ಪಿಎಸ್‌ಐ ಮತ್ತು ಯುಪಿಎಸ್‌ಸಿ ಪರೀಕ್ಷೆಗಳು ಒಂದೇ ದಿನ ನಿಗದಿಯಾದ ಹಿನ್ನೆಲೆಯಲ್ಲಿ ಈಗಾಗಲೇ ಅಭ್ಯರ್ಥಿಗಳು ಗೊಂದಲಕ್ಕೀಡಾಗಿದ್ದು, ಈ ನಡುವೆ ಗೃಹ ಸಚಿವ ಡಾ. ಜಿ ಪರಮೇಶ್ವರ್ ಅವರು ತಪ್ಪು ಮಾಹಿತಿ ನೀಡುವ ಮೂಲಕ ಅಭ್ಯರ್ಥಿಗಳಿಗೆ ಮತ್ತಷ್ಟು ಗೊಂದಲ ಸೃಷ್ಟಿಸಿದ್ದಾರೆ.
ಸದಾಶಿವನಗರದ ತಮ್ಮ ನಿವಾಸದ ಬಳಿ ಎಂದಿನಂತೆ ಸುದ್ದಿಗಾರರು ಬಂದು ಇಂದು (ಸೆ.12) ಮೈಕ್ ಹಿಡಿದಾಗ ಹಿಂದೆ ಮುಂದೆ ಯೋಚಿಸದೇ “ಪಿಎಸ್‌ಐ ಮತ್ತು ಯುಪಿಎಸ್‌ಸಿ ಪರೀಕ್ಷೆ ಒಂದೇ ದಿನ ನಿಗದಿಯಾಗಿರುವ ಹಿನ್ನೆಲೆಯಲ್ಲಿ ಅಭ್ಯರ್ಥಿಗಳ ಮನವಿ ಮೇರೆಗೆ ಪಿಎಸ್‌ಐ 402 ಹುದ್ದೆಗಳ ನೇಮಕಾತಿ ಪರೀಕ್ಷೆಯನ್ನು ಸೆ.28 ಶನಿವಾರ ಮುಂದೂಡಲಾಗಿದೆ” ಎಂದು ಹೇಳಿಕೆ ನೀಡಿಬಿಟ್ಟರು.
ಮುಂದುವರಿದು,“ಕೆಇಎ ಅಧಿಕಾರಿಗಳೊಂದಿಗೆ ಚರ್ಚಿಸಿದಾಗ ಡಿಸೆಂಬರ್‌ವರೆಗೆ ಪರೀಕ್ಷೆ ನಡೆಸಲು ದಿನ ಖಾಲಿ ಇಲ್ಲ ಎಂದು ತಿಳಿಸಿದ್ದರು. ಪ್ರಾಥಮಿಕ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರೊಂದಿಗೆ ಮಾತನಾಡಿ, ಶನಿವಾರ ಒಂದು ದಿನ ಪರೀಕ್ಷೆ ನಡೆಸಲು ಅವಕಾಶ ಮಾಡಿಕೊಡುವಂತೆ ಮನವಿ ಮಾಡಿದ್ದೆ. ಪರೀಕ್ಷೆ ನಡೆಸಲು ಶಿಕ್ಷಕರು ಬೇಕಾಗುತ್ತದೆ. ಎಲ್ಲ ಆಕಾಂಕ್ಷಿಗಳ ಮನವಿಗೆ ಮನ್ನಣೆ ಕೊಟ್ಟು, ಅನುಕೂಲವಾಗುವ ನಿಟ್ಟಿನಲ್ಲಿ ಸೆ.28ರಂದು ಪರೀಕ್ಷೆ ನಡೆಸಲು ತೀರ್ಮಾನಿಸಲಾಗಿದೆ” ಎಂದು ಪರಮೇಶ್ವರ್ ತಿಳಿಸಿದರು.
