ಕಾಲ ಕಾಲಕ್ಕೆ ಗೋಸುಂಬೆ ರೀತಿಯಲ್ಲಿ ಬಣ್ಣ ಬದಲಾಯಿಸಿಕೊಂಡು ಮಾತಾಡುವುದು ಸರಿಯಲ್ಲ. ನಾಗಮಂಗಲ ಘಟನೆಗೆ ಸರ್ಕಾರದ ವೈಫಲ್ಯ ಕಾರಣ ಅಲ್ಲ, ಕೆಲ ಸಂಘಟನೆಗಳು ಕೋಮುಗಲಭೆ ಮಾಡಲೆಂದೇ ಹುಟ್ಟಿಕೊಂಡಿವೆ ಎಂದು ವಿಧಾನ ಪರಿಷತ್ ಸದಸ್ಯ ಬಿ ಕೆ ಹರಿಪ್ರಸಾದ್ ಕಿಡಿಕಾರಿದರು.
‘ರಾಜ್ಯ ಕಾಂಗ್ರೆಸ್ ಸರ್ಕಾರವು ಅಲ್ಪಸಂಖ್ಯಾತ ಸಮುದಾಯದ ಓಲೈಕೆ, ತುಷ್ಟೀಕರಣ ಮಾಡುತ್ತಿರುವುದರಿಂದ ನಾಗಮಂಗಲ ಗಲಾಟೆ ನಡೆದಿದೆ” ಎಂದು ಆರೋಪಿಸಿರುವ ಕೇಂದ್ರ ಸಚಿವ ಎಚ್ ಡಿ ಕುಮಾರಸ್ವಾಮಿಗೆ ಬೆಂಗಳೂರಿನಲ್ಲಿ ಹರಿಪ್ರಸಾದ್ ತಿರುಗೇಟು ನೀಡಿದರು.
“ಕಾಂಗ್ರೆಸ್‌ನಿಂದ ಅಲ್ಪಸಂಖ್ಯಾತರ ತುಷ್ಠೀಕರಣ ಎಂಬ ಆರೋಪ ಮಾಡುವವರು ಕೇಂದ್ರ ಸರ್ಕಾರಕ್ಕೂ ತುಷ್ಟಿಕರಣಕ್ಕೂ ಸಂಬಂಧವೇ ಇಲ್ಲವೇ? ಬಿಜೆಪಿ ಮಂಡ್ಯ ಜಿಲ್ಲೆಗೆ ಕಾಲಿಟ್ಟ ಬಳಿಕ ಕೋಮು ಗಲಭೆಯನ್ನು ಸೃಷ್ಟಿ ಮಾಡಲು ನಿರಂತರ ಪ್ರಯತ್ನ ನಡೆಸುತ್ತಿದೆ” ಎಂದು ನೇರವಾಗಿ ಆರೋಪಿಸಿದರು.
“ಕೋಮು ಗಲಭೆಗೆ ಮಂಡ್ಯ ಜಿಲ್ಲೆಯ ಜನರು ಆಸ್ಪದ ಕೊಡುತ್ತಿರಲಿಲ್ಲ. ಆದರೆ ಇದೀಗ ಬಿಜೆಪಿ ಮಂಡ್ಯ ಜಿಲ್ಲೆಗೆ ಕಾಲಿಟ್ಟ ಬಳಿಕ ಕೋಮು ಗಲಭೆ ಸೃಷ್ಟಿ ಮಾಡಲು ನಿರಂತರ ಪ್ರಯತ್ನ ಮಾಡುತ್ತಿದ್ದಾರೆ ” ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕೆಟ್ಟ ಹೆಸರು ತರಲು ಪ್ರಯತ್ನ
“ಕರ್ನಾಟಕದಲ್ಲಿ ಕಾನೂನು ಸುವ್ಯವಸ್ಥೆ ಹಾಳು ಮಾಡಿ ಸರ್ಕಾರಕ್ಕೆ ಕೆಟ್ಟ ಹೆಸರು ತರಲು ಪ್ರಯತ್ನ ಮಾಡುತ್ತಿದ್ದಾರೆ.
ಬಿಜೆಪಿ ಅವರಿಗೆ ಕೋಮುಗಲಭೆಗಳು ಇಲ್ಲದಿದ್ದರೆ ಹೊಟ್ಟೆಯೇ ತುಂಬಲ್ಲ” ಎಂದು ಲೇವಡಿ ಮಾಡಿದರು.
ಸರ್ಕಾರ ಕಠಿಣ ಕ್ರಮ ಕೈಗೊಳ್ಳಲಿ
“ನಾಗಮಂಗಲ ಗಲಭೆ ಪ್ರಕರಣದಲ್ಲಿ ಆರೋಪಿಗಳು ಎಷ್ಟೇ ದೊಡ್ಡವರು ಆಗಿದ್ದರು ಕಠಿಣ ಕ್ರಮ ತೆಗೆದುಕೊಳ್ಳಬೇಕು. ಕಾನೂನು ಚೌಕಟ್ಟು ಮೀರಿ ಹೋದವರಿಗೆ ಸರಿಯಾದ ಬುದ್ಧಿ ಕಲಿಸಬೇಕು. ರಾಜ್ಯ ಸರ್ಕಾರ ಹಾಗೂ ಸಿಎಂ ಸಿದ್ದರಾಮಯ್ಯ ಅವರಿಗೆ ಈ ಕುರಿತಾಗಿ ನಾನು ಆಗ್ರಮ ಮಾಡುವೆ” ಎಂದರು.