ಚುನಾವಣೆ 2023 | ಕರಾವಳಿಯಲ್ಲಿ ಕಾಂಗ್ರೆಸ್ ಗ್ಯಾರಂಟಿ ಮೇಲೆ ವಿಶ್ವಾಸವಿಲ್ಲ

Date:

ಹಿಜಾಬ್, ಹಲಾಲ್ ಮತ್ತು ಲವ್ ಜಿಹಾದ್, ಹಿಂದುತ್ವವನ್ನು ಪಕ್ಕಕ್ಕಿಟ್ಟಿರುವ ಬಿಜೆಪಿ ಹಲವು ಬದಲಾವಣೆಗಳೊಂದಿಗೆ ಚುನಾವಣೆಯನ್ನು ಎದುರಿಸುತ್ತಿದೆ. ಅಭಿವೃದ್ಧಿ ಮತ್ತು ಡಬಲ್ ಇಂಜಿನ್ ಸರ್ಕಾರದ ಸಾಧನೆಗಳ ಜಪ ಮಾಡುತ್ತಿದೆ. 

ಕೋಮು ರಾಜಕಾರಣದ ತಾಣವಾಗಿರುವ ಕರಾವಳಿಯಲ್ಲಿ ಪ್ರತಿ ಚುನಾವಣೆಯಲ್ಲಿಯೂ ಕೋಮುವಾದವೇ ಪ್ರಮುಖ ಅಸ್ತ್ರವಾಗಿರುತ್ತದೆ. ಆದರೆ, ಈ ಬಾರಿಯ ಚುನಾವಣೆ ವಿಭಿನ್ನವಾಗಿದ್ದು, ಕೋಮುವಾದ ಹಿನ್ನೆಲೆಗೆ ಸರಿದಿದೆ. ಹಿಂದುತ್ವವನ್ನೇ ಜೀವಾಳವೆಂದು ಬೋಂಗುಬಿಡುವ ಬಿಜೆಪಿಯೂ ಕೋಮು ರಾಜಕಾರಣವನ್ನು ಬದಿಗೊತ್ತಿದೆ. ಕಾಂಗ್ರೆಸ್‌ ಕೂಡ ಬಿಜೆಪಿ ಕೋಮುವಾದದ ವಿರುದ್ಧದ ವಾಗ್ದಾಳಿಯನ್ನು ಕೈಬಿಟ್ಟು, ಬಿಜೆಪಿ ಸರ್ಕಾರದ ಆಡಳಿತ ವೈಫಲ್ಯ, ಭ್ರಷ್ಟಾಚಾರ, ಕಮಿಷನ್‌, ಹಗರಣಗಳ ಕುರಿತು ಮಾತನಾಡುತ್ತಿದೆ.

ಹಿಜಾಬ್, ಹಲಾಲ್ ಮತ್ತು ಲವ್ ಜಿಹಾದ್, ಹಿಂದುತ್ವವನ್ನು ಪಕ್ಕಕ್ಕಿಟ್ಟಿರುವ ಬಿಜೆಪಿ ಹಲವು ಬದಲಾವಣೆಗಳೊಂದಿಗೆ ಚುನಾವಣೆ ಎದುರಿಸುತ್ತಿದೆ. ಅದಕ್ಕಾಗಿಯೇ, ಕೆಲವು ಹಿರಿಯ ನಾಯಕರನ್ನು, ಪದಾಧಿಕಾರಿಗಳನ್ನು ಕೈಬಿಟ್ಟಿದೆ. ಹೊಸ ಮುಖಗಳೆಂದು ಈಗಾಗಲೇ ರಾಜಕಾರಣದಲ್ಲಿದ್ದ ಅಥವಾ ಹಿರಿಯ ನಾಯಕರ ಮಕ್ಕಳನ್ನು ಕಣಕ್ಕಿಳಿಸಿದೆ. ಅಭಿವೃದ್ಧಿ ಮತ್ತು ಡಬಲ್ ಇಂಜಿನ್ ಸರ್ಕಾರದ ಸಾಧನೆಗಳ ಜಪ ಮಾಡುತ್ತಿದೆ.

