ಈ ದಿನ ಸಂಪಾದಕೀಯ | ‘ದ್ವೇಷ ಭಾಷಣ’ದ ಆಪಾದಿತರು ಹೈಕೋರ್ಟ್ ಜಡ್ಜ್ ಆಗಬಹುದೇ?

Date:

Advertisements

ವಿಕ್ಟೋರಿಯಾ ಗೌರಿ 2006ರಿಂದ 2020ರ ತನಕ ಬಿಜೆಪಿಯೊಂದಿಗೆ ಸಂಬಂಧ ಹೊಂದಿದ್ದರು. ಕನ್ಯಾಕುಮಾರಿ ಜಿಲ್ಲಾ ಘಟಕದ ಉಪಾಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದರು. ಆನಂತರ ಎಂಟು ವರ್ಷಗಳ ಕಾಲ ಪಕ್ಷದ ಮಹಿಳಾ ಘಟಕದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿದ್ದರು.

ಮದ್ರಾಸ್ ಹೈಕೋರ್ಟಿನ ಐವರು ಹೆಚ್ಚುವರಿ ನ್ಯಾಯಮೂರ್ತಿಗಳ ನೇಮಕವನ್ನು ಕಾಯಂಗೊಳಿಸಿ ಶಿಫಾರಸು ಮಾಡಿದೆ ಸುಪ್ರೀಮ್ ಕೋರ್ಟು. ಈ ಐವರ ಪೈಕಿ ವಿವಾದಕ್ಕೀಡಾದ ಲಕ್ಷ್ಮಣಚಂದ್ರ ವಿಕ್ಟೋರಿಯಾ ಗೌರಿ ಅವರೂ ಇದ್ದಾರೆ. ಈ ಶಿಫಾರಸನ್ನು ತಮಿಳುನಾಡಿನ ಮುಖ್ಯಮಂತ್ರಿ ಎಂ.ಕೆ.ಸ್ಟ್ಯಾಲಿನ್ ಮತ್ತು ರಾಜ್ಯಪಾಲ ಆರ್.ಎನ್.ರವಿ ಅನುಮೋದಿಸಿರುವುದಾಗಿ ವರದಿಯಾಗಿದೆ.

ವಕೀಲರಾಗಿದ್ದ ಗೌರಿ ಅವರನ್ನು ಮದ್ರಾಸ್ ಹೈಕೋರ್ಟ್ ನ ಹೆಚ್ಚುವರಿ ನ್ಯಾಯಮೂರ್ತಿಯಾಗಿ ಕಳೆದ ವರ್ಷ (2023ರ ಫೆಬ್ರವರಿ) ನೇಮಕ ಮಾಡಲಾಗಿತ್ತು. ಅವರ ನೇಮಕಕ್ಕೆ ಆಕ್ಷೇಪ ವ್ಯಕ್ತಪಡಿಸಿ ಅವರನ್ನು ಅನರ್ಹಗೊಳಿಸುವಂತೆ ಕೋರಿ ಆರ್ಜಿ ಸಲ್ಲಿಸಲಾಗಿತ್ತು. ರಾಜ್ಯಸಭೆಯಲ್ಲಿ ಈ ವಿಚಾರ ಪ್ರಸ್ತಾಪ ಆಗಿತ್ತು. ತಕರಾರು ಅರ್ಜಿಯನ್ನು ಮದ್ರಾಸ್ ಹೈಕೋರ್ಟು ತಳ್ಳಿ ಹಾಕಿತ್ತು. ದ್ವೇಷಭಾಷಣ ಮಾಡಿರುವ ಮತ್ತು ಬಿಜೆಪಿ ಜೊತೆ ಸಂಬಂಧ ಹೊಂದಿದ್ದ ಕಾರಣ ಸಂವಿಧಾನದ 217(2)(ಬಿ) ಅನುಚ್ಛೇದದ ಪ್ರಕಾರ ‘ಭಯ ಅಥವಾ ಪಕ್ಷಪಾತವಿಲ್ಲದೆ ನ್ಯಾಯದಾನ ಮಾಡುವುದು ಸಾಧ್ಯವಿಲ್ಲʼ ಎಂಬುದು ತಕರಾರು ಅರ್ಜಿಯ ಸಾರಾಂಶವಾಗಿತ್ತು.

