ಬೆಂಗಳೂರಿನ ವೈಟ್ ಫೀಲ್ಡ್‌ನಲ್ಲಿರುವ ದಿ ರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರು ಆರೋಪಿಗಳ ವಿರುದ್ಧ ರಾಷ್ಟ್ರೀಯ ತನಿಖಾ ದಳ (ಎನ್‌ಐಎ) ಬೆಂಗಳೂರಿನ ವಿಶೇಷ ಎನ್‌ಐಎ ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಸಿದೆ.
ಆರೋಪಿಗಳಾದ ಮಸಾವಿರ್ ಹುಸೇನ್ ಶಾಜೀಬ್, ಅಬ್ದುಲ್ ಮತೀನ್ ಅಹಮದ್ ತಾಹಾ, ಮಾಜ್ ಮುನೀರ್ ಅಹಮದ್ ಹಾಗೂ ಮುಝಮಿಲ್ ಷರೀಫ್ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಲಾಗಿದೆ.
ಜನವರಿ 22ರಂದು ಅಯೋಧ್ಯೆಯಲ್ಲಿ ನಡೆದ ಶ್ರೀರಾಮ ಮಂದಿರ ಉದ್ಘಾಟನೆ ಕಾರ್ಯಕ್ರಮದಂದೇ ಬೆಂಗಳೂರಿನ ಮಲ್ಲೇಶ್ವರಂನಲ್ಲಿರುವ ಬಿಜೆಪಿ ಕಚೇರಿಯಲ್ಲಿ ಸ್ಫೋಟಿಸಲು ಯತ್ನಿಸಿ ವಿಫಲವಾಗಿದ್ದರು. ಬಳಿಕ ರಾಮೇಶ್ವರಂ ಕೆಫೆಯಲ್ಲಿ ಸ್ಫೋಟಿಸಿದ್ದರು ಎಂಬ ಅಂಶ ಚಾರ್ಜ್ ಶೀಟ್‌ನಲ್ಲಿ ಬಹಿರಂಗವಾಗಿದೆ.
ಶಿವಮೊಗ್ಗ ಮೂಲದವರಾಗಿದ್ದ ಮಸಾವಿರ್ ಹುಸೇನ್ ಶಾಜೀಬ್, ಅಬ್ದುಲ್ ಮತೀನ್ ಅಹಮದ್ ತಾಹಾ ಐಸಿಸ್‌ನಿಂದ ಪ್ರೇರಿತರಾಗಿದ್ದು, ಮುಸ್ಲಿಂ ಯುವಕರನ್ನು ಐಸಿಸ್‌ನತ್ತ ಸೆಳೆಯುತ್ತಿದ್ದರು. ಪ್ರಕರಣದ ಇನ್ನಿಬ್ಬರು ಆರೋಪಿಗಳಾದ ಮಾಜ್ ಮುನೀರ್ ಅಹಮದ್ ಹಾಗೂ ಮುಝಮಿಲ್ ಷರೀಫ್ನನ್ನು ಸಹ ಅದೇ ರೀತಿ ಐಸಿಸ್‌ನ ವಿಚಾರಗಳೆಡೆಗೆ ಸೆಳೆಯಲಾಗಿತ್ತು ಎಂದು ಉಲ್ಲೇಖಿಸಲಾಗಿದೆ.
ಕಳೆದ ಮಾರ್ಚ್ 1 ರಂದು ರಾಮೇಶ್ವರಂ ಕೆಫೆಯಲ್ಲಿ ಗ್ರಾಹಕರು ಬಿಸಿಬಿಸಿಯಾದ ಊಟವನ್ನ ಸವಿಯುತ್ತಿದ್ದ ವೇಳೆ ಹೋಟೆಲ್ ಒಳಗಡೆ ಏಕಾಏಕಿ ಸ್ಫೋಟಗೊಂಡಿತ್ತು. ಹೋಟೆಲ್ ಸಿಬ್ಬಂದಿ ಫಾರುಖ್, ಅಮೇಜನ್ ಕಂಪನಿಯ ಸಿಬ್ಬಂದಿ ದೀಪಾಂಶು, ಸ್ವರ್ಣಾಂಬ, ಮೋಹನ್, ನಾಗಶ್ರೀ, ಮೋಮಿ, ಬಲರಾಮ್ ಕೃಷ್ಣನ್, ನವ್ಯಾ, ಶ್ರೀನಿವಾಸ್ ಗಾಯಗೊಂಡಿದ್ದರು.
ಪ್ರಕರಣದ ತನಿಖೆ ಚುರುಕುಗೊಳಿಸಿದ ಎನ್‌ಐಎ ಅಧಿಕಾರಿಗಳು ಆರೋಪಿ ಟೋಪಿವಾಲನ ಬೆನ್ನತ್ತಿ ದಿಕ್ಕು ದಿಕ್ಕಿನಲ್ಲೂ ತನಿಖೆ ನಡೆಸಿ ಉಳಿದ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದರು.