ಪ್ರವಾದಿ ಮುಹಮ್ಮದ್ ಅವರ ಜನ್ಮ ತಿಂಗಳ ಪ್ರಯುಕ್ತ ಅವರ ಮಾನವೀಯ ಹಾಗೂ ಚಾರಿತ್ರ್ಯದ ಮೂಲಕ ಸಮಾಜಕ್ಕೆ ತೋರಿಸಿಕೊಟ್ಟಿರುವ ಸಂದೇಶಗಳನ್ನು ಜನರಿಗೆ ತಲುಪಿಸುವ ಉದ್ದೇಶದಿಂದ ರಾಜ್ಯಾದ್ಯಂತ ಸೆ.13ರಿಂದ 22ರವರೆಗೆ ಜಮಾಅತೆ ಇಸ್ಲಾಮೀ ಹಿಂದ್ ಕರ್ನಾಟಕ ಘಟಕದ ವತಿಯಿಂದ ರಾಜ್ಯವ್ಯಾಪಿ ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದು ರಾಜ್ಯ ಕಾರ್ಯದರ್ಶಿ ಅಕ್ಬರ್ ಅಲಿ ಉಡುಪಿ ತಿಳಿಸಿದ್ದಾರೆ.
ಬೆಂಗಳೂರಿನ ಕ್ವೀನ್ಸ್ ರಸ್ತೆಯಲ್ಲಿರುವ ದಾರುಸ್ಸಲಾಮ್ ಕಟ್ಟಡದ ಬಿಫ್ಟ್ ಸಭಾಂಗಣದಲ್ಲಿ ಗುರುವಾರ ಕರೆಯಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರವಾದಿ ಮುಹಮ್ಮದ್ (ಸ) ಅವರ ಜೀವನದ ಸಂದೇಶಗಳು ಎಲ್ಲ ಕಾಲಕ್ಕೂ ಪ್ರಸ್ತುತವೆನಿಸಿದೆ. ಸಮಾಜದಲ್ಲಿಂದು ದ್ವೇಷ, ಅಸೂಯೆ, ಅನೈತಿಕತೆ, ಹಿಂಸೆ, ಸ್ವಾರ್ಥಗಳು ಸಾಮಾನ್ಯ ಎನಿಸಿಬಿಟ್ಟಿದೆ. ಇಂದಿನ ಈ ವಾತಾವರಣವನ್ನು ನೈತಿಕತೆಯ, ಪ್ರೀತಿಯ ಹಾಗೂ ಮಾನವೀಯತೆ ಸಂದೇಶವನ್ನು ಎತ್ತಿ ಹಿಡಿಯಬೇಕಾದ ಅನಿವಾರ್ಯತೆ ಇದೆ” ಎಂದು ತಿಳಿಸಿದರು.

ಸಮಾಜದಲ್ಲಿ ಇಂದು ನೈತಿಕತೆ ಎಷ್ಟು ಅಧಃಪತನಕ್ಕೆ ಈಡಾಗಿದೆ ಎಂಬುದನ್ನು ನಾವು ಗಮನಿಸುತ್ತಲೇ ಇದ್ದೇವೆ. ಮಂಡ್ಯದ ಹೆಣ್ಣು ಭ್ರೂಣ ಹತ್ಯೆ, ತಿಪಟೂರಿನಲ್ಲಿ ಮಗಳ ಮೇಲೆ ತಂದೆಯಿಂದ ಅತ್ಯಾಚಾರ, ಕೋಲ್ಕತ್ತಾ ವೈದ್ಯೆಯ ಅತ್ಯಾಚಾರ-ಕೊಲೆ ಘಟನೆಗಳು ಸಮಾಜವೇ ತಲೆ ತಗ್ಗಿಸುವಂಥದ್ದು. ಇಂದು ದೇಶದಲ್ಲಿ ನಿಮಿಷಕ್ಕೆ 16 ಅತ್ಯಾಚಾರ ಘಟನೆಗಳು ನಡೆಯುತ್ತಿರುವುದಾಗಿ ಕೆಲವು ವರದಿಗಳು ತಿಳಿಸಿದೆ. ಇಂದು ಗಂಭೀರ ವಿಚಾರ. ಹೀಗಾಗಿ, ನಮ್ಮ ಯುವಕರಿಗೆ ಮೊದಲು ಜಾಗೃತಿ ಮೂಡಿಸಬೇಕಿದೆ. ಹಾಗಾದಲ್ಲಿ ಮಾತ್ರ ಯುವತಿಯರು ಸುರಕ್ಷಿತರಾಗಿ ಇಂದು ಬದುಕಲು ಸಾಧ್ಯ ಎಂದು ತಿಳಿಸಿದರು.