Advertisements

ಇಸ್ಲಾಮ್ ಧರ್ಮವನ್ನು ಹಸಿರು ಭಯೋತ್ಪಾದನೆಯೆಂದೂ, ಕ್ರೈಸ್ತ ಮತವನ್ನು ಶ್ವೇತ ಆತಂಕವೆಂದೂ ಗೌರಿ ಅವರು ವಕೀಲರೂ ಮತ್ತು ಬಿಜೆಪಿಯ ಪದಾಧಿಕಾರಿಯೂ ಆಗಿದ್ದಾಗ ಯೂಟ್ಯೂಬ್ ವಾಹಿನಿಯೊಂದಕ್ಕೆ ನೀಡಿದ್ದ ಸಂದರ್ಶನದಲ್ಲಿ ಬಣ್ಣಿಸಿದ್ದರು. ಕಳೆದ ವರ್ಷ ಅತ್ತ ವಿಕ್ಟೋರಿಯಾ ಗೌರಿ ಅವರು ಹೆಚ್ಚುವರಿ ನ್ಯಾಯಮೂರ್ತಿಯಾಗಿ ಪ್ರಮಾಣವಚನ ಸ್ವೀಕರಿಸುತ್ತಿದ್ದಂತೆ ಇತ್ತ ಸುಪ್ರೀಮ್ ಕೋರ್ಟಿನಲ್ಲಿ ಅವರ ನೇಮಕವನ್ನು ಪ್ರಶ್ನಿಸಿದ ಅರ್ಜಿಯ ವಿಚಾರಣೆ ನಡೆದಿತ್ತು.

ವ್ಯಕ್ತಿಯೊಬ್ಬರು ವಕೀಲರಾಗಿ ಹೊಂದಿದ್ದ ಅಭಿಪ್ರಾಯಗಳಿಗಾಗಿ ಅವರನ್ನು ದೂರುವುದು ಉಚಿತವಲ್ಲ. ಒಮ್ಮೆ ನ್ಯಾಯಮೂರ್ತಿಯ ಹುದ್ದೆಯನ್ನು ವಹಿಸಿಕೊಂಡ ನಂತರ ಯಾರೇ ಆಗಲಿ ನಿರ್ಲಿಪ್ತರಾಗಿ ಬಿಡುತ್ತಾರೆ. ಗೌರಿ ಅವರು ಮಾಡಿದ್ದರೆನ್ನಲಾದ ಭಾಷಣವನ್ನು ಸುಪ್ರೀಮ್ ಕೋರ್ಟ್ ಕೊಲಿಜಿಯಂ ಅತ್ಯಂತ ಸೂಕ್ಷ್ಮವಾಗಿ ಪರಿಶೀಲಿಸಿತ್ತು ಮತ್ತು ಕೇಂದ್ರ ಸರ್ಕಾರವೂ ಸೇರಿದಂತೆ ಸಂಬಂಧಪಟ್ಟ ಎಲ್ಲರೊಂದಿಗೆ ಪ್ರತಿಕ್ರಿಯೆಯನ್ನು ಹಂಚಿಕೊಳ್ಳಲಾಗಿತ್ತು ಎಂಬುದಾಗಿ ಭಾರತದ ಸರ್ವೋಚ್ಚ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ಕಳೆದ ವರ್ಷ ಗೌರಿ ಅವರ ನೇಮಕವನ್ನು ಸಮರ್ಥಿಸಿಕೊಂಡಿದ್ದರು. ಗೌರಿ ಅವರು 2020ರ ಅಂತ್ಯದ ವೇಳೆಗೆ ಕೇಂದ್ರ ಸರ್ಕಾರದ ಹೆಚ್ಚುವರಿ ಸಾಲಿಸಿಟರ್ ಜನರಲ್ ಆಗಿ ನೇಮಕ ಆದಾಗ ಬಿಜೆಪಿಯ ಎಲ್ಲ ಹುದ್ದೆಗಳಿಗೆ ರಾಜೀನಾಮೆ ನೀಡಿರುವುದಾಗಿ ಸಾರಿದ್ದರು.

