ಡಿಸಿ ಕಚೇರಿಯ ಮುಂಭಾಗದಲ್ಲಿ ಪ್ರತಿಭಟನೆಗೆ ಅವಕಾಶ ನಿರಾಕರಿಸಿ ರಾಮನಗರ ಜಿಲ್ಲಾಧಿಕಾರಿ ದಯಾನಂದ್ ಆದೇಶ ಖಂಡಿಸಿ ಹಾಗೂ ರೈತರ ಬೇಡಿಕೆಗಳಿಗಾಗಿ ಆಗ್ರಹಿಸಿ ರಾಮನಗರದ ಜಿಲ್ಲಾಧಿಕಾರಿ ಕಚೇರಿಯ ಮುಂಭಾಗದಲ್ಲಿ ನೂರಾರು ಸಂಖ್ಯೆಯಲ್ಲಿ ರೈತಪರ, ದಲಿತಪರ, ಕನ್ನಡಪರ ಸಂಘಟನೆಗಳು ಹಮ್ಮಿಕೊಂಡಿದ್ದ ಹೋರಾಟ ಹಲವಾರು ನಾಟಕೀಯ ಬೆಳವಣಿಗೆ ಕಂಡು ಪೋಲೀಸರು ಬಂಧನಕ್ಕೊಳಗಾಗಿ ಅಂತ್ಯವಾಯಿತು.
ಜಿಲ್ಲಾಧಿಕಾರಿ ಕಚೇರಿಯ ಮುಂಭಾಗದಲ್ಲಿ ನೆರೆದಿದ್ದ 500 ಕ್ಕೂ ಹೆಚ್ಚು ಪ್ರತಿಭಟನಾಕಾರರು ಜಿಲ್ಲಾಧಿಕಾರಿ ವಿರುದ್ಧ ಧಿಕ್ಕಾರ ಕೂಗುತ್ತ ಗೇಟಿನ ಮೂಲಕ ಒಳ ಪ್ರವೇಶಿಸಲು ಪ್ರಯತ್ನಿಸಿದರು. ಹೋರಾಟದ ತೀವ್ರತೆಯ ಬಗ್ಗೆ ಸನ್ನದ್ದರಾಗಿದ್ದ ಪೊಲೀಸರು ಗೇಟಿನ ಮುಂಭಾಗದಲ್ಲಿ ಬ್ಯಾರಿಕೇಡ್ ಹಾಕಿ ತಡೆದರು. ಆಗ ಅಲ್ಲೇ ರಸ್ತೆಯಲ್ಲಿ ಜಮಾವಣೆಗೊಂಡ ಪ್ರತಿಭಟನಾಕಾರರು ಬಿರು ಬಿಸಿಲಿಗೂ ಬೆದರದೆ ರಸ್ತೆಯಲ್ಲಿ ಕೂತು ಸುಮಾರು ನಾಲ್ಕೂವರೆ ಗಂಟೆಗೂ ಹೆಚ್ಚು ಕಾಲ ಪ್ರತಿಭಟನೆ ನಡೆಸಿದರು.

ಪ್ರತಿಭಟನೆಯ ಮುಂಚೂಣಿ ನಾಯಕತ್ವ ವಹಿಸಿದ್ದ ಜಯಕರ್ನಾಟಕ ಜನಪರ ವೇದಿಕೆಯ ರಾಜ್ಯ ಸಲಹೆಗಾರ ಕುಮಾರಸ್ವಾಮಿ ಮಾತನಾಡಿ, ಜಿಲ್ಲಾಧಿಕಾರಿ ನಡೆ ಖಂಡನೀಯ. ಪ್ರತಿಭಟನೆ ನಮ್ಮ ಸಂವಿಧಾನಬದ್ದ ಮೂಲಭೂತ ಹಕ್ಕು. ಅದನ್ನು ಮೊಟಕುಗೊಳಿಸಲು ನಿಮಗೆ ಅಧಿಕಾರ ಕೊಟ್ಟವರಾರು? ನಮ್ಮ ಪ್ರತಿಭಟನೆಗಳು ನಿಮಗೆ ಕಿರಿ ಕಿರಿ ಎನಿಸಿದರೆ ಸುಮಾರು ಮೂವತ್ತು ನಲವತ್ತು ವರ್ಷಗಳಿಂದ ಕಚೇರಿಗೆ ಅಲೆದಾಡುತ್ತ ಚಪ್ಪಲಿ ಸವೆಸಿದ ರೈತರಿಗೆ ಆದ ಕಿರಿಕಿರಿಗೆ ಯಾರು ಉತ್ತರ ಕೊಡುತ್ತಾರೆ? ಎಂದು ಕೇಳಿದರು.
