ಅವರ ನೋವನ್ನು ಅರ್ಥಮಾಡಿಕೊಳ್ಳಲು ಸಿದ್ಧರಿದ್ದಾರೆ ಎಂದು ಅದು ತೋರಿಸುತ್ತದೆ!” ಸಿಬಲ್ ಹೇಳಿದ್ದಾರೆ.
ಬಿಜೆಪಿ ಸಂಸದ, ರೆಸ್ಲಿಂಗ್ ಫೆಡರೇಶನ್ ಆಫ್ ಇಂಡಿಯಾದ ಮುಖ್ಯಸ್ಥ ಬ್ರಿಜ್ ಭೂಷಣ್ ಶರಣ್ ಸಿಂಗ್ ತಮಗೆ ಲೈಂಗಿಕ ದೌರ್ಜನ್ಯ ನಡೆಸಿದ್ದಾರೆಎಂದು ಏಳು ಮಹಿಳಾ ಕುಸ್ತಿಪಟುಗಳು ಆರೋಪಿಸಿದ್ದಾರೆ. ಅವರನ್ನು ಬಂಧಿಸಿ, ಶಿಕ್ಷೆಗೆ ಗುರಿಪಡಿಸಬೇಕೆಂದು ಒತ್ತಾಯಿಸಿ ದೆಹಲಿಯ ಜಂತರ್ ಮಂತರ್‌ನಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ. ಬ್ರಿಜ್ ಭೂಷಣ್ ವಿರುದ್ಧ ಎಫ್‌ಐಆರ್ ದಾಖಲಿಸಲು ಮೊದಲು ನಿರಾಕರಿಸಿದ್ದ ಪೊಲೀಸರು ಶುಕ್ರವಾರ ಎರಡು ಎಫ್‌ಐಆರ್ ದಾಖಲಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ?: ಪ್ರಿಯಾಂಕಾ ಗಾಂಧಿ ವಾದ್ರಾ ಅವರಿಂದ ಪ್ರತಿಭಟನಾನಿರತ ಕುಸ್ತಿಪಟುಗಳ ಭೇಟಿ | ತಬ್ಬಿ ಸಂತೈಸಿದ ನಾಯಕಿ
ಮೊದಲ ಎಫ್‌ಐಆರ್ ಅಪ್ರಾಪ್ತ ಕುಸ್ತಿಪಟುವಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೋಕ್ಸೊ) ಕಾಯ್ದೆಯಡಿಯಲ್ಲಿ ದಾಖಲಾಗಿದೆ. ಮಹಿಳೆಯರಿಗೆ ಕಿರುಕುಳ ನೀಡಿದ ಆರೋಪದ ಮೇಲೆ ಭಾರತೀಯ ದಂಡ ಸಂಹಿತೆ ವಿವಿಧ ಸೆಕ್ಷನ್‌ಗಳ ಅಡಿ ಎರಡನೇ ಎಫ್‌ಐಆರ್ ದಾಖಲಾಗಿದೆ.
ಸಿಂಗ್ ಅವರನ್ನು ಬಂಧಿಸುವವರೆಗೂ ಪ್ರತಿಭಟನೆಯನ್ನು ಕೈಬಿಡುವುದಿಲ್ಲ ಎಂದು ಕುಸ್ತಿಪಟುಗಳು ಪಟ್ಟುಹಿಡಿದಿದ್ದಾರೆ. ಮಹಿಳಾ ಕ್ರೀಡಾಪಟುಗಳ ಹೋರಾಟಕ್ಕೆ ದೇಶದ ಹಲವಾರು ಅಂತಾರಾಷ್ಟ್ರೀಯ ಕ್ರಿಡಾಪಟುಗಳು ಬೆಂಬಲ ನೀಡಿದ್ದಾರೆ. “ಸಿಂಗ್ ವಿರುದ್ಧದ ಲೈಂಗಿಕ ಕಿರುಕುಳ ಆರೋಪದ ತನಿಖೆ ನಡೆಸಬೇಕು. ತನಿಖಾ ವರದಿಯನ್ನು ಸರ್ಕಾರ ಸಾರ್ವಜನಿಕಗೊಳಿಸಬೇಕು” ಎಂದು ಒತ್ತಾಯಿಸಿದ್ದಾರೆ.