ಸಮಾಜದಲ್ಲಿ ಇಂದು ನೈತಿಕತೆ, ಮಾನವೀಯತೆ ಸಂದೇಶವನ್ನು ಎತ್ತಿ ಹಿಡಿಯಬೇಕಾದರೆ ಜನರಿಗೆ ಮನವರಿಕೆ ಮಾಡಬೇಕಿದೆ. ಹೀಗಾಗಿ, ಪ್ರವಾದಿ ಮುಹಮ್ಮದ್ ಅವರ ಮಾನವೀಯ ಸಂದೇಶವನ್ನು ಅವರ ಚಾರಿತ್ರ್ಯವನ್ನು ಮುಂದಿಟ್ಟುಕೊಂಡು ಸಮಾಜಕ್ಕೆ ತಿಳಿಸಬೇಕಿದೆ. ಈ ಹಿನ್ನೆಲೆಯಲ್ಲಿ ‘ಪ್ರವಾದಿ ಮುಹಮ್ಮದ್ (ಸ): ಮಹಾನ್ ಚಾರಿತ್ರ್ಯವಂತ’ ಎಂಬ ರಾಜ್ಯವ್ಯಾಪಿ ಅಭಿಯಾನವನ್ನು ಸೆಪ್ಟೆಂಬರ್ 13ರಿಂದ 22ರವರೆಗೆ ಜಮಾಅತೆ ಇಸ್ಲಾಮೀ ಹಿಂದ್ ಕರ್ನಾಟಕ ಘಟಕದ ವತಿಯಿಂದ ಹಮ್ಮಿಕೊಳ್ಳಲಾಗಿದೆ ಎಂದು ಅಕ್ಬರ್ ಅಲಿ ಉಡುಪಿ ತಿಳಿಸಿದರು.

ಅಭಿಯಾನದ ಅಂಗವಾಗಿ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಪ್ರವಾದಿ ಮುಹಮ್ಮದ್ ಅವರ ಜೀವನದ ಸಂದೇಶಗಳನ್ನು ಜನರಿಗೆ ತಲುಪಿಸಲು ವಿಚಾರಗೋಷ್ಠಿ, ಪತ್ರಿಕಾಗೋಷ್ಠಿಗಳನ್ನು ಆಯೋಜಿಸಲಿದ್ದು, ಪ್ರಮುಖ ನಾಯಕರ ವೈಯಕ್ತಿಕ ಭೇಟಿ ಕೂಡ ಇರಲಿದೆ. ಸಂವಾದ, ಪ್ರಬಂಧ ಸ್ಪರ್ಧೆ, ವಿದ್ಯಾರ್ಥಿಗಳು ಹಾಗೂ ಯುವ ಜನರಲ್ಲಿ ನೈತಿಕತೆ ಮೂಡಿಸಲು ವಿಶೇಷ ಕಾರ್ಯಕ್ರಮಗಳು, ಸ್ವಚ್ಛತಾ ಕಾರ್ಯಕ್ರಮಗಳು, ಸಮಾಜ ಸೇವಾ ಕಾರ್ಯಗಳು ಹಾಗೂ ಮುಸ್ಲಿಂ ಸಮುದಾಯದಲ್ಲೂ ಕೂಡ ಜಾಗೃತಿ ಮೂಡಿಸಲು ಶುಕ್ರವಾರದ ದಿನ ವಿಶೇಷ ಜುಮಾ ಖುತ್ಬಾಗಳು ನಡೆಸಲು ಕೂಡ ಉದ್ದೇಶಿಸಲಾಗಿದೆ ಎಂದು ಮಾಹಿತಿ ನೀಡಿದರು.
ಅಭಿಯಾನದ ಪ್ರಯುಕ್ತ ಪೋಸ್ಟರ್ ಹಾಗೂ ಶಾಂತಿ ಪ್ರಕಾಶನ ಸಂಸ್ಥೆ ಹೊರತಂದಿರುವ 276ನೇ ಕೃತಿ ‘ಪ್ರವಾದಿ ಮುಹಮ್ಮದ್ (ಸ): ಲೇಖನಗಳ ಸಂಕಲನ’ವನ್ನು ಇದೇ ವೇಳೆ ಬಿಡುಗಡೆಗೊಳಿಸಲಾಯಿತು.
ಪತ್ರಿಕಾಗೋಷ್ಠಿಯಲ್ಲಿ ಜಮಾಅತೆ ಇಸ್ಲಾಮೀ ಹಿಂದ್ ಕರ್ನಾಟಕ ರಾಜ್ಯ ಕಾರ್ಯದರ್ಶಿ ಮೌಲಾನಾ ವಹೀದುದ್ದೀನ್ ಖಾನ್ ಉಮರಿ ಮಾತನಾಡಿದರು.
ಇದನ್ನು ಓದಿದ್ದೀರಾ? ಮಂಡ್ಯ | ನಾಗಮಂಗಲದಲ್ಲಿ ಗಣಪತಿ ಮೆರವಣಿಗೆ ವೇಳೆ ಗಲಾಟೆ: ಪೊಲೀಸರಿಂದ ಲಾಠಿ ಚಾರ್ಜ್
ಈ ಸಂದರ್ಭದಲ್ಲಿ ಜಮಾಅತೆ ಇಸ್ಲಾಮೀ ಹಿಂದ್ ಕರ್ನಾಟಕ ಮಾಧ್ಯಮ ವಿಭಾಗದ ತಲ್ಹಾ ಸಿದ್ದಿ ಬಾಪಾ, ಬೋರ್ಡ್ ಆಫ್ ಇಸ್ಲಾಮಿಕ್ ಎಜುಕೇಶನ್‌ನ ರಾಜ್ಯ ಕಾರ್ಯದರ್ಶಿ ರಿಯಾಝ್ ಅಹ್ಮದ್ ರೋಣ, ಸಾರ್ವಜನಿಕ ಸಂಪರ್ಕ ವಿಭಾಗದ ಮುಹಮ್ಮದ್ ನವಾಝ್ ಮಂಗಳೂರು ಉಪಸ್ಥಿತರಿದ್ದರು.