ಕರಾವಳಿಯ ಎಲ್ಲ 13 ಕ್ಷೇತ್ರಗಳಲ್ಲಿ (ಉಡುಪಿ ಜಿಲ್ಲೆಯ ಐದು ಮತ್ತು ದಕ್ಷಿಣ ಕನ್ನಡದ ಎಂಟು) ಬಿಜೆಪಿ ಮತ್ತು ಕಾಂಗ್ರೆಸ್ ನಡುವಿನ ಜಿದ್ದಾಜಿದ್ದಿನ ಹೋರಾಟವಿದೆ. ಒಂದೆರಡು ಕ್ಷೇತ್ರಗಳಲ್ಲಿ ಜೆಡಿಎಸ್ ಮತ್ತು ಎಸ್‌ಡಿಪಿಐ ಭಾರೀ ಪೈಪೋಟಿ ನೀಡಬಹುದು. ಸದ್ಯ, ಹೆಚ್ಚಿನ ಕ್ಷೇತ್ರಗಳು ಬಿಜೆಪಿ ವಶದಲ್ಲಿವೆ. ಈ ಬಾರಿ, ಅವುಗಳಲ್ಲಿ ಹೆಚ್ಚಿನ ಕ್ಷೇತ್ರಗಳನ್ನು ತನ್ನ ತೆಕ್ಕೆಗೆ ಪಡೆಯಲು ಕಾಂಗ್ರೆಸ್‌ ಯತ್ನಿಸುತ್ತಿದೆ. ತನ್ನ ಐದು ಗ್ಯಾರಂಟಿ ಕಾರ್ಡ್‌ಗಳನ್ನು ಜನರಿಗೆ ತಲುಪಿಸುವ ಪ್ರಯತ್ನದಲ್ಲಿದೆ.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಪ್ರತಿ ವಿಧಾನಸಭಾ ಕ್ಷೇತ್ರಗಳಲ್ಲಿ 45,000-60,000 ಗ್ಯಾರಂಟಿ ಕಾರ್ಡ್‌ಗಳನ್ನು ಕಾಂಗ್ರೆಸ್‌ ವಿತರಿಸುತ್ತಿದೆ. ಅವುಗಳಲ್ಲಿ ತನ್ನ ಐದು ದೊಡ್ಡ ಚುನಾವಣಾ ಪೂರ್ವ ಭರವಸೆಗಳಾದ ಉಚಿತ ವಿದ್ಯುತ್, ಅಕ್ಕಿ, ಗೃಹಿಣಿಯರಿಗೆ ಮಾಸಿಕ ರೂ 2,000, ನಿರುದ್ಯೋಗಿ ಯುವಕರಿಗೆ ರೂ 3,000 ನಿರುದ್ಯೋಗ ಭತ್ಯೆ ಮತ್ತು ಸರ್ಕಾರಿ ಬಸ್‌ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ ಒದಗಿಸುವುದಾಗಿ ಹೇಳಲಾಗಿದೆ. ಈ ಕಾರ್ಡ್‌ಗಳಿಗೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಸಹಿ ಹಾಕಿದ್ದಾರೆ.

ಹಿಂದುತ್ವ ರಾಜಕಾರಣದ ಹೊರತಾಗಿಯೂ ಎರಡು ದಶಕಗಳಿಂದ ಮಂಗಳೂರು ಕ್ಷೇತ್ರವು ಕಾಂಗ್ರೆಸ್‌ ತೆಕ್ಕೆಯಲ್ಲಿಯೇ ಇದೆ. ಕ್ಷೇತ್ರವನ್ನು ಕಸಿದುಕೊಳ್ಳಲು ಬಿಜೆಪಿ ಯತ್ನಿಸುತ್ತಿದೆ. ಆದರೂ, ಅದು ಸಾಧ್ಯವಾಗಿಲ್ಲ. ಕಾರ್ಕಳದಲ್ಲಿ ಸಚಿವ ವಿ ಸುನೀಲ್ ಕುಮಾರ್‌ ವಿರುದ್ಧ ಕಟ್ಟಾ ಹಿಂದುತ್ವ ಪ್ರತಿಪಾದಕನೆಂದು ಬಿಂಬಿತವಾಗಿರುವ ಪ್ರಮೋದ್ ಮುತಾಲಿಕ್ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದಾರೆ. ಕಾಂಗ್ರೆಸ್‌ನಿಂದ ಉದಯಕುಮಾರ್ ಶೆಟ್ಟಿ ಮುನಿಯಾಲ್ ಕಣದಲ್ಲಿದ್ದು, ಬಿಜೆಪಿಗೆ ಪ್ರಬಲ ಪೈಪೋಟಿ ಇದೆ. ಮುತಾಲಿಕ್ ಸ್ಪರ್ಧೆಯಿಂದ ಹಿಂದುತ್ವದ ಮತಗಳು ವಿಭಜನೆಯಾಗಿ ಕಾಂಗ್ರೆಸ್‌ಗೆ ಲಾಭವಾಗುವ ಸಾಧ್ಯತೆಯಿದೆ.

