ಮೀಟರ್ ಬಡ್ಡಿ ದಂಧೆಗೆ ಬೇಕರಿ ಮಾಲೀಕ ಬಲಿಯಾದ ಘಟನೆ ಮಾಸುವ ಮುನ್ನವೇ ಬಡ್ಡಿ ದಂಧೆ ಕಿರುಕುಳಕ್ಕೆ ಮತ್ತೋರ್ವ ವ್ಯಕ್ತಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ಘಟನೆ ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕಿನ ನಿಟ್ಟೂರಿನಲ್ಲಿ ಮಂಗಳವಾರ ಸಂಜೆ ನಡೆದಿದೆ.
ನಿಟ್ಟೂರು ಗ್ರಾಮದ ಒಲಂಪಿಕ್ ಹೇರ್ ಡ್ರೆಸಸ್ ಅಂಗಡಿ ಮಾಲೀಕ ರಾಮಸ್ವಾಮಿ (45) ಬಡ್ಡಿ ಕಿರುಕುಳಕ್ಕೆ ಬಲಿಯಾದ ವ್ಯಕ್ತಿ. ಯೋಗೀಶ್ ಎಂಬಾತನ ಮೀಟರ್ ಬಡ್ಡಿ ವ್ಯವಹಾರಕ್ಕೆ ತನ್ನ ಮನೆಯಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ಈ ಘಟನೆ ತಾಲೂಕಿನ ಜನರಲ್ಲಿ ಆತಂಕ ಮೂಡಿಸಿದೆ.
ಕಳೆದ ಆರೇಳು ವರ್ಷದ ಹಿಂದೆ ನಿಟ್ಟೂರು ನಿವಾಸಿ ಯೋಗೀಶ್ ಎಂಬಾತನಿಂದ ಪಡೆದ ಮೂರು ಲಕ್ಷ ರೂಗಳ ಸಾಲಕ್ಕೆ ಬಡ್ಡಿ ಕಟ್ಟುತ್ತಲೇ ಬಂದಿದ್ದ ಮೃತ ರಾಮಸ್ವಾಮಿ, ಅವರನ್ನು ಮಂಗಳವಾರ ಹುಡುಕಿಕೊಂಡು ಯೋಗೀಶ್ ಸೆಲೂನ್‌ಗೆ ಬಂದಿದ್ದ. ಆ ಬಳಿಕ ಒಂದು ತಾಸಿನ ನಂತರ ಮರಳಿ ಬಂದು ತನ್ನ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಯೋಗೀಶ್ ಎಂಬುವವರು ನಿಟ್ಟೂರಿನಲ್ಲಿ ಬಡ್ಡಿ ವ್ಯವಹಾರ ನಡೆಸುತ್ತಿದ್ದು, ನನ್ನ ತಮ್ಮ ರಾಮಸ್ವಾಮಿಗೆ ಬಳಿ ಚೆಕ್ ಪಡೆದು ಸಾಲವಾಗಿ ಮೂರು ಲಕ್ಷ ನೀಡಿ ಆರೇಳು ವರ್ಷದಿಂದ ಬಡ್ಡಿ ವಸೂಲಿ ಮಾಡಿದ್ದಾರೆ. ಬಲಾಢ್ಯರ ಮುಂದೆ ಸಣ್ಣ ಸಮುದಾಯ ಸವಿತಾ ಸಮಾಜದ ನಾವುಗಳು ನೋವು ನುಂಗಿ ಬದುಕುವಂತಾಗಿದೆ. ಸಾಲ ವಸೂಲಿಗೆ ಅಂಗಡಿಯಿಂದ ಕರೆದು ಹೋದ ಯೋಗೀಶ್ ಕಿರುಕುಳಕ್ಕೆ ನನ್ನ ತಮ್ಮ ಆತ್ಮಹತ್ಯೆಗೆ ಶರಣಾಗಿದ್ದಾನೆ ಎಂದು ಮೃತನ ಅಣ್ಣ ಗೋವಿಂದಸ್ವಾಮಿ ತಮ್ಮ ಅಳಲು ತೋಡಿಕೊಂಡಿದ್ದಾರೆ.
ಇದನ್ನು ಓದಿದ್ದೀರಾ? ರಾಮನಗರ | ಸಾಲ ತೀರಿಸಲು ನೆರೆಮನೆಯ ಬಾಲಕಿಯ ಅಪಹರಣಕ್ಕೆ ಯತ್ನ: ಸಾರ್ವಜನಿಕರ ಕೈಗೆ ಸಿಕ್ಕಿಬಿದ್ದ ಯುವಕ
ವಿಚಯ ತಿಳಿದು ಸ್ಥಳಕ್ಕೆ ಆಗಮಿಸಿದ ಗುಬ್ಬಿ ಪೊಲೀಸರು, ಪ್ರಕರಣ ದಾಖಲಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.
