ಕ್ಷೌರ ಮಾಡಲು ನಿರಾಕರಿಸಿ ದಲಿತ ಯುವಕನ ಕೊಲೆ ಪ್ರಕರಣ ಖಂಡಿಸಿ ಸೆ.17 ಮತ್ತು 18 ರಂದು ಸಮಾನ ಬದುಕಿನತ್ತ ಅರಿವಿನ ಜಾಥಾ ಮೂಲಕ ’ಸಂಗನಹಾಲ ಚಲೋʼ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ ಎಂದು ಸಂಗನಹಾಲ ಚಲೋ ಸಂಚಾಲಕ ಬಸವರಾಜ ಸೂಳಿಬಾವಿ ಹೇಳಿದರು.
ಕೊಪ್ಪಳದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿ, ʼಸಂಗನಹಾಲ ಚಲೋ ಅಂಗವಾಗಿ ಸೆ.17 ರಂದು ಕೊಪ್ಪಳ ಜಿಲ್ಲಾಡಳಿತ ಕಚೇರಿಯಿಂದ ಸಂಗನಹಾಲ ಗ್ರಾಮದವರೆಗೆ ಜಾಥಾ ಹಾಗೂ ಸಂಗನಹಾಲ ಗ್ರಾಮದಲ್ಲಿ ಸೆ.18 ರಂದು ಸೌಹಾರ್ದತೆ ಸಮಾವೇಶ ಹಮ್ಮಿಕೊಳ್ಳಲಾಗಿದೆʼ ಎಂದು ಮಾಹಿತಿ ನೀಡಿದರು.
ಕೊಪ್ಪಳ ಜಿಲ್ಲೆಯನ್ನು ದಲಿತರ ದೌರ್ಜನ್ಯ ಪೀಡಿತ ಜಿಲ್ಲೆ ಎಂದು ಘೋಷಿಸಬೇಕು. ಸರ್ಕಾರ ಜಿಲ್ಲೆಯ ದಲಿತರ ಸಮುದಾಯಗಳಿಗೆ ಸೂಕ್ತ ರಕ್ಷಣೆ ಒದಗಿಸುವ ವ್ಯವಸ್ಥೆ ಮಾಡಬೇಕು. ಸ್ವಾಲಂಬಿಗಳಾಗಿ ಬದುಕಲು ಜನರಿಗೆ ಉದ್ಯೋಗ ಅವಕಾಶಗಳನ್ನು ಸೃಷ್ಟಿಸಬೇಕು. ಕಲ್ಯಾಣ ಕರ್ನಾಟಕ ಜನರ ಕಲ್ಯಾಣಕ್ಕಾಗಿ ಸರ್ಕಾರ ಸರ್ವಾಂಗೀಣ ಅಭಿವೃದ್ಧಿಗೆ ಒತ್ತು ಕೊಡಬೇಕುʼ ಎಂದರು.
ಮತ ರಾಜಕಾರಣಕ್ಕಾಗಿ ಘೋಷಿಸಿದ ಕಲ್ಯಾಣ ಕರ್ನಾಟಕ ಹೆಸರು ಹಿಂಪಡೆದು ಚಾರಿತ್ರಿಕವಾಗಿ ಸರಿಯಾಗಿರುವ ʼಹೈದರಾಬಾದ ಕರ್ನಾಟಕʼ ಹೆಸರನ್ನು ಪುನರ್ ಘೋಷಣೆಯಾಗಬೇಕು. ಹಳೆ ಹೆಸರು ಈ ಭಾಗದ ಜನರ ವಿಮೋಚನೆಯ ಹೋರಾಟದ ಜತೆಗೆ ತಳಕು ಹಾಕಿಕೊಂಡಿದೆ. ಅಸ್ಪೃಶ್ಯತೆಯ ನಿವಾರಣೆಗೆ ಶಾಶ್ವತ ಪರಿಹಾರವನ್ನು ಹುಡುಕಬೇಕಾಗಿದೆ. ದಲಿತರ ಮೇಲೆ ಹಲ್ಲೆ, ಗಲಭೆಗಳು ನಡೆದಾಗ ಹಲ್ಲೆಗೊಳಗಾದವರ ಮೇಲೆ ಪ್ರತಿ ದೂರು ದಾಖಲಿಸುವ ಪ್ರವೃತ್ತಿ ನಿಲ್ಲಬೇಕು. ಈ ಹಿಂದೆ ದಾಖಲಾಗಿರುವ ಎಲ್ಲಾ ಕೌಂಟರ್ ಕೇಸ್‌ಗಳನ್ನು ಸರ್ಕಾರ ಹಿಂಪಡೆಯಬೇಕುʼ ಎಂದು ಆಗ್ರಹಿಸಿದರು.
ಈ ಸುದ್ದಿ ಓದಿದ್ದೀರಾ? ನಾವು ತಲ್ವಾರ್ ಹಿಡಿಯುತ್ತೇವೆ; ಪ್ರತಾಪ್ ಸಿಂಹ ಮತ್ತೊಂದು ವಿವಾದಾತ್ಮಕ ಹೇಳಿಕೆ
ಮುಖಂಡರಾದ ಅಲ್ಲಮಪ್ರಭು ಬೆಟ್ಟದೂರು, ಬಸವರಾಜ್ ಶೀಲವಂತರ್, ಮುದ್ದಣ್ಣ ಸಂಗನಹಾಲ, ಶುಕರಾಜ್ ತಾಳಿಕೇರಿ, ವೆಂಕಟೇಶ್ , ಹನುಮೇಶ್, ಸಂಜಯ್ ದಾಸ್ , ಮಹಾಂತೇಶ್ ಕೊತಬಾಳ, ಶಿವಪ್ಪ ಹಡಪದ ಸೇರಿದಂತೆ ಮತ್ತಿತರರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.
