ಆಧುನಿಕ ಶೋಷಣೆಯಂತಹ ದಬ್ಬಾಳಿಕಾ ಪ್ರವೃತ್ತಿಯನ್ನು ತಡೆದು, ಸಿಪಿಎಂ ಪಕ್ಷದ ಬಲಿಷ್ಟ ಸಂಘಟನೆಯ ಜೊತೆಗೆ ಸಮಗ್ರ ಅಭಿವೃದ್ಧಿಗೆ ಒತ್ತಾಯಿಸುವ ಗುರುತರವಾದ ಜವಬ್ದಾರಿ ಎಲ್ಲರ ಮೇಲಿದೆ ಎಂದು ಸಿಪಿಎಂ ಜಿಲ್ಲಾ ಕಾರ್ಯದರ್ಶಿ ಎಂ.ಪಿ.ಮುನಿವೆಂಕಟಪ್ಪ ತಿಳಿಸಿದರು.
ಬಾಗೇಪಲ್ಲಿ ಪಟ್ಟಣದ ಸಿಪಿಎಂ ಪಕ್ಷದ ಸುಂದರಯ್ಯ ಭವನದಲ್ಲಿ ಮಂಗಳವಾರ ಜಿಲ್ಲಾ ಸಮ್ಮೇಳನದ ಭಾಗವಾಗಿ ನಡೆದ ಸ್ವಾಗತ ಸಮಿತಿ ರಚನಾ ಸಭೆಯಲ್ಲಿ ಅವರು ಮಾತನಾಡಿದರು.
5 ವರ್ಷಗಳಿಗೊಮ್ಮೆ ಸಮ್ಮೇಳನ ಆಯೋಜಿಸಿ ರಾಜಕೀಯ, ಸಾಮಾಜಿಕ, ಆರ್ಥಿಕ ಬೆಳವಣಿಗೆಗಳ ಕುರಿತು ವಿವರವಾಗಿ ಚರ್ಚಿಸಲಾಗುತ್ತದೆ. ಹಾಗೇಯೇ ಪಕ್ಷದ ಸಂಘಟನೆಯ ವಿಮರ್ಶೆಯೊಂದಿಗೆ, ಬೇಕಾದ ರಾಜಕೀಯ ತಂತ್ರಗಾರಿಕೆ ಮತ್ತು ಸಂಘಟನಾ ಗುರಿಗಳನ್ನು ನಿಗದಿಪಡಿಸಿಕೊಳ್ಳಲು ಪಕ್ಷ ಸಮ್ಮೇಳನ ನಡೆಸುತ್ತದೆ ಎಂದು ತಿಳಿಸಿದರು.
ಆಧುನಿಕ ಶೋಷಣೆ ಹೆಚ್ಚಾಗಿದೆ : ಈ ಭಾಗದಲ್ಲಿ ಹಲವು ದಶಕಗಳ ಹಿಂದೆ ಸಿಪಿಎಂ ಪಕ್ಷದ ನೇತೃತ್ವದಲ್ಲಿ ಭೂಮಾಲಿಕರ ವಿರುದ್ಧ ಹೋರಾಟಗಳನ್ನು ನಡೆಸಿ, ಭೂರಹಿತ ಕುಟುಂಬಗಳಿಗೆ ಭೂಮಿ ಹಂಚಿಕೆ ಮಾಡಿದ ಇತಿಹಾಸವಿದೆ. ಆದರೆ, ಪ್ರಸ್ತುತ ಈ ಭೂಮಾಲಿಕತ್ವ ಎಂಬುದು ಆಧುನಿಕ ಆಯಾಮಗಳನ್ನು ಬದಲಾಯಿಸಿ ರಿಯಲ್ ಎಸ್ಟೇಟ್ ಹೆಸರಲ್ಲಿ ಮತ್ತೆ ಉಳ್ಳವರ ಪಾಲಾಗುತ್ತಿದ್ದು, ಶ್ರಮ ಜೀವಿಯನ್ನು ಮತ್ತೆ ಆಧುನಿಕ ಶೋಷಣೆಗೆ ಗುರಿಪಡಿಸಲಾಗುತ್ತಿದೆ. ಜತೆಗೆ ದೌರ್ಜನ್ಯ, ದಬ್ಬಾಳಿಕೆ, ಭ್ರಷ್ಟಾಚಾರ, ಉಳ್ಳವರೆಲ್ಲರು ಒಂದಾಗಿ ಇಲ್ಲದವರ ಮೇಲೆ ಯೋಜಿತ ಸಂಚು ರೂಪಿಸಿ ನಾನಾ ಬಗೆಗೆಳಲ್ಲಿ ದಾಳಿ ಮಾಡುವ ಪ್ರಕರಣಗಳು ಹೆಚ್ಚಾಗುತ್ತಿರುವುದು ಆಘಾತಕಾರಿಯಾಗಿದೆ. ಹಾಗಾಗಿ ಇಂತಹ ಅಸಂವಿಧಾನಿಕ ಚಟುವಟಿಕೆಗಳನ್ನು ತಡೆದು ಸಮಸಮಾಜದ ನಿರ್ಮಾಣಕ್ಕಾಗಿ ಸಿಪಿಎಂ ಪಕ್ಷವನ್ನು ಬಲಿಷ್ಟಗೊಳಿಸಬೇಕಿದೆ ಎಂದು ಮುನಿವೆಂಕಟಪ್ಪ ತಿಳಿಸಿದರು.
