ಇತ್ತೀಚಿನ ದಿನಗಳಲ್ಲಿ ವಿದ್ಯಾರ್ಥಿ, ಯುವ ಸಮೂಹದಲ್ಲಿ ಆತ್ಮಹತ್ಯೆ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿರುವುದು ಆತಂಕಕಾರಿ. ಮನೋ ವೈದ್ಯರ ಸಲಹೆ ಮತ್ತು ಮಾರ್ಗದರ್ಶನ ಪಡೆದುಕೊಂಡು ಆತ್ಮಹತ್ಯೆ ಯೋಚನೆಗಳಿಂದ ಹೊರಬರಬೇಕು. ಆತ್ಮಹತ್ಯೆ ತಡೆಗಟ್ಟಲು ಎಲ್ಲರ ಸಹಕಾರ ಬೇಕು ಎಂದು ಮನೋವೈದ್ಯ ಡಾ. ಸಿ ಆರ್ ಚಂದ್ರಶೇಖರ್ ಹೇಳಿದರು.
ವಿಶ್ವ ಆತ್ಮಹತ್ಯೆ ತಡೆಗಟ್ಟುವ ದಿನಾಚರಣೆ ಅಂಗವಾಗಿ ಧಾರವಾಡ ಮಾನಸಿಕ ಆರೋಗ್ಯ ಮತ್ತು ನರವಿಜ್ಞಾನಗಳ ಸಂಸ್ಥೆ, ಧಾರವಾಡ, ಭಾರತೀಯ ಮನೋವೈದ್ಯಕೀಯ ಸಂಘ(ಕರ್ನಾಟಕ ಶಾಖೆ), ಕರ್ನಾಟಕ ವೈದ್ಯಕೀಯ ಮಹಾವಿದ್ಯಾಲಯ ಹಾಗೂ ಸಂಶೋಧನಾ ಸಂಸ್ಥೆ ಹುಬ್ಬಳ್ಳಿ, ಭಾರತೀಯ ಮಾಹಿತಿ ತಂತ್ರಜ್ಞಾನ ಸಂಸ್ಥೆ, ಧಾರವಾಡ, ಜನತಾ ಶಿಕ್ಷಣ ಸಮಿತಿ, ವಿದ್ಯಾಗಿರಿ ಧಾರವಾಡ, ಸೃಷ್ಟಿ ವಿಜ್ಞಾನ ಪದವಿ ಪೂರ್ವ ಕಾಲೇಜು ಧಾರವಾಡ, ಕೆ.ಇ.ಬೋರ್ಡ್ ಪದವಿ ಪೂರ್ವ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯ, ಧಾರವಾಡ, ಸ್ವಾಮಿ ವಿವೇಕಾನಂದ ಯೂತ್ ಮೂಮೆಂಟ್, ಧಾರವಾಡ ಇವರ ಸಹಯೋಗದಲ್ಲಿ ವಿಶೇಷ ಉಪನ್ಯಾಸ ಕಾರ್ಯಕ್ರಮವನ್ನು ಡಿಮ್ಹಾನ್ಸ್‍ನ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಪ್ರೊ. ಸಿ.ಆರ್.ಚಂದ್ರಶೇಖರ್ ಮಾತನಾಡಿ, ಆತ್ಮಹತ್ಯೆ ತಡೆಗಟ್ಟುವ ಕುರಿತು ಜಾಗೃತಿ ಮೂಡಿಸುವ ಕಾರ್ಯಕ್ರಮಗಳು ತುಂಬಾ ಮಹತ್ವ. ಆದ್ದರಿಂದ ಇಂತಹ ಕಾರ್ಯಕ್ರಮಗಳನ್ನು ಹೆಚ್ಚು ಹೆಚ್ಚು ಮಾಡಬೇಕು. ಪಾಲಕರು ತಮ್ಮ ಮಕ್ಕಳ ಬಗ್ಗೆ ಜಾಗೃತಿ ವಹಿಸಬೇಕು. ಉತ್ತಮ ಹವ್ಯಾಸಗಳನ್ನು ರೂಪಿಸಿಕೊಳ್ಳಲು ಅವರಿಗೆ ಉತ್ತಮ ಮಾರ್ಗದರ್ಶನ ನೀಡಬೇಕು. ಕುಟುಂಬದಲ್ಲಿ ಒಳ್ಳೆಯ ವಾತಾವರಣ ಇರುವಂತೆ ನೋಡಿಕೊಳ್ಳಬೇಕು. ಕೌಟುಂಬಿಕ ಸಮಸ್ಯೆಗಳು, ಆರೋಗ್ಯ ಸಮಸ್ಯೆಗಳು, ಸೋಲುಗಳು, ಹತಾಶೆ, ಹಣಕಾಸಿನ ಸಮಸ್ಯೆಗಳು ಆತ್ಮಹತ್ಯೆಗೆ ಕಾರಣಗಳಾಗಿವೆ ಎಂದರು.