ಮಾಧ್ಯಮಗಳಲ್ಲಿ ಸಚಿವ ಪರಮೇಶ್ವರ್ ಹೇಳಿಕೆ ಪ್ರಕಟವಾಗುತ್ತಿದ್ದಂತೆ ಅಭ್ಯರ್ಥಿಗಳು ಮತ್ತೆ ಗೊಂದಲಕ್ಕೆ ಈಡಾಗಿದ್ದಾರೆ. ಪಿಎಸ್‌ಐ ಆಕಾಂಕ್ಷಿ ರವಿಶಂಕರ್ ಮಾಲಿಪಾಟೀಲ್ ಅವರು ಸಚಿವ ಪರಮೇಶ್ವರ್ ಹೇಳಿಕೆ ಗಮನಿಸಿ ಕೂಡಲೇ ಅವರು ಈ ದಿನ.ಕಾಮ್ ಕರೆ ಮಾಡಿ, “ಸಚಿವ ಪರಮೇಶ್ವರ್ ಅವರಿಗೆ ಯುಪಿಎಸ್‌ಸಿ ಪರೀಕ್ಷೆ ವೇಳಾಪಟ್ಟಿಯೇ ಗೊತ್ತಿಲ್ಲ ಅನ್ನಿಸುತ್ತದೆ. ಸ್ವತಃ ಪರಮೇಶ್ವರ್ ಘೋಷಿಸಿದ ದಿನಾಂಕದಂದೇ ಯುಪಿಎಸ್‌ಸಿ ಎರಡು ಭಾಷಾ ಪತ್ರಿಗಳಿಗೆ ಪರೀಕ್ಷೆ ನಡೆಯುತ್ತಿದೆ” ಎಂದು ಗಮನಕ್ಕೆ ತಂದರು.
“ರಾಜ್ಯದಲ್ಲಿ 60ಕ್ಕೂ ಹೆಚ್ಚು ಅಭ್ಯರ್ಥಿಗಳು ಯುಪಿಎಸ್‌ಸಿ ಪ್ರಿಲಿಮ್ಸ್ ಪರೀಕ್ಷೆಯಲ್ಲಿ ತೇರ್ಗಡೆಹೊಂದಿ ಮುಖ್ಯಪರೀಕ್ಷೆ ಬರೆಯುತ್ತಿದ್ದಾರೆ. ಜೊತೆಗೆ ಆ 60 ಅಭ್ಯರ್ಥಿಗಳು ಪಿಎಸ್‌ಐ ಪರೀಕ್ಷೆ ಕೂಡ ಕಟ್ಟಿದ್ದಾರೆ. ಶನಿವಾರದ ಯುಪಿಎಸ್‌ಸಿ ಪರೀಕ್ಷೆ ಬಹಳ ಮುಖ್ಯವಾದುದು. ಭಾಷಾ ಪರೀಕ್ಷೆಗೆ ಹಾಜರಾಗದಿದ್ದರೆ ಇಡೀ ಯುಪಿಎಸ್‌ಸಿ ಪರೀಕ್ಷೆಯಲ್ಲಿ ನಾವು ಎಷ್ಟೇ ಅಂಕಗಳಿಸಿದರೂ ಉಪಯೋಗವಿಲ್ಲ” ಎಂದು ವಿವರಿಸಿದರು.

ಗೃಹ ಸಚಿವ ಹೇಳಿಕೆ ಪಡೆಯಲು ಈ ದಿನ.ಕಾಮ್ ಸಚಿವರನ್ನು ಸಂಪರ್ಕಿಸಿದಾಗ ಅವರ ಆಪ್ತರು ಮಾತನಾಡಿ, “ಪಿಎಸ್‌ಐ ಪರೀಕ್ಷೆ ಮುಂದೂಡಿಕೆ ಬಗ್ಗೆ ಚರ್ಚೆ ನಡೆಯುತ್ತಿದೆ. ಸಚಿವ ಮಧು ಬಂಗಾರಪ್ಪ ಅವರ ಜೊತೆ ಸಚಿವರು ಚರ್ಚಿಸಿ ಅಧಿಕೃತ ಸ್ಪಷ್ಟನೆ ನೀಡಲಿದ್ದಾರೆ. ಬೆಳಿಗ್ಗೆ ಸಚಿವರು ಹೇಳಿದ ದಿನಾಂಕದ ಬಗ್ಗೆಯೂ ಅಧಿಕಾರಿಗಳು ಸಚಿವರ ಗಮನಕ್ಕೆ ತಂದು ಚರ್ಚಿಸಿದ್ದಾರೆ. ಕೆಇಎ ಅಧಿಕಾರಿಗಳು ತಪ್ಪು ಮಾಹಿತಿ ಒದಗಿಸಿದ್ದರಿಂದ ಸಚಿವರು ಪರೀಕ್ಷಾ ದಿನಾಂಕವನ್ನು ಘೋಷಿಸಿದರು. ಈ ಬಗ್ಗೆ ತುರ್ತು ಸಭೆ ನಡೆಯುತ್ತಿದೆ. ದಿನಾಂಕ ಮತ್ತೆ ಮುಂದಕ್ಕೆ ಹೋಗಬಹುದು” ಎಂದು ತಿಳಿಸಿದರು.