ನ್ಯಾಯಮೂರ್ತಿಯಾಗಿ ಪ್ರಮಾಣವಚನ ಸ್ವೀಕರಿಸಿದ ನಂತರ ಸಂಬಂಧಿಸಿದವರ ವ್ಯಕ್ತಿಗಳು ನಿರ್ಲಿಪ್ತ ಧೋರಣೆ ತಳೆಯುತ್ತಾರೆ ಎಂಬ ಮುಖ್ಯ ನ್ಯಾಯಮೂರ್ತಿ ಚಂದ್ರಚೂಡ್ ಅವರ ಮಾತು ಭವಿಷ್ಯತ್ತಿನಲ್ಲಾದರೂ ನಿಜವಾಗಬೇಕಿದೆ. ಇದೇ ಸೆಪ್ಟಂಬರ್ ಎಂಟರ ಭಾನುವಾರ ಜರುಗಿದ ವಿಶ್ವಹಿಂದು ಪರಿಷತ್ತಿನ ಕಾನೂನು ವಿಭಾಗದ ಸಭೆಯಲ್ಲಿ ಹೈಕೋರ್ಟುಗಳು ಮತ್ತು ಸುಪ್ರೀಮ್ ಕೋರ್ಟಿನ 30 ಮಂದಿ ನಿವೃತ್ತ ನ್ಯಾಯಮೂರ್ತಿಗಳು ಭಾಗವಹಿಸಿದ್ದರು. ಕಾಶಿ-ಮಥುರಾ ದೇವಾಲಯ- ಮಸೀದಿ ವಿವಾದಗಳು, ವಕ್ಫ್ ತಿದ್ದುಪಡಿ ಮಸೂದೆ ಹಾಗೂ ಮತಾಂತರ ಈ ಸಭೆಯ ಚರ್ಚಾ ವಸ್ತು ಆಗಿದ್ದವು ಎಂದು ದಿ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆ ವರದಿ ಮಾಡಿದೆ. ಕೇಂದ್ರ ಕಾನೂನು ಮಂತ್ರಿ ಅರ್ಜುನ್ ರಾಮ್ ಮೇಘ್ವಾಲ್ ಅವರು ಈ ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದರು. ನಿವೃತ್ತ ನ್ಯಾಯಮೂರ್ತಿಗಳು ಮತ್ತು ವಿ.ಎಚ್.ಪಿ. ನಡುವೆ ಇನ್ನಷ್ಟು ಸಮಾಲೋಚನಾ ಸಭೆಗಳನ್ನು ಏರ್ಪಡಿಸಲಾಗುವುದು. ನಮ್ಮ ಗೊತ್ತು ಗುರಿಗಳನ್ನು ಈಡೇರಿಸಿಕೊಳ್ಳಲು ಕಾನೂನಿನ ದಾರಿಗಳನ್ನು ಪರಿಶೀಲಿಸುತ್ತಿದ್ದೇವೆ ಎಂದು ವಿಶ್ವಹಿಂದು ಪರಿಷತ್ತಿನ ಹಿರಿಯ ನಾಯಕರೊಬ್ಬರು ತಿಳಿಸಿದ್ದಾಗಿ ದಿ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆ ತನ್ನ ವರದಿಯಲ್ಲಿ ತಿಳಿಸಿದೆ. ಕಾಶಿಯ ಗ್ಯಾನವಾಪಿ ಮಸೀದಿ ಮತ್ತು ಮಥುರಾದ ಶಾಹಿ ಈದ್ಗಾ ಹಿಂದುಗಳಿಗೆ ಸೇರಿವೆ ಎಂಬ ಹಿಂದುತ್ವ ಸಂಘಟನೆಗಳ ತಗಾದೆ ನ್ಯಾಯಾಲಯಗಳ ಮುಂದಿದೆ.

