ಖಾಸಗಿ ಕೋಚಿಂಗ್ ಸೆಂಟರ್‌ನಲ್ಲಿ ನಡೆಯುತ್ತಿದ್ದ ತರಗತಿಗೆ ವಿದ್ಯಾರ್ಥಿಯೊಬ್ಬ ಪಿಸ್ತೂಲ್ ತಂದಿದ್ದು, ತನ್ನ ಎದುರು ಕುಳಿದಿದ್ದ ವಿದ್ಯಾರ್ಥಿನಿಯ ಸೊಂಟಕ್ಕೆ ಗುಂಡು ಹಾರಿಸಿರುವ ಘಟನೆ ಬಿಹರದ ಮುಜಾಫರ್‌ಪುರದಲ್ಲಿ ನಡೆದಿದೆ. ಘಟನೆಯಲ್ಲಿ ಗಾಯಗೊಂಡಿದ್ದ ವಿದ್ಯಾರ್ಥಿನಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಮುಜಾಫರ್‌ಪುರದ ಸಕ್ರಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿರುವ ಕೋಚಿಂಗ್ ಸೆಂಟರ್‌ನಲ್ಲಿ ಘಟನೆ ನಡೆದಿದೆ. ಇಂಗ್ಲಿಷ್ ತರಗತಿ ನಡೆಯುತ್ತಿದ್ದ ವೇಳೆ ವಿದ್ಯಾರ್ಥಿ ತನಗೆ ಗುಂಡು ಹಾರಿಸಿದ್ದಾಗಿ ಸಂತ್ರಸ್ತ ವಿದ್ಯಾರ್ಥಿನಿ ತಿಳಿಸಿದ್ದಾರೆ.
ತರಗತಿ ನಡೆಯುತ್ತಿದ್ದ ವೇಳೆ ಗುಂಡು ಹಾರಿಸಿದ ಸದ್ದು ಕೇಳಿಬಂದಿತು. ಕೂಡಲೇ ತರಗತಿಯೊಳಗೆ ಧಾವಿಸಿದಾಗ, ವಿದ್ಯಾರ್ಥಿನಿಯ ದೇಹದಿಂದ ರಕ್ತ ಸೋರುತ್ತಿತ್ತು. ಆಕೆಯನ್ನು ತಕ್ಷಣವೇ ಆಸ್ಪತ್ರೆಗೆ ದಾಖಲಿಸಿ, ಪೊಲೀಸರಿಗೆ ಮಾಹಿತಿ ನೀಡಿದೆವು ಎಂದು ಕೋಚಿಂಗ್ ಸೆಂಟರ್‌ನ ಮುಖ್ಯಸ್ಥರು ತಿಳಿಸಿದ್ದಾರೆ
“11ನೇ ತರಗತಿಯ ವಿದ್ಯಾರ್ಥಿನಿಗೆ ಗುಂಡೇಟಿನಿಂದ ಗಾಯವಾಗಿದೆ. ಆಕೆಗೆ ಚಿಕಿತ್ಸೆ ನೀಡಲಾಗಿದ್ದು, ಆರೋಗ್ಯ ಸ್ಥಿರವಾಗಿದೆ. ಆಕಸ್ಮಿಕವಾಗಿ ಗುಂಡು ಹಾರಿದೆಯೇ ಅಥವಾ ಉದ್ದೇಶಪೂರ್ವಕವಾಗಿ ಗುಂಡು ಹಾರಿಸಲಾಗಿದೆಯೇ ಎಂಬ ಬಗ್ಗೆ ತನಿಖೆ ನಡೆಯುತ್ತಿದೆ” ಎಂದು ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ರಾಜು ಪಾಲ್ ತಿಳಿಸಿದ್ದಾರೆ.
“ಆರೋಪಿ ವಿದ್ಯಾರ್ಥಿಯನ್ನು ಗುರುತಿಸಲಾಗಿದೆ. ಶೀಘ್ರದಲ್ಲೇ ಆತನನ್ನು ಬಂಧಿಸಲಾಗುವುದು. ಆತನಿಗೆ ಪಿಸ್ತೂಲ್ ಎಲ್ಲಿಂದ ಬಂತು ಎಂಬ ಬಗ್ಗೆಯೇ ತನಿಖೆ ನಡೆಯುತ್ತಿದೆ” ಎಂದು ಹೇಳಿದ್ದಾರೆ.