ಆಘಾತಕಾರಿ ಘಟನೆಯೊಂದರಲ್ಲಿ, 6-7 ಶಸ್ತ್ರಸಜ್ಜಿತ ದುಷ್ಕರ್ಮಿಗಳ ಗುಂಪೊಂದು ಇಬ್ಬರು ಸೇನಾ ಅಧಿಕಾರಿಗಳು ಮತ್ತು ಅವರ ಮಹಿಳಾ ಸ್ನೇಹಿತರ ಮೇಲೆ ದಾಳಿ ನಡೆಸಿ, ದರೋಡೆ ಮಾಡಿರುವ ಘಟನೆ ಮಧ್ಯಪ್ರದೇಶದ ಇಂಧೋರ್ ಹೊರವಲಯದ ಪಿಕ್ನಿಕ್ ಸ್ಥಳದಲ್ಲಿ ನಡೆದಿದೆ. ಇಬ್ಬರು ಮಹಿಳೆಯಲ್ಲಿ ಒಬ್ಬರನ್ನು ದುಷ್ಕರ್ಮಿಗಳು ಕಾಡಿನೊಳಗೆ ಎಳೆದೊಯ್ದು ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ ಎಂದು ಆರೋಪಿಸಲಾಗಿದೆ.
ಇಂಧೋರ್ ಜಿಲ್ಲೆಯ ಬದ್ಗೊಂಡಾ ಬಳಿಯ ‘ಸ್ಕೆನಿಕ್ ಪಿಕ್ನಿಕ್ ಸ್ಪಾಟ್’ನಲ್ಲಿ ಘಟನೆ ನಡೆದಿದೆ. ದುಷ್ಕರ್ಮಿಗಳ ಗುಂಪಿನಲ್ಲಿದ್ದ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಲೂಟಿ, ಹಲ್ಲೆ ಹಾಗೂ ಅತ್ಯಾಚಾರ ಪ್ರಕರಣಗಳನ್ನು ದಾಖಲಿಸಲಾಗಿದೆ ಎಂದು ವರದಿಯಾಗಿದೆ.
ಇಂಧೋರ್ ಜಿಲ್ಲೆಯ ಮೊವ್ ಕಂಟೋನ್ಮೆಂಟ್ ಟೌನ್‌ನಲ್ಲಿರುವ ಸೇನಾ ಶಾಲೆಯಲ್ಲಿ ತರಬೇತಿ ಪಡೆಯುತ್ತಿದ್ದ ಇಬ್ಬರು ಯುವ ಸೇನಾ ಅಧಿಕಾರಿಗಳು ತಮ್ಮ ಇಬ್ಬರು ಮಹಿಳಾ ಸ್ನೇಹಿತರೊಂದಿಗೆ ಪಿಕ್ನಿಕ್‌ಗೆ ತೆರಳಿದ್ದರು. ಸೇನಾ ಶಾಲೆಗೆ ಮರಳುವಾಗ ಅವರನ್ನು ಬಂದೂಕು ಸೇರಿದಂತೆ ಶಸ್ತ್ರಾಸ್ತ್ರಗಳನ್ನು ಹೊಂದಿದ್ದ 6-7 ಮಂದಿ ದುಷ್ಕರ್ಮಿಗಳ ಗುಂಪು ಅಡ್ಡಗಟ್ಟಿದೆ. ಹಲ್ಲೆ ನಡೆಸಿ ದರೋಡೆ ಮಾಡಿದೆ.
ಅಲ್ಲದೆ, ಓರ್ವ ಸೇನಾಧಿಕಾರಿ ಮತ್ತು ಓರ್ವ ಸ್ನೇಹಿತೆಯನ್ನು ಒತ್ತೆಯಾಳಾಗಿ ಇಟ್ಟುಕೊಂಡು, ಇಬ್ಬರನ್ನು ಬಿಡುಗಡೆ ಮಾಡಿದೆ. ಒತ್ತೆಯಾಳಾಗಿ ಇಟ್ಟುಕೊಂಡಿದ್ದ ಇಬ್ಬರನ್ನು ಬಿಡುಗಡೆ ಮಾಡಬೇಕೆಂದರೆ ಹೆಚ್ಚಿನ ಹಣ ತರಬೇಕೆಂದು ಬೆದರಿಕೆ ಹಾಕಿದೆ. ಆದರೆ, ಆ ಇಬ್ಬರು ಬಾರದಿದ್ದಾಗ, ದುಷ್ಕರ್ಮಿಗಳ ಗುಂಪು ಒತ್ತೆಯಾಳಾಗಿ ಇರಿಸಿಕೊಂಡಿದ್ದ ಯುವತಿಯನ್ನು ಕಾಡಿನೊಳಗೆ ಎಳೆದೊಯ್ದು ಅತ್ಯಾಚಾರ ಎಸಗಿದೆ ಎಂದು ಆರೋಪಿಸಲಾಗಿದೆ.
ದುಷ್ಕರ್ಮಿಗಳ ಗುಂಪಿನಿಂದ ತಪ್ಪಿಸಿಕೊಂಡು ಬಂದಿದ್ದ ಓರ್ವ ಅಧಿಕಾರಿ ಮತ್ತು ಆತನೊಂದಿಗಿದ್ದ ಯುವತಿ ಸೇನಾ ಅಧಿಕಾರಿಗಳಿಗೆ ಮತ್ತು ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಘಟನಾ ಸ್ಥಳಕ್ಕೆ ಧಾವಿಸಿದ್ದಾರೆ. ಪೊಲೀಸರು ಬರುವುದನ್ನು ಕಂಡ ದುಷ್ಕರ್ಮಿಗಳು ಅಧಿಕಾರಿ ಮತ್ತು ಯುವತಿಯನ್ನು ಬಿಟ್ಟು ಪರಾರಿಯಾಗಿದ್ದಾರೆ ಎಂದು ವರದಿಯಾಗಿದೆ.
ಆದಾಗ್ಯೂ, ಇಬ್ಬರು ಶಸ್ತ್ರಸಜ್ಜಿತ ಆರೋಪಿಗಳನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಉಳಿದವರನ್ನು ಬಂಧಿಸಲು ಶೋಧ ನಡೆಸುತ್ತಿದ್ದಾರೆ.