ಪುತ್ತೂರಿನಲ್ಲಿ ಬಿಜೆಪಿ ಅಭ್ಯರ್ಥಿ ಆಶಾ ತಿಮ್ಮಪ್ಪ ಅವರು ಬಂಡಾಯ ಅಭ್ಯರ್ಥಿ, ಹಿಂದುತ್ವ ಪ್ರತಿಪಾದಕ ಅರುಣ್ ಕುಮಾರ್ ಪುತ್ತಿಲ ಅವರ ಪೈಪೋಟಿ ಎದುರಿಸುತ್ತಿದ್ದಾರೆ. ಪುತಿಲ ಗೆದ್ದರೆ ಬಿಜೆಪಿಗೆ ಮುಜುಗರ ಉಂಟು ಮಾಡುವುದರಲ್ಲಿ ಸಂದೇಹವಿಲ್ಲ. ಮತಗಳ ವಿಭಜನೆಯು ಕಾಂಗ್ರೆಸ್‌ಗೆ ಸಹಾಯವಾಗಬಹುದು. ಮಂಗಳೂರು ಉತ್ತರದಲ್ಲಿ ತ್ರಿಕೋನ ಸ್ಪರ್ಧೆ ಏರ್ಪಟ್ಟಿದ್ದು, ಬಿಜೆಪಿಯ ಭರತ್ ಶೆಟ್ಟಿ ಅವರು ಗೆಲ್ಲುವ ಸಾಧ್ಯತೆ ಇದೆ. ಅಲ್ಲಿ, ಕಾಂಗ್ರೆಸ್ ಅಭ್ಯರ್ಥಿ ಇನಾಯತ್ ಅಲಿ ವಿರುದ್ಧ ಕಾಂಗ್ರೆಸ್‌ನಿಂದ ಬಂಡಾಯವೆದ್ದಿರುವ ಮೊಹಿಯುದ್ದೀನ್ ಬಾವಾ ಜೆಡಿಎಸ್‌ನಿಂದ ಸ್ಪರ್ಧಿಸಿದ್ದಾರೆ. ಬಾವಾ ಅವರ ವೈಯಕ್ತಿಕ ವರ್ಚಸ್ಸಿನಿಂದ ಕಾಂಗ್ರೆಸ್‌ ಮತ ವಿಭಜನೆಯಾಗುವ ಸಾಧ್ಯತೆಗಳು ಹೆಚ್ಚಾಗಿವೆ.

ಈ ಸುದ್ದಿ ಓದಿದ್ದೀರಾ?: ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ ಕ್ಷೇತ್ರ | ಹಿಂದುತ್ವದ ವಿರುದ್ಧ ಗೆಲ್ಲುವರೇ ‘ಸ್ವಾಭಿಮಾನಿ’ ಶೆಟ್ಟರ್?

ಬಿಜೆಪಿಯ ಭದ್ರಕೋಟೆಯಾಗಿರುವ ಸುಳ್ಯದಲ್ಲಿ ಹಾಲಿ ಶಾಸಕ ಎಸ್ ಅಂಗಾರ ಅವರಿಗೆ ಬಿಜೆಪಿ ಟಿಕೆಟ್ ನಿರಾಕರಿಸಿದೆ. ಆರು ಬಾರಿ ಗೆದ್ದಿರುವ ಅಂಗಾರ ಅವರು ಕ್ಷೇತ್ರದಲ್ಲಿ ತಮ್ಮ ಕಾರ್ಯವೈಖರಿಯ ಕಾರಣಕ್ಕಾಗಿ ವಿರೋಧ ಎದುರಿಸುತ್ತಿದ್ದರು. ಹೀಗಾಗಿ, ಈ ಬಾರಿ ಭಾಗೀರಥಿ ಮುರುಳ್ಯ ಅವರಿಗೆ ಬಿಜೆಪಿ ಟಿಕೆಟ್ ನೀಡಿದೆ. ಅಲ್ಲಿ ಕಾಂಗ್ರೆಸ್‌ನಿಂದ ಜಿ ಕೃಷ್ಣಪ್ಪ ಕಣದಲ್ಲಿದ್ದಾರೆ. ಕ್ಷೇತ್ರಕ್ಕೆ ಏಪ್ರಿಲ್ 15ರಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಭೇಟಿ ನೀಡಿದ್ದರು. ಅವರ ಭೇಟಿಯಿಂದ ಕೈ ಕಾರ್ಯಕರ್ತರಲ್ಲಿ ನೈತಿಕ ಸ್ಥೈರ್ಯ ತುಂಬಿದಂತಾಗಿದೆ. ಆದರೂ, ಗೆಲ್ಲಲು ಕೈಪಡೆ ಭಾರೀ ಕಸರತ್ತು ನಡೆಸಲೇಬೇಕಿದೆ.