ಆತ್ಮಹತ್ಯೆ ತಡೆಗಟ್ಟಬಹುದಾದ ವಿಷಯ, ಸರಿಯಾದ ಕಾರಣಗಳನ್ನು ತಿಳಿದುಕೊಂಡು, ಆತ್ಮಹತ್ಯೆ ಮಾಡಿಕೊಳ್ಳಲು ಮನಸ್ಸು ಮಾಡಿರುವ ವ್ಯಕ್ತಿಗಳಿಗೆ ಅಗತ್ಯ ಆಪ್ತ ಸಮಾಲೋಚನೆ, ಸಹಾಯ ಮಾಡಬೇಕು. ಕೆಲವರು ತಮಗೆ ಅತಿಯಾದ ಕಷ್ಟಗಳು ಬಂದಾಗ ಆತ್ಮಹತ್ಯೆ ಮಾಡಿಕೊಳ್ಳುವ ಪ್ರಯತ್ನ ಮಾಡುತ್ತಾರೆ. ಅತಿ ಪುರಾತನ ಕಾಲದಿಂದಲೂ ಆತ್ಮಹತ್ಯೆ ಇದೆ. ಭೂ ಪ್ರವೇಶ, ಅಗ್ನಿ ಪ್ರವೇಶ, ಜಲಪ್ರವೇಶ ಹೀಗೆ ಇತರ ಆಯಾಮಗಳಲ್ಲಿ ಪುರಾತನ ಕಾಲದಲ್ಲಿ ಪ್ರಾಣತ್ಯಾಗ ಮಾಡುತ್ತಿದ್ದರು. ಆತ್ಮಹತ್ಯೆ ತಡೆಗಟ್ಟಲು ಎಲ್ಲರ ಸಹಕಾರ ಅಗತ್ಯವೆಂದು ಅಭಿಪ್ರಾಯಪಟ್ಟರು.
ಇತ್ತೀಚಿನ ದಿನಗಳಲ್ಲಿ ವಿದ್ಯಾರ್ಥಿ, ಯುವ ಸಮೂಹದಲ್ಲಿ ಆತ್ಮಹತ್ಯೆ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿರುವುದು ಆತಂಕಕಾರಿ. ಮನೋವೈದ್ಯರ ಸಲಹೆ ಮತ್ತು ಮಾರ್ಗದರ್ಶನ ಪಡೆದುಕೊಂಡು ಆತ್ಮಹತ್ಯೆ ಯೋಚನೆಗಳಿಂದ ಹೊರಬರಬೇಕು. ನಿರ್ಲಕ್ಷ್ಯ ವಹಿಸದೆ ಆತ್ಮಹತ್ಯೆ ಘಟನೆಗಳನ್ನು ತಡೆಗಟ್ಟಲು ಎಲ್ಲರೂ ಮುಂದಾಗಬೇಕೆಂದು ಅವರು ಹೇಳಿದರು.
ಇದನ್ನು ಓದಿದ್ದೀರಾ? ಹುಬ್ಬಳ್ಳಿ | ತಮ್ನಾರ್ ಯೋಜನೆಯಲ್ಲಿರುವ ಪ್ರಧಾನಿ ಮೋದಿ, ಮಹದಾಯಿ ವಿಚಾರದಲ್ಲಿ ಯಾಕೆ ಮೌನ: ಸಿದ್ದಣ್ಣ ತೇಜಿ
ವೈದ್ಯಕೀಯ ಮತ್ತು ಅರೆವೈದ್ಯಕೀಯ ವಿದ್ಯಾರ್ಥಿಗಳಲ್ಲಿ ಆತ್ಮಹತ್ಯೆ ಘಟನೆಗಳು ಹೆಚ್ಚಾಗದಂತೆ ಎಚ್ಚರ ವಹಿಸಬೇಕಾಗಿದೆ ಎಂದು ಸಲಹೆ ನೀಡಿದರು.