ರೈತಸಂಘದ ಮುಖಂಡ ಬಡಗಲಪುರ ನಾಗೇಂದ್ರ ಮಾತನಾಡಿ, “ರೈತ ಚಳುವಳಿಯ ಇತಿಹಾಸದಲ್ಲಿ ಸರ್ವಾಧಿಕಾರಿ ಧೋರಣೆ ತೋರಿದ ಅದೆಷ್ಟೊ ಭಂಡ ಅಧಿಕಾರಿಗಳನ್ನು ನಾವು ನ್ಯಾಯಾಲಯದ ಕಟಕಟೆಯಲ್ಲಿ ನಿಲ್ಲಿಸಿದ್ದೇವೆ. ನಿಮ್ಮ ಸರ್ವಾಧಿಕಾರಿ ನಡೆ ನಮ್ಮ ಮುಂದೆ ನಡೆಯದು. ನೀವು ನಮ್ಮ ಜಿಲ್ಲೆಯ ಮೊದಲ ಕೂಲಿಕಾರ ಎಂಬುದನ್ನು ಮರೆಯಬೇಡಿ” ಎಂದು ಆಕ್ರೋಶ ಹೊರಹಾಕಿದರು.

ರೈತಸಂಘದ ವಿಭಾಗೀಯ ಉಪಾಧ್ಯಕ್ಷರಾದ ಮಲ್ಲಯ್ಯ ಮಾತನಾಡಿ, ರೈತರ ಬೇಡಿಕೆಗಳ ಪಟ್ಟಿಯನ್ನು ನೋಡಿದರೆ ಜಿಲ್ಲಾಡಳಿತ ಮೂವತ್ತು ವರ್ಷಗಳಿಂದ ನಿಷ್ಕ್ರಿಯವಾಗಿರುವುದಕ್ಕೆ ಸಾಕ್ಷ್ಯದಂತಿದೆ. ದಶಕಗಳ ಪೋಡಿ ಸಮಸ್ಯೆ , ಆನೆ ಹಾವಳಿ , ಸರ್ವೆ , ಮುಂತಾದ ಸಮಸ್ಯೆಗಳ ಬಗ್ಗೆ ಜಿಲ್ಲಾಡಳಿತದ ನಿರ್ಲಕ್ಷ್ಯದಿಂದ ರೈತರು ನೊಂದಿದ್ದಾರೆ. ನಾವು ಇಲ್ಲಿಗೆ ಬರುವುದಿಲ್ಲ. ನೀವು ವಾರದ ನಾಲ್ಕು ದಿನ ಹಳ್ಳಿಗಳಲ್ಲಿ ಕೆಲಸ ಮಾಡಲು ಸಿದ್ದರಿದ್ದೀರಾ ಎಂದು ಪ್ರಶ್ನಿಸಿದರು.
ಪ್ರತಿಭಟನೆಯ ನಡುವೆ ಹೋರಾಟದಲ್ಲಿ ನಿರತರಾಗಿದ್ದ ಹಲವು ಮಹಿಳೆಯರು ನೈಸರ್ಗಿಕ ಕರೆಗಾಗಿ ಶೌಚಾಲಯಕ್ಕೆ ಹೋಗಲು ಅವಕಾಶ ಕೊಡಿ ಎಂದು ಮನವಿ ಮಾಡಿದರೂ ಕೂಡ ರಾಮನಗರದ ಡಿವೈಎಸ್‌ಪಿ ದಿನಕರ್ ಶೆಟ್ಟಿ ನಿರಾಕರಿಸಿದರು. ಆಗ ಹೋರಾಟದ ನಾಯಕತ್ವ ವಹಿಸಿದ್ದ ಮುಖಂಡರು ಮಹಿಳೆಯರು ಶೌಚಾಲಯಕ್ಕೆ ಅವಕಾಶ ಕೊಡಿ ಎಂದಾಗ ನಿರ್ಲಕ್ಷ್ಯದಿಂದ ರಸ್ತೆಯಲ್ಲಿಯೇ ಮಾಡಿ ಎಂದು ಉದ್ದಟತನ ತೋರಿದರು.