ಉಡುಪಿ, ಕಾಪು, ಕುಂದಾಪುರ ಮತ್ತು ಬೈಂದೂರು ಕ್ಷೇತ್ರಗಳಲ್ಲಿ ಕಾಂಗ್ರೆಸ್‌ಗೆ ಹೆಚ್ಚಿನ ಲಾಭವಿದೆ ಎಂದು ರಾಜಕೀಯ ವೀಕ್ಷಕರು ಅಭಿಪ್ರಾಯಪಟ್ಟಿದ್ದಾರೆ.

2018ರಲ್ಲಿ ಆರೆಸ್ಸೆಸ್ ಮುಖಂಡ ಕಲ್ಲಡ್ಕ ಪ್ರಭಾಕರ್ ಭಟ್ ರಾಜ್ಯದಲ್ಲಿ ಬಿಜೆಪಿ ಭರ್ಜರಿ ಗೆಲುವು ಸಾಧಿಸಲಿದೆ ಎಂದು ಭವಿಷ್ಯ ನುಡಿದಿದ್ದರು. ಈ ಬಾರಿಯೂ ಅವರು ಅದನ್ನೇ ಹೇಳುತ್ತಿದ್ದಾರೆ. “ನಾವು ಈ ಬಾರಿ ಉತ್ತಮ ಸ್ಥಾನದಲ್ಲಿ ಇದ್ದೇವೆ. ಕರಾವಳಿಯಲ್ಲಿ ಆಡಳಿತ ವಿರೋಧಿ ಛಾಯೆ ಇತ್ತು. ಆದರೆ ಮೋದಿ, ಅಮಿತ್ ಶಾ ಅವರಂತಹ ರಾಷ್ಟ್ರೀಯ ನಾಯಕರು ಇಲ್ಲಿ ಪ್ರಚಾರ ನಡೆಸುವುದರಿಂದ ಅದು ಅಳಿಸಿ ಹೋಗಿದೆ” ಎಂದು ಭಟ್ ಹೇಳಿದ್ದಾರೆ.

ಈ ಸುದ್ದಿ ಓದಿದ್ದೀರಾ?: ಕಾಂಗ್ರೆಸ್‌-ಬಿಜೆಪಿ ವಾಕ್ಸಮರ: ರಾಷ್ಟ್ರ ಮತ್ತು ರಾಜ್ಯ ನಾಯಕರ ಪ್ರಚಾರ ನಿಷೇಧಕ್ಕೆ ಒತ್ತಾಯ

ಕಾಂಗ್ರೆಸ್ ಪ್ರಚಾರ ಸಮಿತಿ ಸಂಚಾಲಕ ಮಂಜುನಾಥ ಭಂಡಾರಿ ಮಾತನಾಡಿ, “ದಕ್ಷಿಣ ಕನ್ನಡ ಮತ್ತು ಉಡುಪಿಯಲ್ಲಿ ಅರ್ಧದಷ್ಟು ಸ್ಥಾನವನ್ನಾದರೂ ಕಾಂಗ್ರೆಸ್‌ ಗೆಲ್ಲುತ್ತದೆ” ಎಂದು ವಿಶ್ವಾಸ ವ್ಯಕ್ತಪಡಿಸುತ್ತಿದ್ದಾರೆ.

ಹೆಚ್ಚಿನ ಕ್ಷೇತ್ರಗಳಲ್ಲಿ ಸರಿಯಾದ ಜಾತಿಗಳಿಂದ ಅಭ್ಯರ್ಥಿಗಳನ್ನು ಕಣಕ್ಕಿಳಿಸಿರುವುದು ಕಾಂಗ್ರಸ್‌ನ ವಿಶ್ವಾಸವನ್ನು ದುಪ್ಪಟ್ಟುಗೊಳಿಸಿದೆ. ಆದರೆ, ಮತದಾರರ ಭಾವನೆ ಏನನ್ನು ಆಧರಿಸುತ್ತದೆ ಎಂಬುದೂ ಮುಖ್ಯವಾಗಿದೆ.