‘ಲಕ್ಷ್ಮಣಚಂದ್ರ ವಿಕ್ಟೋರಿಯಾ ಗೌರಿ ಎಂಬ ಹೆಸರಿನವಳಾದ ನಾನು ಭಾರತದ ಸಂವಿಧಾನದಲ್ಲಿ ನಿಜ ಶ್ರದ್ಧೆ ಮತ್ತು ನಿಷ್ಠೆಯನ್ನು ಹೊಂದಿರುತ್ತೇನೆ…….’ ಎಂಬುದಾಗಿ ಅವರು ಅಧಿಕಾರ ವಹಿಸಿಕೊಳ್ಳುವ ಮುನ್ನ ಸಂವಿಧಾನದ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಿದರು. ತಾವು ಸ್ವೀಕರಿಸಿದ ಪ್ರಮಾಣವಚನಕ್ಕೆ ಅನುಗುಣವಾಗಿ ಇರಲಿಲ್ಲ ಅವರ ನಡೆನುಡಿ. ಕ್ರೈಸ್ತರು ಮತ್ತು ಮುಸ್ಲಿಮರ ಬಗೆಗೆ ದ್ವೇಷ ಭಾಷಣ ಮಾಡಿರುವ ಅವರು ನ್ಯಾಯ ನೀಡಿಕೆಯ ಪ್ರಶ್ನೆ ಬಂದೇ ಬರುತ್ತದೆ. ಆಗ ಪ್ರಮಾಣವಚನದ ಪ್ರಕಾರ ‘ …. ಭಯ ಅಥವಾ ಪಕ್ಷಪಾತವಿಲ್ಲದೆ…’ ಧರ್ಮನಿರಪೇಕ್ಷರಾಗಿ ಅವರು ಕರ್ತವ್ಯ ನಿರ್ವಹಿಸುತ್ತಾರೆ ಎಂದು ನಂಬುವುದಾದರೂ ಹೇಗೆ ಎಂಬುದು ತಕರಾರು ಅರ್ಜಿದಾರರ ಪ್ರಶ್ನೆಯಾಗಿತ್ತು. ಈ ಅರ್ಜಿದಾರರು ಚೆನ್ನೈನ ನ್ಯಾಯವಾದಿಗಳ ಒಂದು ಗುಂಪು. ನ್ಯಾಯಾಲಯ ಅರ್ಜಿಯನ್ನು ತಳ್ಳಿ ಹಾಕಿತು.