ಇದರಿಂದ ಆಕ್ರೋಶಗೊಂಡ ಪ್ರತಿಭಟನಾಕಾರರು ಹಾಗೂ ಪೋಲೀಸರ ನಡುವೆ ತೀವ್ರ ವಾಗ್ವಾದ ನಡೆಯಿತು. ನಂತರ ಪಟ್ಟು ಬಿಡದ ಪ್ರತಿಭಟನಾಕಾರರು ಹೋರಾಟ ಮುಂದುವರೆಸಿದಾಗ ಜೋರಾದ ಮಳೆ ಸುರಿಯಿತು. ಆಗ ಗೇಟಿನ ಒಳ ನುಗ್ಗಲು ಪ್ರಯತ್ನಿಸಿದಾಗ ಪೊಲೀಸರು ಬಂಧಿಸಿ, ಕರೆದ್ಯೊಯ್ದರು.
ಪ್ರತಿಭಟನೆಯಲ್ಲಿ ರೈತಸಂಘದ ರಾಜ್ಯ ಕಾರ್ಯದರ್ಶಿ ಪೂರ್ಣಚ್ಚ, ಬೆಂಗಳೂರು ಜಿಲ್ಲಾಧ್ಯಕ್ಷ ಚಂದ್ರು, ಮಂಡ್ಯ ಜಿಲ್ಲಾಧ್ಯಕ್ಷ ಕೆಂಪುಗೌಡ, ರಾಮನಗರ ಜಿಲ್ಲಾಧ್ಯಕ್ಷ ತಿಮ್ಮೇಗೌಡ, ಕಾರ್ಯದರ್ಶಿ ಪುಟ್ಟಸ್ವಾಮಿ , ರಾಜ್ಯ ಸಂಚಾಲಕ ಚೀಲೂರು ಮುನಿರಾಜು, ರಮ್ಯ, ನವ ನಿರ್ಮಾಣ ಸೇನೆ ನರಸಿಂಹಮೂರ್ತಿ, ಕಸ್ತೂರಿ ಕರ್ನಾಟಕ ಜನಪರ ವೇದಿಕೆ ರಾಜ್ಯಾಧ್ಯಕ್ಷ ನೀಲೇಶ್ ಗೌಡ, ಕರವೇ ಸ್ವಾಭಿಮಾನಿ ಬಣ ಜಿಲ್ಲಾಧ್ಯಕ್ಷ ಶಿವುಗೌಡ, ಕರವೇ ಪ್ರವೀಣ್ ಶೆಟ್ಟಿ ಬಣ ಜಿಲ್ಲಾಧ್ಯಕ್ಷ ರಾಜು, ಕರುನಾಡ ಸೇನೆ ರಾಜ್ಯ ಉಪಾಧ್ಯಕ್ಷ ಜಗದೀಶ್, ಕೆಆರ್‌ಎಸ್ ಪಕ್ಷದ ಪ್ರಶಾಂತ್ ಹೊಸದುರ್ಗ, ಸ್ವತಂತ್ರ ಕರ್ನಾಟಕ ಜಿಲ್ಲಾಧ್ಯಕ್ಷ ಕನ್ನಡ ಭಾಸ್ಕರ್, ಮೂಲನಿವಾಸಿ ಕಾವಲುಪಡೆಯ ರಾಜ್ ಮೌರ್ಯ, ಗೋಪಿ, ದಲಿತ ವಿಧ್ಯಾರ್ಥಿ ಪರಿಷತ್ ನ ಗೋವಿಂದರಾಜು, ಸಮತಾ ಸೈನಿಕದಳದ ಸುರೇಶ್, ಪುನೀತ್ , ಅಂಬೇಡ್ಕರ್ ಸೇನೆಯ ಸಾಗರ್, ವಾಲ್ಮಿಕಿ ಸಂಘಟನೆಯ ಜಿಲ್ಲಾಧ್ಯಕ್ಷ ವಾಸು ನಾಯಕ್ , ಹಾಗೂ ಇತರರು ಹಾಜರಿದ್ದರು.