ಸಿಪಿಎಂ ಪಕ್ಷದ ಮುಖಂಡ ಹಾಗೂ ವೈದ್ಯ ಡಾ.ಅನಿಲ್ ಕುಮಾರ್ ಮಾತನಾಡಿ, ಪಟ್ಟಣದ ಎಸ್.ಎಲ್.ಎನ್. ಕಲ್ಯಾಣ ಮಂಟಪದಲ್ಲಿ ನವೆಂಬರ್ 21, 22ರಂದು ಎರಡು ದಿನಗಳ ಕಾಲ ಪಕ್ಷದ 18ನೇ ಜಿಲ್ಲಾ ಸಮ್ಮೇಳನದಲ್ಲಿ ನಡೆಯಲಿದೆ. ಈ ಸಮ್ಮೇಳನದಲ್ಲಿ ಸಮಗ್ರ ಬದಲಾವಣೆಯ ಗುರಿಯೊಂದಿಗೆ ಮುಂಬರುವ ದಿನಗಳಲ್ಲಿ ಪಕ್ಷದ ವತಿಯಿಂದ ಕೈಗೊಳ್ಳಬೇಕಾದ ಕೆಲಸ ಕಾರ್ಯಗಳ ಬಗ್ಗೆ ತೀರ್ಮಾನಿಸಲಾಗುತ್ತದೆ. ತುಮಕೂರಿನಲ್ಲಿ ನಡೆಯಲಿರುವ ರಾಜ್ಯ ಸಮ್ಮೇಳನದಲ್ಲಿ ರಾಜಕೀಯವಾಗಿ ಮತ್ತು ಸಾಮಾಜಿಕವಾಗಿ ಕಠಿಣ ಕ್ರಮಗಳನ್ನು ತರಲು ಸಿದ್ಧತೆ ನಡೆಸಲಾಗುವುದು. ಸಾಮೂಹಿಕ ಮತ್ತು ವರ್ಗ ಹೋರಾಟಗಳ ಮೂಲಕ ಬದಲಾವಣೆಗಾಗಿ ರೂಪರೇಷೆಗಳನ್ನು ಚರ್ಚಿಸಲು ಸಮ್ಮೇಳನ ನಡೆಯುತ್ತದೆ ಎಂದು ಹೇಳಿದರು.
ಈ ಸುದ್ದಿ ಓದಿದ್ದೀರಾ? ಚಿಂತಾಮಣಿ | ಬೊಲೆರೋ ಟೆಂಪೋ ಬಸ್ ನಡುವೆ ಅಪಘಾತ; ಚಾಲಕ ಸಾವು
ಈ ಸಂದರ್ಭದಲ್ಲಿ ಸಿಪಿಎಂ ಪಕ್ಷದ ಮುಖಂಡರಾದ ರಘುರಾಮರೆಡ್ಡಿ, ಸಿದ್ಧಗಂಗಪ್ಪ, ಬಿ.ಎನ್.ಮುನಿಕೃಷ್ಣಪ್ಪ, ಚನ್ನರಾಯಪ್ಪ, ಬಿಳ್ಳೂರು ನಾಗರಾಜ್, ವಾಲ್ಮೀಕಿ ಅಶ್ವಥಪ್ಪ, ಜಿ.ಕೃಷ್ಣಪ್ಪ, ಸಾವಿತ್ರಮ್ಮ, ಮುಸ್ತಫಾ, ಗೊಲ್ಲಪಲ್ಲಿ ಮಂಜುನಾಥ್ ಹಾಜರಿದ್ದರು.