ಯುದ್ಧದ ಲಾಭದಾಯಕತೆ ಮತ್ತು ವಸಾಹತುಶಾಹಿ ವ್ಯವಸ್ಥೆ ವಿರುದ್ಧದ ಹೋರಾಟದಲ್ಲಿ ವಿಶೇಷಚೇತನರ ಸಂಸ್ಥೆಗಳು ಮುಂಚೂಣಿಯಲ್ಲಿ ನಿಲ್ಲಬೇಕಿದೆ. ಬಹಿಷ್ಕಾರದ ರಾಜಕೀಯಕ್ಕೆ ಬಲಿಯಾದ ಸಂತ್ರಸ್ತರೊಂದಿಗೆ ಒಗ್ಗಟ್ಟಿನಿಂದ ನಿಲ್ಲುವುದು ಭಾರತದ ಅಂಗವೈಕಲ್ಯ ಚಳವಳಿಯ ಪ್ರಮುಖ ಕಾರ್ಯಸೂಚಿಯಲ್ಲಿ ಒಂದಾಗಬೇಕಿದೆ.
ಪ್ರತಿ ವರ್ಷ, ಜುಲೈ ತಿಂಗಳನ್ನು ಜಾಗತಿಕ ವಿಶೇಷಚೇತನರ(ಅಂಗವಿಕಲರು) ಹೆಮ್ಮೆಯ ತಿಂಗಳಾಗಿ ಆಚರಿಸಲಾಗುತ್ತದೆ. 1990ರ ಜುಲೈ 26ರಂದು ಅಮೆರಿಕದಲ್ಲಿ ಅಮೆರಿಕನ್ನರ ವಿಕಲಾಂಗ ಕಾಯ್ದೆ-1990ಅನ್ನು ಅಂಗೀಕರಿಸಿತ್ತು. ಸಾಮ್ರಾಜ್ಯಶಾಹಿ ಯುದ್ಧಗಳು, ವಸಾಹತುಶಾಹಿ ವ್ಯವಸ್ಥೆ ಹಾಗೂ ನವ-ಉದಾರವಾದಿ ಆರ್ಥಿಕ ನೀತಿಗಳ ವಿರುದ್ಧದ ಹೋರಾಟದ ಭಾಗವಾಗಿ ಆ ಕಾಯ್ದೆ ಜಾರಿಗೆ ಬಂದಿತು. ಆ ಬಳಿಕ, ಜುಲೈ ತಿಂಗಳನ್ನು ವಿಶೇಷಚೇತನರ ತಿಂಗಳಾಗಿ ಆಚರಿಸಲಾಗುತ್ತಿದೆ.
ಈ ವರ್ಷ, ಗಾಜಾದಲ್ಲಿ ಪ್ಯಾಲೆಸ್ತೀನಿಯರ ಮೇಲೆ ಇಸ್ರೇಲ್ ದಮನಕಾರಿ ಯುದ್ಧ ನಡೆಸುತ್ತಿರುವ ಸಮಯದಲ್ಲೇ ವಿಶೇಷಚೇತನರ ಹೆಮ್ಮೆಯ ತಿಂಗಳು ಬಂದುಹೋಯಿತು. ಗಾಜಾದಲ್ಲಿನ ಯುದ್ಧವು ಹಲವಾರು ಪ್ಯಾಲೆಸ್ತೀನಿಯರ ಸಾವು, ನೋವು ಹಾಗೂ ಅಂಗವಿಕಲತೆಗೆ ಕಾರಣವಾಗಿದೆ. ಇನ್ನೂ ಯುದ್ಧ ನಡೆಯುತ್ತಲೇ ಇದೆ.
ಇಡೀ ಭಾರತದ ಜನರು ಪ್ಯಾಲೆಸ್ತೀನಿಯರ ಪರವಾಗಿ ದನಿ ಎತ್ತಿದ್ದರೂ, ಯುದ್ಧದ ವಿರುದ್ಧ ಪ್ರತಿರೋಧ ವ್ಯಕ್ತಪಡಿಸಿದ್ದರೂ, ಭಾರತ ಸರ್ಕಾರ ಮಾತ್ರ ಇಸ್ರೇಲ್ ಪರ ಧೋರಣೆಗಳನ್ನು ಹೊಂದಿತ್ತು. ಪ್ಯಾಲೆಸ್ತೀನ್-ಇಸ್ರೇಲ್ ಯುದ್ಧ ಆರಂಭವಾಗಿ ಒಂದು ವರ್ಷವಾಗಿದೆ. ಈ ಅವಧಿಯಲ್ಲಿ ಗಾಜಾ ಜನರ ಪರಿಸ್ಥಿತಿಯ ಬಗ್ಗೆ ಮೋದಿ ನೇತೃತ್ವದ ಭಾರತ ಸರ್ಕಾರ ಯಾವುದೇ ಹೇಳಿಕೆಯನ್ನಾಗಲಿ, ಪ್ಯಾಲೆಸ್ತೀನಿಯರ ಮೇಲಿನ ದಮನವನ್ನು ಖಂಡಿಸುವುದಾಗಲಿ ಮಾಡಲಿಲ್ಲ. ಕಳೆದ ವಾರ, ವಿದೇಶಾಂಗ ಸಚಿವ ಜೈಶಂಕರ್ ಅವರು ಗಾಜಾ ಜನರ ಪರಿಸ್ಥಿತಿ ಬಗ್ಗೆ ಮೊದಲ ಬಾರಿಗೆ ಬೇಸರ ವ್ಯಕ್ತಪಡಿಸಿದ್ದಾರೆ.
