ಪ್ರಕರಣವೊಂದನ್ನು ಮುಚ್ಚಿ ಹಾಕಲು 1.5 ಕೋಟಿ ರೂ. ಹಣ ಪಡೆದು ಪರಾರಿಯಾಗಿದ್ದ ಕೇಂದ್ರದ ನಾಲ್ವರು ಜಿಎಸ್‌ಟಿ ಅಧಿಕಾರಿಗಳನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ಜಿಎಸ್‌ಟಿಯ ಕೇಂದ್ರ ಗುಪ್ತದಳದ ಮಹಿಳಾ ಅಧಿಕಾರಿ ಸೋನಾಲಿ ಸಹಾಯಿ, ಸೀನಿಯರ್ ಇಂಟಲಿಜೆನ್ಸ್ ಆಫೀಸರ್ ಮನೋಜ್ ಸೈನಿ, ಅಧೀಕ್ಷಕ ಅಭಿಷೇಕ್, ಸೀನಿಯರ್ ಇಂಟಲಿಜೆನ್ಸ್ ಆಫೀಸರ್ ನಾಗೇಶ್ ಬಾಬು ಬಂಧಿತ ಅಧಿಕಾರಿಗಳಾಗಿದ್ದಾರೆ.
ಜಾರಿ ನಿರ್ದೇಶನಾಲಯ (ಇಡಿ) ಹಾಗೂ ಜಿಎಸ್ ಟಿ ಇಲಾಖೆಯ ಅಧಿಕಾರಿಗಳೆಂದು ಹೇಳಿಕೊಂಡ ಈ ಅಧಿಕಾರಿಗಳ ಗುಂಪು ಆ.30 ರಂದು ಕೇಶವ್ ಅವರ ಮನೆ ಮೇಲೆ ದಾಳಿ ನಡೆಸಿ ಅವರ ಮೊಬೈಲ್ ಫೋನ್ ಹಾಗೂ ಇತರ ವಸ್ತುಗಳನ್ನು ವಶಕ್ಕೆ ಪಡೆದು, ಉದ್ಯಮಿಯನ್ನು ಒತ್ತಾಯಪೂರ್ವಕವಾಗಿ ಇಂದಿರಾನಗರಕ್ಕೆ ಕರೆದೊಯ್ದರು.
ಉದ್ಯಮಿ ಯಾರೊಂದಿಗೂ ಸಂಪರ್ಕ ಸಾಧಿಸದಂತೆ ಆತನ ಫೋನ್ ನ್ನು ಫ್ಲೈಟ್ ಮೋಡ್ ಗೆ ಹಾಕಲಾಯಿತು. ಈ ಬಳಿಕ ಕೇಶವ್ ಅವರ ಸಹವರ್ತಿ ರೋಷನ್ ಜೈನ್ ಅವರಿಗೆ ವಾಟ್ಸ್ ಆಪ್ ಮೂಲಕ ಕರೆ ಮಾಡಿ 3 ಕೋಟಿ ರೂಪಾಯಿ ಬೇಡಿಕೆ ಇಟ್ಟಿದ್ದರು. ಪ್ರಕರಣ ಮುಚ್ಚಿ ಹಾಕುವುದಕ್ಕಾಗಿ 1.5 ಕೋಟಿ ರೂ. ಹಣ ಪಡೆದು ಈ ಅಧಿಕಾರಿಗಳು ಪರಾರಿಯಾಗಿದ್ದರು.
ಘಟನೆಯ ಬಗ್ಗೆ ಕೇಶವ್ ಮತ್ತು ಸಂಗಡಿಗರು ಬೈಯಪ್ಪನಹಳ್ಳಿ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ದೂರಿನಲ್ಲಿ ಅಧಿಕಾರಿಗಳ ಮೇಲೆ ಹಲ್ಲೆ, ಬೆದರಿಕೆ ಮತ್ತು ಸುಲಿಗೆ ಆರೋಪಗಳು ಸೇರಿವೆ. ಸೂಕ್ತ ಅನುಮತಿಯಿಲ್ಲದೆ ದಾಳಿ ನಡೆಸಿರುವುದು ತನಿಖೆ ವೇಳೆ ಪೊಲೀಸರಿಗೆ ಬೆಳಕಿಗೆ ಬಂದಿದೆ.
ತನಿಖೆಯನ್ನು ಮುಂದುವರೆಸಿದ ಸಿಸಿಬಿ ಪೊಲೀಸರು, ಈ ಪ್ರಕರಣದ ತನಿಖೆಯಲ್ಲಿ ಅನುಮೋದನೆ ಇಲ್ಲದೆ ದಾಳಿ ಮಾಡಿರುವುದು ಧೃಡಪಟ್ಟಿರುತ್ತದೆ. ಅಲ್ಲದೇ ಜಿ.ಎಸ್.ಟಿ ಅಧಿಕಾರಿಗಳು ಹಲವಾರು ವಸ್ತುಗಳನ್ನು ನಿಯಮ ಬಾಹಿರವಾಗಿ ಜಪ್ತಿ ಮಾಡಿರುವುದು, ಯಾವುದೇ ಅನುಮತಿ ಇಲ್ಲದೇ ಎರಡು ದಿನಗಳ ಕಾಲ ಫಿರ್ಯಾದುದಾರರನ್ನು ಅಕ್ರಮವಾಗಿ ಬಂಧನದಲ್ಲಿರಿಸಿಕೊಂಡಿರುವುದು ತನಿಖೆಯಿಂದ ತಿಳಿದುಬಂದಿರುತ್ತದೆ.