ವಿಕ್ಟೋರಿಯಾ ಗೌರಿ 2006ರಿಂದ 2020ರ ತನಕ ಬಿಜೆಪಿಯೊಂದಿಗೆ ಸಂಬಂಧ ಹೊಂದಿದ್ದರು. ಕನ್ಯಾಕುಮಾರಿ ಜಿಲ್ಲಾ ಘಟಕದ ಉಪಾಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದರು. ಆನಂತರ ಎಂಟು ವರ್ಷಗಳ ಕಾಲ ಪಕ್ಷದ ಮಹಿಳಾ ಘಟಕದ ರಾಷ್ಟ್ರೀಯ ಪ್ರಧಾನಕಾರ್ಯದರ್ಶಿಯಾಗಿದ್ದರು. 2015ರಲ್ಲಿ ಈಕೆಯನ್ನು ಮದ್ರಾಸ್ ಹೈಕೋರ್ಟಿನ ಮಧುರೈ ಪೀಠದ ಮುಂದೆ ಕೇಂದ್ರ ಸರ್ಕಾರದ ಸ್ಥಾಯೀ ನ್ಯಾಯವಾದಿಯನ್ನಾಗಿ ನೇಮಕ ಮಾಡಲಾಗಿತ್ತು. 2020ರ ಸೆಪ್ಟಂಬರ್ ತನಕ ಇದೇ ಹುದ್ದೆಯಲ್ಲಿದ್ದರು. ತರುವಾಯ ಅವರನ್ನು ಭಾರತ ಸರ್ಕಾರದ ಸಹಾಯಕ ಸಾಲಿಸಿಟರ್ ಜನರಲ್ ಆಗಿ ಕೇಂದ್ರ ಸರ್ಕಾರ ನೇಮಿಸಿತು. ಇದೇ ಸಂದರ್ಭದಲ್ಲಿ ಸಿಬಿಐಗೆ ವಿಶೇಷ ಸರ್ಕಾರಿ ವಕೀಲರಾಗಿ ಕಾರ್ಯ ನಿರ್ವಹಿಸಿದ್ದರು. ಇವರ ಹೆಸರನ್ನು ಕಳೆದ ವರ್ಷ ನ್ಯಾಯಮೂರ್ತಿಯ ಸ್ಥಾನಕ್ಕೆ ಶಿಫಾರಸು ಮಾಡಿತ್ತು ಮದ್ರಾಸ್ ಹೈಕೋರ್ಟಿನ ಕೊಲಿಜಿಯಂ. ಶಿಫಾರಸನ್ನು ಸುಪ್ರೀಮ್ ಕೋರ್ಟಿನ ಕೊಲಿಜಿಯಂ ಅಂಗೀಕರಿಸಿತು.

ಈಗ ನ್ಯಾಯಮೂರ್ತಿಯಾಗಿರುವ ವಿಕ್ಟೋರಿಯಾ ಗೌರಿ ಅವರು ಈ ಹಿಂದೆ ಅಲ್ಪಸಂಖ್ಯಾತರ ವಿರುದ್ಧ ಭಾಷಣ ಮಾಡಿದ್ದಾರೆ. ಈ ಭಾಷಣಗಳು ಸಾಮಾಜಿಕ ಜಾಲತಾಣಗಳಲ್ಲಿ ಈಗಲೂ ಲಭ್ಯ. ಈ ಹಿನ್ನೆಲೆಯಲ್ಲಿ ಗೌರಿಯವರನ್ನು ನ್ಯಾಯಮೂರ್ತಿ ಮಾಡಿರುವ ಕ್ರಮ ಸೋಜಿಗದ್ದು ಎಂದು ಮದ್ರಾಸಿನ ವಕೀಲರು ರಾಷ್ಟ್ರಪತಿಯವರಿಗೆ ಅಹವಾಲು ಬರೆದರು. ನೇಮಕದ ಶಿಫಾರಸಿಗೆ ತಮ್ಮ ಅಂಕಿತ ಹಾಕದೆ ಹಿಂದಿರುಗಿಸಿ ಎಂದು ದ್ರೌಪದಿ ಮುರ್ಮು ಅವರನ್ನು ಆಗ್ರಹಿಸಿದರು. ಶಿಫಾರಸನ್ನು ವಾಪಸು ಪಡೆಯುವಂತೆ ಸುಪ್ರೀಮ್ ಕೋರ್ಟಿನ ಕೊಲಿಜಿಯಮ್ಮನ್ನೂ ಕೋರಿದರು. ಇದೇ ಸಂದರ್ಭದಲ್ಲಿ 98 ವಕೀಲರ ಮತ್ತೊಂದು ಗುಂಪು ವಿಕ್ಟೋರಿಯಾ ಗೌರಿ ಅವರ ನೇಮಕವನ್ನು ಬೆಂಬಲಿಸಿತು.

