ರಾಜ್ಯದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಿರುದ್ಧ ಇತ್ತೀಚೆಗೆ ಕಾಂಗ್ರೆಸ್ ‘ಪೇ ಸಿಎಂ’ ಅಭಿಯಾನ ನಡೆಸಿತ್ತು. ಇದೀಗ, ಮೋದಿ ಅವರು ರಾಜ್ಯಕ್ಕೆ ಭೇಟಿ ನೀಡಿ ಹೋದ ಬಳಿಕ ಮತ್ತೊಂದು ಅಭಿಯಾನವನ್ನು ಆರಂಭಿಸಿದೆ. ಸಾಮಾಜಿಕ ಜಾಲತಾಣದಲ್ಲಿ ‘ಕ್ರೈಪಿಎಂ-ಪೇಸಿಎಂ’ (ಅಳುಮುಂಜಿ ಪ್ರಧಾನಿ, ಕಮಿಷನ್ ಮುಖ್ಯಮಂತ್ರಿ) ಅಭಿಯಾನ ಟ್ರೆಂಡಿಂಗ್‌ನಲ್ಲಿದೆ.
ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಪರವಾಗಿ ಪ್ರಚಾರಕ್ಕೆಂದು ರಾಜ್ಯಕ್ಕೆ ಬಂದಿದ್ದ ಪ್ರಧಾನಿ ಮೋದಿ, ‘ತಮ್ಮನ್ನು ವಿರೋಧಿಗಳು ಬೈಯುತ್ತಿದ್ದಾರೆ. ಕಾಂಗ್ರೆಸ್‌ನವರು ಇದೂವರೆಗೂ 91 ಬಾರಿ ನನಗೆ ಬೈದಿದ್ದಾರೆ’ ಎಂದು ಹೇಳಿಕೊಂಡು ಭಾಷಣದ ವೇಳೆ ಗೋಳಾಡಿದ್ದರು.
ಅವರು ಗೋಳಾಡಿದ್ದರ ಬಗ್ಗೆ ಪ್ರತಿಕ್ರಿಯಿಸಿದ್ದ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ, “ಜನರ ದುಖಃವನ್ನು ಕೇಳಬೇಕಾದ ಪ್ರಧಾನಿ, ಜನರ ಮುಂದೆ ಬಂದು ತಮ್ಮ ದುಖಃವನ್ನು ಹೇಳಿಕೊಳ್ಳುತ್ತಿದ್ದಾರೆ. ಗಾಬರಿಯಾಗಬೇಡಿ ಮೋದಿಜೀ, ಧೈರ್ಯವಾಗಿರಿ… ಇದು ಸಾರ್ವಜನಿಕ ಜೀವನ” ಎಂದು ಹೇಳಿದ್ದರು. ಈ ಬೆನ್ನಲ್ಲೇ ರಾಜ್ಯ ಕಾಂಗ್ರೆಸ್, ‘CryPMPayCM‘ ಅಭಿಯಾನ ಪ್ರಾರಂಭಿಸಿದೆ.
CryPMPayCM ಎಂಬ ಹ್ಯಾಶ್‌ಟ್ಯಾಗ್ ಟ್ವಿಟ್ಟರ್‌ನಲ್ಲಿ ಟ್ರೆಂಡಿಂಗ್ ಆಗಿದ್ದು, ಹಲವಾರು ಕಾಂಗ್ರೆಸ್ ನಾಯಕರು ಇದನ್ನು ಬಳಸುತ್ತಿದ್ದಾರೆ.