ಏನೇ ಇರಲಿ, ಗಾಜಾದಲ್ಲಿನ ಯುದ್ಧವು ಪ್ರತಿಭಟನೆಯ ವಿವಿಧ ಹೊಸ ವಿಧಾನಗಳನ್ನು ಹುಟ್ಟುಹಾಕಿದೆ. ಯುದ್ಧ ಮತ್ತು ವಸಾಹತುಶಾಹಿಯ ವಿರುದ್ಧ ಪ್ರತಿಭಟಿಸುವುದನ್ನು ಕಲಿಸುತ್ತಿದೆ. ಪ್ಯಾಲೆಸ್ತೀನಿಯರ ಮೇಲೆ ವಸಾಹತುಶಾಹಿ ವ್ಯವಸ್ಥೆ ಬೀರುತ್ತಿರುವ ಪ್ರತಿಕೂಲ ಪರಿಣಾಮವನ್ನು ಎತ್ತಿ ತೋರಿಸಲು ಪ್ರಯತ್ನಿಸುತ್ತಿದೆ. ಜಸ್ಬೀರ್ ಪುವಾರ್ ಅವರ ‘ದಿ ರೈಟ್ ಟು ಮೈಮ್’ ಲೇಖನವು ಭಾರತದಲ್ಲಿನ ವಿಶೇಷಚೇತನರ ಆಂದೋಲನವು ಗಾಜಾ ಜನರ ಬಗ್ಗೆ ಗಮನ ಹರಿಸಬೇಕು. ಪ್ಯಾಲೆಸ್ತೀನಿಯರ ಪರವಾಗಿ ನಿಲ್ಲಬೇಕು ಎಂದು ಹೇಳುತ್ತದೆ.
ಗಾಜಾ ಮೇಲಿನ ಇಸ್ರೇಲಿ ಆಕ್ರಮಣವು ಪ್ಯಾಲೆಸ್ತೀನಿಯನ್ನರ ದೇಹಗಳ ಮೇಲೆ ತನ್ನ ಸಾರ್ವಭೌಮ ಹಕ್ಕನ್ನು ಚಲಾಯಿಸುತ್ತಿದೆ. ಇಸ್ತೇಲ್ ದಮನಕ್ಕೆ ಸಿಲುಕಿದ ಪ್ಯಾಲೆಸ್ತೀನಿಯರು ತಮ್ಮ ದೇಹದ ಅಂಗಗಳನ್ನು ಕಳೆದುಕೊಂಡು ಅಂಗವಿಕಲರಾಗಿದ್ದಾರೆ. ಸವಲತ್ತುಗಳನ್ನು ಕಳೆದುಕೊಂಡು ನಿರಾಶ್ರಿತರಾಗಿದ್ದಾರೆ. ತಮ್ಮದೇ ನೆಲದಲ್ಲಿ ಪರಕೀಯರಾಗಿದ್ದಾರೆ.
ಈ ದಮನದ ಬಗ್ಗೆ ಪ್ರಜಾಸತ್ತಾತ್ಮಕ ಜಗತ್ತಿನ ವಿಶೇಷಚೇತನರ ಗುಂಪುಗಳು ಚೆನ್ನಾಗಿಯೇ ತಿಳಿದಿವೆ. ಅಮೆರಿಕದ ವಿಶೇಷಚೇತನರ ಸಂಘಟನೆ ‘ಡಿಸಬಲಿಟಿ ಡೈವೆಸ್ಟ್’, ಯುದ್ಧ ನಡೆಸುತ್ತಿರುವ ಲಾಭಕೋರರೊಂದಿಗೆ ಅಮೆರಿಕ ತನ್ನ ಸಂಬಂಧವನ್ನು ಕಡಿತಗೊಳಿಸಬೇಕು ಎಂದು ಒತ್ತಾಯಿಸಿದೆ.