ಸಂವಿಧಾನದ ಮೌಲ್ಯಗಳನ್ನು ಉಲ್ಲಂಘಿಸುವ ನೇಮಕಗಳು ಸಲ್ಲದು. ತನಗೆ ಬೇಕಾದ ತನ್ನ ಪಕ್ಷದ ನಿಷ್ಠಾವಂತರನ್ನು ನ್ಯಾಯಾಂಗದಲ್ಲಿ ತೂರಿಸುವಲ್ಲಿ ಮೋದಿ ಸರ್ಕಾರ ಯಾವುದೇ ಕಸುರು ಉಳಿಸುತ್ತಿಲ್ಲ. ಸುಪ್ರೀಮ್ ಕೋರ್ಟ್ ಮತ್ತು ಹೈಕೋರ್ಟುಗಳಲ್ಲಿ ಖಾಲಿ ಹುದ್ದೆಗಳನ್ನು ತುಂಬದೆ ವಿಚಾರಣಾಧೀನ ಅರ್ಜಿಗಳ ಬಾಕಿ ಬೆಟ್ಟದಂತೆ ಬೆಳೆಯುವ ಸಮಸ್ಯೆ ನಿತ್ಯ ನಿರಂತರ.

ಈ ಹಿಂದೆ 2016ರಲ್ಲಿ ಅಂದಿನ ಸುಪ್ರೀಮ್ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಸಾರ್ವಜನಿಕ ಸಮಾರಂಭವೊಂದರಲ್ಲಿ ಪ್ರಧಾನಿ ಮೋದಿಯವರ ಮುಂದೆ ಕಣ್ಣೀರಿಟ್ಟು ಗದ್ಗದಿತರಾಗಿದ್ದರು. ನ್ಯಾಯಾಲಯಗಳಲ್ಲಿ ಖಾಲಿ ಉಳಿದಿರುವ ನ್ಯಾಯಮೂರ್ತಿಗಳ ಹುದ್ದೆಗಳನ್ನು ತುಂಬದೇ ಬಡ ಕಕ್ಷಿದಾರರು ಜೈಲುಗಳಲ್ಲಿ ಕೊಳೆಯುತ್ತಿದ್ದಾರೆ. ದಯಮಾಡಿ ನೇಮಕಗಳಿಗೆ ಆದಷ್ಟು ಶೀಘ್ರ ಅನುಮೋದನೆ ನೀಡಿ ಎಂದು ಅವರು ಮೋದಿಯವರ ಮುಂದೆ ಅಂಗಲಾಚಿದ್ದರು. ಈ ಸಮಸ್ಯೆಯ ಕುರಿತು ಈಗಲೂ ನ್ಯಾಯಾಂಗ ಮತ್ತು ಕಾರ್ಯಾಂಗದ ನಡುವೆ ನಡೆದಿರುವ ಜಟಾಪಟಿ ಮಾಧ್ಯಮಗಳಲ್ಲಿ ವರದಿಯಾಗುತ್ತಲೇ ಇದೆ. ಖಾಲಿ ಹುದ್ದೆಗಳನ್ನು ತುಂಬಿಸಿಕೊಳ್ಳಬೇಕಾದ ದರ್ದಿನಲ್ಲಿ ನ್ಯಾಯಾಂಗ ಸರ್ಕಾರದ ಮರ್ಜಿಯನ್ನೂ ಕಾಯಬೇಕಾಗುತ್ತಿದೆ, ತೀವ್ರ ಒತ್ತಡಕ್ಕೆ ಸಿಲುಕಿದೆ ಎಂಬುದಕ್ಕೆ ಹತ್ತು ಹಲವು ಉದಾಹರಣೆಗಳಿವೆ.