“ಇತ್ತೀಚಿನ ದಿನಗಳಲ್ಲಿ ಪ್ರಧಾನಿಯವರ ಭಾಷಣಗಳು ನನ್ನ ಫೇಸ್‌ಬುಕ್ ಫೀಡ್‌ನಲ್ಲಿ ಕಾಣಿಸಿಕೊಳ್ಳುತ್ತಿವೆ. ಅವುಗಳಲ್ಲಿನ ದೂರುಗಳಲ್ಲಿ ಅಥವಾ ವಿಷಯಗಳಾಗಲ್ಲಿ ಗಣನೀಯ ಅಂಶಗಳಿಲ್ಲ. ಇದು ತಮ್ಮ ಬಗ್ಗೆ ಹೇಳಿಕೊಂಡು ಗೋಳಾಡುವ ಸಮಯವೇ? #CryPMPayCM” ಎಂದು ಕರ್ನಾಟಕ ಪ್ರದೇಶ ಯುವ ಕಾಂಗ್ರೆಸ್ ಸಮಿತಿ ಟ್ವೀಟ್ ಮಾಡಿದೆ.
“ಮೋದಿ ಈಗ ಯಾಕೆ ಬಂದಿದ್ದಾರೆ? ಅವರು ಚುನಾವಣೆಯ ಸಮಯದಲ್ಲಿ ರಾಜ್ಯಕ್ಕೆ ಬರುತ್ತಾರೆ. ಬಂದು ಅಳುತ್ತಾರೆ, ಬೊಬ್ಬೆ ಹೊಡೆಯುತ್ತಾರೆ ಮತ್ತು ಚುನಾವಣೆ ಮುಗಿದ ಬಳಿಕ ಕಣ್ಮರೆಯಾಗುತ್ತಾರೆ. ಅವರು ಇಷ್ಟು ದಿನ ಎಲ್ಲಿದ್ದರು? ಕರ್ನಾಟಕದ ಜನರು #CryPMPayCM ಅನ್ನು ಹೀಗೆ ತಿರಸ್ಕರಿಸುತ್ತಿದ್ದಾರೆ” ಎಂದು ಅರ್ಜುನ್ ಎಂಬವರು ವಿಡಿಯೋವೊಂದನ್ನು ಹಂಚಿಕೊಂಡಿದ್ದಾರೆ.
ಆದರೆ, ಪ್ರಧಾನಿ ಮೋದಿ ತಮ್ಮ ಭಾಷಣದ ವೇಳೆ ಅಳಲಿಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಈ ಸುದ್ದಿ ಓದಿದ್ದೀರಾ?: ಚುನಾವಣೆ 2023 | ಕರಾವಳಿಯಲ್ಲಿ ಕಾಂಗ್ರೆಸ್ ಗ್ಯಾರಂಟಿ ಮೇಲೆ ವಿಶ್ವಾಸವಿಲ್ಲ
ನವಲಗುಂದ ಕಾಂಗ್ರೆಸ್ ಅಭ್ಯರ್ಥಿ ಎನ್.ಎಚ್ ಕೋನರೆಡ್ಡಿ ಪರ ಶನಿವಾರ ನಡೆದ ಸಾರ್ವಜನಿಕ ಸಮಾವೇಶದಲ್ಲಿ ಮಾತನಾಡಿದ್ದ ಪ್ರಿಯಾಂಕಾ ಗಾಂಧಿ, “ನಾನು ಇಂದಿರಾ ಗಾಂಧಿಯಿಂದ ಹಿಡಿದು ಅಟಲ್ ಬಿಹಾರಿ ವಾಜಪೇಯಿ ಮತ್ತು ಮನಮೋಹನ್ ಸಿಂಗ್ ವರೆಗೆ ಹಲವಾರು ಪ್ರಧಾನಿಗಳನ್ನು ನೋಡಿದ್ದೇನೆ. ಸಾರ್ವಜನಿಕರ ಕುಂದುಕೊರತೆಗಳನ್ನು ನಿರ್ಲಕ್ಷಿಸಿ ತಮ್ಮ ಸಮಸ್ಯೆಗಳನ್ನು ಮಾತ್ರ ಹಂಚಿಕೊಳ್ಳುವ ಏಕೈಕ ಪ್ರಧಾನಿ ಮೋದಿಯೊಬ್ಬರೇ,” ಎಂದು ವ್ಯಂಗ್ಯವಾಡಿದ್ದರು.