“ಯುಪಿಎಸ್‌ಸಿ ಮತ್ತು 402 ಪಿಎಸ್‌ಐ ಎರಡು ಪರೀಕ್ಷೆಗಳನ್ನು ಬರೆಯುತ್ತಿರುವ ಅಭ್ಯರ್ಥಿಗಳು ಯಾರೂ ಗಾಬರಿ ಆಗಬೇಡಿ. ಗೃಹಮಂತ್ರಿಗಳಿಗೆ ಕೆಇಎ ಅಧಿಕಾರಿಗಳ ತಪ್ಪು ಮಾಹಿತಿಯನ್ನು ಒದಗಿಸಿದರ ಪರಿಣಾಮ ಗೃಹಮಂತ್ರಿಗಳು ಬೆಳಿಗ್ಗೆ ಮಾಧ್ಯಮಗಳ ಮುಂದೆ ತಪ್ಪಾದ ದಿನಾಂಕವನ್ನು ಹೇಳಿದ್ದಾರೆ. ನಾವು ಗೃಹಮಂತ್ರಿಗಳಿಗೆ ಮನವರಿಕೆ ಮಾಡಿ, ಸದ್ಯದಲ್ಲೇ ಬೇರೆ ದಿನಾಂಕವನ್ನು ನಿಗದಿಪಡಿಸಲು ಮನವಿ ಮಾಡಿದ್ದೇವೆ. ಅದಕ್ಕೆ ಒಪ್ಪಿದ ಗೃಹಮಂತ್ರಿಗಳು ಕೆಇಎ ಅಧಿಕಾರಿಗಳೊಂದಿಗೆ ಚರ್ಚಿಸಿ ಮುಂದಿನ 402 ಪರೀಕ್ಷಾ 28ನೇ ತಾರೀಕಿನ ಬದಲು ಬೇರೆ ದಿನಾಂಕವನ್ನು ಸದ್ಯದಲ್ಲೇ ನಿಗದಿಪಡಿಸುವುದಾಗಿ ಭರವಸೆ ನೀಡಿದ್ದಾರೆ” ಎಂಬ ಮಾಹಿತಿಯೊಂದು ಪಿಎಸ್‌ಐ ಆಕಾಂಕ್ಷಿಗಳ ಗ್ರೂಪ್‌ಗಳಲ್ಲಿ ಹರಿದಾಡುತ್ತಿದೆ.


ಶರಣು ಚಕ್ರಸಾಲಿ ಅವರು ಬಾದಾಮಿ ತಾಲ್ಲೂಕಿನ ತಳಕವಾಡ ಗ್ರಾಮದವರು. ಕರ್ನಾಟಕ ವಿಶ್ವವಿದ್ಯಾಲಯದಿಂದ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರು ಕಳೆದ 10 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಸದ್ಯ 'ಈ ದಿನ.ಕಾಮ್' ಮಾಧ್ಯಮ ಸಂಸ್ಥೆಯಲ್ಲಿ ಹಿರಿಯ ವರದಿಗಾರರಾಗಿ 2022 ಮಾರ್ಚ್1ರಿಂದ ಕಾರ್ಯನಿರ್ವಹಿಸುತ್ತಿದ್ದಾರೆ. ರಾಜಕೀಯ, ಸಚಿವಾಲಯದ ವರದಿಗಾರಿಕೆ ಹಾಗೂ ಕೃಷಿ ಸಂಬಂಧಿತ ಸ್ಟೋರಿಗಳನ್ನು ಬರೆಯುವುದು ಇವರ ಆಸಕ್ತಿ. ಟಿವಿ ನಿರೂಪಣೆ, ವಿಡಿಯೋ ಸಂದರ್ಶನ, ವಿಡಿಯೋ ಸ್ಟೋರಿ, ತನಿಖಾ ವರದಿಗಾರಿಕೆ ಹಾಗೂ ನುಡಿ ಬರಹ ಬರೆಯುವುದು ಇವರ ಅಚ್ಚುಮೆಚ್ಚಿನ ಕ್ಷೇತ್ರ.