ನಿರ್ದಿಷ್ಟ ರಾಜಕೀಯ ಪಕ್ಷದ ಕುರಿತು ಒಲವಿದ್ದ ಮಾತ್ರಕ್ಕೆ ನ್ಯಾಯಮೂರ್ತಿ ಹುದ್ದೆಗೆ ನೇಮಕಗೊಳ್ಳಲು ಅನರ್ಹರು ಎಂದು ಹೇಳಲು ಬಾರದು. ಆದರೆ ಬಹಿರಂಗ ಧರ್ಮಾಂಧತೆಯನ್ನು ಒಪ್ಪಲಾಗದು. ಕಾರ್ಯಾಂಗದ ಒತ್ತಡಕ್ಕೆ ನ್ಯಾಯಾಂಗ ಮಣಿಯಬಾರದು ಎಂಬುದು ಸಾಂವಿಧಾನಿಕ ಅಪೇಕ್ಷೆ. ನೇಮಕ ವಿಧಾನಗಳು ಪಾರದರ್ಶಕ ಆಗಬೇಕು ಎಂಬುದು ಬಹುಕಾಲದ ಆಗ್ರಹ. ಈ ಆಗ್ರಹವನ್ನು ಗಂಭೀರವಾಗಿ ಪರಿಗಣಿಸಬೇಕಿದೆ.

ಈದಿನ
ಈ ದಿನ ಸಂಪಾದಕೀಯ
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಈ ದಿನ ಸಂಪಾದಕೀಯ | ಅವಾಂತರಕಾರಿ ಆಸಿಮ್ ಮುನೀರ್ ಮತ್ತು ಮೌನಿ ಮೋದಿ

ವಿಶ್ವಗುರು ಭಾರತದ ಪ್ರಧಾನಿ ಮೋದಿಯವರು ಅಮೆರಿಕ ಮತ್ತು ಚೀನಾ ದೇಶಗಳಿಗೆ ಸೆಡ್ಡು...

ಈ ದಿನ ಸಂಪಾದಕೀಯ| ಅಸ್ಪೃಶ್ಯತೆಯ ಆಚರಣೆ ದೇಶದ್ರೋಹ ಎನಿಸಿಕೊಳ್ಳುವುದು ಯಾವಾಗ?

ಆತ್ಮಸಾಕ್ಷಿ ಜೀವಂತ ಇದ್ದಿದ್ದರೆ ಇವರು ದಲಿತರಿಗೆ ಹೇಲು ತಿನ್ನಿಸುತ್ತಿರಲಿಲ್ಲ, ಅವರ ಹೆಣ್ಣುಮಕ್ಕಳ...

ಈ ದಿನ ಸಂಪಾದಕೀಯ | ಸಂಪುಟದಿಂದ ರಾಜಣ್ಣ ವಜಾ- ಕಾಂಗ್ರೆಸ್ಸಿಗರಿಗೆ ಪಾಠವಾಗುವುದೇ?

ಇನ್ನು ಮುಂದಾದರೂ ಕಾಂಗ್ರೆಸ್ಸಿಗರು, ಬಿಜೆಪಿಯ ಷಡ್ಯಂತ್ರಕ್ಕೆ ಮತ್ತು ಮಡಿಲ ಮಾಧ್ಯಮಗಳ ಕುಯುಕ್ತಿಗೆ...

ಈ ದಿನ ಸಂಪಾದಕೀಯ | ಧರ್ಮಸ್ಥಳ ಕೇಸ್‌ನಲ್ಲಿ ಮುಸ್ಲಿಂ, ಕಮ್ಯುನಿಸ್ಟರ ಹೆಸರು ತಂದು ದಿಕ್ಕು ತಪ್ಪಿಸುವುದು ಅಕ್ಷಮ್ಯ

ಒಂದು ಕಡೆ ಹಿಂದುತ್ವ ಸಂಘಟನೆಗಳು ಹೋರಾಡುತ್ತಿದ್ದರೆ, ಮತ್ತೊಂದೆಡೆ ಎಡಪಂಥೀಯ ಸಂಘಟನೆಗಳೂ ಧರ್ಮಸ್ಥಳ...

Download Eedina App Android / iOS

X