ಇತ್ತೀಚೆಗಷ್ಟೇ ಈದಿನ.ಕಾಮ್‌ ನಡೆಸಿದ ಸಮೀಕ್ಷೆಯ ಪ್ರಕಾರ, ಕಾಂಗ್ರೆಸ್‌ನ ಗ್ಯಾರಂಟಿಗಳು ಇನ್ನೂ ಹೆಚ್ಚಿನ ಜನರನ್ನು ತಲುಪಿಲ್ಲ. ಅಲ್ಲದೆ, ಜನರಿಗೆ ಕಾಂಗ್ರಸ್‌ ಗ್ಯಾರಂಟಿಗಳ ಮೇಲೆ ವಿಶ್ವಾಸವೂ ಹೆಚ್ಚಿನ ಪ್ರಮಾಣದಲ್ಲಿಲ್ಲ. ಈ ಅವಿಶ್ವಾಸವು ಕರಾವಳಿ ಭಾಗದಲ್ಲಿ ಇನ್ನೂ ಹೆಚ್ಚಿನ ಪ್ರಮಾಣದಲ್ಲಿದೆ. ಹೀಗಾಗಿ, ಕಾಂಗ್ರೆಸ್‌ ತನ್ನ ಗ್ಯಾರಂಟಿಗಳ ಬಗ್ಗೆ ಮತದಾರರ ವಿಶ್ವಾಸ ಗಳಿಸುವುದು ಅತ್ಯಂತ ಅಗತ್ಯದ ಕೆಲಸ. ಆದರೆ, ಮತದಾನಕ್ಕೆ 10 ದಿನಗಳಷ್ಟೇ ಬಾರಿ ಇರುವ ಈ ಸಮಯದಲ್ಲಿ ಕರಾವಳಿ ಜನರ ವಿಶ್ವಾಸವನ್ನು ಕಾಂಗ್ರೆಸ್‌ ಪಡೆಯುವುದೂ ಒಂದು ಸವಾಲೇ ಆಗಿದೆ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌-ವೇ; ಮತ್ತೆ ಟೋಲ್‌ ದರ ಹೆಚ್ಚಳ

ಬೆಂಗಳೂರು-ಮೈಸೂರು ನಡುವಿನ ಎಕ್ಸ್‌ಪ್ರೆಸ್‌-ವೇ ಕಾಮಗಾರಿ ಆರಂಭವಾದಾಗಿನಿಂದಲೂ ನಾನಾ ರೀತಿಯಲ್ಲಿ ಚರ್ಚೆಯ ವಿಷಯವಾಗಿಯೇ...

ಬೆಂಗಳೂರು | ರೌಡಿಶೀಟರ್, ಸುಪಾರಿ ಕಿಲ್ಲರ್ ದಿನೇಶ್ ಬರ್ಬರ ಹತ್ಯೆ

ಬೆಂಗಳೂರಿನಲ್ಲಿ ರೌಡಿಶೀಟರ್‌ ಹಾಗೂ ಸುಪಾರಿ ಕಿಲ್ಲರ್‌ನೊಬ್ಬನನ್ನು ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಕೊಚ್ಚಿ ಬರ್ಬರವಾಗಿ...

ರಾಯಚೂರು | 2 ದಿನದಲ್ಲಿ ತೀರ್ಮಾನ ಕೈಗೊಳ್ಳದಿದ್ದರೆ ಜನರ ತೀರ್ಮಾನಕ್ಕೆ ಬದ್ಧ; ಬಿಜೆಪಿ ಟಿಕೆಟ್ ಆಕಾಂಕ್ಷಿ ಬಿ ವಿ ನಾಯಕ

ರಾಯಚೂರು ಲೋಕಸಭಾ ಕ್ಷೇತ್ರಕ್ಕೆ ಟಿಕೆಟ್ ನೀಡುವುದಾಗಿ ಹೇಳಿ ವಂಚಿಸಿದ್ದು, ಟಿಕೆಟ್ ವಿಚಾರವಾಗಿ...

ಚಿತ್ರದುರ್ಗ | ಕುಡಿಯುವ ನೀರು ಪೂರೈಕೆಯಲ್ಲಿ ನಿರ್ಲಕ್ಷ್ಯ; ಮೊಳಕಾಲ್ಮುರು ಪ.ಪಂ. ಅಧಿಕಾರಿಯ ತಲೆದಂಡ

ಸರ್ಕಾರದಿಂದ ಬರ ಘೋಷಣೆಯಾದ ದಿನದಿಂದ ಎಲ್ಲಿಯೂ ಕುಡಿಯುವ ನೀರಿನ ಸಮಸ್ಯೆಯಾಗದಂತೆ ಎಚ್ಚರವಹಿಸಿ,...