ಬೇಸರದ ಸಂಗತಿ ಎಂದರೆ, ಭಾರತದಲ್ಲಿ, ವಿಶೇಷಚೇತನರ ಸಂಘ-ಸಂಸ್ಥೆಗಳು ವಸಾಹತುಶಾಹಿ ವ್ಯವಸ್ಥೆ ಮತ್ತು ಗಾಜಾದಲ್ಲಿನ ಯುದ್ಧದ ಬಗ್ಗೆ ಸಂಪೂರ್ಣ ಮೌನವಾಗಿವೆ. ಅಂಗವಿಕಲರ ಹಕ್ಕುಗಳ ರಾಷ್ಟ್ರೀಯ ವೇದಿಕೆ (NPRD) ಮತ್ತು ರಿವೈವಲ್ ಡಿಸಬಲಿಟಿ ಇಂಡಿಯಾ (ಆರ್‍ಡಿಐ) ಸಂಘಟನೆಗಳನ್ನು ಹೊರತುಪಡಿಸಿ, ಭಾರತ ಬಹುತೇಕ ಎಲ್ಲ ಮುಖ್ಯವಾಹಿನಿಯ ವಿಶೇಷಚೇತನರ ಸಂಘ-ಸಂಸ್ಥೆಗಳು ಗಾಜಾ ಮೇಲಿನ ದಮನದ ವಿಚಾರದಲ್ಲಿ ಮೌನವಾಗಿವೆ.
ಪ್ಯಾಲೆಸ್ತೀನಿಯನ್ನರನ್ನು ನಿರಂತರವಾಗಿ ದುರ್ಬಲಗೊಳಿಸುವಿಕೆಯ ವಿರುದ್ಧ ಧ್ವನಿ ಎತ್ತುವಲ್ಲಿ ಭಾರತದ ಅಂಗವೈಕಲ್ಯ ಆಂದೋಲನವು ಮುನ್ನೆಲೆಯಲ್ಲಿರಬೇಕಿತ್ತು. ಆದರೆ, ಅದು ಹಾಗಾಗಲಿಲ್ಲ. ಬದಲಾಗಿ, ಭಾರತದ ವಿಶೇಷಚೇತನರ ಸಂಘ-ಸಂಸ್ಥೆಗಳು, ಎನ್‌ಜಿಒಗಳು ಮೌನವಾಗಿವೆ. ತಮ್ಮ ಬದ್ದತೆ, ನಿಲುವುಗಳೊಂದಿಗೆ ರಾಜಿ ಮಾಡಿಕೊಂಡಿವೆ.
ಇದನ್ನು ಓದಿದ್ದೀರಾ?: ಈ ದಿನ ಸಂಪಾದಕೀಯ | ಖಾಲಿ ಇಲ್ಲದ ಸಿಎಂ ಸ್ಥಾನ ಮತ್ತು ವ್ಯರ್ಥ ಕಾಲಹರಣ
ಅಂಗವೈಕಲ್ಯ ಚಳವಳಿಯು ದೇಶೀಯ ಮಟ್ಟದಲ್ಲಿ ಇತರ ಅಲ್ಪಸಂಖ್ಯಾತ ಗುಂಪುಗಳ ದುರ್ಬಲತೆಯ ವಿರುದ್ಧವೂ ಈವರೆಗೆ ಮಾತನಾಡಿದ್ದು ಕಂಡುಬಂದಿಲ್ಲ. ಎಲ್ಲ ಸಂದರ್ಭಗಳಲ್ಲಿಯೂ ಅವು ಮೌನವಾಗಿಯೇ ಉಳಿದಿವೆ.
ಯುದ್ಧ, ಹಿಂಸಾಚಾರಗಳು ಜನರ ದೇಹದ ಮೇಲೆ ದಾಳಿ ನಡೆಸುತ್ತವೆ. ದಮನಕ್ಕೊಳಗಾದ ಜನರನ್ನು ಅಂಗವಿಕಲರನ್ನಾಗಿ ಮಾಡುತ್ತವೆ. ದೌರ್ಜನ್ಯ, ದಬ್ಬಾಳಿಕೆಯಿಂದಾಗಿ ಸಂತ್ರಸ್ತ ಜನರು ಅಂಗವೈಕಲ್ಯಕ್ಕೆ ತುತ್ತಾಗುತ್ತಾರೆ. ಇದು, ಸಾಮೂಹಿಕ ದುರ್ಬಲತೆಗೆ ಕಾರಣವಾಗುತ್ತದೆ.
ಆದ್ದರಿಂದ, ಯುದ್ಧದ ಲಾಭದಾಯಕತೆ ಮತ್ತು ವಸಾಹತುಶಾಹಿ ವ್ಯವಸ್ಥೆ ವಿರುದ್ಧದ ಹೋರಾಟದಲ್ಲಿ ವಿಶೇಷಚೇತನರ ಸಂಸ್ಥೆಗಳು ಮುಂಚೂಣಿಯಲ್ಲಿ ನಿಲ್ಲಬೇಕಿದೆ. ಬಹಿಷ್ಕಾರದ ರಾಜಕೀಯಕ್ಕೆ ಬಲಿಯಾದ ಸಂತ್ರಸ್ತರೊಂದಿಗೆ ಒಗ್ಗಟ್ಟಿನಿಂದ ನಿಲ್ಲುವುದು ಭಾರತದ ಅಂಗವೈಕಲ್ಯ ಚಳವಳಿಯ ಪ್ರಮುಖ ಕಾರ್ಯಸೂಚಿಯಲ್ಲಿ ಒಂದಾಗಬೇಕಿದೆ.
